Wednesday, 22 August 2018

ಮುದ್ದು ರಾಮನ ಬದುಕು

ಮುದ್ದು ರಾಮನ ಬದುಕು

*ಮರೆತೆಲ್ಲ ತೊಡಕುಗಳ,ಸರಿಸುತ್ತ ಹಳತುಗಳ*
*"ಎಂತೋಡುತ್ತಿದೆ ಮುಂದೆ ಈ ಕಾಲಪಕ್ಷಿ! ನಾಳೆ* *ಬಾನಿನಂಚಿನಲಿ ನವರೇಖೆ ಏನಿದೆಯೋ! ಕಾಲ ಮಹಿಮೆಗೆ ನಮಿಸೊ! ಮುದ್ದುರಾಮ*.

*ಎಷ್ಟಿದೆಯೋ ಅದಕ್ಕಿಂತ ಒಂದಿಂಚು ಹೆಚ್ಚಿಲ್ಲ; ಉದ್ದ ಇಲ್ಲವೆ ಮೊಟಕು ನೀ ಮಾಡಲಾರೆ. ಕಾಲವೆಂಬುದಕಿಲ್ಲಿ ಪರ್ಯಾಯ ಯಾವುದಿದೆ? ಕಾಲ ಚಕಿತವ ಅರಿಯೋ! ಮುದ್ದುರಾಮ*

*ತನ್ನ ಬಲೆ ರಚನೆಯಲ್ಲಿ ನಿತ್ಯ ಗೆಲ್ಲಬಹುದೇ ಜೇಡ? ನಿನ್ನೆ ಅದು ಆಗದಿರಿ ಇಂದಾಗಬಹುದು. ಹೊಸತನ ನೀ ಕಾಣಲಿಕ್ಕೆ ಸೋಮಾರಿತನ ಸಲ್ಲ; ನವನವೀನವೊ ಕಾಲ! ಮುದ್ದುರಾಮ*

*ಸಮಯ ಪಾಲಿಸದವರ ಕಾಲ ಹಂಗಿಸದಿರದು;ಕಾಲ ಸರಿಯುವುದು ನಿತ್ಯ ತಾನೊಪ್ಪಿದಂತೆ. ಯಾರ ಕಾಯಿಸಬೇಡ, ಕಾದು ಕುಳಿತಿರಬೇಡ; ಕಾಲ ನಿರ್ಣಾಯಕವೋ! ಮುದ್ದುರಾಮ*

*ಇದ್ದಾರೆ ಬಳಿಯಲ್ಲೆ ಸಮಯ ಕಳ್ಳರು, ಜೋಕೆ! ಜೂಜಾಟವಾಡುತ್ತ ಕಿಸೆಯ ಕದಿಯುವವರು. ಕಾಲಕಿಸೆಗಿಂತಾವ ಮಿಗಿಲಾದ ಚೀಲವಿದೆ? ಕಾಲ ಬಾಳಿನ ಆಸ್ತಿ- ಮುದ್ದುರಾಮ.*

*ಇಟ್ಟಿಗೆಯ ಸೇರಿಸದೆ ಗೋಡೆ ಕಟ್ಟುವೆ ಎಂತು? ಸಮಯ ಪಾಲಿಸದೆಂತು ಗೆಲುವ ಸಾಧಿಸುವೆ? ಆಚರಣೆ ಎಲ್ಲಿರದೊ ಅಲ್ಲಿರದು ಸೌಭಾಗ್ಯ; ಕಾಲಗೌರವ ಸೊಮ್ಮ -ಮುದ್ದು ರಾಮ*.

*ಬದುಕೆಂದರೇನಯ್ಯ? ಗಳಿಗೆಗಳ ಸರಮಾಲೆ. ಒಳಿತು ಇಲ್ಲವೇ ಕೇಡು ಇದೆ ಗಳಿಗೆ ಹಿಂದೆ. ಪ್ರತಿರೋಧಿಸದೆ ಬದುಕು ಒಪ್ಪಿಕೋ ಬಂದುದನು; ನಿನ್ನ ಮಿತ್ರನೋ ಸಮಯ! ಮುದ್ದುರಾಮ.*

*ಕಾಲ ಕುಂಟುವುದಿಲ್ಲ; ಅದರ ನಡೆ ಅವಿರತವೊ!ಇದೆ ಏನೊ ವ್ಯತ್ಯಾಸ ನಿನ್ನ ನಿಲುವಿನಲಿ. ಹೆಜ್ಜೆಗತಿಯನು ಅರಿತು ಸರಿಪಡಿಸಿಕೋ ಮೇಲ್ಲ; ಕಾಲ ಶಿಸ್ತಿನ ಮಿತ್ರ- ಮುದ್ದುರಾಮ*

*ಕಳೆದು ನಿನ್ನೆಯ ನೀನು ಗುಣಿಸದಿರು ನಾಳೆಯನು; ಕೂಡಿ ನಿಂತರೆ ಭೂತ ಇಂದು ಸೊಗಸಲ್ಲ. ಇರದುದನು ವಿಭಜಿಸುವುದಾವ ಲೆಕ್ಕಾಚಾರ? ಸಮಯ ಬಾಳಿನ ಬೆರಗೊ! ಮುದ್ದುರಾಮ.*

*ನಾಳೆ ಏನೋ ಎಂದು ಇಂದೇಕೆ ಅಳುತ್ತಿರುವೆ? ಇಂದಾಗುವುದರ ಅರಿವು ನಿನ್ನೆ ನಿನಗಿತ್ತೆ? ಏನಾಗಬೇಕೊ ಅದು ಆಗುವುದು ಅದರಂತೆ; ಕಾಲ ಪ್ರಶ್ನಾತೀತ!-ಮುದ್ದುರಾಮ*

*ಒಮ್ಮೆ ಸರಿದರೆ ಮುಂದೆ ಇಲ್ಲ ಹಿಂದಕ್ಕೆ ಹೆಜ್ಜೆ; ಏಕಮುಖ ಸಂಚಾರ ಈ ಕಾಲ ಗರಿಮೆ. ಆದುದಕೆ ಶೋಕಿಸದೆ ಮುಂದೆ ನಡೆವುದೆ ಲೇಸು; ಸಮಯ ಪ್ರಸ್ತುತ ಪ್ರಜ್ಞೆ- ಮುದ್ದುರಾಮ.*

*ಸರಿದು ಹೋದರೆ ಒಮ್ಮೆ ಕೈಗೆ ಸಿಗುವುದೇ ಕಾಲ? ಕೊಂಡು ಬಳಸಲಿಕೆ ಅದು ಪೇಟೆ ಸರಕಲ್ಲ. ಇಡಬಲ್ಲೆಯೋ ನೀನು ಇದ ದಾಸ್ತಾನಿನಲ್ಲಿ? ಜಲದಂತೆ ಕಾಲಗತಿ- ಮುದ್ದು ರಾಮ*.

*ಮುನ್ನೆಡೆಯುವುದು ಲೋಕ ಯಾರಿರಲಿ ಇರದಿರಲಿ;ನೀ ಅಳಿದೆ ಎಂದೇನು ರವಿ ಮೂಡದಿಹನೆ? ಬೀಸದೇ ತಂಗಾಳಿ? ಘಮಘಮಿಸದೇ ಹೂವು? ಕಾಲ ಕಾಯದು ನಿನಗೆ- ಮುದ್ದುರಾಮ.*

*ದೂರವಿರು ಬೇಕಿರದ ಕಾಲ ಭಕ್ಷಕರಿಂದ; ಅನಗತ್ಯ ಮಾತಿಂದ ನೂರು ತಲೆಬೇನೆ. ಇರುವ ಸಮಯವನರಿತು ಜಾಣ್ಮೆಯಿಂದದ ಬಳಸು; ಪರಿಮಿತವೊ ಈ ಕಾಲ! ಮುದ್ದುರಾಮ.*

*ಸೂರ್ಯ ಪ್ರತಿ ಮುಂಜಾನೆ ಉದಿಸದಿರೆ ಮೂಡಲಲಿ  ಎಷ್ಟೊಂದು ಪರದಾಟ ಈ ಮನುಜಕುಲಕೆ? ಬರಬಾರದೇಕೆ ಆ ಶಿಸ್ತು ದಿನದಿನ ನಮಗೆ? ಶಿಸ್ತಿದ್ದರಿದೆ ಹುರುಪು- ಮುದ್ದುರಾಮ.*

*ಹೀಗಿದ್ದೆ ಹಾಗಿದ್ದೆ ಎಂದು ಕೊರಗುವೆ ಏಕೆ? ಮುಡಿದ ಮಲ್ಲಿಗೆ ಒಮ್ಮೆ ಬಾಡುವುದು ಸಹಜ. ನೆನೆಯುತ್ತ ನಿನ್ನೆಯನೆ ಮರೆಯದಿರು ಈ ದಿನವ ಇಂದು ಎಂದರೆ ಸ್ವರ್ಗ- ಮುದ್ದುರಾಮ*

*ಹಳೆ ನೆನಪು ಕಾಡಿದರೆ ಮರೆ ಒಡನೆ ಅದನ್ನೆಲ್ಲ; ಮಾಗಿ ಕೋಗಿಲೆಯಂತೆ ಇರು ಮೌನದಿಂದ. ಕಾತರಕ್ಕೆ ಬೇಸರಕ್ಕೆ ವಾಲಿದರೆ ಅದೇ ನೋವು; ವರ್ತಮಾನಕ್ಕೆ ಒರಗೊ!- ಮುದ್ದುರಾಮ.*

*ನೋವು ಬರಲಿದೆ ನಾಳೆ ಎಂದಳುವೆ ಇಂದೇಕೆ? ಬಂದಾಗ ಬರಲಿ ಬಿಡು ಚಿಂತೆ ಅದಕ್ಕೇಕೆ? ಹೂವು ಬಾಡುವುದೆಂದು ಈಗ ಕಣ್ಮುಚ್ಚುವುದೆ? ನಿನ್ನದೋ ದಿನ ಇಂದು!- ಮುದ್ದುರಾಮ.*

*ಇರುವಷ್ಟು ದಿನ ನೀ ನೂಕದಿರು ಕಸದಂತೆ; ಎಷ್ಟು ದಿನ ನಿನಗಿದೆಯೊ ಅದೇ ನಿನ್ನ ಬಾಳು. ಸುಧೆಗೆ ಹುಳಿ ಹಿಂಡಿದರೇ ಭಕ್ಷಾನ್ನವೆಲ್ಲಿಹುದೊ? ಸೆರೆಹಿಡಿಯೋ ಗಳಿಗೆಯನು- ಮುದ್ದುರಾಮ.*

*ಮಾಡಬೇಕಾದುದುನು ಮೊದಲು ಗುರುತಿಸು ನೀನು; ದೂರ ಸರಿವುದು ಆಗ ಅನಗತ್ಯ ಕಾರ್ಯ. ಬೇಡದುದ ಕೈಗೆತ್ತುಕೊಂಡೇನು ಫಲ ನಮಗೆ? ಗಮನ ಕೊಡು ಆದ್ಯತೆಗೆ- ಮುದ್ದುರಾಮ.*

*ಮಾಡಬೇಕಾದುದರ ಪಟ್ಟಿ ಮಾಡಿದ ಬಳಿಕ ಕಾರ್ಯ ಕಾರ್ಯತತ್ಪರನಾಗು  ಆದ್ಯತೆಯ ಮೇರೆ. ಬರೆದ ಪಟ್ಟಿಯ ಮತ್ತೆ ಬರೆದರೇನಿದೆ ಲಾಭ? ಮುಗಿಸೆಸಕವನು ಮೊದಲು- ಮುದ್ದುರಾಮ.*

*ಬರಿ ಪಟ್ಟಿ ಮಾಡಿದರೆ ಕಾರ್ಯ ಮುಗಿದಂತೇನು? ಮಾಡು ಯೋಜಿಸಿದಂತೆ, ನಿರ್ಧಾರದಂತೆ. ಮುಂದೂಡಿದರೆ ಆಗ ಆ ಕೆಲಸ ಕೆಟ್ಟಂತೆ; ಸಮಯ ನೀ ನಿರ್ವಹಿಸು- ಮುದ್ದುರಾಮ.*

No comments:

Post a Comment

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...