Saturday, 28 December 2019

ವಿಶ್ವ ಮಾನವ ಸಂದೇಶ

೧."ಮನುಷ್ಯ ಜಾತಿ ತಾನೊಂದೆ ವಲಂ" ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.

೨.ವರ್ಣಾಶ್ರಮವನ್ನು ತಿದ್ದುವುದಿಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಅಂತ್ಯಜ, ಶಿಯಾ-ಸುನ್ನಿ ಕ್ಯಾಥೋಲಿಕ್ ,ನಿರಂಕಾರಿ  ಇತ್ಯಾದಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.

೩.ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.

೪.'ಮತ' ತೊಲಗಿ "ಅಧ್ಯಾತ್ಮ" ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.

೫.ಮತ 'ಮನುಜಮತ' ವಾಗಬೇಕು; ಪಥ 'ವಿಶ್ವಪಥ' ವಾಗಬೇಕು; ಮನುಷ್ಯ 'ವಿಶ್ವಮಾನವ" ನಾಗಬೇಕು.

೬.ಮತ ಗುಂಪು ಕಟ್ಟುವ ವಿಷಯವಾಗಬಾರದು ಯಾರು ಯಾವ ಒಂದು ಮತಕ್ಕೂ ಸೇರಿದೆ, ಪ್ರತಿಯೊಬ್ಬನೂ ತಾನು ಕಂಡುಕೊಳ್ಳುವ 'ತನ್ನ ಮತಕ್ಕೆ'  ಮಾತ್ರ ಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪುಕಟ್ಟಿ ಜಗಳ ಹಚ್ಚುವಂತಾಗಬಾರದು.

೭.ಯಾವ ಒಂದು ಗ್ರಂಥವೂ "ಏಕೈಕ ಪರಮ ಪೂಜೆ"ಧರ್ಮಗ್ರಂಥ ವಾಗಬಾರದು ಪ್ರತಿಯೊಬ್ಬ ವ್ಯಕ್ತಿಯು ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ 'ದರ್ಶನ'ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು.


         ----#ಕುವೆಂಪು.

Thursday, 26 December 2019

ನೀ ನನ್ನ ಜೀವ

ನೀ ನನ್ನ ಜೀವ
ನೀ ನನ್ನ ಭಾವ
ಬೇರೆತಾಂಗ ಹಾಲು ಜೇನ
ಸ್ವಚ್ಛಂದ ಬಾನ ಹಕ್ಯಾಗಿ ಹಾರಿ
ಮಿನುಗೋಣ ಚುಕ್ಕಿಹಾಂಗ...

ಕಾಣದೆಯೇ ನಿನ್ನ ಚಡಪಡಿಸಿ ಜೀವ
ಮಳೆ ಮೋಡ ಮುಸುಕಿದಾಂಗ 
ಕಂಡಾಗ ನಿನ್ನ ಬಿಂದಿಗೆಯ ಚಂದ್ರ
ಇಳಿದಾಂಗ ಮನಸಿನೋಳಗ...

ರಸಬಾಳೆ ತಿನಿಸಿ
ಮುಂಗುರುಳ ಸರಿಸಿ
ಮಗುವಾಂಗ  ತೋಡೆಯಮ್ಯಾಲ
ಬೋಗಸೆಲು ಹಿಡಿದು ಕಾಯುವೇನು ನಾನು
ಬಾಳೆಲೆಯ ನೆರಳಹಾಂಗ...

ಈ ನಿನ್ನ ನಗೆಯೂ
ಮನವೇಲ್ಲ ದುಂಬಿ
ಹರಡೈತಿ ಬಳ್ಳಿಹಾಂಗ
ಹನಿಗೂಡು ಹೊತ್ತು ಕಟೈತೆ ಕಪ್ಪು
ಮನವೆಲ್ಲ ಹಕ್ಕಿ ಹಾಡ...


ಮನವೆಲ್ಲ ಅಮಲು
ಮಲ್ಲಿಗೆಯ ಘಮಲು
ಕುಡಿದಾಂಗ ಜೇನು ಭ್ರಮರ
ನಗೆಯೊಂದು ಅರಳಿ
ಹೂ ದೂಟಿಯ ಮ್ಯಾಲ
ಹರಿದಾಂಗ ಉಕ್ಕಿ ಹಾಲ...


ಹಾರುತಲಿ ದುಂಬಿ
ಮದುವೆಲ್ಲ ಹೀರಿ
ನಿನ್ನ ತುಟಿಯ ಸೇರಿದಾಂಗ
ಮನದುಂಬಿ ನೋವು
ಬಿಂದಿಗಿಯ ಮದವು
ಹೊರ ಚೆಲ್ಲಿಚೆಲ್ಲಿದಾಂಗ....


ಚಂದುಟಿಯ ಮಾತು
ಮಸ್ಸೆಂಜೆ ಹಾದಿಯಲ್ಲಿ
ತಂಗಾಳಿ ತಿಡಿದಾಂಗ
ಬಾರದೇಯ ನೀನು
ಬರಿದಾಗಿ ಮನವು
ಮರುಭೂಮಿ ಕುದುರೆ ಹಾಂಗ...

ಮನದುಂಬಿ ನೋವು
ಬಿಂದಿಗಿಯ ಮದವು
ಹೊರ ಚೆಲ್ಲಿಚೆಲ್ಲಿದಾಂಗ....
ನೀ ಹೋದ ಹಾದಿ
ನಿಶ್ಯಬ್ದವಾಗಿ 
ಮಳೆ ಬಂದು ನಿಂತ ಹಾಂಗ.

Monday, 16 December 2019

ಬುದ್ಧ ವಾಣಿ

ದುಃಖದ  ಎಂದರೇನು...?

ಜನನವು ದುಃಖ, ಮುಪ್ಪು ದುಃಖ; ಮರಣವು ದುಃಖ; ಶೋಕ, ನೋವು, ಗೋಳು, ಚಿಂತೆ, ಕೊರಗು, ನಿರಾಸೆ ,ಆಶಾಭಂಗ ಎಲ್ಲವೂ ದುಃಖ. ಆಪ್ತಿಯವಾಗಿರುವುದರ ಜೊತೆಗೂಡುವುದು ದುಃಖ ,ಪ್ರೀಯವಾಗಿರುವುದರ ಜೊತೆಗೂಡದಿರುವುದು ದುಃಖ, ಆಸೆಪಟ್ಟಿದ್ದು ಸಿಕ್ಕದಿರುವುದು ದುಃಖ ,ಸಂಕ್ಷಿಪ್ತವಾಗಿ ಹೇಳುವುದಾದರೆ ಉಪದಾನದ (ತಿವ್ರ ಆಸಕ್ತಿ)ದಿಂದೊಡಗೂಡಿದ ಪಂಚಖಂಧಗಳನ್ನೊಳಗೊಂಡ ಜೀವನವೇ ದುಃಖ.


ಜನ್ಮ ಅಂದರೇನು..?

ಜನ್ಮ ಅಂದರೆ ಬೇರೆ ಬೇರೆ ಜೀವಿಗಳಲ್ಲಿ ಗರ್ಭಧಾರಣೆಯಾಗುವುದು ಭೌತಿಕ ಜಗತ್ತಿಗೆ ಬರುವುದು ,ಪಂಚಸ್ಕಂದಗಳನ್ನು ಹೊಂದಿ ಇಂದ್ರಿಯ ಆಯತಗಳನ್ನು ಪಡೆಯುವುದು ಇದನ್ನು ಜನ್ಮ ಎಂದು ಕರೆಯುತ್ತೇವೆ.


ಮುಪ್ಪು ಎಂದರೇನು..?

ಯಾವ ಪ್ರಾಣಿಗಳು ಎಲ್ಲಿರಬೇಕಾಗಿದೆಯೋ ಅಲ್ಲಿದ್ದು ನಶಿಸಿ ಹೋಗುವುದು, ವಯಸ್ಸಾಗುವುದು, ಸಣ್ಣಗಾಗುವುದು, ಬಣ್ಣ  ಕುಂದುವುದು, ಸುಕ್ಕು ಗೊಳ್ಳುವುದು, ಇಂದ್ರಿಯಗಳ ಮತ್ತು ಮನಸ್ಸಿನ ಶಕ್ತಿ ಕುಂದುವುದು ಇದನ್ನು ಮುಪ್ಪು ಎಂದು ಕರೆಯುತ್ತೇವೆ..


ಮರಣ ಎಂದರೇನು..?

ಜೀವಿಗಳು ತಾವು ಎಲ್ಲಿದ್ದವು ಅಲ್ಲಿಂದ ಚ್ಯುತಿಯಾಗಿ ನಿರ್ಗಮಿಸುವುದು, ಅವುಗಳ ನಾಶವಾಗುವುದು ,ಮಾಯವಾಗುವುದು, ಜೀವನ ಕಾಲವನ್ನು ಮುಗಿಸುವುದು, ಪಂಚ ಸ್ಕಂದಗಳು ವ್ಯಯವಾಗಿ ಶರೀರ ತ್ಯಾಗವಾಗುವುದು-- ಇವನ್ನು ಮರಣ ಎನ್ನುತ್ತೇವೆ.

ಶೋಕ ಎಂದರೇನು..?

ದುರದೃಷ್ಟದಿಂದ ಆದ ನಷ್ಟ ಚಿಂತೆ ಮತ್ತು ಯೋಚನೆಗೊಳಗಾದಾಗ, ತನ್ನೊಳಗೇ ಶೋಕಿತನಾದಾಗ ಉಂಟಾಗುವುದೇ ಶೋಕ.


ರೋದನೆ ಎಂದರೇನು..?

ಯಾವುದಾದರೂ ದುರಾದೃಷ್ಟ ಅಥವಾ ನಷ್ಟವು ಒದಗಿದಾಗ ಅದರಿಂದ ಗೋಳಾಡುವುದು ಮತ್ತು ಅಳುವುದು--- ಇದೇ ರೋಧನೆ.


ದುಃಖ ವೆಂದರೇನು..?

ಶಾರೀರಿಕ ನೋವು ಮತ್ತು ಮಾನಸಿಕ ಅಸಂತೋಷದಿಂದ ಉಂಟಾಗುವ ನೋವು -- ಇವೇ ದುಃಖ.

Sunday, 24 November 2019

ಸ್ತ್ರೀವಾದ ಚಿಂತನೆ

ಸ್ತ್ರೀವಾದಿ ಚಿಂತನೆ ಮೊದಲನೆಯದಾಗಿ ಸ್ತ್ರೀ-ಪುರುಷರ ನಡುವಿನ ಅಸಮಾನತೆಯನ್ನು ಪ್ರಕೃತಿ ಸಹಜವಲ್ಲ, ಜೈವಿಕ ವಲ್ಲ, ಅದು ಸಾಂಸ್ಕೃತಿಕ ಹಿನ್ನೆಲೆ ಯಾಗಿದ್ದು ಪರಿಸರದ ಕಾರಣದಲ್ಲಿ ಉದ್ಭವಿಸಿದ್ದು ಎಂದು ಹೇಳುತ್ತದೆ.

ಪುರುಷ ದೃಷ್ಟಿಕೋನ ಸಾರ್ವತ್ರಿಕವಲ್ಲ. ಪುರುಷಪ್ರಧಾನ ಮೌಲ್ಯಗಳು ಪ್ರಧಾನ ಸಂಸ್ಕೃತಿ ಅನುಕೂಲಕರವಾದ ಅರ್ಧಸತ್ಯವನ್ನಷ್ಟೇ ಹೇಳುತ್ತದೆ.

ಹೆಣ್ಣುತನದ ಗುಣ ಸ್ವಭಾವಗಳು  ದೈಹಿಕವಾಗಿ ಹೆಣ್ಣಾದ ಮಾತ್ರಕ್ಕೆ ಒಳಗೊಂಡಿರುತ್ತವೆ ಎಂಬ ಮೂಲ ನಂಬಿಕೆಯನ್ನೇ ಸ್ತ್ರೀವಾದ ಪ್ರಶ್ನಿಸುತ್ತದೆ.

ಹೆಣ್ಣು ಗಂಡು ಪರಸ್ಪರ ವಿರುದ್ಧ ವ್ಯಕ್ತಿತ್ವಗಳು ಎಂಬ ಕಲ್ಪನೆಯನ್ನು ಮೊದಲು ತೊಡೆದುಹಾಕಬೇಕಾದ ಅಗತ್ಯವನ್ನು ಸ್ತ್ರೀವಾದ ಗುರುತಿಸಿದೆ.

ಸ್ತ್ರೀವಾದ ದೃಷ್ಟಿಕೋನ ಮಾನವತಾವಾದಿಕ್ಕಿಂತ ಭಿನ್ನವಲ್ಲ ,ಹುಟ್ಟಿನಿಂದಲೇ ಒಂದು ಗುಂಪು ಇನ್ನೊಂದು ಗುಂಪಿನ ಶ್ರೇಷ್ಠ ಎಂಬ ಮೂಲ ಶ್ರೇಣೀಕೃತ ವ್ಯವಸ್ಥೆಯನ್ನು ಸ್ತ್ರೀವಾದ ತಿರಸ್ಕರಿಸುತ್ತದೆ.

ಇತಿಹಾಸದುದ್ದಕ್ಕೂ ಪುರುಷ ಪ್ರಪಂಚದ ಅನುಭವಗಳೇ ಸಾರ್ವತ್ರಿಕವಾಗಿ ಎಂಬಂತೆ ಅಭಿವ್ಯಕ್ತಿಗೊಂಡು, ಸ್ತ್ರೀರಿಯರ ಅನಿಸಿಕೆ ಅನುಭವ, ಸಾಧನೆ ದಾಖಲಾಗದೆ. ಏಕಮುಖ ಚರಿತ್ರೆಯಾಗಿದೆ . ಪುರಾಣ ಪುಣ್ಯಕಥೆಗಳಲ್ಲಿ ಸತಿ ಮಣಿಯರ ಪಾತಿವ್ರತ್ಯವನ್ನು ಒತ್ತಿ ಹೇಳುವಾಗ ಪ್ರತಿಭಟಿಸದೆ ಮೆದುತನವನ್ನೇ ಆದರ್ಶವಾಗಿಸುವ ನಿಂತ ನೀರಲ್ಲಿ ಪುರುಷನ ಪ್ರತಿಬಿಂಬ ಕಂಡೆ ಅಪವಿತ್ರಳಾಗುವ ರೇಣುಕೆಯ ತಲೆ ಕಡೆದಾಗ ಪ್ರಧಾನ ಸಂಸ್ಕೃತಿ ಪುರುಷ ಲಾಭಕ್ಕಾಗಿಯೇ ದುಡಿಯುತ್ತಿತ್ತು.


ಮಹಿಳೆಗೆ ಮಕ್ಕಳ ಲಾಲನೆ ಪೋಷಣೆಯನೆಲ್ಲ ಅಂಟಿಸುವಲ್ಲಿ ಅವು ಪ್ರಕೃತಿ ಸಹಜ ಎಂದು ಸಾರುವಲ್ಲಿ ಈ ಪುರುಷ ಪ್ರಧಾನ ಸಂಸ್ಕೃತಿ ತನ್ನ ತಂದೆತನದ ಜವಾಬ್ದಾರಿಯಿಂದ ಜಾರಿಕೊಂಡಿತಲ್ಲದೆ, ಮನೆಯ ಹೊರಗಿನ ಗಂಡಿನ ದಿಗ್ವಿಜಯಗಳಿಗೆ ಇದು ಅನುಕೂಲಕರವಾಯಿತು. ಪುರುಷರು ಮಹಿಳೆಗೆ ಅನಿಸ ಬೇಕಾದದ್ದನ್ನು  ಬರೆದಿಟ್ಟರು.


ಎಲ್ಲಾ ಪುರುಷಪ್ರಧಾನ ಸಂಸ್ಕೃತಿಗಳು ಸೃಷ್ಟಿಸಿದ ಹೆಣ್ಣಿನ ಪ್ರತಿಮೆ ಎರಡು ಬಗೆಯದ್ದು." ಮಾತೇ ಇಲ್ಲವೆ ಮಾಯೆ" ಮಾತೆಯಾಗಿ ಬಹು ಮಾನ್ಯಗಳು ಪೂಜ್ಯರು ಮಾಯೆಯಾಗಿ, ಮೋಹಿನಿಯಾಗಿ, ಪುರುಷನನ್ನು ಮರುಳು ಮಾಡುವವಳು, ಹಾದಿ ತಪ್ಪಿಸುವವಳು, ಜಗತ್ತಿನ ಪಾಪವನ್ನೆಲ್ಲ ಸಂಕೇತಿಸುವವಳು.

ರಾಮನ ವಚನ ಪಾಲನೆ ರಾಜ ಧರ್ಮಗಳ ಕಥೆ ಹೇಳುವ ರಾಮಾಯಣವು, ಸೀತೆಯ ತುಮುಲ ಅಪಮಾನಗಳನ್ನು ಮರೆತುಬಿಟ್ಟಿತು. ಅಣ್ಣ ತಮ್ಮಂದಿರ ಪ್ರೀತಿ ವಿಶ್ವಾಸವನ್ನು ಹಾಡಿ ಹೊಗಳುವಾಗ. ಅಣ್ಣನ ಹಿಂದೆ ಹೋದ ಲಕ್ಷ್ಮಣನ ಭ್ರಾತೃತ್ವ ಪ್ರೇಮವನ್ನು ಕೊಂಡಾಡುವಾಗ ಹದಿನಾಲ್ಕು ವರ್ಷ ಒಂಟಿಯಾಗಿ ಕಾದ ಊರ್ಮಿಳೆ ಸ್ಥಿತಿಗೆ ಮೌನ ತಾಳಿತು.

ಮಾಧವಿಯ ಹೆಣ್ಣುತನ ಹರಿದು ಹಂಚಿದ ಬಗೆಯನ್ನು ಬಣ್ಣಿಸಲೇ ಇಲ್ಲ. ರಾಜಕುಮಾರಿಯಾಗಿ ಹುಟ್ಟಿಯೂ ನಾಲ್ವರು ರಾಜರೊಡನೆ   ಒಲ್ಲದ ಮನಸ್ಸಿನಿಂದ ಕೂಡಿ, ಎದೆ ಹಾಲು ಚಿಲ್ಲೆನ್ನುವ ಹೊತ್ತಲ್ಲಿ, ಹೆತ್ತ ಕೂಸು ತೊರೆದು ನಡೆದ ಮಾಧವಿಯ ಕಥೆಯನ್ನು ಪುರಾಣಗಳು ಹೇಳಲಿಲ್ಲ.

ಬೆಂಕಿಗಟ್ಟಿದರು ,ಕಾಡಿಗಟ್ಟಿದರು, ಕರುಣಾಳು ರಾಮನಲ್ಲಿ ತಪ್ಪು ಕಾಣದ, ಬುಟ್ಟಿಯಲ್ಲಿ ಗಂಡನನ್ನು ಹೊತ್ತು ಸೂಳೆಮನೆ ತಲುಪಿಸಿದ ಮಹಿಳೆಯರ ಶೀಲ ಪಾತಿವ್ರತ್ಯ ವಿಧೇಯತೆಗಳನ್ನು ಹಾಡಿ ಕೊಂಡಾಡಿದ ಸಂಸ್ಕೃತಿಯು, ಮಹಿಳೆಯ ಗುಣ - ಸ್ವಭಾವ, ಸ್ಥಾನ-ಮಾನ, ಸದಾ ಕಾಲ ಪುರುಷ ಕೇಂದ್ರಿತ ದೃಷ್ಟಿಕೋನದಿಂದ ಅರ್ಥೈಸಲ್ಪಟ್ಟಿತು.


ಪುರುಷ ಕೇಂದ್ರಿತ ಕೃತಿಗಳಲ್ಲಿ, ಕೃತಿ ಹೇಳುವುದಷ್ಟನ್ನೇ ಪೂರ್ಣ ಸತ್ಯವೆಂದು, ಸುಮ್ಮನಾಗದೆ,ಹೇಳದ್ದನ್ನು  ಪದ-ಪದಗಳ ನಡುವಿನ ಮೌನವನ್ನು ಆಲಿಸುತ್ತದೆ.

ಸ್ತ್ರೀವಾದಿಗಳ ಹೋರಾಟವೇನಿದ್ದರೂ ಪುರುಷ ಪ್ರಧಾನ ವ್ಯವಸ್ಥೆಯ ಪುರುಷ ಕೇಂದ್ರಿತ ನಿಲುವುಗಳನ್ನು ಎತ್ತಿಹಿಡಿಯುವ ವ್ಯವಸ್ಥೆಯ ವಿರುದ್ಧವೇ ಹೊರತು ಪುರುಷನ ವಿರುದ್ಧವಲ್ಲ.

ಸ್ತ್ರೀಪರವಾದ ವಿಚಾರಗಳ ಬಗೆಗೆ ವಿಶೇಷವಾದ ಕಾಳಜಿ ಹೊಂದಿದ್ದು , ಪ್ರತಿಸ್ಪಂದಿಸುವವರನ್ನು ಸ್ತ್ರೀವಾದಿಗಳೆಂದು ಗುರುತಿಸಬಹುದು.ಹೆಣ್ಣಾದವರಿಗೆ, ಹಣ್ಣಾಗಬಲ್ಲವರಿಗೆ ತಟ್ಟಬಲ್ಲ ಮುಟ್ಟಬಲ್ಲ ಆ ಕೋನವೇ ಸ್ತ್ರೀ ದೃಷ್ಟಿಕೋನ.

ಈ ಕಾರಣಕ್ಕಾಗಿಯೇ ಮುಡಚೆಟ್ಟು, ಮೃಲಿಗೆಗಳು ಹೆಣ್ತನದೊಂದಿಗೆ ತಳುಕು ಹಾಕಿಕೊಂಡು ಯಾಜಮಾನ್ಯ ಸಂಸ್ಕೃತಿ ನಿರ್ಧರಿಸುವ ಚೌಕಟ್ಟಿನೋಳಗೆ ಪ್ರವಹಿಸುತ್ತವೆ. ಅದರಲ್ಲೂ ವೈದಿಕ ವ್ಯವಸ್ಥೆಯ ಕರ್ಮಸಿದ್ಧಾಂತವು ಹೆಣ್ಣು ಹೆರಿಗೆ, ಮುಟ್ಟು ಮುಂತಾದವುಗಳನ್ನು ತುಚ್ಚೀಕರಿಸಿದೆ. ಸೂತಕಗೋಳಿಸಿದೆ " ನೀಲಾ"


ಸ್ತ್ರೀಗೆ ಪತಿಯೇ ಪರದೈವ

ಗಂಡನ ಊಟವಾದ ನಂತರ ಹೆಂಡತಿಯಾದವಳು ಊಟ ಮಾಡಬೇಕು. ಗಂಡನು ಎಷ್ಟೇ ಉದ್ರೇಕಗೊಳಿಸುವ ಮಾತುಗಳನ್ನಾಡಿದರು ಹೆಂಡತಿ ಹಿಂತಿರುಗಿ ಮಾತನಾಡಿಸಬಾರದು. ಹಾಗಿದ್ದರೆ ಮಾತ್ರ ಅವಳು ಗಂಡಿನ ಪ್ರಶಂಸೆಗೆ ಪಾತ್ರಳಾಗತ್ತಾಳೆ.

ಧರ್ಮ ಶಾಸ್ತ್ರಗಳೂ, ಪುರಾಣಗಳು ಸ್ತ್ರೀಯು ಪಾಲಿಗೆ ಆಶಾದಾಯಕವಾಗಿರಲಿಲ್ಲವೆನ್ನಬೇಕು. ಪುರುಷನ ಬೋಗ, ಕಾಮಾಸಕ್ತಿ,ಲೋಭತೆ, ತಮಗೆ ಬೇಕಾದ ರೀತಿಯ ಧಾರ್ಮಿಕ ಸೂತ್ರಗಳನ್ನು ನಿರ್ಮಿಸಿ ಅನೇಕ ಸ್ತ್ರೀಯರನ್ನು ಹೆಂಡತಿಯರನ್ನಾಗಿ ಪಡೆದು ಭೋಗಿಸಿ ಅವರನ್ನು ಅಲ್ಲಲ್ಲಿಯೇ ಬಿಟ್ಟು ಪುಣ್ಯ ಪುರುಷರಾಗಿ ಪೂಜನೀಯರೆನಿಸಿಕೊಳ್ಳುತ್ತಿದ್ದಾರೆ. ಹೆಂಗಸರ ಶೀಲವನ್ನೇ ಶಂಕಿಸಿ ಅವರನ್ನು ಮಾನಸಿಕ, ದೈಹಿಕವಾಗಿ,ಕ್ಷೋಭೆಗೊಳಪಡಿಸಿ ತಾವು ನಲಿದು ಮಹಿಳೆಯರನ್ನು ಶಿಕ್ಷೆಗೊಳಪಡಿಸಿದ್ದೂ ಇದೆ.


ಶಕುಂತಲೆಯನ್ನು ಪ್ರೇಮಿಸಿ ಅವಳನ್ನು ಭೋಗಿಸಿ ನಂತರ ತನ್ನ ಅರಮನೆಗೆ ಸೇರಿಸಿಕೊಳ್ಳದೆ ಕಾಡಿಗೆ ಅಟ್ಟಿದ ದುಶ್ಯಂತನು ಪುರಾಣ ಕಾವ್ಯಗಳಲ್ಲಿ ವೀರನೆನಿಸಿಕೊಂಡಿದ್ದಾನೆ.

ರಾಮನು ಅಗ್ನಿ ಸಾಕ್ಷಿಯಾಗಿ ಕೈಹಿಡಿದ ಸೀತೆಯನ್ನು ಅವಳ ಶೀಲವನ್ನು ಶಂಕಿಸಿ ಕಾಡಿಗೆ ಅಟ್ಟಿದ ಉದಾಹರಣೆಗೆ ರಾಮಾಯಣ ಗ್ರಂಥ ಸಾಕ್ಷಿಯಾಗಿದೆ.

ಮಹಾಭಾರತದಲ್ಲಿ ಮತ್ಸಯಗಂದಿ ಸತ್ಯವತಿ- ಶಂತನು ವನ್ನು ಕೂಡುವ ಮೊದಲೆ ಪರಾಶರ ಮುನಿಯನ್ನು ಕೂಡಿ ವ್ಯಾಸಮುನಿಯನ್ನು ಹಡೆಯುತ್ತಾಳೆ.

ಕುಂತಿಯ ಕತೆಯೇ ವಿಚಿತ್ರ ಆಕೆ ವಿವಾಹ ಪೂರ್ವದಲ್ಲಿ ಸುರ್ಯನಿಂದ ಕರ್ಣನನ್ನು ಪಡೆಯುತ್ತಾಳೆ.
ಮಾದ್ರಿ, ಅಶ್ವಿನಿ, ದೇವತೆಗಳಿಂದ, ಸಂತಾನವನ್ನು ಪಡೆಯುತ್ತಾಳೆ. ಪಾಂಡುವಿನ ಸತ್ತಾಗ ಚಿಂತೆಯಿಲ್ಲಿ ಸಹಗಮನ ಮಾಡುತ್ತಾಳೆ. ಹೆಂಡತಿ ಸತ್ತರೆ ಕೂಡಲೇ ಗಂಡಸಿಗೆ ಮರುಮದುವೆ ಮಾಡುವ ಸಮಾಜ.

ವೇದ, ಶಾಸ್ತ್ರ, ಪುರಾಣ, ಕಾವ್ಯಗಳೆಲ್ಲ ಬರೆದವರು ಪುರುಷರು, ಅವರಿಗೆ ಸ್ತ್ರೀಯರನ್ನು ತಮ್ಮ ಸರಿಸಮನಾಗಿ ಚಿತ್ರಿಸುವುದು ಅವಮಾನಕರವೆಂಬಂತೆ ಕಂಡಿರಬೇಕು.

ಭೌತಿಕವಾದ

*ಪ್ರಾಚೀನ ಭಾರತದಲ್ಲಿ ಭೌತಿಕವಾದ* 
*ಚಾರ್ವಾಕ /ಲೋಕಯತ ದರ್ಶನ ಒಂದು ಅಧ್ಯಯನ          ----ದೇವಿಪ್ರಸಾದ್ ಚಟ್ಟೋಪಾಧ್ಯಾಯ* 

ಇಂದ್ರಿಯ ಅನುಭವಕ್ಕೆ ನಿಲುಕದ, ಪ್ರಾಯೋಗಿಕ, ವೈಜ್ಞಾನಿಕ ,ವೈಚಾರಿಕ ತಳಹದಿಯ ಮೇಲೆ ಯಾವುದನ್ನು ಪ್ರಶ್ನಿಸದೇ ಪರೀಕ್ಷಿಸದೆ ಒಪ್ಪಿಕೊಳ್ಳದೆ ಹಾಗೂ ವಾಸ್ತವ್ /ಪ್ರತ್ಯಕ್ಷ ಅನುಭವಗಳಿಂದ ಕೂಡಿದ ಲೋಕ ಸತ್ಯಗಳನ್ನು ಒಪ್ಪುವುದಾಗಿದೆ. ಸತ್ಯವಲ್ಲದ ಸತ್ಯವನ್ನು, ಅನುಮಾನವನ್ನು,ಆಧ್ಯಾತ್ಮಿಕ ,ಸ್ವರ್ಗ-ನರಕ, ಕರ್ಮಫಲ, ಆತ್ಮ, ಎಂಬ ಪರಿಕಲ್ಪನೆಗಳನ್ನೆ ಬಂಡವಾಳವಾಗಿಸಿಕೊಂಡು ಮುಕ್ತಿ, ಮೋಕ್ಷ, ಸ್ವರ್ಗ-ನರಕದ ಪ್ರಾಪ್ತಿ ,ಎಂದು ಜನರನ್ನು ಮಾನಸಿಕ ಗುಲಾಮರನ್ನಾಗಿಸುವ ಮೂಲಕ ಹತೋಟಿಗೆ ತೆಗೆದುಕೊಳ್ಳುವ ಪುರೋಹಿತಶಾಹಿ (ಅನೇಕ ತತ್ವದರ್ಶನಗಳಿಗೆ) ತತ್ವದರ್ಶನಕೆ ವಿರೋಧಾಭಾಸ ಉಂಟುಮಾಡುವ ತರ್ಕಬದ್ಧವಾದ ದರ್ಶನ/ಶಾಸ್ತ್ರವೇ--- ಈ ಚಾರ್ವಾಕ/ ಲೋಕಾಯತ/ ಭೌತಿಕವಾದ. (ನನ್ನ ಗ್ರಹಿಕೆ.)



ಪ್ರಾಚೀನ ಭಾರತದಲ್ಲಿ ಅಧ್ಯಾತ್ಮಿಕವಾದದೊಂದಿಗೆ ಸಂಧಿಗೊಪ್ಪದ್ದೆ....ಈ ಬೌತಿಕ ವಾದವಾಗಿದೆ.
ಜನರ ತತ್ವಜ್ಞಾನ , ಐಹಿಕ ತತ್ವಜ್ಞಾನ, ಭೌತಿಕವಾದಿ ತತ್ವಜ್ಞಾನ ಎಂದು ಅರ್ಥವಿದೆ -ಈ ಬಿ ಕೋವೆಲ್.


ಆದರೆ ಭಾರತೀಯ ತತ್ವಜ್ಞಾನದೊಳಗೆ ಭೌತಿಕವಾದದ ಖಂಡನೆ ಧಾರಾಳವಾಗಿದೆ...
*ಜಯ ರಾಶಿ ಭಟ್ಟ, ಶಂಕರಾಚಾರ್ಯ ,ಮಾಧವಾಚಾರ್ಯ, ಗುಣರತ್ನ...* ಮುಂತಾದವರು ಈ ವಾದವನ್ನು ತರ್ಕಬದ್ಧವಾಗಿ ಸಮರ್ಥಿಸುವದಕ್ಕಿಂತ ವ್ಯಂಗ್ಯವಾಗಿ ವಿರೋಧಿಸುವ ಕೆಲಸವನ್ನೇ ಮಾಡಿದ್ದಾರೆ.
ಅದರ ವಿರೋಧಿಗಳ ಪ್ರಕಾರ ಭೌತಿಕ ವಾದವು  ತಿನ್ನು ,ಕುಡಿ, ಕುಣಿದಾಡು, ನೀತಿ -ಅನೀತಿ ಗಳನ್ನು ಕುರಿತಾಗಲಿ, ಸ್ವರ್ಗ ನರಕಗಳನ್ನು ಕುರಿತಾಗಲಿ ಚಿಂತಿಸದಿರು. ಕೀಳು ಪ್ರವೃತ್ತಿಯವರು, ಕೀಳು ಅಭಿರುಚಿ ಉಳ್ಳವರು ಅಪಾಯಕಾರಿಗಳೆಂದು ಬಿಂಬಿಸಲಾಗಿದೆ.

ಹಾಗೆ ನೋಡಿದರೆ ಕುರುಕ್ಷೇತ್ರದಲ್ಲಿ ಅರ್ಜುನನ ಚಂಚಲತೆಯನ್ನು ನಿವಾರಣೆ ಮಾಡಲು ಕೃಷ್ಣ ವಿಶ್ವ ರೂಪತಾಳಿ.. ಈ *"ಯುದ್ಧದಲ್ಲಿ ನೀನು ಸತ್ತರೆ ನಿನಗೆ ಸ್ವರ್ಗ ಸಿಗುತ್ತದೆ; ನೀನು ಗೆದ್ದರೆ ಇಡೀ ಭೂಮಂಡಲವನ್ನೇ ನಿನ್ನ ಸುಖ ಸಂತೋಷಗಳಿಗೆ ಪ್ರಾಪ್ತವಾಗುತ್ತದೆ"*. (ಸುಖ ಭೋಗ- ಲಾಲಸೆ) ಎಂದು ಉಪದೇಶ ನೀಡುತ್ತಾನೆ.
ಹೀಗೆ ನಿಜವಾಗಿ ನೋಡಿದರೆ ಭೌತಿಕವಾದವನ್ನು ಕುರಿತು ಮಾಡಲಾಗಿರುವ ಆರೋಪ ಅಧ್ಯಾತ್ಮಿಕವಾದಕ್ಕೆ ಸಲ್ಲುತ್ತದೆ.


*ಎಂಗಲ್ಸ್* -ಬೌದ್ಧಿಕವಾದ ದೀರ್ಘಕಾಲ ಪುರೋಹಿತ ವರ್ಗದವರ ನಿರಂತರ ಅಪಪ್ರಚಾರಕ್ಕೆ ಬಲಿಯಾಗಿದ್ದರಿಂದ ಭೌತಿಕವಾದ ಎಂಬ ಪದದ ವಿರುದ್ಧ ಪರಂಗತ ವಿಚಾರವಂತರಲ್ಲಿ ತೀವ್ರ ಪೂರ್ವಗ್ರಹ ಬೆಳೆದು ಗಟ್ಟಿಯಾಗಿದೆ‌. ಬೌತಿಕವಾದವೆಂದರೆ ಹೊಟ್ಟೆಬಾಕತನ ,ಕುರುಡುತನ, ದೃಷ್ಟಿ ಕಾಮ, ಭೋಗಲಾಲಸೆ, ಅಹಂಭಾವ, ದುರ್ಮೋಹ, ಅತ್ಯಾಶೆ, ದೋಚುವಾಸೆ, ಶೇರುಮಾರುಕಟ್ಟೆಯ ವಂಚನೆ ಇತ್ಯಾದಿಗಳೆಂದು ಭಾವಿಸಲಾಗಿದೆ..
ಈ ವಿರೋಧವೂ ಬಾಲಿಶ ಹಾಗೂ ಅರ್ಥಶೂನ್ಯವಾದದ್ದು. ತಾತ್ಸಾರ ಮನೋಭಾವದಿಂದ ತಿರಸ್ಕರಿಸುವಂತದ್ದಲ್ಲದೆ ಮತ್ತೆನೂ ಅಲ್ಲಾ.

ಅಧ್ಯಾತ್ಮಿಕವಾದಿಗಳು ಸತ್ಯವಲ್ಲದ ಸತ್ಯ ತಮ್ಮ ಮೂಲಭೂತ ದೌರ್ಬಲ್ಯವನ್ನು ಮುಚ್ಚಿಡುವುದಕ್ಕೆ ಈ ಅರ್ಥವಿಲ್ಲದ ವಾಗಾಡಂಬರವನ್ನಲ್ಲದೆ ಬೇರೆ ಏನನ್ನು ಉಪಯೋಗಿಸಲಾರರು.‌.ಅಧ್ಯಾತ್ಮಿಕ ವಾದಿಗಳ ಈ ವಾದಗತಿ ಬರೇ ತಾತ್ವಿಕ ಬೂಟಾಟಿಕೆ.. ವಂಚನೆಯಾಗಿದೆ.


*ಮಹಾಭಾರತದ ಚಾರ್ವಾಕ /ದಾನವ (ಮಿತ್)*

ಕುರುಕ್ಷೇತ್ರ ಯುದ್ಧದಲ್ಲಿ ಜಯಶಾಲಿಗಳಾದ ಪಾಂಡವ ಸಹೋದರರು ಅತ್ಯಂತ ವೈಭವ ವಿಜೃಂಭಣೆಗಳೊಂದಿಗೆ ಮರಳಿ ಪ್ರವೇಶ ಮಾಡಿದಾಗ,ಯುಧಿಷ್ಠರನಿಗೆ ಆಶೀರ್ವಾದಗಳನ್ನು ನೀಡುವುದಕ್ಕಾಗಿ ಸಹಸ್ರ ಸಹಸ್ರ ಬ್ರಾಹ್ಮಣರು ಪ್ರವೇಶದ್ವಾರದಲ್ಲಿ ನೆರೆದಿದ್ದರು. ಅವರ ನಡುವೆ ಚಾರ್ವಕ ಇದ್ದ ಅವನು ಯುಧಿಪ್ಠರನನ್ನು ನೇರವಾಗಿ... ನಿನ್ನ ತಮ್ಮಂದಿರನ್ನು ಮತ್ತು ಸಹೋದರರನ್ನು ಕೊಂದು ನೀನು ಈ ರಾಜ್ಯವನ್ನು ಪಡೆದಿದ್ದೀಯ. ಅದಕ್ಕಾಗಿ ಬ್ರಾಹ್ಮಣ ಸಮುದಾಯದ ದೂಷಿಸುತ್ತದೆ .ಹೀಗೆ ನಿನ್ನ ಕುಲದ ಹಿರಿಯರನ್ನು ಕೊಂದು ನೀನು ಪಡೆದುಕೊಂಡಿದ್ದಾದರು ಏನು..? ನೀನು ಸಾಯುವುದೇ ಲೇಸು... ಎಂದು ಪ್ರಶ್ನಿಸುತ್ತಾನೆ.
ಆಗ ಅಬ್ರಾಹ್ಮಣರು ಚಾರ್ವಕನನ್ನು ಸುಟ್ಟು ಬೂದಿ ಮಾಡಿದರು *(ಅವರ ಚಿಂತನೆಗಳನ್ನು,  ತರ್ಕವನ್ನು ,ಗ್ರಂಥಗಳನ್ನು)*


*ಪ್ರತ್ಯಕ್ಷಾನುಭವದ ಪ್ರಾಧಾನ್ಯ*
----------------------------------------

ಬೌದ್ಧಿಕವಾದಿಗಳು *ದೇಹಾತ್ಮವಾದ*  ಎಂದು ಕರೆಯುತ್ತಾರೆ. ನಮ್ಮ ಭೌತಿಕ ಶರೀರವು ಆತ್ಮವು ಒಂದೇ ಎನ್ನುವ ವಾದವಾಗಿದೆ.

ಸಾಮಾನ್ಯ ಅನುಮಾನಗಳು ಪ್ರತ್ಯಕ್ಷಾನುಭವದ ಆಧಾರವನ್ನು ಹೊಂದಿದ್ದರೆ ಅಂಥವುಗಳಿಗೆ ಅವರ ಆಕ್ಷೇಪ ವಿರಲಿಲ್ಲ.
ಪ್ರಾಚೀನಕಾಲದಲ್ಲಿ ವಿಜ್ಞಾನವು ಬೆಳವಣಿಗೆ ಹೊಂದಿದ್ದಷ್ಟು ಮಟ್ಟಿಗೆ ಪ್ರತ್ಯಕ್ಷಾನುಭವವು ಪ್ರಕೃತಿ ವಿಜ್ಞಾನದ ಬುನಾದಿಯೂ ಆಗಿತ್ತು.


*"ದೇವರು ಎಂಬುದು ಇಲ್ಲ. ಇಹಲೋಕದ ಬಂಧನದಿಂದ ಮೋಕ್ಷವೆಂಬುದು ಇಲ್ಲ. ಪುಣ್ಯ ಮತ್ತು ಪಾಪಗಳು ಇಲ್ಲ; ಅವುಗಳ ಫಲಗಳು ಎಂಬುದು ಇಲ್ಲ. ನಿಜವಾಗಿ ಇರುವುದು ಪ್ರಪಂಚ ಒಂದೇ ಅದು ಪ್ರತ್ಯಕ್ಷ ಅನುಭವಕ್ಕೆ ನಿಲುಕುವಷ್ಟಕ್ಕೆ ನಿಜವಾಗಿದೆ. ಆದುದರಿಂದ ಗೆಳೆಯ ತೋಳಗಳ ಹೆಜ್ಜೆಗುರುತುಗಳನ್ನು ನೋಡು ಹಾಗೂ ಧರ್ಮಶಾಸ್ತ್ರಗಳ ಅಪಾರ ಜ್ಞಾನವಿರುವವರೆಂದು ಹೇಳಿಕೊಳ್ಳುವವರ ಮಾತುಗಳನ್ನು ಗಮನಿಸು".* ಹೀಗೆಂದು ಹೇಳುತ್ತಾರೆ ಲೋಕಾಯತರು...

ಆತ್ಮ ಸ್ವರ್ಗ-ನರಕ ಇತ್ಯಾದಿಗಳ ಅನುಮಾನವೂ ಧಾರ್ಮಿಕ ನಂಬಿಕೆಗಳ ಬಗ್ಗೆ ಒಂದು ತರಹದ ಕುರುಡು ಭಾವನೆಯನ್ನು ಹುಟ್ಟಿಸಿ ಜನರ ಶೋಷಣೆಗೆ, ದುರ್ಬಳಕೆ ಮಾಡುವಂತ ಉಪಕರಣವಾಗಿ ಬಳಕೆಯಾಗುತ್ತದೆ.


ಅನುಮಾನವನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆನ್ನುವ ಅಭಿಪ್ರಾಯ ಬೌತಿಕವಾದಿಗಳಿಗೆ ಇದ್ದಿರಲಾರದು;ಆದರೆ ಪ್ರತ್ಯಕ್ಷಾನುಭವದ ಯಾವ ಸಮರ್ಥನೆ ಕೂಡ ಇಲ್ಲದೆಯೇ ಅನುಮಾನವು ಯಾವುದನ್ನಾದರೂ ರುಜುವಾತು ಮಾಡಿಬಿಡಬಲ್ಲವೆಂಬ ಮಾತನ್ನು ಮಾತ್ರ ಭೌತಿಕವಾದಿಗಳು ತಿರಸ್ಕರಿಸುತ್ತಾರೆ..

ಪ್ರಾಚೀನ ಭಾರತದ ತತ್ವಜ್ಞಾನ ಕ್ಷೇತ್ರದೊಳಗಿನ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುವ *ಕೌಟಿಲ್ಯನ ಅರ್ಥಶಾಸ್ತ್ರ* ದೊಳಗಿನ ಸಾಕ್ಷಾಧಾರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ.....

ಕೌಟಿಲ್ಯ ಅರಸನ ಜ್ಞಾನದ ನಾಲ್ಕು ಶಾಖೆಗಳಲ್ಲಿ ಪರಿಣಿತಿ ಪಡೆಯುವುದು ಅಪೇಕ್ಷಣೀಯ 
ಆನ್ವೀಕ್ಷಿಕೀ, {(ತರ್ಕ)-ಸಾಂಖ್ಯ, ನ್ಯಾಯ ವೈಶೇಷಿಕ ಮತ್ತು ಲೋಕಾಯತ}
ತ್ರಯೀ-,(ವೇದಗಳು)
ವಾರ್ತ-(ಕೃಷಿ ಪಶುಪಾಲನೆ ಮತ್ತು ವ್ಯಾಪಾರ) 
ದಂಡನೀತಿ-(ಜನರನ್ನು ಆಳುವ ತಂತ್ರ)

ಕೌಟಿಲ್ಯ--- ನಾವು ಭಾವಿಸುವಂಥ ಕಟ್ಟಾ ವಿಚಾರವಾದಿಯಾಗಿದ್ದ ಎಂದು ತಿಳಿದರೆ ತಪ್ಪಾದೀತು .ನಿಜವಾಗಿ ಹೇಳಬೇಕೆಂದರೆ 

*ಕೌಟಿಲ್ಯ ಅರಸನ ಪ್ರಭುತ್ವವನ್ನು ನಿರ್ದಾಕ್ಷಿಣ್ಯವಾಗಿ ,ಕಠೋರವಾಗಿ ಪ್ರತಿಪಾದಿಸಿದ್ದವರಲ್ಲಿ ಪ್ರಮುಖನಾಗಿದ್ದ; ರಾಜ್ಯದ ಸುಭದ್ರ ಹಾಗೂ ಸುಸೂತ್ರ ಆಡಳಿತೆಯ ಸಲುವಾಗಿ ಜನರ ಮೂಢನಂಬಿಕೆಗಳನ್ನು ಯಾವ ಅಂಜಿಕೆಯೂ ಇಲ್ಲದೆ ಬಳಕೆ ಮಾಡಬೇಕೆಂದು ಆತ ಶಿಫಾರಸು ಮಾಡಿದ್ದ--R.s.ಶರ್ಮಾ*.

*ಚರಕ ಸಂಹಿತೆ ಮತ್ತು ಸುಶ್ರುತ ಸಂಹಿತೆ---*
"ಹೆಣಗಳನ್ನು ಕೊಯ್ದು ನೋಡುವುದು ಶರೀರ ರಚನಾ ಶಾಸ್ತ್ರದ ಅಧ್ಯಯನಕ್ಕೆ ಅಗತ್ಯವೆಂದು, ಅದಿಲ್ಲದೆ ವೈದ್ಯಕೀಯ ಜ್ಞಾನವು ಅಪೂರ್ಣವಾಗಿ ಉಳಿಯುತ್ತದೆ ಎಂದು ಹೇಳುತ್ತವೆ.

ಶರೀರದೊಳಗಿನ ವಿವಿಧ ಅಂಗಗಳನ್ನು ಪ್ರತ್ಯಕ್ಷವಾಗಿ ಕಂಡು ತಿಳಿಯುವ ಅಗತ್ಯವಿರುತ್ತದೆ. ಊಹೆ, ಅನುಮಾನಗಳಿಂದ ಸಾಧ್ಯವಾಗದು.




*ದೇಹ ಮತ್ತು ಆತ್ಮ*
----------------------------------

ಬೌದ್ಧಿಕವಾದಿಗಳು ದೇಹ ಮತ್ತು ಆತ್ಮ ಎಂಬ ಎರಡು ಬೇರೆಬೇರೆಯಾದವುಗಳಲ್ಲ "ದೇಹಾತ್ಮವಾದ" ಎಂಬ ಒಂದೇ ಅರ್ಥದಲ್ಲಿ ಪ್ರತಿಪಾದಿಸುತ್ತಾರೆ.
ಈ ದೇಹವು *ಭೂಮಿ, ನೀರು, ಬೆಂಕಿ, ಮತ್ತು ಗಾಳಿ* ಎಂಬ ಭೌತಿಕ ವಸ್ತುಗಳಿಂದಾದ್ದದು  ಈ ನಾಲ್ಕು ಮೂಲಧಾತುಗಳಿಂದಲೇ *"ಪ್ರಜ್ಞೆ"* ಹುಟ್ಟುತ್ತದೆ.

*ಮನುಷ್ಯನೆಂದರೆ ಪ್ರಜ್ಞೆಯನ್ನು ಒಳಗೊಂಡಿರುವ ದೇಹವಲ್ಲದೆ ಇನ್ನೇನು ಅಲ್ಲವೆಂದು* ಲೋಕಾಯತರ ವಾದ.

ಇವರ ವಾದಗಳನ್ನು ಖಂಡಿಸಲು ಅವರ ವಿರೋಧಿಗಳು ಮಂಡಿಸಿದ ಮುಖ್ಯವಾದಗಳು...

*ಗುಣರತ್ನ*
ಭೌತವಸ್ತು ಅದರ ನಾಲ್ಕು ಮೂಲಧಾತುಗಳ ರೂಪದಲ್ಲಿ ಬಹುತೇಕ ಎಲ್ಲಾ ಕಡೆಗಳಲ್ಲೂ ಅಸ್ತಿತ್ವದಲ್ಲಿರುತ್ತದೆ ಆದರೆ ಪ್ರಜ್ಞೆ ಇರುವ ದೇಹವು ಹಾಗೆ ಎಲ್ಲ ಕಡೆಗಳಲ್ಲಿ ಇರುವುದಿಲ್ಲ.??

ಚಾರ್ವಾಕರನ್ನು ಇಂಥ ಒಂದು ಇಕ್ಕಟ್ಟಿನ ಪರಿಸ್ಥಿತಿಗೆ ಗುಣರತ್ನ ಸಿಲುಕಿಸುತ್ತಾರೆ...



*ಶಂಕರಚಾರ್ಯರು*

ಈ ದೇಹವು 4 ಮೂಲ ಧಾತುಗಳಿಂದ ಆಗಿದ್ದು ನಂತರ ಪ್ರಜ್ಞೆಯನ್ನು ಪಡೆಯುತ್ತದೆ ಎಂಬ ಚಾರ್ವಾಕರ ವಾದವನ್ನು ಶಂಕರಾಚಾರ್ಯ ವಿರೋಧಿಸುತ್ತಾ ದೇಹವಿದು ಪ್ರಜ್ಞೆ ಇಲ್ಲದಿರುವುದಕ್ಕೆ "ಸತ್ತ ಶವ" ದಉದಾರಣೆ ಕೊಡುತ್ತಾನೆ.

ದೇಹದ ಇರುವಿಕೆಯೊಂದಿಗೆ ಪ್ರಜ್ಞೆಯ ಇಲ್ಲದಿರುವಿಕೆಯನ್ನು ತೋರಿಸಿದರೆ ಸಾಲದು, ಪ್ರಜ್ಞೆಯ ಇರುವಿಕೆಯನ್ನು ದೇಹದ ಇಲ್ಲದಿದ್ದಲ್ಲಿ ಸಹ ತೋರಿಸಬೇಕಾಗುತ್ತದೆ. ಇದೊಂದು ಶಂಕರನ ವಾದ ಕ್ರಮದಲ್ಲಿ ನ್ಯೂನತೆ.



ಹೀಗೆ ದೇವಿಪ್ರಸಾದ್ ಚಟ್ಟೋಪಾಧ್ಯಾಯರು ಭೌತಿಕ ವಾದದ ಕುರಿತು ಇಲ್ಲಿ ಅನೇಕ ಅಂಶಗಳನ್ನು ಸಂಶೋಧಿಸಿ ಚರ್ಚೆ ಮಾಡಿದ್ದಾರೆ.... (ಅನುವಾದ ಬಿ. ವಿ. ಕಕ್ಕಿಲ್ಲಾಯ)

Saturday, 26 October 2019

ಈ ಪ್ರಮದೆಯರೇ ಹೀಗೆ

ಈ ಪ್ರಮದೆಯರೇ ಹೀಗೆ

   
ಸಮಾನತೆಯ ಕೂಗು ಹಾಕುವ
ಹೆಣ್ಣಿಗೊಂದು ಸವಾಲು
ಪೂರ್ಣತ್ವಕ್ಕೆ ಬೇಡವೆ
ಗಂಡಿನ ಶಾಮೀಲು

ನಲ್ಲ ಬಳಿ ಸಾರಿದಾಗ
ತಲೆ ತಗ್ಗಿಸುವಿರೇಕೆ
ನೆಲ ಕೆದಕುವುದೇಕೆ ಕಾಲ್ಬೆರಳು
ನಾಚಿ ನೀರಾಗುವಿರೇಕೆ
ಆಯ ತಪ್ಪಿದ ನಾಡಿ ಮಿಡಿತಕ್ಕೆ
ಸ್ತಬ್ಧರಾಗುವಿರೇಕೆ

ಎದೆ ಸೆಟಿಸಿ
ಹುಬ್ಬೇರಿಸಿ
ಹಲೋ ಎಂದು ಒಮ್ಮೆ
ಕೈಕುಲುಕಿ ಬೆನ್ನು
ಚಪ್ಪರಿಸಿಬಿಡಿ

    ೨

ಹೆಣ್ಣ ಕಂಡಲ್ಲಿ
ಕುಡಿಗಣ್ಣಲ್ಲೆ ಮೀಟುವ
ಅಸಭ್ಯರು
ಗೇಲಿಮಾಡುವ ಪೋಲಿಗಳು
ಎನ್ನುವ ನೀವು
ಎದುರಿಗೆ ಬಂದ ಹುಡುಗರು
ತಿರುಗಿ ನೋಡದಿದ್ದರೆ
ಒಳಗೊಳಗೆ
ಕುದಿಯುವುದಿಲ್ಲವೇನು

ಸುಂದರ ಸಹಪಾಠಿಯೊಬ್ಬ
ನಿಮ್ಮ ಮಾತಾಡಿಸದಿದ್ದರೆ
ನಿಮ್ಮ ಸೇಡಿಗದೆಷ್ಟು ಕಿಡಿ
ನಿಮ್ಮ ನಾಲಿಗೆಗವನೆಷ್ಟು ಹಗುರ

ಬೆತ್ತಲೆ ಪೋಸ್ಟರುಗಳಿಗೆ ಬೆಂಕಿ
ಎಂದು ಕೂಗಿ
ಸ್ಟೆಲೋನನ ಮೈ ಕಟ್ಟನ್ನು
ಮನದಲ್ಲೆ ರಮಿಸುವುದಿಲ್ಲವೆ
ಟೈಸನ್ನನ ವಕ್ಷ
ದಿಂಬಾದರೆಂಥ ಚೆನ್ನ ಎಂದು
ಕನಸುವುದಿಲ್ಲವೇನು

    ೩

ನಾವೂ ದುಡಿಯುತ್ತೇವೆಂದು
ಕಛೇರಿಗೆ ಹೋದರೂ
ಗಂಡನಾದರಿಸುವ
ಗೃಹಿಣಿಯ ಕಂಡು
ಕರುಬುವುದಿಲ್ಲವೆ ಹೇಳಿ

ಅಕ್ಕ ಪಕ್ಕದವರ
ಚಿಕ್ಕ ಮಾತುಗಳಿಗೆ ಕುಗ್ಗಿ
ನನ್ನ ಗಂಡ ಸಾಹೇಬನಾಗಿದ್ದರೆ
ನನಗಿಂಥ ಪಾಡೇಕೆ
ಎಂದು ನೊಂದ ಗೆಳತಿಯರೊಂದಿಗೆ
ಕೊರಗುತ್ತೀರಿ

    ೪

‘ಗಡ್ಡ ಮೀಸೆ ಬಂದರೆ ಗಂಡು
ಮೊಲೆಮುಡಿ ಬಂದರೆ ಹೆಣ್ಣು’

ಹೆಣ್ಣು ಶೋಷಿತೆಯೆಂದು
ಹೊರಗೆ ಬಿಕ್ಕಳಿಸುತ್ತಾ
ಮನೆಗೆ ತಡವಾಗಿ ಬಂದ ಗಂಡನ
ಮುಖಕ್ಕೆ ಇಕ್ಕುವ
ನಿಮ್ಮ ಸೌಟಿಗೆ
ಶೋಷಣೆಯ ಹಲವು ಮುಖಗಳು ಗೊತ್ತು

ಪೌರುಷದ ಹೆಡೆಗಳಿಗೆ
ನೀವೆ ಪುಂಗಿನಾದ
ಗಂಡೆಂಬ ಬುಗುರಿಯನ್ನು
ಆಡಿಸುವ ದಾರ ನೀವೆ

    ೫
ಹೌದೆನ್ನಲು ಅಲ್ಲವೆನ್ನುವ
ಅತ್ತ ತಿರುಗಿ ಇತ್ತ ಮಾತಾಡುವ
ನಗುವಿಗೆ ಅಳುವಿನ
ಲೇಪ ಹಚ್ಚುವ
ಕೇಳಿದರೆ ‘ಸುಮ್ಮನೆ’ ಎಂದು ಬಿಡುವ
ಈ ಪ್ರಮದೆಯರೇ ಹೀಗೆ.

Thursday, 10 October 2019

ಎಲ್ಲಾ ಹುಡುಗಿಯರು

ಅವ್ವ ಕೇಳೇ ನಾನೊಂದ ಕನಸ ಕಂಡೇ . . . . ಅವ್ವ ಕೇಳೇ ಕನಸೊಂದ ನಾ ಕಂಡೆನೆ . . . . ಮುಂಗೋಳಿ ಕೂಗಿತ್ತು ಮೂಡಲ್ಲಿ ಕಂಪಿತ್ತು ಬೆಳ್ಳಿಯೂ ಮರಳಿತ್ತು ಹಕ್ಕಿಯೂ ಹಾಡಿತ್ತು ಮಲ್ಲಿಗೆ ಸಂಪಿಗೆ ಘಮ್ಮೆಂದು ಬಿರಿದಿತ್ತು ಹಾದೀಲಿ ಇಬ್ಬನಿಯು ಮುತ್ತಾಗಿ ಸುರಿದಿತ್ತು || ಅವ್ವ|| ಕಣ್ಣರೆಪ್ಪೆ ಬಿಗಿಯೆ ಕದ ತಟ್ಟಿ ಒಳಬಂದ ಕಾರಿರುಳ ಕೆಂಜೆಡೆಗೆ ಚಂದಿರನ ಮುಡಿದಿದ್ದ ಕಾಲ್ಗೆಜ್ಜೆ ಕುಣಿಸುತ್ತ ಶರಣು ಶರಣು ಅಂದ ಮುಕ್ಕಣ್ಣ ತಾನೆಂದು ಮುಂಗೈಗೆ ಮುತ್ತಿಟ್ಟ ಕೀಟಲೆ ನಗೆ ನಕ್ಕು ಕಪ್ಪರವ ಮುಂದಿಟ್ಟ ಒಲ್ಲೆ ಎಂದರೂ ಬಿಡದೆ ಒಲವು ಬೇಡಿದನವ್ವ ಮುದ್ದಾಗಿ ಮಾತಾಡಿ ಮರುಳು ಮಾಡಿದನವ್ವ || ಅವ್ವ|| ತುಂಬೆಯ ಹೂ ಬಿಡಿಸಿ ತುರುಬಿಗೆ ಮುಡಿಸಿದ ಒಂದೊಂದು ಕಿವಿಯಲ್ಲೂ ದುಂಬಿಯ ಇರಿಸಿದ ಮಿಂಚಿನ ಹುಳುವಲ್ಲೇ ಮೂಗುತಿಯ ಮಾಡಿದ ನೇರಳೆ ಹಣ್ಣಿನ ಹಾರವ ತೊಡಿಸಿದ ಕೀಟಲೆ ನಗೆ ನಕ್ಕು ಕಪ್ಪರವ ಮುಂದಿಟ್ಟ ಒಲ್ಲೆ ಎಂದರೂ ಬಿಡದೆ ಒಲವು ಬೇಡಿದನವ್ವ . . . ಮುದ್ದಾಗಿ ಮಾತಾಡಿ ಮರುಳು ಮಾಡಿದನವ್ವ || ಅವ್ವ|| ಹುಲಿಚರ್ಮ ಹೊದ್ದರೂ ಹಾಲು ಮನಸಿನ ಹುಡುಗ ಡೊಳ್ಳ ಬಾರಿಸಿ, ಢಕ್ಕೆಯ ಬಡಿದು, ಡಮರುಗ ನುಡಿಸಿದ ನವಿಲ ಹಾಗೆ ಕುಣಿದು ಮಿಂಚು ಮಳೆ ಕರೆದ ಹಕ್ಕಿಪಿಕ್ಕಿಯಂಗೆ ಕೂಗಿ ನಕ್ಕೂನಗಿಸಿದ ಕೀಟಲೆ ನಗೆ ನಕ್ಕು ಕಪ್ಪರವ ಮುಂದಿಟ್ಟ ಒಲ್ಲೆ ಎಂದರೂ ಬಿಡದೆ ಒಲವು ಬೇಡಿದನವ್ವ . . . ಮುದ್ದಾಗಿ ಮಾತಾಡಿ ಮರುಳು ಮಾಡಿದನವ್ವ || ಅವ್ವ|| ಚಪ್ಪರ ತೋರಣ ಒಡವೆ ಓಲಗವಿಲ್ಲ ಮಂಟಪ ಮಂಡಿಗೆ ಧಾರೆ ದಿಬ್ಬಣವಿಲ್ಲ ಆರತಿ ಎತ್ತಲು ಮುತ್ತೈದೆಯರಿಲ್ಲ ಮಂತ್ರಗಳಿಲ್ಲ ಶಾಸ್ತ್ರಗಳಿಲ್ಲ . . . ಮಸಣದೊಳಗೆ ಮದುವಣಗಿತ್ತಿ ನಾನಾದೆನವ್ವ . . . ಬೂದಿಬಡುಕನ ಬಾಳ ಬೆಳಗಿದೆನವ್ವ . . . || ಅವ್ವ || ಕದಳಿಯ ಬನದೊಳಗೆ ಕಾದಿಹನವ್ವ . . . ಕಣಗಿಲೆ ಹೂ ಹಾಸಿ ಕಾದಿಹನವ್ವ . . . ಕಣ್ಣ ಬತ್ತಿಯ ಉರಿಸಿ ಕಾದಿಹನವ್ವ . . . ಜನುಮ ಜನುಮದ ಒಲವು ಫಲಗೂಡಿತವ್ವ . . . ಹುಟ್ಟು ಸಾವಿನಾಚೆಯ ದಡದಿ ಮನೆ ಮಾಡಿಹನವ್ವ . . . ತಪ್ಪೋ ಒಪ್ಪೋ ಮನ್ನಿಸಿ ಹರಸವ್ವ ತಪ್ಪೋ ಒಪ್ಪೋ ಹರಸಿ ನೀ ಕಳಿಸವ್ವ || ಅವ್ವ || ಲೇಖಕರು

ಕಾನೂನು ಪುಸ್ತಕಗಳು

http://kanaja.in/ebook/index.php/2017-12-19-05-35-25/2017-12-12-07-14-45/2017-12-12-07-18-39

Monday, 15 April 2019

ಜನತಂತ್ರದ ಪ್ರಧಾನಿ ನಿಜವಾದ ಚೌಕೀದಾರ್ ಆಗಿರಲೂಬಹುದು; ಆದರೆ ಯಾರಿಗೆ? ಚೌಕೀದಾರ್ ಚೋರ್ ಅಲ್ಲದಿರಲೂಬಹುದು  Devanooru Mahadev.jpg ದೇವನೂರು ಮಹದೇವ  bhauray 16-Edit-04-2019 ‘ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ’ ಎಂಬ ಮಾತಿದೆಯಲ್ಲಾ ಇದು ಇಂದಿನ ಜಾಗತೀಕರಣದ ಮಾಯಾಜಿಂಕೆ ಅನ್ನಿಸಿಬಿಡುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ನಮ್ಮ ಸರ್ಕಾರ ಅನುಕೂಲ ಮಾಡಿಕೊಡುವ ವ್ಯವಸ್ಥಾಪಕನಂತೆ ಕಾರ್ಯ ನಿರ್ವಹಿಸುತ್ತದೆ, ನಮ್ಮ ಸರ್ಕಾರದ ಗಮನವೆಲ್ಲಾ- ಕನಿಷ್ಠ ಸರ್ಕಾರ ಗರಿಷ್ಠ ಆಡಳಿತದತ್ತ’ ಎನ್ನುತ್ತಾರೆ. ವಾಣಿಜ್ಯ ಉದ್ಯಮ ನಡೆಸುವುದು ಸರ್ಕಾರದ ಉಸಾಬರಿಯಲ್ಲ ಎಂಬರ್ಥದಲ್ಲಿ ‘I believe, government has no business to be in business. The focus should be on Minimum Government but Maximum Governance’ ಎಂದು ಘೋಷಿಸುತ್ತಾರೆ. ಈ ಮಾತುಗಳು ಕೇಳುವುದಕ್ಕೆ ಮೋಹಕ. ಈ ನುಡಿಗಳ ಆಳದಲ್ಲಿ ಭಯಾನಕ ಪಾತಾಳ ಲೋಕವಿದೆ; ಭೂಗತ ಜಗತ್ತಿನ ವ್ಯಾಪಾರ ವ್ಯವಹಾರಗಳು ಜರುಗುತ್ತಿರುವುದು ಅಲ್ಲಿ ಗೋಚರಿಸುತ್ತದೆ. ಇದಕ್ಕೊಂದು ಉದಾಹರಣೆ- ಬಿಇಎಂಎಲ್‍ ಅನ್ನು ಖಾಸಗೀಕರಣ ಮಾಡಕೂಡದೆಂದು ಮೈಸೂರಿನಲ್ಲಿ 2017ರ ಮೇ ತಿಂಗಳಿನಲ್ಲಿ ಒಂದು ಚಳವಳಿಯಾಯಿತು. ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಬಿಇಎಂಎಲ್, ಸಾರ್ವಜನಿಕ ವಲಯದ ಪ್ರಮುಖ ಉದ್ದಿಮೆ. ಬೆಂಗಳೂರು, ಕೆಜಿಎಫ್, ಮೈಸೂರು, ಕೇರಳದ ಪಾಲಕ್ಕಾಡ್‍ನಲ್ಲಿ ಇದರ ಘಟಕಗಳಿವೆ. ಈ ಉದ್ದಿಮೆ, ಸತತವಾಗಿ ಲಾಭದಾಯಕವಾಗಿ ನಡೆದುಕೊಂಡು ಬರುತ್ತಿದೆ. ಬಿಇಎಂಎಲ್ ಘಟಕಗಳು, ಸುಮಾರು 4,500 ಎಕರೆ ಭೂಮಿ ಹೊಂದಿವೆ. ಇದರ ಮಾರುಕಟ್ಟೆ ಬೆಲೆ ಲಕ್ಷ ಕೋಟಿಗೂ ಹೆಚ್ಚಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಿ ಆರ್ಡರ್ ಪಡೆದುಕೊಳ್ಳುತ್ತದೆ ಎಂಬ ಹೆಗ್ಗಳಿಕೆಯೂ ಬಿಇಎಂಎಲ್‍ಗೆ ಇದೆ. ಇಂತಹ ಒಂದು ಸಾರ್ವಜನಿಕ ಉದ್ದಿಮೆಯನ್ನು ಖಾಸಗಿ ಕಂಪನಿಯೊಂದಕ್ಕೆ ವಹಿಸಿಕೊಡುವ ಹುನ್ನಾರಕ್ಕಾಗಿ ಕೇಂದ್ರ ಸರ್ಕಾರವು ತನ್ನಲ್ಲಿ ಇರುವ ಶೇಕಡ 54ರಷ್ಟು ಷೇರುಗಳಲ್ಲಿ 26ರಷ್ಟನ್ನು ಅನಿಲ್ ಅಂಬಾನಿಯವರ ರಿಲಯನ್ಸ್ ಕಂಪನಿಗೆ ಮಾರುವ ವ್ಯವಹಾರ ಕುದುರಿಸುತ್ತಿತ್ತು. ಈ ಖಾಸಗೀಕರಣದ ಸಂಚಿನ ವಿರುದ್ಧ ಬಿಇಎಂಎಲ್ ಕಾರ್ಮಿಕರ ಧರಣಿ, ಮೆರವಣಿಗೆಗಳು ನಡೆಯುತ್ತಿರುವಾಗ ಸಾರ್ವಜನಿಕ ಅಭಿಪ್ರಾಯವನ್ನು ಗಮನಿಸುತ್ತಾ ಹೋದೆ. ‘ಏನೋ ಕಾರ್ಖಾನೆ ನಷ್ಟದಲ್ಲಿರಬೇಕು. ಕಾರ್ಖಾನೆ ಮುಚ್ತಾ ಇರಬೇಕು. ಕೆಲಸ ಹೋಗುತ್ತೆ ಅಂತ ಕೂಗಾಡುತ್ತಿದ್ದಾರೆ’– ಸುಮಾರು ಜನರ ಅಭಿಪ್ರಾಯ ಇದೇ ಆಗಿತ್ತು. ಕಾರ್ಮಿಕರು ಸಾರ್ವಜನಿಕ ಸಂಪತ್ತನ್ನು ಸಾರ್ವಜನಿಕವಾಗೇ ಉಳಿಸುವುದಕ್ಕಾಗಿ ಹೋರಾಡುತ್ತಿದ್ದಾರೆ ಅಂದುಕೊಂಡ ಒಬ್ಬನೇ ಒಬ್ಬ ಸಾರ್ವಜನಿಕನೂ ನನಗೆ ಕಂಡುಬರಲಿಲ್ಲ. ಸಾರ್ವಜನಿಕ ಸಂಪತ್ತನ್ನು ಸಾರ್ವಜನಿಕರು ತಮ್ಮದು ಎಂದುಕೊಂಡಿಲ್ಲ. ಇಲ್ಲೇ ಭಾರತದ ದುರಂತ ಇರುವುದು ಅನ್ನಿಸಿಬಿಟ್ಟಿತು. ಇದು ಒಂದು ಉದಾಹರಣೆ ಮಾತ್ರ. ಹೀಗೆಯೇ ಜಾಗತೀಕರಣ ಆರಂಭವಾದಾಗಲಿಂದ ಸಾರ್ವಜನಿಕ ಸಂಪತ್ತನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಲೇ ಬಂದಿದೆ. ಇದು ಮೋದಿಯವರ ಆಡಳಿತದಲ್ಲಿ ಉಲ್ಬಣಗೊಂಡಿತು. ಮೋದಿಯವರು ಎದೆಯುಬ್ಬಿಸಿ, ಸಾರ್ವಜನಿಕ ಸಂಪತ್ತನ್ನು ಖಾಸಗಿ ಕಂಪನಿಗಳ ಪದತಳಕ್ಕೆ ಒಪ್ಪಿಸತೊಡಗಿದರು. ಇದನ್ನು ಸಾಧನೆ, ಧೈರ್ಯ ಎಂಬಂತೆ ಬಿಂಬಿಸಿಕೊಳ್ಳುತ್ತಿ ದ್ದಾರೆ. ದಡ್ಡನಿಗೆ ಧೈರ್ಯ ಜಾಸ್ತಿಯೆಂಬ ಹಳ್ಳಿಗಾಡಿನ ನುಡಿಗಟ್ಟನ್ನು ಅವರು ನೆನಪಿಸಿಕೊಳ್ಳುವುದು ಒಳಿತು. ಇದು ನೆನಪಿನಲ್ಲಿದ್ದಿದ್ದರೆ ನೋಟು ಅಮಾನ್ಯೀಕರಣ ಮಾಡಿ ನೂರಾರು ಜನರ ಸಾವಿಗೂ, ಉದ್ಯೋಗ ನಷ್ಟಕ್ಕೂ ತಾವು ಕಾರಣರಾಗದಿರಬಹುದಿತ್ತು. ಆರ್ಭಟಿ ಸುವ ಅವರಿಂದ ಯಾವುದನ್ನೂ ನಿರೀಕ್ಷಿಸುವಂತಿಲ್ಲ. ಈ ಹಿಂದೆ ವಾಜಪೇಯಿಯವರ ಆಡಳಿತದಲ್ಲಿ ಸಾರ್ವಜನಿಕ ಸಂಪತ್ತನ್ನು ಖಾಸಗಿ ಕಂಪನಿಗಳಿಗೆ ವಹಿಸುವ ಕೃತ್ಯಕ್ಕಾಗಿಯೇ ‘ಹೂಡಿಕೆ ಹಿಂತೆಗೆತ ಇಲಾಖೆ’ಯೊಂದನ್ನು ಹುಟ್ಟುಹಾಕಲಾಗಿತ್ತು. ಆಮೇಲೆ ಈ ಪ್ರಕ್ರಿಯೆಯನ್ನು ಸುಲಲಿತಗೊಳಿಸುವ ಸಲುವಾಗಿ ಪ್ರತ್ಯೇಕ ‘ಹೂಡಿಕೆ ಹಿಂತೆಗೆತ ಸಚಿವ ಸಮಿತಿ’ ಬಂತು. ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಯೋಜನಾ ಆಯೋಗವನ್ನು ಬಿಸಾಕಿ ಅದರ ಬದಲು ನೀತಿ ಆಯೋಗವನ್ನು ಚಲಾವಣೆಗೆ ತರುತ್ತಾರೆ. ಇದರ ಪ್ರಮುಖ ಕಾರ್ಯವೆಂದರೆ– ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವ ಉದ್ದಿಮೆ ಸಂಸ್ಥೆಗಳನ್ನು ಮಾರಾಟ ಮಾಡುವುದು ಅಥವಾ ಸರ್ಕಾರಿ ಷೇರುಗಳನ್ನು ಹಿಂತೆಗೆದುಕೊಳ್ಳುವುದು. ಈ ನೀತಿ ಆಯೋಗವು ಸಾರ್ವಜನಿಕ ಆಡಳಿತದ 76 ಉದ್ದಿಮೆ ಸಂಸ್ಥೆಗಳನ್ನು ಖಾಸಗಿ ಕಂಪನಿಗಳ ಪದತಳಕ್ಕೆ ಒಪ್ಪಿಸಲು ಟೊಂಕಕಟ್ಟಿ ನಿಂತಿದೆ. ಇಷ್ಟೇ ಅಲ್ಲ, ಸರ್ಕಾರಿ ಉದ್ದಿಮೆ ಸಂಸ್ಥೆಗಳನ್ನು ಮಾರಲೋಸುಗ ನೀತಿ ಆಯೋಗ ರಣಹದ್ದಿನಂತೆ ಹಾರಾಡುತ್ತಿದೆ. ಈಗ ಸರ್ಕಾರ ತನ್ನ ಬಿಎಸ್‍ಎನ್‍ಎಲ್ ಸಂಸ್ಥೆಯ ಕುತ್ತಿಗೆಯನ್ನು ತಾನೇ ಹಿಸುಕಿ ಅದರ ಉಸಿರುಗಟ್ಟಿಸಿ ಖಾಸಗಿ ಕಂಪನಿಗೆ ಒಪ್ಪಿಸಲು ತಯಾರಿ ನಡೆಸುತ್ತಿದೆ. ಇದೇ ಗತಿ ರೈಲ್ವೆಗೂ ಕಾದಿದೆ. ಅರಣ್ಯ ಅಷ್ಟೇ ಯಾಕೆ, ನದಿಗಳೂ ಖಾಸಗೀಕರಣದ ದವಡೆಗೆ ಸಿಲುಕುವ ಭೀತಿಯಿದೆ. ಆಯ್ತು, ಪೂರ್ವಿಕರು ಕಷ್ಟಪಟ್ಟು ಕಟ್ಟಿ ಬೆಳೆಸಿ ಉಳಿಸಿಕೊಂಡು ಬಂದಿದ್ದ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಿ ಮನೆ ನಡೆಸುವ ಮಗನನ್ನು ಏನೆಂದು ಕರೆಯುತ್ತೇವೆ? ಮನೆಹಾಳ ಅಥವಾ ಕೇಡುಗ ಅನ್ನುತ್ತೇವೆ. ಹಾಗೇನೇ ಪೂರ್ವಿಕರು ಕಟ್ಟಿ ಬೆಳೆಸಿ ಉಳಿಸಿಕೊಂಡು ಬಂದಿದ್ದ ದೇಶದ ಸಂಪತ್ತನ್ನು ಮಾರಾಟ ಮಾಡುತ್ತಾ ‘ದೇಶವನ್ನು ನಡೆಸುವವ’ನನ್ನು ಏನೆನ್ನಬೇಕು? ಮಹಾನ್ ಮನೆಹಾಳ ಅಥವಾ ಮಹಾಕೇಡುಗ ಅನ್ನಬೇಕಾಗುತ್ತದೆ. ಆದರೆ ಪ್ರಧಾನಮಂತ್ರಿಯವರು ತಮ್ಮನ್ನು ಕೇಡುಗ ಅಥವಾ ಮನೆಹಾಳ ಎಂದುಕೊಂಡಿಲ್ಲ. ದೇಶದ ಸಂಪತ್ತನ್ನು ಮಾರುವುದನ್ನು ಒಂದು ಸುಂದರ ಸ್ವಪ್ನ ಎಂದುಕೊಂಡಿದ್ದಾರೆ. ಇದನ್ನೇ ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ಎಂದುಕೊಂಡಿದ್ದಾರೆ. ಜನತಂತ್ರ ಸರ್ಕಾರವೇನೋ ಕನಿಷ್ಠ ಆಗುತ್ತಿದೆ, ನಿಜ. ಆದರೆ ಹಣತಂತ್ರದ ಕಂಪನಿ ಸರ್ಕಾರಗಳ ಆಡಳಿತ ಗರಿಷ್ಠ ವಾಗುತ್ತಿದೆ. ದೇಶದ ಸಂಪತ್ತಿನ 70ರಷ್ಟು ಭಾಗ ಶೇಕಡ ಒಂದರಷ್ಟು ಜನರ ಕೈಸೇರಿದೆ. ನಿಜವಾದ ಆಳ್ವಿಕೆ ಹಣತಂತ್ರದ ಕಂಪನಿಗಳ ಸರ್ಕಾರದ ಕೈವಶವಾಗು ತ್ತಿದೆ. ಇದರ ಪರಿಣಾಮವಾಗಿ ಚುನಾವಣಾ ಆಯೋಗ, ಕೋರ್ಟು, ಮಾಧ್ಯಮ ಇತ್ಯಾದಿ ಎಲ್ಲಾ ಕ್ಷೇತ್ರಗಳು ತಮ್ಮ ಸ್ವಭಾವವನ್ನು, ಸ್ವಾಯತ್ತತೆಯನ್ನು ಕಳೆದುಕೊಳ್ಳು ತ್ತಿವೆ. ಇಂತಲ್ಲಿ ಚುನಾವಣಾ ವ್ಯವಸ್ಥೆ ನ್ಯಾಯಸಮ್ಮತವಾಗಿ ಇರುತ್ತದೆಯೇ? ಇನ್ನು ಜನತಂತ್ರದ ಪ್ರಜಾಪ್ರಭುತ್ವ? ಹೀಗಿರುವಾಗ ಜನತಂತ್ರದ ಕನಿಷ್ಠ ಸರ್ಕಾರದ ಪ್ರಧಾನಿ ಮೋದಿಯವರು ತಮ್ಮನ್ನು ‘ಚೌಕೀದಾರ್’ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ‘ಚೌಕೀದಾರ್ ಚೋರ್ ಹೈ’ ಅನ್ನುತ್ತಿದ್ದಾರೆ. ಚೌಕೀದಾರ್ ಚೋರ್ ಅಲ್ಲದಿರಲೂಬಹುದು. ಅವರು ನಿಜವಾದ ಚೌಕೀದಾರ್ ಆಗಿರಲೂಬಹುದು. ಆದರೆ ಯಾರಿಗೆ? ಜನತಂತ್ರದ ಪ್ರಧಾನಿಯೊಬ್ಬರು ಹಣತಂತ್ರದ ಕಂಪನಿ ಸರ್ಕಾರಗಳ ಸಂಪತ್ತನ್ನು ಕಾಯುವ ಚೌಕೀದಾರ್ ಆಗಿಬಿಟ್ಟರೆ? ಉಡಾಳ ಭೂಮಾಲೀಕನೊಬ್ಬ ತನ್ನ ಕುಟುಂಬ ನಿರ್ವಹಣೆಗಾಗಿ ತನ್ನ ಆಸ್ತಿಪಾಸ್ತಿಗಳನ್ನು ಸಿರಿವಂತನೊಬ್ಬನಿಗೆ ಮಾರಿ, ಕೊನೆಗೆ ಆ ಸಿರಿವಂತನ ಮನೆ ಕಾಯುವ ಚೌಕೀದಾರ್ ಆಗಿಬಿಟ್ಟರೆ? ಆ ಕಾವಲುಗಾರ ತನ್ನ ಕೆಲಸ ಉಳಿಸಿಕೊಳ್ಳಲು ತನ್ನ ಮಾಲೀಕನ ಕಾಳದಂಧೆಗೆಲ್ಲ ಶಾಮೀಲಾಗಬೇಕಾಗುತ್ತದೆ ಅಷ್ಟೆ. ಆ ಚೌಕೀದಾರ್‌ಗೂ ಈ ಚೌಕೀದಾರ್‌ಗೂ ವ್ಯತ್ಯಾಸವಿದೆಯೇ? ಜನತಂತ್ರ ವ್ಯವಸ್ಥೆಯ ಪ್ರಧಾನಿಯೊಬ್ಬ ಹಣತಂತ್ರ ಕಂಪನಿ ಸರ್ಕಾರಗಳ ಸಂಪತ್ತು ಕಾಯುವ ಚೌಕೀದಾರ್ ಆಗಿಬಿಡುವುದನ್ನು ಕಲ್ಪಿಸಿಕೊಳ್ಳಲು ಸಂಕಟವಾಗುತ್ತಿದೆ. ಹೀಗೆ ದೇಶದ ಸಂಪತ್ತನ್ನು ಮಾರುತ್ತಿರುವ ವ್ಯಕ್ತಿಯನ್ನೇ ‘ದೇಶಕ್ಕಾಗಿ ಮೋದಿ’ ಎಂದು ವ್ಯವಸ್ಥಿತ ವಾಗಿ ಪ್ರಚಾರ ಮಾಡಲಾಗುತ್ತಿದೆ. ಅನೇಕಾನೇಕ ಮುಗ್ಧರೂ ನಂಬಿಕೆಯಿಂದಲೇ ‘ದೇಶಕ್ಕಾಗಿ ಮೋದಿ’ ಎನ್ನುತ್ತಿದ್ದಾರೆ. ಮುಗ್ಧ ಜನತೆ ಹೀಗೆ ಭಾವಿಸುತ್ತಿರು ವುದು ಅತ್ಯಂತ ಯಾತನಾಮಯವಾಗಿದೆ. ಯಾಕೆಂದರೆ ಭಾರತದಲ್ಲಿ ನಂಬಿಕೆಯಿಂದ ಜಡ ಕಲ್ಲೂ ದೇವರಾಗಿ ವರ್ತಿಸುತ್ತದೆ. ಜನ ತಮ್ಮ ಉದ್ಧಾರಕನೆಂದು ಬಹಳವಾಗಿ ನಂಬಿರುವ ಜೀವಂತ ವ್ಯಕ್ತಿಯೊಬ್ಬ ಕಲ್ಲಾಗಿಬಿಟ್ಟ. ಇದಾಗಬಾರದಿತ್ತು, ಇದಾಗಬಾರದಿತ್ತು.

Tuesday, 12 March 2019

ಬುದ್ಧ

★★★★★★★★★★★★★★ #ಸಿದ್ಧಾರ್ಥ ಗೌತಮ್-ಭೋದಿಸತ್ವನು ಹೇಗೆ ಬುಧ್ಧನಾದನು? ಪರಿವರ್ತನಯ ಪ್ರಚಾರ ಬುದ್ಧ ಭೋಧಿಸಿದ್ದು ಏನು? ●●●●●●●●●●●●●●●●●●●●●●●● ★ಮ಼ಗ಼ನ಼ನ್ನು ರ಼ಕ್ಷಿಸ಼ಲು ತಂದೆ ಮಾಡಿದ಼ ಉಪಾಯ಼ಗ಼ಳು★ ●=<>=<><<><<<===>>><><><>=<>=● ●ತನ್ನ ಮಗ ಸಿದ್ಧಾರ್ಥನು ವಿವಾಹವಾಗಿ ಗೃಹಸ್ಥಾಶ್ರಮವನ್ನು ನೋಡಿ ರಾಜನು ಸಂತೋಷಪಟ್ಟಿದ್ದರು ಸಹ, #ಅಸಿತ ಖುಷಿಯ ಭವಿಷ್ಯವಾಣಿಯು ಸದಾ ಅವನ ಮನಸ್ಸನ್ನು ಕೋರೆಯುತ್ತಿತ್ತು. ●ಆ ಭವಿಷ್ಯವಾಣಿಯು ನಿಜವಾಗುವುದನ್ನು ತಪ್ಪಿಸಲು ಸಿದ್ಧಾರ್ಥನನ್ನು ಭೌತಿಕ ಸುಖಭೋಗದಲ್ಲಿ ತನ್ನನ್ನು ತಾನು ಮರೆಯುವಂತೆ ಮಾಡಲು ರಾಜನು ಆಲೋಚಿಸಿದನು. ●ಆ ಉದ್ದೇಶದಿಂದ ಶುದ್ಧೋದನನು ತನ್ನ ಮಗನಿಗಾಗಿ #ಚಳಿಗಾಲ, #ಬೇಸಿಗೆ, & #ಮಳೆಗಾಲಗಳಿಗೆ ತಕ್ಕಂತೆ 3~ಭವ್ಯವಾದ ಅರಮನೆಗಳನ್ನು ಕಟ್ಟಿಸಿ , ಪ್ರಣಯಾಸಕ್ತಿಗೆ ಪ್ರೇರಕವಾದ ಎಲ್ಲ ಪರಿಕರಗಳೊಂದಿಗೆ ಅವುಗಳನ್ನು ಸಜ್ಜುಗೊಳಿಸಿದನು... ●ಅವನ ಅರಮನೆಯ ಪುರೋಹಿತ #ಉದಯನೊಂದಿಗೆ ಸಮಾಲೋಚಿಸಿ, ಅತಿ ಸುಂದರವಾದ ಯುವತಿಯರನ್ನೊಳಗೊಂಡ ಒಂದು ಅಂತಃಪುರವನ್ನು ರಚಿಸಲು ಸೂಚಿಸಿದನು. ● ಕನ್ಯೆಯರನ್ನು ಆರಿಸಿದ ಮೇಲೆ ಅವರಿಗೆ ರಾಜಕುಮಾರನನ್ನು ಹೇಗೆ ಪ್ರಲೋಭನೆಗೊಳಪಡಿಸಬೇಕು ಎಂದು ಉದಯನು ಅವರಿಗೆ ಬೋಧಿಸಿದ್ದು ಹೀಗೆ . ●ನೀವು ವಶೀಕರಣ ವಿದ್ಯೆಯನ್ನು ಚನ್ನಾಗಿ ಬಲ್ಲವರು. ಕಾಮಕ್ರೀಡೆಯ ಭಾಷೆ ನಿಮಗೆ ಗೊತ್ತು .ಅಲ್ಲದೆ ಋಷಿಮುನಿಗಳನ್ನು-ದೇವತೆಗಳನ್ನೂ ನಿಮ್ಮ ಮೋಹಪಾಶದಲ್ಲಿ ಬಂಧಿಸಬಲ್ಲಿರಿ. ●ಹೃದಯದಲ್ಲಿ ಮೋಹಕ ಭಾವನೆಗಳನ್ನು ಮೂಡಿಸುವ ನಿಮ್ಮ ಚಾತುರ್ಯ, ನಿಮ್ಮ ಬೆಡಗು ಬಿನ್ನಾಣ, ನಿಮ್ಮ ಮೈ-ಸೊಗಸು & ಸೌಂದರ್ಯದಿಂದಾಗಿ ಹೆಂಗಸರು ನಿಮ್ಮಲ್ಲಿ ಮೋಹಪರವಶರಾಗುತ್ತಾರೆ. ಅಂದಮೇಲೆ ಗಂಡಸರ ಪಾಡೇನ...? ●ಈ ಮಹಾಶೂರನ (ಬುಧ್ಧ) ಕೀರ್ತಿ ಅದೆಷ್ಟೇ ಮಹತ್ವದ್ದಿರಲಿ, ನಿಮ್ಮಲ್ಲಿರುವ ಹೆಣ್ಣಿನ ಶಕ್ತಿ ಅಪಾರವಾದದ್ದು. ●ಹಿಂದೆ ಒಂದು ಕಾಲದಲ್ಲಿ ದೇವತೆಗಳಿಂದಲೂ ಸೋಲಿಸಲಾಗದ ಮಹರ್ಷಿಯೊಬ್ಬನನ್ನು ಸಾಧಾರಣ #ವೇಶ್ಯೆ ಕಾಶಿ ಎಂಬುವವಳು ಮೋಹಿಸಿ ಗೆದ್ದು, ಅವನನ್ನು ಮೆಟ್ಟಿ ನಿಂತಳು. ●ಮಹರ್ಷಿ ವಿಶ್ವಾಮಿತ್ರನು ತಪಸ್ಸಿನಲ್ಲಿ ಮೈಮರೆತಿದ್ಧಾಗ #ಘೃತಾಚಿ ಎಂಬ ಅಪ್ಸರೆ ಅವನನ್ನು ಸೆರೆಹಿಡಿದು, ಹೊತ್ತೊಯ್ದು 10 ವರ್ಷಗಳ ಕಾಲ ಅರಣ್ಯದಲ್ಲಿ ಬಂಧಿಸಿಟ್ಟಳು. ●ಈ ರೀತಿ ಅನೇಕ ಋಷಿಗಳನ್ನು ಹೆಂಗಸರು ಮೋಹಪರವಶರನ್ನಾಗಿ ಮಾಡಿರುವಾಗ, ಯೌವನದ ಮೊದಲ ಹಂತದಲ್ಲಿ ಇರುವ ಕೋಮಲ ಶರೀರದ ಈ ರಾಜಕುಮಾರನ ಮಾತಿನ್ನೇನು.? ಎಂದು #ಉದಯನು ಕನ್ಯೆಯರಿಗೆ ಬೋಧಿಸಿದ. ಆ ಕನ್ಯೆಯರು ರಾಜಕುಮಾರನನ್ನು ಮೋಹಿಸಿ ಗೆದ್ದರೆ..? ........ಮುಂದುವರೆವುದು.! ================================ ★ರಾಜಕುಮಾರನನ್ನು ಗೆಲ್ಲುವಲ್ಲಿ ಹೆಂಗಸರ ಸೋಲು★ ~~~~~~~~~~~~~~~~~~~~~~~~~ ●ಆಕರ್ಷಕವಾದ ಕುಡಿನೋಟ, ತಿದ್ದಿದ ಹುಬ್ಬು, ಮೋಹಕ ನಗು, ನಯವಾದ ಮೆಲುನುಡಿ ಯಿಂದ ಅಂತಃಪುರದ ಹೆಂಗಸರು ರಾಜಕುಮಾರನನ್ನು ಗೆಲ್ಲಲು ಮುಂದೆ ಬಂದರು. ● ಕಾಮೋದ್ರೇಕಗೊಂಡ ಕೆಲವು ಹೆಂಗಸರು ಸದೃಢವಾದ ತಮ್ಮ ವಕ್ಷದ್ವಯಗಳಿಂದ ರಾಜಕುಮಾರನನ್ನು ಮೃದುವಾಗಿ ಒತ್ತಿಹಿಡಿದರು. ●ಇನ್ನೂ ಕೆಲವರು ತಾವು ಜಾರಿಬೀಳುವಂತೆ ನಟಿಸಿ ಅವನನ್ನು ಬಲವಾಗಿ ತಬ್ಬಿಕೊಂಡು ಬಳ್ಳಿಯಂತೆ ಬದುಕುವ ತಮ್ಮ ನಳಿದೋಳುಗಳಿಂದ ಅವನನ್ನು ಬಿಗಿದಪ್ಪಿದರು. ●ಕೆಲವರು ಮೋಹಕವಾದ ಮದ್ಯದ ವಾಸನೆಯನ್ನು ಸೂಸುವ ಕೆಂಪಾದ ತಮ್ಮ ಕೆಳದುಟಿಯನ್ನು ಚಾಚುತ್ತ "ನನ್ನ ಅಂತರಂಗದ ಭಾವನೆಗಳ ರಹಸ್ಯವನ್ನು ಕೇಳು ಬಾ" ಎಂದು ಅವನ ಕಿವಿಯಲ್ಲಿ ಉಸುರಿದರು. ●ಕೆಲವರು ತಮ್ಮ ನೀಲಿ ಬಣ್ಣದ ಮೇಲುಡುಗೆಯನ್ನು ಬೇಕಂತಲೆ ಉನ್ಮತ್ತರಂತೆ ನವುರಾದ ಬಟ್ಟೆಯನ್ನು ತೊಟ್ಟು ದೇಹವನ್ನು ಪ್ರದರ್ಶಿಸತ್ತಾ ಚಿನ್ನದ ಕಾಲ್ಗೆಜ್ಜೆಗಳನ್ನು ಝೇಂಕಿಸುತ್ತಾ ಅತ್ತಿಂದಿತ್ತ ಸುಳಿದಾಡಿದರು. ●ಇನ್ನೂ ಕೆಲವರು ಮಾವಿನ ಬಿಲ್ಲನ್ನು ಕೈಯಲ್ಲಿ ಹಿಡಿದು ತಮ್ಮ ತುಂಬಿದ ಎದೆಯನ್ನು ಚಿನ್ನದ ಕಲಶದಂತೆ ಪ್ರದರ್ಶಿಸಿದರು. ●ಈ ರೀತಿ ಪ್ರೇಮಾತಿರೇಕಕ್ಕೆ ಒಳಗಾದ ಆ ಯುವತಿಯರು ರಾರಾಜಕುಮಾರನ ಮೇಲೆ ನಾನಾ ರೀತಿಯ ಯುಕ್ತಿಗಳಿಂದ ದಾಳಿ ಮಾಡಿದರು. ●ಅವರ ನೈಜ ಸ್ವರೂಪವೇನೆಂಬುದನ್ನು ಬಲ್ಲ ರಾರಾಜಕುಮಾರನು ಸ್ವಲ್ಪವೂ ವಿಚಲಿತನಾಗಲಿಲ್ಲ ದೃಢವಾದ ಮನಸ್ಸಿನಿಂದ ಅಂತರ್ ಮುಖಿಯಾಗಿ ಚಿಂತಿಸುತ್ತಿದ್ದನು. ● ಈ ಯೌವನ ಎಂಬುದು ನಶ್ವರವಾದದ್ದು. ಮುಪ್ಪು ಈ ಎಲ್ಲ ಸೌಂದರ್ಯವನ್ನು ನಾನಾಶಗೊಳಿಸುತ್ತದೆ. ಲೌಕಿಕ ಜೀವನ ನಶ್ವರವಾದದ್ದು. ಕೊನೆಗೂ ★ರಾಜಕುಮಾರನನ್ನು ಗೆಲ್ಲುವಲ್ಲಿ ಹೆಂಗಸರ ಸೋಲು★

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...