ಯಾವ ಯಾವ ಜಡ್ಡು ಕಟ್ಟಿದ ಕಾಲಗಳಲ್ಲಿ, ಸೂಕ್ಷ್ಮ ಸಂವೇದನೆ ಉಳ್ಳವರು ವಿಚಾರವಂತರು ಆದ ಕೆಲವು ಜನ ತಮ್ಮ ಸುತ್ತಣ ಪರಿಸ್ಥಿತಿಯನ್ನು ಮತ್ತು ಅದನ್ನು ನಿಯಂತ್ರಿಸಿಕೊಂಡು ಬಂದ ರೂಢಿಗತವಾದ ವ್ಯವಸ್ಥೆ ಹಾಗೂ ಸಂಪ್ರದಾಯಗಳನ್ನು ಪ್ರಶ್ನಿಸಲು ತೊಡಗುತ್ತಾರೋ, ಪ್ರತಿಭಟಿಸಲು ತೊಡಗುತ್ತಾರೋ ಅಂತಹ ಕಾಲಗಳನ್ನು ಸಂಕ್ರಮಣ ಕಾಲಗಳೆಂದು ಕರೆಯಬಹುದು.
ವಚನಕಾರರು ಮೂಲತಃ ನಿಷ್ಠುರ ವಿಮರ್ಶಕರು. ಪರಂಪರೆಯನ್ನು ಕುರಿತು, ಧರ್ಮವನ್ನು ಕುರಿತು, ದೇವರನ್ನು ಕುರಿತು, ತಮ್ಮ ಸುತ್ತಣ ಸಾಮಾಜಿಕ ಪರಿಸರವನ್ನು ಕುರಿತು, ಎಲ್ಲಕ್ಕೂ ಮಿಗಿಲಾಗಿ ತಮ್ಮನ್ನೇ ಕುರಿತು ವಸ್ತುನಿಷ್ಠವಾಗಿ ವಿಮರ್ಶ ಮಾಡಿದರು. ವೇದ, ಶಾಸ್ತ್ರಗಳ ಮಾತಿಗಿಂತ, ತಮ್ಮ ಸುತ್ತಣ ಪರಿಸರದಲ್ಲಿ ಯಾವುದು ಸ್ವಂತ ಅನುಭವಕ್ಕೆ ಬರುತ್ತದೋ, ಆ ಸ್ವಾನುಭವವೇ ಎಲ್ಲದಕ್ಕಿಂತ ಮಿಗಿಲಾದದ್ದು ಎಂಬುದನ್ನು ಕಂಡುಕೊಂಡರು ಆದುದರಿಂದಲೇ ...
ವೇದಕ್ಕೆ ಒರೆಯ ಕಟ್ಟುವೆ. ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗಕೊಯ್ಯುವೆ ನೋಡಯ್ಯ.
ಎಂದು ಬಸವಣ್ಣನವರು ಸವಾಲು ಹಾಕಿದರು.
ವೇದಶಾಸ್ತ್ರ ಪುರಾಣಾಗಮಗಳೆಂಬ
ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿರೋ
ಎಂದು ಅಕ್ಕಮಹಾದೇವಿ, ಅವುಗಳ ನಿರರ್ಥಕತೆಯನ್ನು ಘೋಷಿಸಿದಳು. "ವೇದವನೋದಿದರೆನು, ಶಾಸ್ತ್ರವ ಕೇಳಿದರೇನು" ಎಂಬುದೇ ಈ ವಚನಕಾರರ ಮುಖ್ಯ ಧೋರಣೆಯಾಯಿತು. ವೇದೋಕ್ತವಾದ ಹಿಂದೂ ಧರ್ಮ, ತನ್ನ ವರ್ಣ ವ್ಯವಸ್ಥೆಯಿಂದ ವ್ಯಕ್ತಿಗಳಲ್ಲಿ ಶ್ರೇಷ್ಠ ಕನಿಷ್ಠ ಎಂಬ ತಾರತಮ್ಯವನ್ನು ಕಲ್ಪಿಸುತ್ತಾ, ಯಜ್ಞಯಾಗಾದಿಗಳಿಂದ ಪ್ರಾಣಿವಧೆಯನ್ನು ಸಮರ್ಥಿಸುವುದು ಎಷ್ಟು ವಿಲಕ್ಷಣ ಎಂದು ವಚನಕಾರರಿಗೆ ತೋರಿರಬಹುದು. ವ್ಯಕ್ತಿಯ ಆಧ್ಯಾತ್ಮಿಕನುಭವ ಎನ್ನುವುದು, ವೈಯಕ್ತಿಕ ಸಾಧನೆಯಿಂದ ಶ್ರದ್ಧೆ- ನಿಷ್ಠೆ -ಸ್ವಾತ್ಮಪರಿಶೀಲನೆಗಳಿಂದ ಲಭಿಸತಕ್ಕದ್ದೇ ಹೊರತು, ವೇದಶಾಸ್ತ್ರಗಳ ಪಠನದಿಂದ ಪರಂಪರಾಗತವಾದ ವಿಚಾರಗಳನ್ನು ನಂಬಿಕೆಗಳನ್ನು ಒಪ್ಪಿಕೊಳ್ಳುವುದರಿಂದ ಬರುವುದಲ್ಲ ಇವರು ಕಂಡುಕೊಂಡರು.
ವೈದಿಕ ಧರ್ಮದ ಪ್ರಕಾರ ಸ್ತ್ರೀಯರಿಗೆ ವೇದಧಿಕಾರವಿಲ್ಲ; ಪುರುಷರಂತೆ ಜನವಾರವನ್ನು ಧರಿಸುವ ಹಕ್ಕಿಲ್ಲ. ಬೌದ್ಧ ಧರ್ಮವು ಮೊದಮೊದಲು ಸ್ತ್ರೀಯರಿಗೆ ಪ್ರವೇಶವನ್ನು ನಿರಾಕರಿಸಿತು, ಜೈನ ಧರ್ಮದ ಪ್ರಕಾರ ಸ್ತ್ರೀ ಮೋಕ್ಷಕ್ಕೆ ಅರ್ಹಳಲ್ಲ: ಒಂದು ವೇಳೆ ಮೋಕ್ಷವನ್ನು ಪಡೆಯಬೇಕಾದರೆ ಆಕೆ ಮುಂದಿನ ಭವಗಳಲ್ಲಿ ಗಂಡಾಗಿ ಹುಟ್ಟಬೇಕು. ಸ್ತ್ರೀಯರನ್ನು ಕುರಿತು ವಿಚಾರ ಹೀಗಿರುವಾಗ ವಚನಕಾರರು ಈ ಭಾವನೆಯನ್ನು ವಿಮರ್ಶಿಸಿ ಇದು ಎಷ್ಟು ಅಸಂಬದ್ಧವೆನ್ನುವುದನ್ನು ಎತ್ತಿ ತೋರಿಸಿದರು. ಗಂಡಿಗೂ ಹೆಣ್ಣಿಗೂ ಇರುವ ವ್ಯತ್ಯಾಸ ಯಾವುದು.?
ಮೊಲೆ ಮೂಡಿ ಬಂದರೆ ಹೆಣ್ಣೆಂಬರು
ಗಡ್ಡ ಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿವಾತ್ಮನು ಗಂಡು ಅಲ್ಲ,
ಹೆಣ್ಣೂ ಅಲ್ಲ ಕಾಣ ರಾಮನಾಥ.
ಎನ್ನುತ್ತಾನೆ ಜೇಡರ ದಾಸಿಮಯ್ಯ. ಈ ವಿಚಾರ ಅತ್ಯಂತ ತಾರ್ಕಿಕವೂ ಪಕ್ಷಪಾತ ರಹಿತವೂ ಆಗಿದೆ.
ದೇವರನ್ನು ಕುರಿತ ಕಲ್ಪನೆಯ ಬಗೆಗೂ ವಚನಕಾರರ ವಿಚಾರಗಳು ಪರಂಪರೆಯಿಂದ ಭಿನ್ನವಾಗಿ. ದೇವಸ್ಥಾನಗಳ ನಿರ್ಮಾಣ ಪುಣ್ಯ ಸಂಪಾದನೆಯ ಅಥವಾ ಸ್ವರ್ಗ ಸುಖ ಪ್ರಾಪ್ತಿಯ ಸಾಧನವೆಂದು ಉಳ್ಳವರನ್ನು ಶಾಸ್ತ್ರಗಳು ನಂಬಿಸಿದವು. ದೇವಸ್ಥಾನಗಳು ಉಚ್ಚ ವರ್ಗದ ಪುರೋಹಿತರ ಸ್ವತ್ತುಗಳಾಗಿ ಭಕ್ತಾದಿಗಳನ್ನು ಸುಲಿಯುವ ತಂತ್ರಗಳಾದವು. ಇಂತಹ ಹಿನ್ನೆಲೆಯಲ್ಲಿ ದೇವರು ದೇವಸ್ಥಾನಗಳನ್ನು ಕುರಿತು ವಚನಕಾರರು ನಡೆಸಿದ ವಿಚಾರ ಗಮನಾರ್ಹವಾದುದಾಗಿದೆ.
ಮೊದಲನೆಯ ಹೆಜ್ಜೆಯೆಂದರೆ, ದೇವಸ್ಥಾನಗಳನ್ನು ನಿರಾಕರಿಸುವುದು. ಹಾಗೆ ಮಾಡುವುದರಿಂದ, ಪುರೋಹಿತ ವರ್ಗದವರು ದೇವಸ್ಥಾನದ ನೆಪದಲ್ಲಿ, ಧರ್ಮದ ಹೆಸರಿನಲ್ಲಿ ಜರ ಜನರನ್ನು ಶೋಷಿಸುವುದನ್ನು ತಪ್ಪಿಸುವುದರ ಜೊತೆಗೆ, ದೇವಸ್ಥಾನಗಳು ಕೆಲವರಿಗೆ ಪ್ರವೇಶವನ್ನು ದೊರಕಿಸುವ, ಇನ್ನು ಕೆಲವರಿಗೆ ಹೀನಕುಲದವರೆಂಬ ಕಾರಣದಿಂದ ಪ್ರವೇಶವನ್ನು ನಿರಾಕರಿಸುವ ತಾರತಮ್ಯ ಭಾವನೆಗಳನ್ನೆ ತೊಡೆದು ಹಾಕುವುದು ಸಾಧ್ಯವಾಗುತ್ತದೆ ಎಂದು ಯೋಚಿಸಿದರು.
ಎರಡನೆಯದಾಗಿ ದೇವರ ಕಲ್ಪನೆಯನ್ನೇ ಬದಲಾಯಿಸಿದರು. ದೇವರಂದರೆ ವಚನಕಾರರ ಪ್ರಕಾರ, ವರ್ಣೋಕ್ತವಾದ ವರುಣ ರಂಜಿತವಾದ ಮೂರ್ತಿ ಅಲ್ಲ; ಅವರ ಪ್ರಕಾರ ಅದೊಂದು, ನಿರಾಕಾರಕ್ಕೆ ಸಮೀಪವಾದ ಸಂಕೇತ. ಅದನ್ನೇ ಅವರು 'ಲಿಂಗ'ವೆಂದು ಕರೆದರು. ಅದನ್ನು ವ್ಯಕ್ತಿ ಶರೀರದ ಮೇಲೆ ಧರಿಸಬೇಕು ಎಂದರು. ಅಂಗದ ಮೇಲೆ ಇರುವ ಈ ಲಿಂಗವೇ, ದೇವರ ಒಂದು ಸಾಂಕೇತಿಕ ರೂಪ ಎಂದು ಹೇಳುವುದರ ಮೂಲಕ ಭಕ್ತನಿಗೆ ಬಹಿರಂಗದ ದೇವಸ್ಥಾನಕ್ಕೆ ಹೋಗಬೇಕಾದ ಅಗತ್ಯವಿಲ್ಲದಂತೆ ಮಾಡಿದರು; ಈ ಲಿಂಗ ಇರುವ ಸ್ಥಳವೇ ದೇವಾಲಯ, ಅಂದರೆ ಭಕ್ತನಾದವನ "ದೇಹವೇ ದೇಗುಲ" ಎಂಬ ಕಲ್ಪನೆಯನ್ನು ಕೊಟ್ಟರು.
ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡುವೆನು ಬಡವನಯ್ಯ
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯಾ
ಎನ್ನುವ ಬಸವಣ್ಣನವರ ವಚನ ಈ ವೈಚಾರಿಕತೆಗೆ ನಿದರ್ಶನವಾಗಿದೆ. ದೇವರ ಕಲ್ಪನೆ ಐತಿಹಾಸಿಕವಾಗಿ, ನಿಸರ್ಗದಿಂದ ದೇಗುಲಕ್ಕೆ ಬಂದದ್ದು, ದೇಗುಲದಿಂದ ವ್ಯಕ್ತಿಯ ದೇಹಕ್ಕೆ ಸ್ಥಳಾಂತರಿತವಾದದ್ದು, ದೇವಸ್ಥಾನದ ಬದುಲು ದೇಹವೇ ದೇಗುಲವಾದದ್ದು ತೀರ ಮಹತ್ವದ ಬದಲಾವಣೆ. ಇದರಿಂದ ದೇವರು ಎನ್ನುವುದು ನಮ್ಮಿಂದಾಚೆಯದಲ್ಲ, ಅದು ನಮ್ಮ ಒಳಗಿನದು ಎನ್ನುವ ತಿಳುವಳಿಕೆಯು ಹೊಸ ರೀತಿಯದಾಗಿದೆ.
ದೇವಸ್ಥಾನಗಳನ್ನು ಕುರಿತ ಪ್ರತಿಭಟನೆ ವಚನಕಾರರ ಕಾಲದಲ್ಲಿ ಎದ್ದು ಕಾಣುವಂತದ್ದು.
ಕಟ್ಟಿದ ಲಿಂಗವ ಬಿಟ್ಟು, ಬೆಟ್ಟದ ಲಿಂಗಕ್ಕೆ ಹೋಗಿ
ಹೊಟ್ಟೆಯಡಿಯಾಗಿ ಬೀಳುವ, ಲೊಟ್ಟಿ ಮೂಗನ ಕಂಡರೆ
ಮೆಟ್ಟಿದ್ದ ಎಡಪಾದರಕ್ಷೆಯ ತಕ್ಕೊಂಡು
ಲಟಲಟನೆ ಹೊಡೆ ಎಂದ ಅಂಬಿಗರ ಚೌಡಯ್ಯ.
ಹತ್ತು ಮತ್ತರದ ಭೂಮಿ, ಬತ್ತದ ಹಯನು
ನಂದಾದೀವಿಗೆಯ ಮಾಡಿದೆವೆಂಬರ
ಮುಖವ ನೋಡಲಾಗದು,
ಅವರ ನುಡಿಯ ಕೇಳಲಾಗದು.
ಈ ಎರಡು ವಚನಗಳ ಧೋರಣೆಯನ್ನು ನೋಡಬೇಕು. ಮೊದಲನೆಯದು ದೇವಸ್ಥಾನಕ್ಕೆ ಹೋಗುವವರನ್ನು ಕುರಿತ ಪ್ರತಿಭಟನೆಯಾದರೆ, ಎರಡನೆಯದು, ದೇವಸ್ಥಾನಕ್ಕಾಗಿ ದಾನ ದತ್ತಿಗಳನ್ನು ಬಿಡುವ ಶ್ರೀಮಂತರನ್ನು ಕುರಿತ ಪ್ರತಿಭಟನೆಯಾಗಿದೆ.
ವಚನಕಾರರ ವಿಚಾರಕ್ರಾಂತಿಯ ಮತ್ತೊಂದು ಅಂಶವೆಂದರೆ, ಇಹಪರಗಳನ್ನು ಕುರಿತ ಪರಂಪರಾಗತವಾದ ಭಾವನೆಯನ್ನು ಚಿಕಿತ್ಸೆಗೆ ಗುರಿಪಡಿಸಿದ್ದು.
ಈ ಲೋಕವನ್ನು ತಿರಸ್ಕರಿಸುವ, ಸ್ವರ್ಗವನ್ನು ಬಯಸುವ ಒಂದು ಪ್ರವೃತ್ತಿಯಾಯಗಿ, ಇಹದ ಬದುಕನ್ನು ದ್ವಂದ್ವದ ಗೊಂದಲಕ್ಕೆ ಸಿಕ್ಕಿಸಿತು. ಇದು ಎಷ್ಟು ದೂರ ಬಂತು ಎಂದರೆ, 'ಇಹ'ದ ಬದುಕಿನಿದ್ದರೂ ಅನಿಷ್ಟ, ಆಶಾಶ್ವತ, ಪರವೆಂಬುದೇ ಮನುಷ್ಯನ ಬದುಕಿನ ಗುರಿ; ಇಹದ ಸಮಸ್ತವೂ, ಆ 'ಪರ'ಕ್ಕಾಗಿ ಮಾಡಿಕೊಳ್ಳುವ ಪೂರ್ವ ಸಿದ್ಧತೆ ಎಂಬ ಜೀವನ ವಿಮುಖ ಧೋರಣೆಯಾಯಿತು. ಇದರಿಂದ ಜೀವನ ಪ್ರೀತಿಯು ನಷ್ಟವಾಗಿ, ಇಹದ ಜೀವನ ಎಂಬುದು ನಿಕೃಷ್ಟವಾಯಿತು. ಈ ಭಾವನೆಯನ್ನು ಬೌದ್ಧ ಜೈನ ಧರ್ಮಗಳು ತಕ್ಕಷ್ಟು ಪುಷ್ಟಿಗೊಳಿಸಿವೆ ಎಂಬುದರಲ್ಲಿ ಸಂಶಯವಿಲ್ಲ. 'ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ', ವೈಷ್ಣವ ಕೀರ್ತನೆಗಳಲ್ಲೂ ಈ ಭಾವನೆ ಮುಂದುವರೆದಿದೆ. ವಚನಕಾರರು ಈ ಭಾವನೆಯನ್ನು ನಿರಾಕರಿಸಿ 'ಇಹ-ಪರ'ಗಳ ಸಮನ್ವಯವನ್ನು ಸಾಧಿಸಿದರು. ಪರದ ನಿರಾಕರಣೆ ಮಾಡದೆ ಇಹವನ್ನು ಒಪ್ಪಿಕೊಳ್ಳುವ ಧೋರಣೆಯನ್ನು ರೂಪಿಸಿದ್ದು ಇವರ ವಿಶೇಷತೆ.
ಮರ್ತ್ಯಲೋಕವೆಂಬುದು ಕರ್ತಾರನ ಕಮಟವಯ್ಯ
ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ
ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದ ಬಯಸುವವರು
ವೀರರು ಅಲ್ಲ, ಧೀರರು ಅಲ್ಲ.
ಸುಖ-ದುಃಖಗಳನ್ನು ಪೂರ್ವ ಜನ್ಮದ ಪುಣ್ಯ ಹಾಗೂ ಪಾಪಗಳ ಪರಿಣಾಮವೆಂದು ಒಪ್ಪಿಕೊಳ್ಳುವುದು ತೀರ ದುರ್ಬಲವಾದ ಮನೋ ಧರ್ಮ. ಇದಾವುದನ್ನು ಯೋಚಿಸದೆ, ಇದ್ದದ್ದನ್ನು ಇದ್ದಂತೆಯೇ ಒಪ್ಪಿಕೊಳ್ಳಬೇಕು. ಬಸವಣ್ಣನವರು ಒಂದೆಡೆ,
ಸುಖ ಬಂದರೆ ಪುಣ್ಯದ ಫಲ ಎನ್ನೆನು;
ದುಃಖ ಬಂದರೆ ಪಾಪದ ಫಲ ಎನ್ನೆನು,
ನೀ ಮಾಡಿದೊಡೆ ಆಯಿತ್ತು ಏನ್ನನು,
ಸಂಸಾರದ ಸವೆಯೆ ಬಳಸುವೆನು
ಪರ ಎಂದೊಡನೆ ಈ ದೇಶದ ಜನ ಮನದಲ್ಲಿ ತೆರೆಯುವ ಚಿತ್ರಗಳು ವಿಚಿತ್ರ ಸ್ವರ್ಗ ನರಕ ಕಾಮಧೇನು ಕಲ್ಪವೃಕ್ಷ ಅಪ್ಸರೆಯರು ಇತ್ಯಾದಿ. ಆದರೆ ವಚನಕಾರರು ದೇವಲೋಕ ಸ್ವರ್ಗ ನರಕಗಳನ್ನು ಕುರಿತು ಜನರಲ್ಲಿ ಪ್ರಚಲಿತವಾದ ನಂಬಿಕೆಗಳನ್ನು ತಲೆಕೆಳಗು ಮಾಡಿದರು; ಅಷ್ಟೇ ಅಲ್ಲ ಅವುಗಳ ಅರ್ಥವನ್ನು ಬೇರೊಂದು ರೀತಿಯಲ್ಲಿ ವಿವರಿಸಿದರು.
ಅಯ್ಯಾ ಎಂದರೆ ಸ್ವರ್ಗ
ಎಲ್ಲವೋ ಎಂದರೆ ನರಕ
ಸ್ವರ್ಗ ನರಕಗಳೆರಡು ನಾವೇ ನಮ್ಮ ನಡವಳಿಕೆಯಿಂದ ನಿರ್ಮಿಸಿಕೊಳ್ಳಬಹುದಾದ 'ಲೌಕಿಕ' ಸ್ಥಿತಿಗಳೇ ಹೊರತು ಬೇರೆ ಅಲ್ಲ.
ಕೊಲುವವನೇ ಮಾದಿಗ
ಹೊಲಸು ತಿಂಬುವನೇ ಹೊಲೆಯ
..................
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ
ಕೂಡಲಸಂಗನ ಶರಣರೇ ಕುಲಜರು
ಹಿಂಸೆಯ, ಹೊಲಸಿನ ಮನೋಭಾವ ಹಾಗೂ ನಡವಳಿಕೆಯಿಂದ ಒಬ್ಬ ಕೀಳಾಗುತ್ತಾನೆಯೇ ಹೊರತು ಅವನ ಹುಟ್ಟಿನಿಂದ ಅಲ್ಲ . 'ಸಕಲ ಜೀವಾತ್ಮರಿಗೆ ಲೇಸನೆ ಬಯಸುವ' ಉದಾರತೆ ಹಾಗೂ ಉದಾತ್ತ ನಡವಳಿಕೆ ಉಳ್ಳವನೆ ನಿಜವಾದ 'ಕುಲಜ' ನು.
ಸಮಾನತೆಗೆ ಇರುವ ಇನ್ನೊಂದು ಆತಂಕ 'ವೃತ್ತಿ'ಯದು ಎಂಬುದನ್ನು ವಚನಕಾರರು ಗುರುತಿಸಿದರು. 'ವೃತ್ತಿ'ಯ ಮೇಲೆ ನಿಂತ 'ಮೇಲು-ಕೀಳು'ಗಳ ಭಾವನೆಯನ್ನು ಮಾರ್ಪಡಿಸದ ಹೊರತು ಅವರೆಲ್ಲರೂ ಒಂದು ಸಮಾಜದವರು ಮತ್ತು ಸಮಾನರು ಎಂಬುದನ್ನು ರೂಢಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಇರುವ ದಾರಿ ಎಂದರೆ 'ವೃತ್ತಿ'ಗಳೆಲ್ಲವೂ ಪೂಜ್ಯ, ಅವುಗಳಲ್ಲಿ ಯಾವ ವೃತ್ತಿಯು ಮೇಲಾದುದಲ್ಲ' ಯಾವ ವೃತ್ತಿಯೂ
ಕೀಳಾದುದಲ್ಲ ಎಂದು ಪರಿಗಣಿಸುವುದು. ಆದುದರಿಂದ ವಚನಕಾರರು 'ಕಾಯಕ' ಎಂಬ ಪರಿಕಲ್ಪನೆಯನ್ನು ರೂಪಿಸಿದರು.
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಸಂಚಯ - ವಿಮರ್ಶೆ
No comments:
Post a Comment