ರಹಮತ್ ತರೀಕೆರೆ ಅವರು ಬರೆದ "ಕರ್ನಾಟಕದ ನಾಥಪಂಥ" ಕೃತಿಯ ಕೆಲವು ಸಂಗತಿಗಳ ಯಥಾವತ್ತಾದ ಅಚ್ಚು....
ಭಾರತದಲ್ಲಿ ದರ್ಶನ ಪಂಥ ಧರ್ಮಗಳ ನಡುವಣ ಪರಸ್ಪರ ಸಂಘರ್ಷ ಮತ್ತು ಹೊಂದಾಣಿಕೆಗಳು ಕುತೂಹಲಕರವಾಗಿವೆ.
ಗುರುಪಂಥಗಳಲ್ಲಿ ಶಿಷ್ಯನನ್ನು ಹುಡುಕುವುದು, ಅವನಿಗೆ ದೀಕ್ಷೆಕೊಟ್ಟು ಹೊಸ ನಾಮಕರಣ ಮಾಡುವುದು, ಪರೀಕ್ಷೆಗೆ ಒಡ್ಡುವುದು ಮತ್ತು ಸಾಧನೆ ಮಾಡಿಸುವುದು ಸಾಮಾನ್ಯ. ಹೆತ್ತವರು ಗುರುವಿಗೆ ಮಗನನ್ನು ಒಪ್ಪಿಸುವಾಗ ‘ಇಂದಿನಿಂದ ನೀನು ನನ್ನ ಮಗನಲ್ಲ’ ಎಂದು ಸಾಂಕೇತಿಕವಾಗಿ ಸಂಬಂಧ ಕಡಿದುಕೊಳ್ಳುತ್ತಾರೆ. ದೀಕ್ಷೆಕೊಡುವ ಗುರು ‘ಇವತ್ತಿನಿಂದ ನೀನು ನನ್ನ ಸಿಸುಮಗ’ ಎಂದು ಹೊಸ ಪಿತೃತ್ವದ ಸಂಬಂಧ ಸ್ಥಾಪಿಸುತ್ತಾನೆ. ನಾಥರಿಗೆ ‘ಬಾವಾಜಿ’ ಎಂಬ ಹೆಸರು ಕರ್ನಾಟಕದ ತುಂಬ ಕಾಣಬರುತ್ತದೆ. ಬಾವಾಜಿ ಎಂದರೆ ಅಪ್ಪ ಎಂದರ್ಥ. ಮಂಟೆಸ್ವಾಮಿ ಕಾವ್ಯದಲ್ಲಿ ಗುರುವಿಗೆ ‘ಅಪ್ಪಾಜಿ’ ಎಂದೇ ಕರೆಯಲಾಗಿದೆ.
ನಾಥಪಂಥವು ಸಾಂಖ್ಯ, ಯೋಗ, ರಸೇಶ್ವರ ಮುಂತಾದ ದರ್ಶನಗಳ ಜತೆಯಲ್ಲೂ, ವಜ್ರಯಾನ, ಕಾಪಾಲಿಕ, ಸೂಫಿ, ಕೌಳ, ಶಾಕ್ತ, ದತ್ತ, ವಾರಕರಿ, ಮಹಾನುಭಾವ ಪಂಥಗಳ ಜತೆಯಲ್ಲೂ ಅನುಸಂಧಾನ ಮಾಡಿದೆ. ಈ ಕಾರಣಕ್ಕೆ ಇದು ಭಾರತದ ಸಂಕರಶೀಲ ಪಂಥಗಳಲ್ಲಿ ಒಂದು.
ಕರ್ನಾಟಕದ ನಾಥವನ್ನು ಕಾಪಾಲಿಕ, ಸೂಫಿ, ಶರಣ, ಶಾಕ್ತ, ಆರೂಢ, ವಜ್ರಯಾನಗಳ ನೆರವಿಲ್ಲದೆ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ.
ಕದ್ರಿಯ ಮಂಜುನಾಥ ಗುಡಿಯಲ್ಲಿ ವಜ್ರಯಾನದ ಅವಲೋಕಿತೇಶ್ವರ ಹಾಗೂ ಧ್ಯಾನಿಬುದ್ಧರಿದ್ದಾರೆ. ಮಚೇಂದ್ರನಾಥ ಗೋರಖನಾಥ ಚೌರಂಗಿನಾಥರಿದ್ದಾರೆ. ಆಗಮೋಕ್ತ ಪೂಜೆ ಪಡೆಯುತ್ತಿರುವ ಶಿವಲಿಂಗವೂ ಇದೆ. ಕರಾವಳಿಗೆ ವಿಶಿಷ್ಟವಾದ ಭೂತಗಳೂ ಇವೆ. ಎಲ್ಲ ಪದರಗಳೂ ಒಂದೇ ಕಡೆ ಸಾಮರಸ್ಯದಲ್ಲಿವೆ. ಆದರೆ ಅವುಗಳ ಒಳಗಿನ ಸೆಳೆದಾಟಗಳು ನಿಂತಿಲ್ಲ. ಆದ್ದರಿಂದ ಪಂಥಗಳನ್ನು ಅಧ್ಯಯನ ಮಾಡುವುದು ಎಂದರೆ ಕರ್ನಾಟಕ ಸಂಸ್ಕೃತಿಯ ಸಂಕರಶೀಲ ಹಾಗೂ ಸಂಘರ್ಷಶೀಲ ಎರಡೂ ಗುಣಗಳನ್ನು ಅರಿಯುವ ಜವಾಬ್ದಾರಿ; ಧಾರ್ಮಿಕ, ಸಾಹಿತ್ಯಕ, ಸಾಮಾಜಿಕ ಬದುಕಿನ ಮೇಲೆ ಈ ಪಂಥಗಳ ಕೊಡುಕೊಳೆಗಳು ಸೃಷ್ಟಿಸಿರುವ ಹೊಸರೂಪಗಳನ್ನು ಗುರುತಿಸುವ ಕೆಲಸ. ಈ ಬಗೆಯ ಅಧ್ಯಯನಗಳು ನಮ್ಮ ರಾಜಕೀಯ ಉಪಕ್ರಮಗಳಲ್ಲಿ ಹೇಗೆ ಬಳಕೆಯಾಗುತ್ತವೆ ಎನ್ನುವುದು ಮಾತ್ರ ಊಹಾತೀತ.
ಚರಿತ್ರೆಯಲ್ಲಿ ಪಂಥಗಳು ಪರಸ್ಪರ ಸಂಘರ್ಷ ಮಾಡಿವೆ. ಭಾರತದ ‘ಅವೈದಿಕ’ ಎನ್ನಲಾಗುವ ದಾರ್ಶನಿಕ ಧಾರೆ ಹಾಗೂ ಪಂಥಗಳು ಏಕಕಾಲಕ್ಕೆ ವಿಶಾಲ ಸಮುದಾಯಗಳಿಂದ ಸ್ವೀಕಾರವನ್ನೂ ಸ್ಥಾಪಿತ ವರ್ಗಗಳಿಂದ ವಿರೋಧವನ್ನೂ ಪಡೆದಿದ್ದವು. ವೈದಿಕ ಪುರಾಣಗಳು ತಮ್ಮ ವಿರೋಧಿಗಳನ್ನು ರಾಕ್ಷಸರಾಗಿ ಚಿತ್ರಿಸುವಂತೆ, ವೈದಿಕ ದಾರ್ಶನಿಕರು ಕೂಡ ‘ಅವೈದಿಕ’ ಭೌತವಾದಿ ದರ್ಶನ ಹಾಗೂ ಪಂಥಗಳನ್ನು ವಿಕೃತವಾಗಿ ಚಿತ್ರಿಸಿದರು. ಇದನ್ನು ದಾರ್ಶನಿಕ ಅಮಾನುಷೀಕರಣ ಎನ್ನಬಹುದು. ಇದಕ್ಕಿದ್ದ ಒಂದು ಕಾರಣಗಳಿವೆಂದರೆ, ನಾಥ ಕಾಪಾಲಿಕ ಶಾಕ್ತ ಕೌಳ ಮುಂತಾದ ಯೌಗಿಕ ಹಾಗೂ ತಾಂತ್ರಿಕ ಪಂಥಗಳು ವೇದ ಮತ್ತು ಸ್ಮೃತಿಗಳನ್ನು; ಹುಟ್ಟಿನ ನೆಲೆಯಿಂದ ಶ್ರೇಷ್ಠ ಕನಿಷ್ಟ ಎಂದು ಜನರನ್ನು ವಿಂಗಡಿಸುವ ವರ್ಣಾಶ್ರಮವನ್ನು; ದೇವರು, ಆತ್ಮ, ಪುನರ್ಜನ್ಮ ನರಕಗಳ ಅಸ್ತಿತ್ವವನ್ನು ತಾತ್ವಿಕ ನೆಲೆಯಲ್ಲಿ ಒಪ್ಪದಿರುವುದು. ಇವುಗಳ ಈ ನಿಲುವು ವ್ಯವಸ್ಥೆಯಲ್ಲಿ ಯಾವ್ಯಾವ ಬಗೆಯ ಗಲಿಬಿಲಿ ಹುಟ್ಟಿಸಿತೊ, ಪರಿಣಾಮವಾಗಿ ಇವುಗಳ ಅಮಾನುಷೀಕರಣ ಆಯಿತು.
ಪ್ರಭುತ್ವಗಳು ಮಾಡುವ ರಾಕ್ಷಸೀಕರಣದ ತರ್ಕವು ಅಂತಿಮವಾಗಿ ಒಪ್ಪದವರನ್ನು ನಾಶಮಾಡುವಲ್ಲಿ ಕೊನೆಗೊಳ್ಳುತ್ತದೆ. ಭಾರತದಲ್ಲಿ ಬಹುತೇಕ ತಾಂತ್ರಿಕ ಪಂಥಗಳನ್ನು ದುಷ್ಟೀಕರಿಸಲಾಗಿದೆ ಮತ್ತು ನಾಶಪಡಿಸಲಾಗಿದೆ. ನಾಥದ ಬಗೆಗಿನ ನಿರ್ಲಕ್ಷ್ಯ ಮತ್ತು ನೇತ್ಯಾತ್ಮಕ ಬರೆಹಗಳಂತೆ, ಅದನ್ನು ವಿಮರ್ಶೆಯಿಲ್ಲದೆ ನೋಡುವ ಪಂಥಾಭಿಮಾನಿ ಬರಹಗಳೂ ಇವೆ. ದುಷ್ಟೀಕರಿಸುವ ಹಾಗೂ ವೈಭವೀಕರಿಸುವ ಆಕರಗಳಿಂದ ತಪ್ಪಿಸಿಕೊಳ್ಳುವುದು ಒಂದು ಸಮಸ್ಯೆಯಾಗಿದೆ.
ನಾಥ ದರ್ಶನವು ಒಂದು ಬಗೆಯಲ್ಲಿ ಭೌತವಾದಿ ಎನ್ನಬಹುದಾದುದು. ಗೋರಖನು ದೇಹವು ಪವಿತ್ರವೆಂದೂ ಅದರ ಮೂಲಕವೇ ಸಮಸ್ತ ಅರಿವನ್ನು ಸಾಧನೆ ಮಾಡಿ ಪಡೆಯಬೇಕೆಂದೂ ಹೇಳುತ್ತಾನೆ. ಒಂದರ್ಥದಲ್ಲಿ ನಾಥರ ಯೋಗ ದರ್ಶನವು ದೇಹ ಮತ್ತು ಮನಸ್ಸುಗಳ ಸಮನ್ವಯ ಸಿದ್ಧಾಂತ. ಇದರ ಆಳದಲ್ಲಿ ಬೌದ್ಧರ ಅನಾತ್ಮವಾದವೂ ಶೂನ್ಯವಾದವೂ ಇದೆ.
ಬಹುಶಃ ವ್ಯವಸ್ಥೆಗೆತಟ್ಟನೆ ಅರಿವಾಗದ, ಆದರೆ ಅನುಯಾಯಿಗಳಿಗೆ ಮಾತ್ರ ಅರಿವಾಗುವ ಸಾಂಕೇತಿಕ ಭಾಷೆಯನ್ನು ಪಂಥಗಳು ರೂಪಿಸಿಕೊಳ್ಳುತ್ತವೆ. ಈ ಗೂಢ ಭಾಷೆ ಆತ್ಮರಕ್ಷಣೆಗೆ ಮಾತ್ರವಲ್ಲದೆ, ಅವುಗಳ ತಾತ್ವಿಕ ಅನನ್ಯತೆಯನ್ನು ರಕ್ಷಿಸಿಕೊಳ್ಳಲೂ ನೆರವಾಗುತ್ತದೆ.
ಬಹಮನಿಯ ನಿಜಾಂಶಾಹನ ಆಸ್ಥಾನದಲ್ಲಿದ್ದ ಕವಿ ನಿಜಾಮಿಯ ‘ಕದಂ ರಾವ್-ವ-ಪದಂರಾವ್’ ಮಸ್ನವಿಯಲ್ಲಿ, ಅಖ್ಖರನಾಥ ಎಂಬ ಯೋಗಿಯ ಪ್ರಸಂಗವಿದೆ. ಆತ ದೊರೆಯ ಬಳಿ ಬಂದು, ತಾನು ಕಬ್ಬಿಣವನ್ನು ಚಿನ್ನವನ್ನಾಗಿ ಮಾಡುವೆನೆಂದೂ ಸತ್ತ ಹೆಣಕ್ಕೆ ಜೀವಕೊಡುವೆನೆಂದೂ ಆಸ್ಥಾನದಲ್ಲಿ ಸವಾಲು ಹಾಕುತ್ತಾನೆ. ಇವೆರಡೂ ವೈದ್ಯ ಹಾಗೂ ಲೋಹಶಾಸ್ತ್ರಗಳಿಗೆ ಸಂಬಂಧಿಸಿದ ಸಂಗತಿಗಳು. ಈ ಪಂಥಗಳಲ್ಲಿ ಅನೇಕ ವಿದ್ಯೆಗಳಿಗೆ ಸಂಬಂಧಪಟ್ಟ ಪ್ರಾಯೋಗಿಕವಾದ ಜ್ಞಾನವಿತ್ತು. ಯೋಗ ಸಾಧನೆಯು ದೇಹರಚನೆ ಮತ್ತು ನರವಿಜ್ಞಾನಕ್ಕೂ ಲಗತ್ತಾಗಿರುವಂತಹುದು.
ಅಸ್ತಿತ್ವಕ್ಕಾಗಿ ನಡೆಯುವ ಸಂಘರ್ಷಗಳು ತುಂಬ ಜಟಿಲವಾಗಿರುತ್ತವೆ.
ಈ ಅಧ್ಯಯನವು ನಮ್ಮ ಸಮಾಜದ ಚಲನಶೀಲತೆಯನ್ನು ನೋಡುವ ಅರಿಯುವ ಚಿಂತಿಸುವ ಒಂದು ಅಪೂರ್ವ ಅವಕಾಶ ಮಾತ್ರ.
ಟಿಬೇಟು ನೇಪಾಳಗಳ ತಾಂತ್ರಿಕ ಬೌದ್ಧ ಪರಂಪರೆಯಲ್ಲಿ ಮಚೇಂದ್ರನು ಬೋಧಿಸತ್ವನ ನಾಲ್ಕನೇ ಅವತಾರವಾದ ಅವಲೋಕಿತೇಶ್ವರನು. ಆದರೂ ಬೌದ್ಧ ವಜ್ರಯಾನ ಪಂಥಕ್ಕೆ ಶೈವರೂಪ ಕೊಟ್ಟ ಕೀರ್ತಿ ಗೋರಖನಿಗೆ ಕೊಡಲಾಗಿದೆ. ನಾಥಪಂಥಕ್ಕೆ ಭದ್ರವಾದ ತಾತ್ವಿಕ ಬುನಾದಿ ಹಾಕಿ, ನಾಡಿನ ತುಂಬ ಹರಡುವ ಶಕ್ತಿಯನ್ನು ಒದಗಿಸಿದವನು ಮಾತ್ರ ಗೋರಖನೆ.
ನೇಪಾಳಕ್ಕೆ ಗೋರಖದೇಶವೆಂಬ ಹೆಸರಿದೆ. ಅಲ್ಲಿನ ಜನರನ್ನು ಗೋರಖರೆಂದು ಕರೆಯಲಾಗುತ್ತದೆ. ಭಾರತದಲ್ಲಿ ರಾತ್ರಿಕಾವಲು ಕೆಲಸ ಮಾಡುವ ನೇಪಾಳಿಗಳನ್ನು ಗೂರ್ಖರು ಎಂದೇ ಕರೆಯತ್ತಾರಷ್ಟೆ. ನೇಪಾಳದಲ್ಲಿ ಗೋರಖ ಜಿಲ್ಲೆಯಿದೆ. ನೇಪಾಳದ ನಾಣ್ಯಗಳ ಮೇಲೆ ಶಿವಗೋರಖನಾಥ ಎಂಬ ಲಾಂಛನವಿದೆ. ಕಠಮಂಡುವಿನ ಪಶುಪತಿನಾಥ ಮಂದಿರವು ಮೂಲತಃ ನಾಥರದ್ದಾಗಿತ್ತು. ಮಚೇಂದ್ರನ ಹೆಸರಲ್ಲಿ ನೇಪಾಳದಲ್ಲಿ ರಾಷ್ಟ್ರೀಯ ಹಬ್ಬ ಜರುಗುತ್ತದೆ. ಅಲ್ಲಿ ಅವನು ಫಲವಂತಿಕೆಯ ದೈವ. ಒಮ್ಮೆ ಗೋರಖನು ಮೋಡಗಳನ್ನೆಲ್ಲ ಹಾವುಗಳನ್ನಾಗಿ ಮಾಡಿ ಅವುಗಳ ಮೇಲೆ ಕೂತು ತಪಸ್ಸನ್ನು ಆಚರಿಸುವಾಗ, ದುಂಬಿಯಾಗಿ ಹೋಗಿ ಮಚೇಂದ್ರನು ಮೋಡಗಳನ್ನು ಬಿಡುಗಡೆ ಮಾಡಿ ಮಳೆತರಿಸಿದನಂತೆ. ಈಗಲೂ ಮಳೆಬಾರದಿದ್ದರೆ ಮಚೇಂದ್ರನನ್ನು ಪೂಜಿಸುವ ಪದ್ಧತಿ ನೇಪಾಳದಲ್ಲಿದೆ.
ಬೌದ್ಧತಾಂತ್ರಿಕ ಪಂಥಗಳಿಂದ ಬಂದ ಮಚೇಂದ್ರನು ತಾಂತ್ರಿಕ ಪ್ರಜ್ಞೆಯ ಸಂಕೇತವಾದ ಮೀನಿಗೆ ಸಮೀಕರಣಗೊಂಡಿದ್ದು, ಮುಂದೆ ಸಾಂಕೇತಿಕ ಅರ್ಥಗಳು ಹಿಂಜರಿದು ಮೀನಿನ ಹೊಟ್ಟೆಯಲ್ಲಿ ಹುಟ್ಟುವ ಕತೆ ಹುಟ್ಟಿರಬೇಕು ಎಂಬ ವ್ಯಾಖ್ಯಾನವೂ ಇದೆ.
‘ದೇವರಿಗೆ ಹೋಗಬೇಕು ದಾರಿಬಿಡು ಪೂಜಾರಿ, ದೇವರಿಗೂ ನನಗೂ ಒಳಮಾತು|ಭೈರವನ ಠಾವಿಗೆ ಹೋಗಿ ಕೈಯ ಮುಗಿದೇನು’ ಎಂಬ ಜನಪದ ಪದವಿದೆ. ಪೂಜಾರಿಯ ಮಧ್ಯಸ್ಥಿಕೆಯಿಲ್ಲದೆ ದೇವರ ಜತೆ ನೇರವಾಗಿ ಸಂವಾದ ಮಾಡುವ ಇಲ್ಲಿನ ದನಿಯು ಧ್ಯಾನ ಮತ್ತು ಯೋಗದ ಮೂಲಕ ತನ್ನೊಳಗಿನ ಶಕ್ತಿಯನ್ನು ತಾನೇ ಕಂಡುಕೊಳ್ಳುವಿಕೆಯಾಗಿದೆಯೆಂದು ಅನಿಸುತ್ತದೆ. ‘ಒಳಮಾತು’ ಎನ್ನುವುದು ಅವಧೂತ ದರ್ಶನದ ತನ್ನತಾನರಿವ ತತ್ವವೆನಿಸುತ್ತದೆ. ಇಲ್ಲಿ ನಾಥ ಅಥವಾ ಅವಧೂತ ದಾರ್ಶನಿಕತೆಯು ಜನಪದ ಸಾಹಿತ್ಯದಲ್ಲಿ ಜಿನುಗಿ ಬಂದಂತಿದೆ.
ಒಂದರೊಳಗಿಂದ ಮತ್ತೊಂದು
ಮಹಾಯಾನ ಬೌದ್ಧದಲ್ಲಿ ಒಂದು ಕತೆಯಿದೆ. ಬುದ್ಧನ ಬೋಧಿಸತ್ವ ಅವತಾರವಾದ ಅವಲೋಕಿತೇಶ್ವರನು, ಒಂದು ದಿನ ಸುಮೇರು ಪರ್ವತದ ತುದಿಯಲ್ಲಿ ಕುಳಿತು, ಮಹಾನಿರ್ವಾಣ ಪಡೆದು ಶೂನ್ಯದಲ್ಲಿ ಕರಗಿಹೋಗಬೇಕು ಎಂದು ಸಿದ್ಧನಾಗಿರುತ್ತಾನೆ. ಆಗ, ಮಾನವ ಲೋಕದಿಂದ ಒಂದು ಗೋಳಿನ ದನಿ ಬಂದು ಕಿವಿಗೆ ತಾಕುತ್ತದೆ. ಆಗ ಅವನು ‘ಓಹೋ, ಯಾವ ಜನರ ದುಃಖವನ್ನು ಪರಿಹರಿಸಲು ನಾನು ಈತನಕ ಯತ್ನ ಮಾಡಿದೆನೊ, ಅದಿನ್ನೂ ಪೂರಾ ಶಮನವಾಗಿಲ್ಲ. ಹಾಗಾಗಿ ನಾನೊಬ್ಬನೇ ಮೋಕ್ಷವನ್ನು ಪಡೆಯುವುದು ಸಲ್ಲದು. ಲೋಕದ ಪ್ರತಿಯೊಂದು ಜೀವಿಯೂ ದುಃಖದಿಂದ ಬಿಡುಗಡೆ ಆಗುವವರೆಗೆ ನನಗೂ ಮೋಕ್ಷಬೇಡ’ ಎಂದವನೆ ಮರಳಿ ಲೋಕಕ್ಕೆ ಬರುತ್ತಾನೆ. ಇದನ್ನು ಬುದ್ಧನ ಮಹಾಕರುಣೆ ಎಂದು ಬಣ್ಣಿಸಲಾಗಿದೆ.ಇಂತಹ ‘ಕರುಣೆ’ಯ ಹಿನ್ನೆಲೆಯುಳ್ಳ ಮಹಾಯಾನದ ಕುಡಿಗಳಲ್ಲಿ ಒಂದಾದ ವಜ್ರಯಾನದ ಸಹವಾಸದಲ್ಲಿ ನಾಥಪಂಥವು ಮೂಡುತ್ತದೆ ಮತ್ತು ಅವಲೋಕಿತೇಶ್ವರನ ಜತೆ ನಾಥಪಂಥದ ಮಚೇಂದ್ರನಾಥನು ಏಕೀಭವಿಸುತ್ತಾನೆ.
ವಜ್ರಯಾನದ ಪ್ರಸ್ತಾಪವಿಲ್ಲದೆ ನಾಥಪಂಥದ ಚರಿತ್ರೆ ಪೂರ್ಣಗೊಳ್ಳುವುದಿಲ್ಲ. ಪಂಥಗಳ ಈ ರೂಪಾಂತರ ಪ್ರಕ್ರಿಯೆ ಆರಂಭವಾಗಿದ್ದು ಬಂಗಾಲ ನೇಪಾಳ ಟಿಬೇಟುಗಳಲ್ಲಿ. ಇದರ ಪರಿಣಾಮವು ಕಾಬೂಲು ಬಲೂಚಿಸ್ಥಾನದಿಂದ ಕರ್ನಾಟಕದ ಕದ್ರಿಯ ತನಕ ಹರಡಿತು.
ಬೌದ್ಧ ತಾಂತ್ರಿಕಪಂಥಗಳೂ ಶೈವ ತಾಂತ್ರಿಕ ಪಂಥಗಳೂ ಬೆರೆಯಲು ಅವುಗಳ ನಡುವೆ, ಯೋಗಾಚರಣೆ, ಶೂನ್ಯತತ್ವ ಪ್ರತಿಪಾದನೆ, ಕಾಯ ಪ್ರಧಾನ ಚಿಂತನೆ, ಆನಾತ್ಮವಾದ, ವೇದ ಪ್ರಮಾಣ ಒಪ್ಪದಿರುವಿಕೆ, ವರ್ಣಾಶ್ರಮ ವಿರೋಧಿ ನಿಲುವು, ಮುಂತಾದ ಸಮಾನ ಕಾರಣಗಳಿದ್ದವು. ಇದರಿಂದ ಸಂಕರಕ್ಕಾಗಲಿ ರೂಪಾಂತರಕ್ಕಾಗಲಿ ಕಷ್ಟವಾಗಲಿಲ್ಲ.
ಕರ್ನಾಟಕದಲ್ಲಿ ಬೌದ್ಧಧರ್ಮದ ಇರುವಿಕೆಯನ್ನು ಕೆಲವು ವಿಶಿಷ್ಟ ಕುರುಹುಗಳ ಮೂಲಕ ಗುರುತಿಸಬಹುದು. ಅವೆಂದರೆ , ಧರ್ಮ, ಹೇಮ, ವಜ್ರ, ಮಂಜು, ಅವಲೋಕಿತ, ತಾರಾ, ಚಂದ್ರ, ಕದಳಿ. ಇವೆಲ್ಲ ಕುರುಹುಗಳು ಒಂದೇಕಡೆ ಇರುವುದೂ ಉಂಟು.
ಮಂಜುಸಂಬಂಧ
ಕರ್ನಾಟಕದಲ್ಲಿ ಬೌದ್ಧ ಮತ್ತು ನಾಥಸಂಬಂಧವನ್ನು ಬೆಸೆಯುವ ಹೆಸರುಗಳಲ್ಲಿ ಮಂಜು ಮುಖ್ಯವಾದುದು. ಮಹಾಯಾನದಲ್ಲಿ ಮಂಜು (ಟಿಬೆಟ್ಟಿನ ಭಾಷೆಯಲ್ಲಿ ‘ಮಾಂಚು’) ಎಂಬುದು ಬುದ್ಧನ ಹೆಸರು. ಇದಕ್ಕೆ ನಂತರ ನಾಥ ಎಂಬ ಶಿವಸೂಚಕ ಶಬ್ದ ಸೇರಿಕೊಂಡಿತು. ಬೌದ್ಧತಾಂತ್ರಿಕ ಪಂಥದಲ್ಲಿ ‘ಮಂಜುಶ್ರೀಕಲ್ಪ’ ಎಂಬ ಗ್ರಂಥವಿರುವ ಉಲ್ಲೇಖ ಹಿಂದೆ ಬಂದಿತು.
ಚಂದ್ರನಿಗೂ ಬೌದ್ಧರಿಗೂ ಇರುವ ಸಂಬಂಧವಂತೂ ಲೋಕಪ್ರಸಿದ್ಧವಾಗಿದೆ. ಬೌದ್ಧರಲ್ಲಿ ಚಂದ್ರನು ಅಹಿಂಸೆ ಮತ್ತು ಶಾಂತಿಯ ಸಂಕೇತ. ಬುದ್ಧ ಜನಿಸಿದ್ದು ಹುಣ್ಣಿಮೆಯಲ್ಲಿ. ಅವನಿಗೆ ಬೋಧವಾದ ದಿನವೂ ವೈಶಾಖ ಪೂರ್ಣಿಮೆ.
ಚಂದ್ರಗುತ್ತಿಯ ಚಂದ್ರಲಾಂಬಾ ದೇವಿ ಮೂಲತಃ ತಾರಾಭಗವತಿ ಇರಬಹುದು. ಯಾಕೆಂದರೆ ಬೌದ್ಧಸ್ಥಾನವಾಗಿದ್ದ ಸನ್ನತಿಯಲ್ಲಿರುವ (ಚಿತಾಪುರ) ತಾರಾದೇವಿಯು, ನಂತರ ಚಂದ್ರಲಾಂಬೆಯಾಗಿ ಬದಲಾಗುತ್ತಾಳೆ.
ಶಿವನಿಂದಲೇ ನಾಥಪಂಥವು ಮೂಡಿತು ಎಂದು ನಂಬುವ ನಾಥಪಂಥೀಯ ಸಮುದಾಯಗಳು, ನಾಥವನ್ನು ‘ಶುದ್ಧ ಶೈವಧರ್ಮ’ವಾಗಿ ನೋಡಲು ಬಯಸುತ್ತವೆ. ಆದರೆ ಜಗತ್ತಿನ ಅನೇಕ ದೊಡ್ಡ ಧರ್ಮಗಳು ಒಂದರ ವಿರುದ್ಧ ಇನ್ನೊಂದು ಭಿನ್ನಮತದಿಂದಲೊ ಬಂಡಾಯ ಮಾಡಿಯೊ ಒಟ್ಟಿನಲ್ಲಿ ‘ಪಿತೃಹತ್ಯೆ’ಗೈದೇ ಹುಟ್ಟಿವೆ. ಕದ್ರಿಯ ಗುಡಿಯಲ್ಲಿ ನಾಥಪಂಥದ ಕುರುಹುಗಳನ್ನು ವೈದಿಕರು ನಾಶಮಾಡದಂತೆ ಅದರ ಉತ್ತರಾಧಿಕಾರಿಗಳಾದ ಜೋಗಿ ಸಮುದಾಯದ ಕಣ್ಗಾವಲಿದೆ. ಆದರೆ ಹೀಗೆ ಯಾವುದೇ ಜೀವಂತ ಉತ್ತರಾಧಿಕಾರಿ ಸಮುದಾಯವಿಲ್ಲದ ಕಾರಣಕ್ಕೊ ಏನೊ, ವಜ್ರಯಾನಕ್ಕೆ ಅದರ ಕುರುಹುಗಳ ನಾಶವನ್ನು ಕೇಳುವವರಿಲ್ಲ ಎಂಬಂತಾಗಿದೆ. ಈಗಲೂ ಮನೆಯಿಂದ ಹೊರಹಾಕಲ್ಪಟ್ಟ ಮಗುವಿನಂತೆ ಕಾಣವ ಅವಲೋಕಿತೇಶ್ವರನ ಮೂರ್ತಿಯು, ಕದ್ರಿಯ ಮಂಜುನಾಥ ಗುಡಿಯಲ್ಲಿದೆ. ಲೋಕದ ದುಃಖಕ್ಕೆ ತನ್ನ ನಿರ್ವಾಣವನ್ನೆ ತ್ಯಾಗಮಾಡಿದ ಅವಲೋಕಿತನ ಕತೆಗೆ, ಚರಿತ್ರೆ ಕೊಟ್ಟಿರುವ ಈ ಉಪಸಂಹಾರ ಮಾತ್ರ ವಿಚಿತ್ರವಾಗಿದೆ.
ತೀರ್ಥಂಕರರ ಹೆಸರುಗಳೆಲ್ಲ ಆದಿನಾಥ ನೇಮಿನಾಥ ಪಾರ್ಶ್ವನಾಥ ಎಂದು ಕೊನೆಗೊಂಡರೂ ಅವಕ್ಕೂ ನಾಥಪಂಥಕ್ಕೂ ಸಂಬಂಧವಿಲ್ಲ.
ಬೀರಪ್ಪ ಹಾಗೂ ಮಾಳಿಗಂರಾಯರಿಗೆ ರೇವಣನು ಗುರುಬೋಧ ಕೊಡುತ್ತಾನೆ. ಅಮೋಘಸಿದ್ಧನು ತಪಗೈದು ಶಿವನಿಂದ ವರವಾಗಿ ಹೋಮಗಂಬಳಿ ಹಾಗೂ ನೇಮಬೆತ್ತ ಪಡೆಯುತ್ತಾನೆ. ನೇಪಾಳದಲ್ಲಿ ಮಚೇಂದ್ರನು ಬರಗಾಲದಲ್ಲಿ ಮಳೆ ತರಿಸಿದ ಕಾರಣದಿಂದ ಫಲವಂತಿಕೆಯ ದೈವವಾದರೆ, ಇಲ್ಲಿ ಅಮೋಘಸಿದ್ಧನು ಬರಗಾಲ ಬಂದಾಗ ತನ್ನ ಕಂಬಳಿ ಬೀಸಿ ಮಳೆತರಿಸುವ ಪವಾಡ ಮಾಡುವ ದೈವವಾಗಿದ್ದಾನೆ.
ಕುರಿಯ ಕಾಯಬೇಡಿ ಮರಿಗ್ಹುಲ್ಲ ತರಬೇಡಿ; ಕರಿಯ ಕಂಬಳಿ ನೇಯಬೇಡಿ ಭೈರುವ
ನೀವು ಕುರುಬರ ಮಾಳಿಯ ತರಬೇಡಿ|
ಕುರಿಯ ಕಾಯ್ದೇನು ಮರಿಗ್ಹುಲ್ಲ ತಂದೇನು; ಕರಿಯ ಕಂಬಳಿ ನೇಯ್ದೇನು ಪಾರ್ವತಿ
ನಾನು ಕುರುಬರ ಮಾಳಿಯ ಬಿಡಲಾರೆ |
ಕುರುಬತಿ ತರುವುದಕೆ ಕುರಿಯ ತಿಂಗಳ ಕಾದ; ಹಂಪೇಲಿ ಹಾಲು ಕರೆದುಂಡ ಭೈರುವ
ಮೆಚ್ಚಿ ತಂದಾನೆ ಮಾಳವ್ನ| (ಶ್ರೀಆದಿಚುಂಚನಗಿರಿ)
ದೀಕ್ಷಾಪದ್ಧತಿ ಇರುವ ಕಡೆ, ಸಾಮಾಜಿಕ ವಾಗಿ ಜಾತಿಪದ್ಧತಿ ಸಡಿಲವಾಗಿ, ಒಂದು ಬಗೆಯ ಸಮಾನ ಸ್ಥಾನಮಾನ ಸಿಗುವ ಕಾರಣ, ಕಾಪಾಲಿಕ ನಾಥ ಶಾಕ್ತ ಮುಂತಾದ ಪಂಥಗಳಲ್ಲಿ ದಲಿತರು ದೊಡ್ಡಪ್ರಮಾಣದಲ್ಲಿ ಪ್ರವೇಶ ಪಡೆದಿರಬಹುದು. ಕರ್ನಾಟಕದ ತಂತ್ರಪಂಥಗಳ ಬಗ್ಗೆ ಚಿಂತನೆ ಮಾಡಿರುವ ವಿದ್ವಾಂಸರ ಪ್ರಕಾರ, ದಲಿತರೇ ತಾಂತ್ರಿಕ ಪಂಥಗಳ ಮುಖ್ಯ ಆಧಾರವಾಗಿದ್ದರು. ಚುಂಚನಗಿರಿಯ ಭಕ್ತರು ಕೇವಲ ಒಕ್ಕಲಿಗರಲ್ಲ ಎಂದು ಸಾಧಿಸಲು ಕಾಪಾಲಿಕರು ಸಿದ್ಧಪಡಿಸಿ ಕೋರ್ಟಿಗೆ ಸಲ್ಲಿಸಿದ್ದ ಕೋಮುವಾರು ಪಟ್ಟಿಯಲ್ಲಿ, ಮೈಸೂರು ಸೀಮೆಯ ಮಾದಿಗರು(ಎಡಗೈ) ಹಾಗೂ ಆದಿಕರ್ಣಾಟಕರು (ಪಂಚಮರು) ಇರುವುದು ಗಮನಾರ್ಹ.
ದಲಿತರು ಭೈರವನ ಅರ್ಚಕರೂ ಆಗಿರುವ ಏಕೈಕ ನಿದರ್ಶನವು ಸೊಂಡೇಕೊಳದಲ್ಲಿದೆ. ನಾಥಮಠವಿದ್ದ ಹುಲಿಗೊಂದಿ ಹಾಗೂ ಕಾಪಾಲಿಕರು ಇರುವ ಉಪನಾಯಕನ ಹಳ್ಳಿಯ ಪರಿಸರದಲ್ಲಿ ಈ ಸೊಂಡೇಕೊಳವಿದೆ. ಮಾದಿಗ ಸಮುದಾಯಕ್ಕೆ ಸೇರಿದ ಭೈರವನ ಅರ್ಚಕರು ಕಾಪಾಲಿಕರಿಂದ ಜೋಗಿದೀಕ್ಷೆ ಪಡೆದವರು. ಜೋಗೇರ ಜಯಣ್ಣ ಹೇಳಿದ ಪ್ರಕಾರ, ‘‘ನಮಿಗೆ ಎಲ್ಲಕಡೆ ಹೋಗಕಾಗಲ್ಲ. ಹಿಂಗಾಗಿ ನಮ್ಮ ಪರವಾಗಿ ಭೈರವನ ಪೂಜೆ ಮಾಡೋಕೆ ದಲಿತರಿಗೆ ಬೋವಿಗಳಿಗೆ ಅಗಸರಿಗೆ ದೀಕ್ಷೆಕೊಟ್ಟು ಶಿಷ್ಯರನ್ನಾಗಿ ಮಾಡಿದ್ದೇವೆ’’. ಈ ಶಿಷ್ಯರು ತೀರಿಕೊಂಡರೆ ದೀಕ್ಷೆಕೊಟ್ಟ ಗುರುವೇ ಸಮಾಧಿ ಮಾಡಲು ಹೋಗಬೇಕು. ಚುಂಚನಗಿರಿ ಪರಿಸರದಲ್ಲಿ ದಲಿತ ಜೋಗಪ್ಪಗಳು ಸಾಕಷ್ಟು ಇದ್ದಾರೆ. ಆದರೂ ಕರ್ನಾಟಕದ ನಾಥಯೋಗಿಗಳಲ್ಲಿ ದಲಿತರಿಲ್ಲ. ಭೈರವ ಗುಡಿಗಳಲ್ಲಿ ದಲಿತರಿಗೆ ಅಘೋಷಿತ ನಿಷೇಧವಿದೆ.
ಎಂಥವನೊ ಜೋಗಿ ಗಾನವಾಡುತ ಬಂದ, ಮಾಳಿಗೆ ಮೇಲೆ ಮಲಗಿರುವ ಹೆಣ್ಣೀಗೆ
ಮಂತ್ರದ ವಿಭೂತಿ ಬಳಿದಾನು
ಎಂಥವನೊ ಜೋಗಿ ಪಂಥನಾಡುತ ಬಂದ, ಉಪ್ಪರಿಗೆ ಮೇಲೆ ಮಲಗಿರುವ ಹೆಣ್ಣೀಗೆ
ಮಂಕೀನ ವಿಭೂತಿ ತೊಳೆದಾನೆ
ಕನಸಿನಲ್ಲಿ ಕಂಡೆ ಮನಸಿಗೆ ದೊಡ್ಡೋನ, ತೊಳಸಿಯ ಮಾಲೆ ಒಳದಂಡೆ ಚುಂಚನಗಿರಿ
ಭೈರುವ ಸ್ವಾಮಿ ಬಾನನ್ನ ಸೊಪುನಾಕೆ
ಅಟ್ಟ ಗುಡ್ಸಿವ್ನಿ ಪುಟ್ರಂಗೋಲೆ ಬುಟ್ಟಿವ್ನಿ, ಅಟ್ಟಿಗೆ ಬೋರಯ್ಯ ಬರ್ನಿಲ್ಲ ಅಂತೇಳಿ
ಸಿಳ್ಳೊಡ್ದು ಅವ್ಳ ಕರ್ದಾಳು.
. ಈ ೧೨ ವತ್ಸರವು ನಾಥರು ೧೨ ವರ್ಷಕ್ಕೊಮ್ಮೆ ತ್ರ್ಯಂಬಕೇಶ್ವರದಲ್ಲಿ ಸೇರುವ ಮಹಾಸಭೆಯನ್ನು ಸಂಕೇತಿಸುತ್ತಿದೆ. ಸಾಮಾನ್ಯವಾಗಿ ಸ್ಥಾವರ ಲಿಂಗ ಪೂಜಕರು ಇಷ್ಟಲಿಂಗದವರ ಮುಂದೆ, ಇಷ್ಟಲಿಂಗದವರು ಆತ್ಮಲಿಂಗವಾದಿಗಳ ಮುಂದೆ ಸೋಲುವ ಪ್ರಸಂಗಗಳಿವೆ. ಇಲ್ಲಿ, ಸ್ಥಾವರಲಿಂಗ ವಾದದ ಮುಂದೆ ಯೋಗವಾದಿ ನಾಥರು ಸೋಲುತ್ತಿದ್ದಾರೆ.
ಅಹಂ ಬೆಳೆಸಿಕೊಂಡಿರುವ, ಆದರೆ ತಕ್ಕ ಗುರು ಸಿಕ್ಕರೆ ಬೆಳೆಯುವ ಸಾಧ್ಯತೆ ಇರುವ ಸಾಧಕನಾಗಿ ಕಾಣಿಸುತ್ತದೆ. ಅಲ್ಲಮನನ್ನು ಕುರಿತು ಬಂದಿರುವ ಎರಡು ರೂಪಕಗಳು ಇದಕ್ಕೆ ಪೂರಕವಾಗಿವೆ. ಜೀವವಿಲ್ಲದವನ ಮುಂದೆ ಸಂಜೀವಿನಿ ಬಂದಂತೆ ಎಂಬುದು ಔಷಧಿಸಿದ್ದಿಯ ರೂಪಕವಾದರೆ, ಲೋಹ ಬಿಸಿಯಾಗಿರು ವಾಗಲೇ ಬಡಿದು ತಕ್ಕ ಶಿಲ್ಪ ಮಾಡುವ ರೂಪಕವು ಲೋಹಸಿದ್ದಿಯ ರೂಪಕವಾಗಿದೆ. ಇವೆರಡೂ ಸಿದ್ದಿಗಳು ಸಿದ್ಧರ ಜಗತ್ತಿನವು.
ಕೆ.ಜಿ. ನಾಗರಾಜಪ್ಪ ಹಾಗೂ ಶಂಕರ ಮೊಕಾಶಿ ಪುಣೇಕರ ಅವರು ಕೂಡ, ಶರಣರು ಪ್ರತಿಪಾದಿಸುವ ಅನೇಕ ಕ್ರಾಂತಿಕಾರಕ ಪರಿಕಲ್ಪನೆಗಳು, ನಾಥವೇ ಮೊದಲಾದ ತಾಂತ್ರಿಕ ಗುಪ್ತ ಪಂಥಗಳಿಂದ ಬಂದವು ಎಂದು ನಂಬಿ ಚರ್ಚಿಸುತ್ತಾರೆ.
‘ಪಿತೃಹತ್ಯೆ’ಯನ್ನು ಮಾಡಿ ಹೊಸ ಚಳುವಳಿಯನ್ನು ಕಟ್ಟಿದರು. ಬಸವಣ್ಣ ಅಲ್ಲಮ ಸಿದ್ಧರಾಮ ಇವರನ್ನು ಕಥಾನಾಯಕರನ್ನಾಗಿ ಮಾಡಿಕೊಂಡು ಚಾರಿತ್ರ ರಗಳೆ ಪುರಾಣ ಬರೆದ ಮುಂದಿನವರಿಗೆ, ಈ ಸೂಕ್ಷ್ಮಗಳನ್ನು ಹಿಡಿಯುವುದು ಆಗಲಿಲ್ಲ.
ಬುದ್ಧನಿಂದ ಆರಂಭಿಸಿ ಚಾರ್ವಾಕರು ನಾಥರು ಶರಣರ ತನಕ, ಭಾರತದಲ್ಲಿ ವಿಭಿನ್ನ ಪಂಥ ದರ್ಶನ ಹಾಗೂ ಧರ್ಮಗಳು, ಯಾಕೆ ವೇದಪ್ರಮಾಣ, ವರ್ಣಪದ್ಧತಿ ಹಾಗೂ ಯಾಗಯಜ್ಞಗಳನ್ನು ಇಷ್ಟು ನಿಷ್ಠುರವಾಗಿ ನಿರಾಕರಿಸುವ ಸನ್ನಿವೇಶ ಬಂದಿತು ಎಂಬುದು ಮೂಲಭೂತ ಪ್ರಶ್ನೆಯಾಗಿದೆ. ಬಹುಶಃ ಗೋರಖನು ತನ್ನ ಕಾಲದ ವರ್ಣ ಪದ್ಧತಿಯು ಉಂಟುಮಾಡಿದ್ದ ಅಮಾನುಷತೆಗೆ ತೀವ್ರವಾದ ಪ್ರತಿರೋಧ ಒಡ್ಡಲೆಂದೇ ಅವಧೂತರು ಅತ್ಯಾಶ್ರಮಿಗಳು ಎಂದು ವಿಧಿಸಿರಬಹುದು.
No comments:
Post a Comment