Monday, 27 February 2023

*ಕರ್ನಾಟಕದ ನಾಥಪಂಥ -- ರಹಮತ್ ತರೀಕೆರೆ

ರಹಮತ್ ತರೀಕೆರೆ ಅವರು ಬರೆದ "ಕರ್ನಾಟಕದ ನಾಥಪಂಥ" ಕೃತಿಯ ಕೆಲವು ಸಂಗತಿಗಳ ಯಥಾವತ್ತಾದ ಅಚ್ಚು....

ಭಾರತದಲ್ಲಿ ದರ್ಶನ ಪಂಥ ಧರ್ಮಗಳ ನಡುವಣ ಪರಸ್ಪರ ಸಂಘರ್ಷ ಮತ್ತು ಹೊಂದಾಣಿಕೆಗಳು ಕುತೂಹಲಕರವಾಗಿವೆ.

ಗುರುಪಂಥಗಳಲ್ಲಿ ಶಿಷ್ಯನನ್ನು ಹುಡುಕುವುದು, ಅವನಿಗೆ ದೀಕ್ಷೆಕೊಟ್ಟು ಹೊಸ ನಾಮಕರಣ ಮಾಡುವುದು, ಪರೀಕ್ಷೆಗೆ ಒಡ್ಡುವುದು ಮತ್ತು ಸಾಧನೆ ಮಾಡಿಸುವುದು ಸಾಮಾನ್ಯ. ಹೆತ್ತವರು  ಗುರುವಿಗೆ ಮಗನನ್ನು ಒಪ್ಪಿಸುವಾಗ ‘ಇಂದಿನಿಂದ ನೀನು ನನ್ನ ಮಗನಲ್ಲ’ ಎಂದು ಸಾಂಕೇತಿಕವಾಗಿ ಸಂಬಂಧ ಕಡಿದುಕೊಳ್ಳುತ್ತಾರೆ. ದೀಕ್ಷೆಕೊಡುವ ಗುರು ‘ಇವತ್ತಿನಿಂದ ನೀನು ನನ್ನ ಸಿಸುಮಗ’ ಎಂದು ಹೊಸ ಪಿತೃತ್ವದ ಸಂಬಂಧ ಸ್ಥಾಪಿಸುತ್ತಾನೆ. ನಾಥರಿಗೆ ‘ಬಾವಾಜಿ’ ಎಂಬ ಹೆಸರು ಕರ್ನಾಟಕದ ತುಂಬ ಕಾಣಬರುತ್ತದೆ. ಬಾವಾಜಿ ಎಂದರೆ ಅಪ್ಪ ಎಂದರ್ಥ. ಮಂಟೆಸ್ವಾಮಿ ಕಾವ್ಯದಲ್ಲಿ ಗುರುವಿಗೆ ‘ಅಪ್ಪಾಜಿ’ ಎಂದೇ ಕರೆಯಲಾಗಿದೆ.


ನಾಥಪಂಥವು ಸಾಂಖ್ಯ, ಯೋಗ, ರಸೇಶ್ವರ ಮುಂತಾದ ದರ್ಶನಗಳ ಜತೆಯಲ್ಲೂ, ವಜ್ರಯಾನ, ಕಾಪಾಲಿಕ, ಸೂಫಿ, ಕೌಳ, ಶಾಕ್ತ, ದತ್ತ, ವಾರಕರಿ, ಮಹಾನುಭಾವ ಪಂಥಗಳ ಜತೆಯಲ್ಲೂ ಅನುಸಂಧಾನ ಮಾಡಿದೆ. ಈ ಕಾರಣಕ್ಕೆ ಇದು ಭಾರತದ ಸಂಕರಶೀಲ ಪಂಥಗಳಲ್ಲಿ ಒಂದು.
ಕರ್ನಾಟಕದ ನಾಥವನ್ನು ಕಾಪಾಲಿಕ, ಸೂಫಿ, ಶರಣ, ಶಾಕ್ತ, ಆರೂಢ, ವಜ್ರಯಾನಗಳ ನೆರವಿಲ್ಲದೆ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ.

ಕದ್ರಿಯ ಮಂಜುನಾಥ ಗುಡಿಯಲ್ಲಿ ವಜ್ರಯಾನದ ಅವಲೋಕಿತೇಶ್ವರ ಹಾಗೂ ಧ್ಯಾನಿಬುದ್ಧರಿದ್ದಾರೆ. ಮಚೇಂದ್ರನಾಥ ಗೋರಖನಾಥ ಚೌರಂಗಿನಾಥರಿದ್ದಾರೆ. ಆಗಮೋಕ್ತ ಪೂಜೆ ಪಡೆಯುತ್ತಿರುವ ಶಿವಲಿಂಗವೂ ಇದೆ. ಕರಾವಳಿಗೆ ವಿಶಿಷ್ಟವಾದ ಭೂತಗಳೂ ಇವೆ. ಎಲ್ಲ ಪದರಗಳೂ ಒಂದೇ ಕಡೆ ಸಾಮರಸ್ಯದಲ್ಲಿವೆ. ಆದರೆ ಅವುಗಳ ಒಳಗಿನ ಸೆಳೆದಾಟಗಳು ನಿಂತಿಲ್ಲ. ಆದ್ದರಿಂದ ಪಂಥಗಳನ್ನು ಅಧ್ಯಯನ ಮಾಡುವುದು ಎಂದರೆ ಕರ್ನಾಟಕ ಸಂಸ್ಕೃತಿಯ ಸಂಕರಶೀಲ ಹಾಗೂ ಸಂಘರ್ಷಶೀಲ ಎರಡೂ ಗುಣಗಳನ್ನು ಅರಿಯುವ ಜವಾಬ್ದಾರಿ; ಧಾರ್ಮಿಕ, ಸಾಹಿತ್ಯಕ, ಸಾಮಾಜಿಕ ಬದುಕಿನ ಮೇಲೆ ಈ ಪಂಥಗಳ ಕೊಡುಕೊಳೆಗಳು ಸೃಷ್ಟಿಸಿರುವ ಹೊಸರೂಪಗಳನ್ನು ಗುರುತಿಸುವ ಕೆಲಸ. ಈ ಬಗೆಯ ಅಧ್ಯಯನಗಳು ನಮ್ಮ ರಾಜಕೀಯ ಉಪಕ್ರಮಗಳಲ್ಲಿ ಹೇಗೆ ಬಳಕೆಯಾಗುತ್ತವೆ ಎನ್ನುವುದು ಮಾತ್ರ ಊಹಾತೀತ.




ಚರಿತ್ರೆಯಲ್ಲಿ ಪಂಥಗಳು ಪರಸ್ಪರ ಸಂಘರ್ಷ ಮಾಡಿವೆ.  ಭಾರತದ ‘ಅವೈದಿಕ’ ಎನ್ನಲಾಗುವ ದಾರ್ಶನಿಕ ಧಾರೆ ಹಾಗೂ ಪಂಥಗಳು ಏಕಕಾಲಕ್ಕೆ ವಿಶಾಲ ಸಮುದಾಯಗಳಿಂದ ಸ್ವೀಕಾರವನ್ನೂ ಸ್ಥಾಪಿತ ವರ್ಗಗಳಿಂದ ವಿರೋಧವನ್ನೂ ಪಡೆದಿದ್ದವು.  ವೈದಿಕ ಪುರಾಣಗಳು ತಮ್ಮ ವಿರೋಧಿಗಳನ್ನು ರಾಕ್ಷಸರಾಗಿ ಚಿತ್ರಿಸುವಂತೆ, ವೈದಿಕ ದಾರ್ಶನಿಕರು ಕೂಡ  ‘ಅವೈದಿಕ’  ಭೌತವಾದಿ ದರ್ಶನ ಹಾಗೂ ಪಂಥಗಳನ್ನು ವಿಕೃತವಾಗಿ ಚಿತ್ರಿಸಿದರು. ಇದನ್ನು ದಾರ್ಶನಿಕ ಅಮಾನುಷೀಕರಣ ಎನ್ನಬಹುದು.  ಇದಕ್ಕಿದ್ದ ಒಂದು ಕಾರಣಗಳಿವೆಂದರೆ, ನಾಥ ಕಾಪಾಲಿಕ ಶಾಕ್ತ ಕೌಳ ಮುಂತಾದ ಯೌಗಿಕ ಹಾಗೂ ತಾಂತ್ರಿಕ ಪಂಥಗಳು ವೇದ ಮತ್ತು ಸ್ಮೃತಿಗಳನ್ನು;   ಹುಟ್ಟಿನ ನೆಲೆಯಿಂದ ಶ್ರೇಷ್ಠ ಕನಿಷ್ಟ ಎಂದು ಜನರನ್ನು ವಿಂಗಡಿಸುವ ವರ್ಣಾಶ್ರಮವನ್ನು; ದೇವರು, ಆತ್ಮ, ಪುನರ್ಜನ್ಮ ನರಕಗಳ ಅಸ್ತಿತ್ವವನ್ನು ತಾತ್ವಿಕ ನೆಲೆಯಲ್ಲಿ ಒಪ್ಪದಿರುವುದು. ಇವುಗಳ ಈ ನಿಲುವು ವ್ಯವಸ್ಥೆಯಲ್ಲಿ ಯಾವ್ಯಾವ ಬಗೆಯ ಗಲಿಬಿಲಿ ಹುಟ್ಟಿಸಿತೊ, ಪರಿಣಾಮವಾಗಿ ಇವುಗಳ  ಅಮಾನುಷೀಕರಣ ಆಯಿತು.

ಪ್ರಭುತ್ವಗಳು ಮಾಡುವ ರಾಕ್ಷಸೀಕರಣದ ತರ್ಕವು ಅಂತಿಮವಾಗಿ ಒಪ್ಪದವರನ್ನು ನಾಶಮಾಡುವಲ್ಲಿ ಕೊನೆಗೊಳ್ಳುತ್ತದೆ. ಭಾರತದಲ್ಲಿ  ಬಹುತೇಕ ತಾಂತ್ರಿಕ ಪಂಥಗಳನ್ನು ದುಷ್ಟೀಕರಿಸಲಾಗಿದೆ ಮತ್ತು ನಾಶಪಡಿಸಲಾಗಿದೆ. ನಾಥದ ಬಗೆಗಿನ  ನಿರ್ಲಕ್ಷ್ಯ ಮತ್ತು ನೇತ್ಯಾತ್ಮಕ ಬರೆಹಗಳಂತೆ, ಅದನ್ನು ವಿಮರ್ಶೆಯಿಲ್ಲದೆ ನೋಡುವ ಪಂಥಾಭಿಮಾನಿ ಬರಹಗಳೂ ಇವೆ. ದುಷ್ಟೀಕರಿಸುವ ಹಾಗೂ ವೈಭವೀಕರಿಸುವ ಆಕರಗಳಿಂದ ತಪ್ಪಿಸಿಕೊಳ್ಳುವುದು ಒಂದು ಸಮಸ್ಯೆಯಾಗಿದೆ.

ನಾಥ ದರ್ಶನವು ಒಂದು ಬಗೆಯಲ್ಲಿ ಭೌತವಾದಿ ಎನ್ನಬಹುದಾದುದು. ಗೋರಖನು ದೇಹವು ಪವಿತ್ರವೆಂದೂ ಅದರ ಮೂಲಕವೇ ಸಮಸ್ತ ಅರಿವನ್ನು ಸಾಧನೆ ಮಾಡಿ ಪಡೆಯಬೇಕೆಂದೂ ಹೇಳುತ್ತಾನೆ.  ಒಂದರ್ಥದಲ್ಲಿ ನಾಥರ ಯೋಗ ದರ್ಶನವು ದೇಹ ಮತ್ತು ಮನಸ್ಸುಗಳ ಸಮನ್ವಯ ಸಿದ್ಧಾಂತ. ಇದರ ಆಳದಲ್ಲಿ ಬೌದ್ಧರ ಅನಾತ್ಮವಾದವೂ ಶೂನ್ಯವಾದವೂ ಇದೆ. 

ಬಹುಶಃ ವ್ಯವಸ್ಥೆಗೆತಟ್ಟನೆ ಅರಿವಾಗದ, ಆದರೆ ಅನುಯಾಯಿಗಳಿಗೆ ಮಾತ್ರ ಅರಿವಾಗುವ ಸಾಂಕೇತಿಕ ಭಾಷೆಯನ್ನು ಪಂಥಗಳು ರೂಪಿಸಿಕೊಳ್ಳುತ್ತವೆ. ಈ ಗೂಢ ಭಾಷೆ  ಆತ್ಮರಕ್ಷಣೆಗೆ ಮಾತ್ರವಲ್ಲದೆ, ಅವುಗಳ ತಾತ್ವಿಕ ಅನನ್ಯತೆಯನ್ನು ರಕ್ಷಿಸಿಕೊಳ್ಳಲೂ ನೆರವಾಗುತ್ತದೆ.

ಬಹಮನಿಯ ನಿಜಾಂಶಾಹನ ಆಸ್ಥಾನದಲ್ಲಿದ್ದ ಕವಿ ನಿಜಾಮಿಯ ‘ಕದಂ ರಾವ್-ವ-ಪದಂರಾವ್’ ಮಸ್ನವಿಯಲ್ಲಿ, ಅಖ್ಖರನಾಥ ಎಂಬ ಯೋಗಿಯ ಪ್ರಸಂಗವಿದೆ. ಆತ ದೊರೆಯ ಬಳಿ ಬಂದು, ತಾನು ಕಬ್ಬಿಣವನ್ನು ಚಿನ್ನವನ್ನಾಗಿ ಮಾಡುವೆನೆಂದೂ ಸತ್ತ ಹೆಣಕ್ಕೆ ಜೀವಕೊಡುವೆನೆಂದೂ ಆಸ್ಥಾನದಲ್ಲಿ ಸವಾಲು ಹಾಕುತ್ತಾನೆ. ಇವೆರಡೂ ವೈದ್ಯ ಹಾಗೂ ಲೋಹಶಾಸ್ತ್ರಗಳಿಗೆ ಸಂಬಂಧಿಸಿದ ಸಂಗತಿಗಳು. ಈ ಪಂಥಗಳಲ್ಲಿ ಅನೇಕ ವಿದ್ಯೆಗಳಿಗೆ ಸಂಬಂಧಪಟ್ಟ ಪ್ರಾಯೋಗಿಕವಾದ ಜ್ಞಾನವಿತ್ತು. ಯೋಗ ಸಾಧನೆಯು ದೇಹರಚನೆ ಮತ್ತು ನರವಿಜ್ಞಾನಕ್ಕೂ ಲಗತ್ತಾಗಿರುವಂತಹುದು.

ಅಸ್ತಿತ್ವಕ್ಕಾಗಿ ನಡೆಯುವ ಸಂಘರ್ಷಗಳು ತುಂಬ ಜಟಿಲವಾಗಿರುತ್ತವೆ. 

ಈ ಅಧ್ಯಯನವು ನಮ್ಮ ಸಮಾಜದ ಚಲನಶೀಲತೆಯನ್ನು ನೋಡುವ ಅರಿಯುವ ಚಿಂತಿಸುವ ಒಂದು ಅಪೂರ್ವ ಅವಕಾಶ ಮಾತ್ರ.

ಟಿಬೇಟು ನೇಪಾಳಗಳ ತಾಂತ್ರಿಕ ಬೌದ್ಧ ಪರಂಪರೆಯಲ್ಲಿ ಮಚೇಂದ್ರನು ಬೋಧಿಸತ್ವನ ನಾಲ್ಕನೇ ಅವತಾರವಾದ ಅವಲೋಕಿತೇಶ್ವರನು. ಆದರೂ ಬೌದ್ಧ ವಜ್ರಯಾನ ಪಂಥಕ್ಕೆ ಶೈವರೂಪ  ಕೊಟ್ಟ ಕೀರ್ತಿ ಗೋರಖನಿಗೆ ಕೊಡಲಾಗಿದೆ.  ನಾಥಪಂಥಕ್ಕೆ ಭದ್ರವಾದ ತಾತ್ವಿಕ ಬುನಾದಿ ಹಾಕಿ, ನಾಡಿನ ತುಂಬ ಹರಡುವ ಶಕ್ತಿಯನ್ನು ಒದಗಿಸಿದವನು ಮಾತ್ರ ಗೋರಖನೆ. 

ನೇಪಾಳಕ್ಕೆ  ಗೋರಖದೇಶವೆಂಬ ಹೆಸರಿದೆ. ಅಲ್ಲಿನ ಜನರನ್ನು ಗೋರಖರೆಂದು ಕರೆಯಲಾಗುತ್ತದೆ. ಭಾರತದಲ್ಲಿ ರಾತ್ರಿಕಾವಲು ಕೆಲಸ ಮಾಡುವ ನೇಪಾಳಿಗಳನ್ನು ಗೂರ್ಖರು ಎಂದೇ ಕರೆಯತ್ತಾರಷ್ಟೆ. ನೇಪಾಳದಲ್ಲಿ ಗೋರಖ ಜಿಲ್ಲೆಯಿದೆ. ನೇಪಾಳದ ನಾಣ್ಯಗಳ ಮೇಲೆ ಶಿವಗೋರಖನಾಥ ಎಂಬ ಲಾಂಛನವಿದೆ. ಕಠಮಂಡುವಿನ ಪಶುಪತಿನಾಥ ಮಂದಿರವು ಮೂಲತಃ ನಾಥರದ್ದಾಗಿತ್ತು. ಮಚೇಂದ್ರನ ಹೆಸರಲ್ಲಿ ನೇಪಾಳದಲ್ಲಿ ರಾಷ್ಟ್ರೀಯ ಹಬ್ಬ ಜರುಗುತ್ತದೆ. ಅಲ್ಲಿ ಅವನು ಫಲವಂತಿಕೆಯ ದೈವ. ಒಮ್ಮೆ ಗೋರಖನು ಮೋಡಗಳನ್ನೆಲ್ಲ ಹಾವುಗಳನ್ನಾಗಿ ಮಾಡಿ ಅವುಗಳ ಮೇಲೆ ಕೂತು ತಪಸ್ಸನ್ನು ಆಚರಿಸುವಾಗ, ದುಂಬಿಯಾಗಿ ಹೋಗಿ ಮಚೇಂದ್ರನು ಮೋಡಗಳನ್ನು ಬಿಡುಗಡೆ ಮಾಡಿ ಮಳೆತರಿಸಿದನಂತೆ. ಈಗಲೂ ಮಳೆಬಾರದಿದ್ದರೆ ಮಚೇಂದ್ರನನ್ನು ಪೂಜಿಸುವ ಪದ್ಧತಿ ನೇಪಾಳದಲ್ಲಿದೆ.

ಬೌದ್ಧತಾಂತ್ರಿಕ ಪಂಥಗಳಿಂದ ಬಂದ ಮಚೇಂದ್ರನು  ತಾಂತ್ರಿಕ  ಪ್ರಜ್ಞೆಯ ಸಂಕೇತವಾದ ಮೀನಿಗೆ ಸಮೀಕರಣಗೊಂಡಿದ್ದು,  ಮುಂದೆ ಸಾಂಕೇತಿಕ ಅರ್ಥಗಳು ಹಿಂಜರಿದು ಮೀನಿನ ಹೊಟ್ಟೆಯಲ್ಲಿ ಹುಟ್ಟುವ ಕತೆ ಹುಟ್ಟಿರಬೇಕು ಎಂಬ ವ್ಯಾಖ್ಯಾನವೂ ಇದೆ.
   ‘ದೇವರಿಗೆ ಹೋಗಬೇಕು ದಾರಿಬಿಡು ಪೂಜಾರಿ, ದೇವರಿಗೂ ನನಗೂ ಒಳಮಾತು|ಭೈರವನ ಠಾವಿಗೆ ಹೋಗಿ ಕೈಯ ಮುಗಿದೇನು’ ಎಂಬ ಜನಪದ ಪದವಿದೆ. ಪೂಜಾರಿಯ  ಮಧ್ಯಸ್ಥಿಕೆಯಿಲ್ಲದೆ ದೇವರ ಜತೆ ನೇರವಾಗಿ ಸಂವಾದ ಮಾಡುವ ಇಲ್ಲಿನ ದನಿಯು ಧ್ಯಾನ ಮತ್ತು ಯೋಗದ ಮೂಲಕ ತನ್ನೊಳಗಿನ ಶಕ್ತಿಯನ್ನು ತಾನೇ ಕಂಡುಕೊಳ್ಳುವಿಕೆಯಾಗಿದೆಯೆಂದು ಅನಿಸುತ್ತದೆ. ‘ಒಳಮಾತು’  ಎನ್ನುವುದು ಅವಧೂತ ದರ್ಶನದ ತನ್ನತಾನರಿವ ತತ್ವವೆನಿಸುತ್ತದೆ. ಇಲ್ಲಿ ನಾಥ ಅಥವಾ ಅವಧೂತ ದಾರ್ಶನಿಕತೆಯು ಜನಪದ ಸಾಹಿತ್ಯದಲ್ಲಿ ಜಿನುಗಿ ಬಂದಂತಿದೆ.

ಒಂದರೊಳಗಿಂದ ಮತ್ತೊಂದು
ಮಹಾಯಾನ ಬೌದ್ಧದಲ್ಲಿ ಒಂದು ಕತೆಯಿದೆ. ಬುದ್ಧನ ಬೋಧಿಸತ್ವ ಅವತಾರವಾದ ಅವಲೋಕಿತೇಶ್ವರನು, ಒಂದು ದಿನ ಸುಮೇರು ಪರ್ವತದ ತುದಿಯಲ್ಲಿ ಕುಳಿತು, ಮಹಾನಿರ್ವಾಣ ಪಡೆದು ಶೂನ್ಯದಲ್ಲಿ ಕರಗಿಹೋಗಬೇಕು ಎಂದು ಸಿದ್ಧನಾಗಿರುತ್ತಾನೆ. ಆಗ, ಮಾನವ ಲೋಕದಿಂದ ಒಂದು ಗೋಳಿನ ದನಿ ಬಂದು ಕಿವಿಗೆ ತಾಕುತ್ತದೆ. ಆಗ ಅವನು ‘ಓಹೋ, ಯಾವ  ಜನರ ದುಃಖವನ್ನು ಪರಿಹರಿಸಲು ನಾನು ಈತನಕ ಯತ್ನ ಮಾಡಿದೆನೊ, ಅದಿನ್ನೂ ಪೂರಾ ಶಮನವಾಗಿಲ್ಲ. ಹಾಗಾಗಿ ನಾನೊಬ್ಬನೇ ಮೋಕ್ಷವನ್ನು ಪಡೆಯುವುದು ಸಲ್ಲದು. ಲೋಕದ ಪ್ರತಿಯೊಂದು ಜೀವಿಯೂ ದುಃಖದಿಂದ ಬಿಡುಗಡೆ ಆಗುವವರೆಗೆ ನನಗೂ ಮೋಕ್ಷಬೇಡ’ ಎಂದವನೆ ಮರಳಿ ಲೋಕಕ್ಕೆ ಬರುತ್ತಾನೆ. ಇದನ್ನು ಬುದ್ಧನ ಮಹಾಕರುಣೆ ಎಂದು ಬಣ್ಣಿಸಲಾಗಿದೆ.ಇಂತಹ ‘ಕರುಣೆ’ಯ ಹಿನ್ನೆಲೆಯುಳ್ಳ ಮಹಾಯಾನದ  ಕುಡಿಗಳಲ್ಲಿ ಒಂದಾದ ವಜ್ರಯಾನದ ಸಹವಾಸದಲ್ಲಿ ನಾಥಪಂಥವು ಮೂಡುತ್ತದೆ ಮತ್ತು ಅವಲೋಕಿತೇಶ್ವರನ ಜತೆ ನಾಥಪಂಥದ ಮಚೇಂದ್ರನಾಥನು ಏಕೀಭವಿಸುತ್ತಾನೆ.

ವಜ್ರಯಾನದ ಪ್ರಸ್ತಾಪವಿಲ್ಲದೆ ನಾಥಪಂಥದ ಚರಿತ್ರೆ ಪೂರ್ಣಗೊಳ್ಳುವುದಿಲ್ಲ. ಪಂಥಗಳ ಈ ರೂಪಾಂತರ ಪ್ರಕ್ರಿಯೆ ಆರಂಭವಾಗಿದ್ದು ಬಂಗಾಲ ನೇಪಾಳ ಟಿಬೇಟುಗಳಲ್ಲಿ. ಇದರ ಪರಿಣಾಮವು ಕಾಬೂಲು ಬಲೂಚಿಸ್ಥಾನದಿಂದ  ಕರ್ನಾಟಕದ ಕದ್ರಿಯ ತನಕ ಹರಡಿತು.
ಬೌದ್ಧ ತಾಂತ್ರಿಕಪಂಥಗಳೂ  ಶೈವ ತಾಂತ್ರಿಕ ಪಂಥಗಳೂ ಬೆರೆಯಲು ಅವುಗಳ ನಡುವೆ, ಯೋಗಾಚರಣೆ, ಶೂನ್ಯತತ್ವ ಪ್ರತಿಪಾದನೆ, ಕಾಯ ಪ್ರಧಾನ ಚಿಂತನೆ, ಆನಾತ್ಮವಾದ, ವೇದ ಪ್ರಮಾಣ ಒಪ್ಪದಿರುವಿಕೆ,  ವರ್ಣಾಶ್ರಮ ವಿರೋಧಿ ನಿಲುವು, ಮುಂತಾದ ಸಮಾನ ಕಾರಣಗಳಿದ್ದವು. ಇದರಿಂದ ಸಂಕರಕ್ಕಾಗಲಿ ರೂಪಾಂತರಕ್ಕಾಗಲಿ ಕಷ್ಟವಾಗಲಿಲ್ಲ.

ಕರ್ನಾಟಕದಲ್ಲಿ ಬೌದ್ಧಧರ್ಮದ ಇರುವಿಕೆಯನ್ನು ಕೆಲವು ವಿಶಿಷ್ಟ ಕುರುಹುಗಳ ಮೂಲಕ ಗುರುತಿಸಬಹುದು. ಅವೆಂದರೆ , ಧರ್ಮ, ಹೇಮ, ವಜ್ರ, ಮಂಜು, ಅವಲೋಕಿತ, ತಾರಾ, ಚಂದ್ರ, ಕದಳಿ. ಇವೆಲ್ಲ ಕುರುಹುಗಳು ಒಂದೇಕಡೆ ಇರುವುದೂ ಉಂಟು.

ಮಂಜುಸಂಬಂಧ
ಕರ್ನಾಟಕದಲ್ಲಿ ಬೌದ್ಧ ಮತ್ತು ನಾಥಸಂಬಂಧವನ್ನು ಬೆಸೆಯುವ ಹೆಸರುಗಳಲ್ಲಿ  ಮಂಜು ಮುಖ್ಯವಾದುದು. ಮಹಾಯಾನದಲ್ಲಿ ಮಂಜು (ಟಿಬೆಟ್ಟಿನ ಭಾಷೆಯಲ್ಲಿ ‘ಮಾಂಚು’) ಎಂಬುದು ಬುದ್ಧನ ಹೆಸರು. ಇದಕ್ಕೆ ನಂತರ ನಾಥ ಎಂಬ ಶಿವಸೂಚಕ ಶಬ್ದ ಸೇರಿಕೊಂಡಿತು. ಬೌದ್ಧತಾಂತ್ರಿಕ ಪಂಥದಲ್ಲಿ ‘ಮಂಜುಶ್ರೀಕಲ್ಪ’ ಎಂಬ ಗ್ರಂಥವಿರುವ ಉಲ್ಲೇಖ ಹಿಂದೆ ಬಂದಿತು.

ಚಂದ್ರನಿಗೂ ಬೌದ್ಧರಿಗೂ ಇರುವ ಸಂಬಂಧವಂತೂ ಲೋಕಪ್ರಸಿದ್ಧವಾಗಿದೆ. ಬೌದ್ಧರಲ್ಲಿ  ಚಂದ್ರನು ಅಹಿಂಸೆ ಮತ್ತು ಶಾಂತಿಯ ಸಂಕೇತ. ಬುದ್ಧ ಜನಿಸಿದ್ದು ಹುಣ್ಣಿಮೆಯಲ್ಲಿ. ಅವನಿಗೆ  ಬೋಧವಾದ ದಿನವೂ ವೈಶಾಖ ಪೂರ್ಣಿಮೆ.

ಚಂದ್ರಗುತ್ತಿಯ ಚಂದ್ರಲಾಂಬಾ ದೇವಿ ಮೂಲತಃ ತಾರಾಭಗವತಿ ಇರಬಹುದು. ಯಾಕೆಂದರೆ ಬೌದ್ಧಸ್ಥಾನವಾಗಿದ್ದ ಸನ್ನತಿಯಲ್ಲಿರುವ  (ಚಿತಾಪುರ) ತಾರಾದೇವಿಯು, ನಂತರ ಚಂದ್ರಲಾಂಬೆಯಾಗಿ ಬದಲಾಗುತ್ತಾಳೆ.

 ಶಿವನಿಂದಲೇ ನಾಥಪಂಥವು ಮೂಡಿತು ಎಂದು ನಂಬುವ ನಾಥಪಂಥೀಯ ಸಮುದಾಯಗಳು, ನಾಥವನ್ನು  ‘ಶುದ್ಧ ಶೈವಧರ್ಮ’ವಾಗಿ ನೋಡಲು ಬಯಸುತ್ತವೆ. ಆದರೆ ಜಗತ್ತಿನ ಅನೇಕ ದೊಡ್ಡ ಧರ್ಮಗಳು ಒಂದರ ವಿರುದ್ಧ ಇನ್ನೊಂದು  ಭಿನ್ನಮತದಿಂದಲೊ ಬಂಡಾಯ ಮಾಡಿಯೊ ಒಟ್ಟಿನಲ್ಲಿ  ‘ಪಿತೃಹತ್ಯೆ’ಗೈದೇ ಹುಟ್ಟಿವೆ. ಕದ್ರಿಯ ಗುಡಿಯಲ್ಲಿ ನಾಥಪಂಥದ ಕುರುಹುಗಳನ್ನು ವೈದಿಕರು ನಾಶಮಾಡದಂತೆ ಅದರ ಉತ್ತರಾಧಿಕಾರಿಗಳಾದ ಜೋಗಿ ಸಮುದಾಯದ ಕಣ್ಗಾವಲಿದೆ. ಆದರೆ ಹೀಗೆ ಯಾವುದೇ ಜೀವಂತ ಉತ್ತರಾಧಿಕಾರಿ ಸಮುದಾಯವಿಲ್ಲದ ಕಾರಣಕ್ಕೊ ಏನೊ, ವಜ್ರಯಾನಕ್ಕೆ ಅದರ ಕುರುಹುಗಳ ನಾಶವನ್ನು ಕೇಳುವವರಿಲ್ಲ ಎಂಬಂತಾಗಿದೆ. ಈಗಲೂ ಮನೆಯಿಂದ ಹೊರಹಾಕಲ್ಪಟ್ಟ ಮಗುವಿನಂತೆ ಕಾಣವ ಅವಲೋಕಿತೇಶ್ವರನ ಮೂರ್ತಿಯು, ಕದ್ರಿಯ ಮಂಜುನಾಥ ಗುಡಿಯಲ್ಲಿದೆ. ಲೋಕದ ದುಃಖಕ್ಕೆ ತನ್ನ ನಿರ್ವಾಣವನ್ನೆ ತ್ಯಾಗಮಾಡಿದ ಅವಲೋಕಿತನ ಕತೆಗೆ, ಚರಿತ್ರೆ ಕೊಟ್ಟಿರುವ ಈ ಉಪಸಂಹಾರ ಮಾತ್ರ ವಿಚಿತ್ರವಾಗಿದೆ.

ತೀರ್ಥಂಕರರ ಹೆಸರುಗಳೆಲ್ಲ ಆದಿನಾಥ ನೇಮಿನಾಥ ಪಾರ್ಶ್ವನಾಥ ಎಂದು ಕೊನೆಗೊಂಡರೂ ಅವಕ್ಕೂ ನಾಥಪಂಥಕ್ಕೂ ಸಂಬಂಧವಿಲ್ಲ. 

ಬೀರಪ್ಪ ಹಾಗೂ ಮಾಳಿಗಂರಾಯರಿಗೆ ರೇವಣನು ಗುರುಬೋಧ ಕೊಡುತ್ತಾನೆ.  ಅಮೋಘಸಿದ್ಧನು ತಪಗೈದು ಶಿವನಿಂದ ವರವಾಗಿ ಹೋಮಗಂಬಳಿ ಹಾಗೂ ನೇಮಬೆತ್ತ ಪಡೆಯುತ್ತಾನೆ. ನೇಪಾಳದಲ್ಲಿ ಮಚೇಂದ್ರನು ಬರಗಾಲದಲ್ಲಿ ಮಳೆ ತರಿಸಿದ ಕಾರಣದಿಂದ ಫಲವಂತಿಕೆಯ ದೈವವಾದರೆ, ಇಲ್ಲಿ ಅಮೋಘಸಿದ್ಧನು ಬರಗಾಲ ಬಂದಾಗ ತನ್ನ ಕಂಬಳಿ ಬೀಸಿ ಮಳೆತರಿಸುವ ಪವಾಡ ಮಾಡುವ ದೈವವಾಗಿದ್ದಾನೆ.


ಕುರಿಯ ಕಾಯಬೇಡಿ ಮರಿಗ್ಹುಲ್ಲ ತರಬೇಡಿ; ಕರಿಯ ಕಂಬಳಿ ನೇಯಬೇಡಿ ಭೈರುವ
ನೀವು ಕುರುಬರ ಮಾಳಿಯ ತರಬೇಡಿ|
ಕುರಿಯ ಕಾಯ್ದೇನು ಮರಿಗ್ಹುಲ್ಲ ತಂದೇನು; ಕರಿಯ ಕಂಬಳಿ ನೇಯ್ದೇನು ಪಾರ್ವತಿ
ನಾನು ಕುರುಬರ ಮಾಳಿಯ ಬಿಡಲಾರೆ |
ಕುರುಬತಿ ತರುವುದಕೆ ಕುರಿಯ ತಿಂಗಳ ಕಾದ; ಹಂಪೇಲಿ ಹಾಲು ಕರೆದುಂಡ ಭೈರುವ
ಮೆಚ್ಚಿ ತಂದಾನೆ ಮಾಳವ್ನ| (ಶ್ರೀಆದಿಚುಂಚನಗಿರಿ)



ದೀಕ್ಷಾಪದ್ಧತಿ ಇರುವ ಕಡೆ, ಸಾಮಾಜಿಕ ವಾಗಿ ಜಾತಿಪದ್ಧತಿ ಸಡಿಲವಾಗಿ, ಒಂದು ಬಗೆಯ ಸಮಾನ ಸ್ಥಾನಮಾನ ಸಿಗುವ ಕಾರಣ, ಕಾಪಾಲಿಕ ನಾಥ ಶಾಕ್ತ ಮುಂತಾದ ಪಂಥಗಳಲ್ಲಿ ದಲಿತರು ದೊಡ್ಡಪ್ರಮಾಣದಲ್ಲಿ ಪ್ರವೇಶ ಪಡೆದಿರಬಹುದು. ಕರ್ನಾಟಕದ ತಂತ್ರಪಂಥಗಳ ಬಗ್ಗೆ ಚಿಂತನೆ ಮಾಡಿರುವ ವಿದ್ವಾಂಸರ ಪ್ರಕಾರ, ದಲಿತರೇ ತಾಂತ್ರಿಕ ಪಂಥಗಳ ಮುಖ್ಯ ಆಧಾರವಾಗಿದ್ದರು. ಚುಂಚನಗಿರಿಯ ಭಕ್ತರು ಕೇವಲ ಒಕ್ಕಲಿಗರಲ್ಲ ಎಂದು ಸಾಧಿಸಲು ಕಾಪಾಲಿಕರು ಸಿದ್ಧಪಡಿಸಿ ಕೋರ್ಟಿಗೆ ಸಲ್ಲಿಸಿದ್ದ ಕೋಮುವಾರು ಪಟ್ಟಿಯಲ್ಲಿ, ಮೈಸೂರು ಸೀಮೆಯ ಮಾದಿಗರು(ಎಡಗೈ) ಹಾಗೂ ಆದಿಕರ್ಣಾಟಕರು (ಪಂಚಮರು) ಇರುವುದು ಗಮನಾರ್ಹ.

ದಲಿತರು ಭೈರವನ ಅರ್ಚಕರೂ ಆಗಿರುವ ಏಕೈಕ ನಿದರ್ಶನವು ಸೊಂಡೇಕೊಳದಲ್ಲಿದೆ.   ನಾಥಮಠವಿದ್ದ ಹುಲಿಗೊಂದಿ ಹಾಗೂ ಕಾಪಾಲಿಕರು ಇರುವ ಉಪನಾಯಕನ ಹಳ್ಳಿಯ ಪರಿಸರದಲ್ಲಿ ಈ ಸೊಂಡೇಕೊಳವಿದೆ. ಮಾದಿಗ ಸಮುದಾಯಕ್ಕೆ ಸೇರಿದ ಭೈರವನ ಅರ್ಚಕರು ಕಾಪಾಲಿಕರಿಂದ ಜೋಗಿದೀಕ್ಷೆ ಪಡೆದವರು. ಜೋಗೇರ ಜಯಣ್ಣ ಹೇಳಿದ ಪ್ರಕಾರ, ‘‘ನಮಿಗೆ ಎಲ್ಲಕಡೆ ಹೋಗಕಾಗಲ್ಲ. ಹಿಂಗಾಗಿ ನಮ್ಮ ಪರವಾಗಿ ಭೈರವನ ಪೂಜೆ ಮಾಡೋಕೆ ದಲಿತರಿಗೆ ಬೋವಿಗಳಿಗೆ ಅಗಸರಿಗೆ ದೀಕ್ಷೆಕೊಟ್ಟು ಶಿಷ್ಯರನ್ನಾಗಿ ಮಾಡಿದ್ದೇವೆ’’. ಈ ಶಿಷ್ಯರು ತೀರಿಕೊಂಡರೆ ದೀಕ್ಷೆಕೊಟ್ಟ ಗುರುವೇ ಸಮಾಧಿ ಮಾಡಲು ಹೋಗಬೇಕು. ಚುಂಚನಗಿರಿ ಪರಿಸರದಲ್ಲಿ ದಲಿತ ಜೋಗಪ್ಪಗಳು ಸಾಕಷ್ಟು ಇದ್ದಾರೆ. ಆದರೂ ಕರ್ನಾಟಕದ ನಾಥಯೋಗಿಗಳಲ್ಲಿ ದಲಿತರಿಲ್ಲ. ಭೈರವ ಗುಡಿಗಳಲ್ಲಿ ದಲಿತರಿಗೆ ಅಘೋಷಿತ ನಿಷೇಧವಿದೆ. 

ಎಂಥವನೊ ಜೋಗಿ ಗಾನವಾಡುತ ಬಂದ, ಮಾಳಿಗೆ ಮೇಲೆ ಮಲಗಿರುವ ಹೆಣ್ಣೀಗೆ
ಮಂತ್ರದ ವಿಭೂತಿ ಬಳಿದಾನು
ಎಂಥವನೊ ಜೋಗಿ ಪಂಥನಾಡುತ ಬಂದ, ಉಪ್ಪರಿಗೆ ಮೇಲೆ ಮಲಗಿರುವ ಹೆಣ್ಣೀಗೆ
ಮಂಕೀನ ವಿಭೂತಿ ತೊಳೆದಾನೆ
ಕನಸಿನಲ್ಲಿ ಕಂಡೆ ಮನಸಿಗೆ ದೊಡ್ಡೋನ, ತೊಳಸಿಯ ಮಾಲೆ ಒಳದಂಡೆ ಚುಂಚನಗಿರಿ
ಭೈರುವ ಸ್ವಾಮಿ ಬಾನನ್ನ ಸೊಪುನಾಕೆ
ಅಟ್ಟ ಗುಡ್ಸಿವ್ನಿ ಪುಟ್ರಂಗೋಲೆ ಬುಟ್ಟಿವ್ನಿ, ಅಟ್ಟಿಗೆ ಬೋರಯ್ಯ ಬರ್ನಿಲ್ಲ ಅಂತೇಳಿ
ಸಿಳ್ಳೊಡ್ದು ಅವ್ಳ ಕರ್ದಾಳು.

. ಈ ೧೨ ವತ್ಸರವು  ನಾಥರು ೧೨ ವರ್ಷಕ್ಕೊಮ್ಮೆ ತ್ರ್ಯಂಬಕೇಶ್ವರದಲ್ಲಿ ಸೇರುವ ಮಹಾಸಭೆಯನ್ನು ಸಂಕೇತಿಸುತ್ತಿದೆ. ಸಾಮಾನ್ಯವಾಗಿ ಸ್ಥಾವರ ಲಿಂಗ ಪೂಜಕರು ಇಷ್ಟಲಿಂಗದವರ ಮುಂದೆ, ಇಷ್ಟಲಿಂಗದವರು ಆತ್ಮಲಿಂಗವಾದಿಗಳ ಮುಂದೆ ಸೋಲುವ ಪ್ರಸಂಗಗಳಿವೆ. ಇಲ್ಲಿ, ಸ್ಥಾವರಲಿಂಗ ವಾದದ ಮುಂದೆ ಯೋಗವಾದಿ ನಾಥರು ಸೋಲುತ್ತಿದ್ದಾರೆ.

ಅಹಂ ಬೆಳೆಸಿಕೊಂಡಿರುವ, ಆದರೆ ತಕ್ಕ ಗುರು ಸಿಕ್ಕರೆ ಬೆಳೆಯುವ ಸಾಧ್ಯತೆ ಇರುವ  ಸಾಧಕನಾಗಿ ಕಾಣಿಸುತ್ತದೆ. ಅಲ್ಲಮನನ್ನು ಕುರಿತು ಬಂದಿರುವ ಎರಡು ರೂಪಕಗಳು ಇದಕ್ಕೆ ಪೂರಕವಾಗಿವೆ. ಜೀವವಿಲ್ಲದವನ ಮುಂದೆ ಸಂಜೀವಿನಿ ಬಂದಂತೆ ಎಂಬುದು ಔಷಧಿಸಿದ್ದಿಯ ರೂಪಕವಾದರೆ, ಲೋಹ ಬಿಸಿಯಾಗಿರು ವಾಗಲೇ  ಬಡಿದು ತಕ್ಕ ಶಿಲ್ಪ ಮಾಡುವ ರೂಪಕವು ಲೋಹಸಿದ್ದಿಯ ರೂಪಕವಾಗಿದೆ. ಇವೆರಡೂ ಸಿದ್ದಿಗಳು ಸಿದ್ಧರ ಜಗತ್ತಿನವು. 

ಕೆ.ಜಿ. ನಾಗರಾಜಪ್ಪ ಹಾಗೂ ಶಂಕರ ಮೊಕಾಶಿ ಪುಣೇಕರ ಅವರು ಕೂಡ, ಶರಣರು ಪ್ರತಿಪಾದಿಸುವ ಅನೇಕ ಕ್ರಾಂತಿಕಾರಕ ಪರಿಕಲ್ಪನೆಗಳು, ನಾಥವೇ ಮೊದಲಾದ ತಾಂತ್ರಿಕ ಗುಪ್ತ ಪಂಥಗಳಿಂದ ಬಂದವು ಎಂದು ನಂಬಿ ಚರ್ಚಿಸುತ್ತಾರೆ.

‘ಪಿತೃಹತ್ಯೆ’ಯನ್ನು ಮಾಡಿ ಹೊಸ ಚಳುವಳಿಯನ್ನು ಕಟ್ಟಿದರು. ಬಸವಣ್ಣ ಅಲ್ಲಮ ಸಿದ್ಧರಾಮ ಇವರನ್ನು ಕಥಾನಾಯಕರನ್ನಾಗಿ ಮಾಡಿಕೊಂಡು ಚಾರಿತ್ರ ರಗಳೆ ಪುರಾಣ ಬರೆದ ಮುಂದಿನವರಿಗೆ, ಈ ಸೂಕ್ಷ್ಮಗಳನ್ನು ಹಿಡಿಯುವುದು ಆಗಲಿಲ್ಲ. 

ಬುದ್ಧನಿಂದ ಆರಂಭಿಸಿ ಚಾರ್ವಾಕರು ನಾಥರು ಶರಣರ ತನಕ, ಭಾರತದಲ್ಲಿ ವಿಭಿನ್ನ ಪಂಥ ದರ್ಶನ ಹಾಗೂ ಧರ್ಮಗಳು, ಯಾಕೆ ವೇದಪ್ರಮಾಣ, ವರ್ಣಪದ್ಧತಿ ಹಾಗೂ ಯಾಗಯಜ್ಞಗಳನ್ನು ಇಷ್ಟು ನಿಷ್ಠುರವಾಗಿ ನಿರಾಕರಿಸುವ ಸನ್ನಿವೇಶ ಬಂದಿತು ಎಂಬುದು ಮೂಲಭೂತ ಪ್ರಶ್ನೆಯಾಗಿದೆ. ಬಹುಶಃ ಗೋರಖನು ತನ್ನ ಕಾಲದ ವರ್ಣ ಪದ್ಧತಿಯು ಉಂಟುಮಾಡಿದ್ದ ಅಮಾನುಷತೆಗೆ  ತೀವ್ರವಾದ  ಪ್ರತಿರೋಧ ಒಡ್ಡಲೆಂದೇ ಅವಧೂತರು ಅತ್ಯಾಶ್ರಮಿಗಳು ಎಂದು ವಿಧಿಸಿರಬಹುದು.

Sunday, 26 February 2023

ಅಲ್ಲಮ ಪ್ರಭು ವಚನಗಳು

ಅಂಗದ ಮೇಲಣ ಲಿಂಗವ ಹಿಂಗಿ ಸ್ಥಾವರಲಿಂಗಕ್ಕೆರಗುವ
ಭಂಗಿತರ ಮುಖವ ನೋಡಲಾಗದು.
ಅದೆಂತೆಂದಡೆ;
ತನ್ನ ಗಂಡನ ಬಿಟ್ಟು ಅನ್ಯ ಗಂಡರಿಗೆರಗುವ
ಹಾದರಗಿತ್ತಿಯಂತೆ ಅವಂದಿರ ಭಕ್ತಿ.
ಅಂತಪ್ಪ ಪಂಚಮಹಾಪಾತಕರ
ಮುಖದತ್ತ ತೋರದಿರಾ ಗುಹೇಶ್ವರಾ/15

ಅಂಗದ ಮೇಲೆ ಲಿಂಗವರತು, ಲಿಂಗದ ಮೇಲೆ ಅಂಗವರತು
ಭಾವತುಂಬಿ ಪರಿಣಾಮವರತು,
ನಾಮವಿಲ್ಲದ ದೇವರಿಗೆ ನೇಮವೆಲ್ಲಿಯದೊ ಗುಹೇಶ್ವರಾ./18

ಅಂಗದೊಳಗೆ ಮಹಾಲಿಂಗವಿರಲು,
ಕೈಯ ಲಿಂಗ ಬಿದ್ದಿತ್ತೆಂದು ನೆಲದೊಳಗಂಗವ ಹೂಳಿ
ಭಂಗಪಡುವರಲ್ಲಾ,
ಗುಹೇಶ್ವರಲಿಂಗವನರಿಯದ ಜಡರು./28

ಅಂತರಂಗದೊಳಗಿಲ್ಲ ಬಹಿರಂಗದೊಳಗಿಲ್ಲ
ಮತ್ತಾವ ದೆಶೆ ದಿಕ್ಕಿನೊಳಗೆಯೂ ಇಲ್ಲ.
ಏನಾಯಿತ್ತೆಂದರಿಯೆ ಎಂತಾಯಿತ್ತೆಂದರಿಯೆ
ಅದೆಂತೆಂದರೆ:
“ಅಂತಃ ಶೂನ್ಯಂ ಬಹಿಃಶೂನ್ಯಂ ಶೂನ್ಯಂ ಶೂನ್ಯಂ ದಿಶೌ ದಿಶೌ!
ಸರ್ವಶೂನ್ಯಂ ನಿರಾಲಂಬಂ ನಿದ್ರ್ವಂದ್ವಂ ಪರಮಂ ಪದಂ
ಎಂಬುದಾಗಿ-ಅಲ್ಲಿ ಇಲ್ಲಿ ಎಲ್ಲಿಯೂ ಇಲ್ಲ.
ಗುಹೇಶ್ವರ ಬಯಲು./53

ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ
ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ
ಯೋಗದ ಹೊಲಬ ನೀನೆತ್ತ ಬಲ್ಲೆ?
ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು,
ಮದ ಮತ್ಸರ ಬೇಡ. ಹೊದಕುಳಿಗೊಳಬೇಡ.
ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ./79
ಅಜ್ಞಾನ ಸುಜ್ಞಾನಗಳೆರಡೂ ಶಿವನೆಂದಡೆ
ಶಿವಜ್ಞಾನಿಗಳು ಮೆಚ್ಚುವರೆ ?
ಶಿವ ಶಕ್ತಿಗಳೆರಡೂ ನೀನೇ ಎಂದಡೆ
ಮಹಾನುಭಾವಿಗಳು ಪರಿಣಾಮಿಸುವರೆ ?
ತನ್ನ ತಾನಾರೆಂಬುದನರಿಯದೆ, ಅನ್ಯವೆಲ್ಲವೂ ಬೊಮ್ಮವೆಂಬ,
ಈ ಕರ್ಮದ ನುಡಿಯ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?/85


ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ,
ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ !
ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ,
ಗುಹೇಶ್ವರನೆಂಬ ಲಿಂಗವ ಕಾಣಬಾರದು/86


ಅಡಿಗಡಿಗೆ ತೊಳೆದು ಕುಡಿವಡೆ ಹೊಟ್ಟೆಯ ಜಲಗರಕುತ್ತ ಬೆಳೆಯಿತ್ತೆ ?
ಅಚ್ಚ ಪ್ರಸಾದಿಯಾದಡೆ ಹಿಂದೆ ಪರಿಯಾಣ ಉಳಿವುದೆ ?
ಇವರೆಲ್ಲರು ನಿಮ್ಮ ಪೂಜಿಸಿ ವ್ರತಗೇಡಿಗಳಾದರು.
ನಾ ನಿಮ್ಮ ಪೂಜಿಸಿ ಬದುಕಿದೆನು ಗುಹೇಶ್ವರಾ !/95



ಅತ್ತಲಿಂದ ಒಂದು ಪಶುವು ಬಂದು,
ಇತ್ತಲಿಂದ ಒಂದು ಪಶುವು ಬಂದು,
ಒಂದರ ಮೋರೆಯನೊಂದು ಮೂಸಿ ನೋಡಿದಂತೆ,
ಗುರುವು ಗುರುವಿನೊಳಗೆ ಸಂಬಂಧವಿಲ್ಲ ಶಿಷ್ಯರು ಶಿಷ್ಯರೊಳಗೆ ಸಂಬಂಧವಿಲ್ಲ,
ಭಕ್ತರಲಿ ಭಕ್ತರಲಿ ಸಂಬಂಧವಿಲ್ಲ.
ಈ ಕಲಿಯುಗದೊಳಗುಪದೇಶವ ಮಾಡುವ ಹಂದಿಗಳಿರಾ ನೀವು ಕೇಳಿರೊ,
ಗಂಡಗೆ ಗುರುವಾದಡೆ ಹೆಂಡತಿಗೆ ಮಾವನೆ ?
ಹೆಂಡತಿಗೆ ಗುರುವಾದಡೆ ಗಂಡಂಗೆ ಮಾವನೆ ?
ಗಂಡ ಹೆಂಡತಿಗೆ ಗುರುವಾದಡೆ ಇವರಿಬ್ಬರೇನು ಒಡಹುಟ್ಟಿದರೆ ?
ಈ ಭೇದವನರಿಯದೆ ದೀಕ್ಷೆ ಕಾರಣವ ಮಾಡುವಾತ ಗುರುವಲ್ಲ.
ಈ ಕಳೆಯ ಕುಲವನರಿಯದಾತ ಶಿಷ್ಯನಲ್ಲ.
ಈ ಭೇದವನರಿದು ಕಾರಣವ ಮಾಡುವ ಗುರುಶಿಷ್ಯ ಸಂಬಂಧವೆಲ್ಲ
ಉರಿ ಕರ್ಪುರ ಸಂಯೋಗದಂತಹುದು ಕಾಣಾ ಗುಹೇಶ್ವರಾ./99


ಅನಾದಿಗಣನಾಥನ ಶಿಷ್ಯನು ಆದಿಗಣನಾಥನು.
ಆದಿಗಣನಾಥನ ಶಿಷ್ಯನು ಅಧ್ಯಾತ್ಮಗಣನಾಥನು.
ಅಧ್ಯಾತ್ಮಗಣನಾಥನ ಶಿಷ್ಯನು ಆತ್ಮಗಣನಾಥನು.
ಆತ್ಮಗಣನಾಥನ ಶಿಷ್ಯನು ವ್ಯೋಮಸಿದ್ಧಗಣನಾಥನು
ವೋಮಸಿದ್ಧಗಣನಾಥನ ಶಿಷ್ಯನು ಬಸವನೆಂಬ ಗಣನಾಥನು.
ಬಸವನೆಂಬ ಗಣನಾಥನ ಶಿಷ್ಯನು ಅನಿಮಿಷನೆಂಬ ಗಣನಾಥನು.
ಅನಿಮಿಷನೆಂಬ ಗಣನಾಥನ ಶಿಷ್ಯನು ಅಲ್ಲಮಪ್ರಭುವೆಂಬ ಗಣನಾಥನು.
ಇಂತು ಅನಾದಿವಿಡಿದು ಬಂದ ಅನುಪಮಲಿಂಗವು,
ಗುಹೇಶ್ವರನೆಂಬ ಹೆಸರನೊಳಕೊಂಡು,
ಎನ್ನ ಕರಸ್ಥಲಕ್ಕೆ ಸಾಧ್ಯವಾಯಿತ್ತು ಕಾಣಾ ಸಿದ್ಧರಾಮಯ್ಯಾ./110

ಅನು ನೀನೆಂಬುದು ತಾನಿಲ್ಲ, ತಾನರಿದ ಬಳಿಕ ಏನೂ ಇಲ್ಲ ಇಲ್ಲ.
ಇಲ್ಲದ ಇಲ್ಲವೆ ಎಲ್ಲಿಂದ ಬಪ್ಪುದೊ?
ಅನುವರಿದು, ತನುವ ಮರೆದ ಭಾವರಹಿತ ಗುಹೇಶ್ವರ./115

ಅನ್ನವನಿಕ್ಕಿ ನನ್ನಿಯ ನುಡಿದು
ಅರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದಡೆ
ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ
ಶಿವನ ನಿಜವು ಸಾಧ್ಯವಾಗದು.
ಗುಹೇಶ್ವರನನರಿದ ಶರಣಂಗೆ ಆವ ಫಲವೂ ಇಲ್ಲ/121


ಅಭ್ಯಾಸದ ಮಾತಲ್ಲ, ಶ್ರೋತ್ರದ ಸುಖವಲ್ಲ,
ಶಾಸ್ತ್ರದ ಅನುಭಾವದ ಮಾತಲ್ಲ.
ಒಳಗಣ ಮಾತಲ್ಲ ಹೊರಗಣ ಮಾತಲ್ಲ.
ಇದರಂಗ (ತು?) ವನರಿಯರೆ,
ಅನುಭಾವವ ಮಾಡಿ ಫಲವೇನಯ್ಯಾ ?
ಗುಹೇಶ್ವರಲಿಂಗವು ಉಪಮಾತೀತ ನೋಡಯ್ಯಾ ಸಿದ್ಧರಾಮಯ್ಯ !/125

ಅಭ್ಯಾಸವ ಮಾಡುವ ಕೋಲಿಂಗೆ ಶರಣೆಂದಡೆ
ಮುಂದಣ ಬವರಕ್ಕಾಗಬಲ್ಲುದೆ ಅಯ್ಯಾ ?
ಇಷ್ಟಲಿಂಗವೆಂದು ಮುಟ್ಟಿ ಪೂಜಿಸುತ್ತಿದ್ದಡೆ
ಮುಂದಣ ಶಂಕೆಗಿನ್ನೆಂತೊ ?
ಲಿಂಗವೆಂದಡೆ ನಿಸ್ಸಂಗದಲ್ಲಿದೆ,
ಜಂಗಮವೆಂದಡೆ ಆಶ್ರಯದಲ್ಲಿದೆ
ಈ ಲಿಂಗಜಂಗಮವನೊಂದೆಂದಡೆ ಮುಂದಣ ಲಯಕ್ಕಿನ್ನೆಂತೊ ?
ಎಲೆ ಗುಹೇಶ್ವರಾ,
ನಿಮ್ಮ ಶರಣ ಚತುರ್ವಿಧಪದವಿಗಳಿಗೆ ಹೊರಗು./126


ಅಯ್ಯ ! ನಾಟಕನಲ್ಲ ಬೂಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಶೀಲಿಗನಲ್ಲ ಕಪಟನಾಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ರುಂಡಮಾಲಿಗನಲ್ಲ ಗುಂಡುಗಾಸಿಗನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಪುಲಿಚರ್ಮನಲ್ಲ ಗಜಚರ್ಮನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ದಕ್ಷಾಧ್ವರಸಂಹರನಲ್ಲ ತ್ರಿಪುರಾರಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ನಂದಿವಾಹನನಲ್ಲ ಭೃಂಗಿಸ್ತುತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಸರ್ಪಧರನಲ್ಲ ಚಂದ್ರಶೇಖರನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಗಂಗಾಧರನಲ್ಲ ಗೌರಿಪ್ರಿಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಗಿರಿಜಾವಲ್ಲಭನಲ್ಲ ಪಾರ್ವತಿಪ್ರಿಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಯೋಗಿಯಲ್ಲ ಜೋಗಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಶ್ರವಣನಲ್ಲ ಸನ್ಯಾಸಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಕಾಳಾಮುಖಿಯಲ್ಲ ಪಾಶುಪತಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಇಂತು ಉಭಯವಳಿದ ಸಂಗನಬಸವಣ್ಣನ
ಸರ್ವಾಂಗದಿ ಬೆಳಗುವ ಮಹಾಜ್ಯೋತಿ ತಾನೆ ನೋಡ ! ಗುಹೇಶ್ವರಲಿಂಗವು
ಚೆನ್ನಬಸವಣ್ಣ./143



ಅಯ್ಯ ! ನಿರಾಳ ನಿಃಶೂನ್ಯ ಪರಮ ಭಕ್ತ-ಜಂಗಮ ತಾನಾಗಲರಿಯದೆ
ಬರಿದೆ ಅಹಂಕರಿಸಿ ಮುಂದುಗೊಂಡು ಮೂರು ಮಲಗಳ ಸ್ವೀಕರಿಸಿ,
ನಾವೆ ಭಕ್ತ-ಜಂಗಮವೆಂದು ನುಡಿವ ಕರ್ಮಕಾಂಡಿಗಳು
ಕಾಶಿ, ಕೇತಾರ, ಶ್ರೀಶೈಲ, ಗಯಾ, ಪ್ರಯಾಗ, ಶಿವಗಂಗೆ, ಕಂಚಿ,
ಕಾಳಹಸ್ತಿ, ಪಂಪಾಕ್ಷೇತ್ರ,
ವೀರಣ್ಣ, ಬಸವಣ್ಣ, ಕಲ್ಲಣ್ಣ, ಮಲ್ಲಣ್ಣ,
ಕಂಥೆ, ಕಮಂಡಲ, ಗದ್ದಿಗೆ, ಪಾವುಗೆ, ಭಸ್ಮ, ಘಂಟಿಕೆ, ಪುರಾಣ, ದಂಡಾಗ್ರ,
ಗಿಳಿಲು, ಶಂಖು,
ತಿಥಿ, ವಾರ, ನಕ್ಷತ್ರ, ಹುಣ್ಣಿವೆ, ಅಮಾವಾಸ್ಯೆ, ಸೂರ್ಯ, ಚಂದ್ರಾಗ್ನಿ, ದೀಪಾರತಿ
ಗಂಗೆ, ಗೌರಿ, ವಿಘ್ನೇಶ್ವರ ಮೊದಲಾದವು ಇವು ದೈವಂಗಳೆಂದು
ಕಲ್ಲು, ಮಣ್ಣು, ಮರದಿಂದ ರಚಿಸಿ, ಸಂದಿ-ಗೊಂದಿ-ಮಾಡು-
ಜಗುಲಿಯ ಮಾಡಿಟ್ಟು,
ಅದರ ತೊಳೆದ ನೀರು, ಎಂಜಲವ ತಿಂಬವರ ದೇವ-ಭಕ್ತರೆನಬಹುದೆ ?
ಇಂತಪ್ಪ ಅನಾಚಾರಿ ಶ್ವಪಚರ, ಭಕ್ತ-ಜಂಗಮ-ದೇವರೆಂದು ಪೂಜಿಸಲಾಗದು.
ನಿರಾಭಾರಿ ವೀರಶೈವಾಚಾರ ಕ್ರಿಯಾಜ್ಞಾನ ವೈರಾಗ್ಯ ಸದ್ಭಕ್ತಿಯುಳ್ಳ
ಸದ್ಭಕ್ತ ಶಿವಶರಣನ ಪೂಜಿಸಿ ಪಾದೋದಕ-ಪ್ರಸಾದವ ಕೊಂಡಡೆ
ಭವಪಾಶಕರ್ಮಂಗಳು ಮಾಣ್ಬವು ಕಾಣಾ ಗುಹೇಶ್ವರಲಿಂಗದಲ್ಲಿ
ಚೆನ್ನಬಸವಣ್ಣ./148


ಅರಿವು ಅರಿವು ಎನುತಿಪ್ಪಿರಿ, ಅರಿವು ಸಾಮಾನ್ಯವೆ ?
ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ
ನಿಂದ ಹೆಜ್ಜೆಯನರಿಯಬಾರದು.
ಮುಂದಣ ಹೆಜ್ಜೆಯಳಿದಲ್ಲದೆ, ಒಂದು ಪಾದ ನೆಲೆಗೊಳ್ಳದು.
ನೆಲನ ಬಿಟ್ಟು ಆಕಾಶದಲ್ಲಿ ನಿಂದು ಮುಗಿಲೊಳಗೆ ಮಿಂಚಿದಲ್ಲದೆ
ತಾನಾಗಬಾರದು.-ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ ?/220

ಅಳಿವರ ಉಳಿವರ ಸುಳಿವರ ನಿಲವ ನೋಡಿ ಕಂಡು
ಸೋಂಕಿಲ್ಲದ ರೂಪಿಲ್ಲದ ನಿಜವ ಬಯಸುತ್ತಿದ್ದೆ,
ಕಾಲಿಲ್ಲದೆ ನಡೆಯುತ್ತಿದ್ದೆ, ಕಣ್ಣಿಲ್ಲದೆ ನೋಡುತ್ತಿದ್ದೆ ಗುಹೇಶ್ವರಾ./248



   
                ಅಂತಪ್ಪ ಮಹಾಲಿಂಗವನು ಶರಣರನು ಅರಿಯದೆ
ಷಡುದೇವತೆಗಳು ಮುಖ್ಯವಾದ ಮನು ಮುನಿ ದೇವ ದಾನವ
ಮಾನವರೆಲ್ಲರೂ ಆರಿಸಿ ತೊಳಲಿ ಬಳಲುತ್ತಿಪ್ಪರು.
ಅದು ಹೇಗೆಂದಡೆ:
ಬ್ರಹ್ಮವೇದದಲ್ಲರಸುವನು.
ವಿಷ್ಣು ಪೂಜೆಯಲ್ಲರಸುವನು.
ರುದ್ರ ಜಪದಲ್ಲರಸುವನು.
ಈಶ್ವರ ನಿತ್ಯನೇಮದಲ್ಲರಸುವನು.
ಸದಾಶಿವನು ನಿತ್ಯ ಉಪಚಾರದಲ್ಲರಸುವನು.
ಸರ್ವಗತ ಶೂನ್ಯದಲ್ಲರಸುವನು.
ಗೌರಿ ತಪದಲ್ಲರಸುವಳು, ಗಂಗೆ ಉಗ್ರದಲ್ಲರಸುವಳು.
ಚಂದ್ರ ಸೂರ್ಯರು ಹರಿದರಸುವರು.
ಇಂದ್ರ ಮೊದಲಾದಷ್ಟದಿಕ್ಪಾಲಕರು ಆಗಮ್ಯದಲ್ಲರಸುವರು
ಸಪ್ತ ಮಾತೃಕೆಯರು `ಓಂ ಪಟು ಸ್ವಾಹಾ’ ಎಂಬ ಮಂತ್ರದಲ್ಲರಸುವರು.
ಸತ್ಯಋಷಿ ದದಿಚಿ ಗೌತಮ ವಶಿಷ್ಠ ವಾಲ್ಮೀಕಿ ಅಗಸ್ತ್ಯ ವಿಶ್ವಾಮಿತ್ರ
ಇವರು ಮೊದಲಾದ ಸಪ್ತಋಷಿಯರುಗಳೆಲ್ಲಾ
ತಪ, ಯೋಗ, ಆಗಮಂಗಳಲ್ಲಿ ಅರಸುವರು.
ಇಂತಿವರೆಲ್ಲರಿಗೆಯೂ ಸಿಕ್ಕಿಯೂ ಸಿಕ್ಕದ ಘನವು
ಶುಕ್ಲ ಶೋಣಿತವಿಲ್ಲದ ಕಾಮಿ, ಒಡಲಿಲ್ಲದ ರೂಪು,
ತಲೆಯಿಲ್ಲದ ಗಜ, ಬಾಲವಿಲ್ಲದ ಸಿಂಹ, ನಿದ್ರೆಯಿಲ್ಲದ ನಿರಾಳ.
ಇಂತೀ ಭೇದಮಂ ಭೇದಿಸಿ ನೋಡಬಲ್ಲಡೆ ಕಣ್ಣ ಮೇಲೆ ಕಣ್ಣುಂಟು.
ಮತ್ತಾ ಕಣ್ಣ ತೆರೆದು
ಅಮೃತಕಾಯದೃಷ್ಟಿಯಲ್ಲಿ ನೋಡಿದಡೊಂದೂಯಿಲ್ಲ.
ನಮ್ಮ ಗುಹೇಶ್ವರ ಲಿಂಗವು ಬಚ್ಚಬರಿಯ ಬಯಲು
ನಿಶ್ಚಿಂತ ನಿರಾಳನು/289

ಮರ್ತ್ಯಲೋಕದ ಭಕ್ತರುಗಳೆಲ್ಲರು, ತಥ್ಯವನರಿಯದೆ,
ಮಿಥ್ಯವನೆ ಹಿಡಿದು ಮಿಥ್ಯವನೆ ಪೂಜಿಸಿ ವ್ಯರ್ಥರಾಗಿ ಹೋದರು,
ತಮ್ಮ ತಾವರಿಯದೆ ಕೆಟ್ಟರು.

ಆರು ದರುಶನ ಅನಾಚಾರವ ನಡೆದವು,
ಸುರೆಯ ಕುಡಿದವು, ಮಾಂಸವ ತಿಂದವು.
ಆರು ದರುಶನಕ್ಕೆ ಅನಾಚಾರವಾದುದೆಂದು
ನಾನು ಗುರುವಾದೆ ಕಾಣಾ ಗುಹೇಶ್ವರಾ./342


ಗುರುಲಿಂಗ ವಿಷ್ಣುವಿಂಗೆ ಸಂಬಂಧ,
ಶಿವಲಿಂಗ ರುದ್ರಂಗೆ ಸಂಬಂಧ,
ಜಂಗಮಲಿಂಗ ಈಶ್ವರಂಗೆ ಸಂಬಂಧ,
ಪ್ರಸಾದಲಿಂಗ ಸದಾಶಿವಂಗೆ ಸಂಬಂಧ,
ಮಹಾಲಿಂಗ ಪರಶಿವಂಗೆ ಸಂಬಂಧ,
ಇಂತಾರುಲಿಂಗ ಆರುದರುಶನಕ್ಕೆ ಸಂಬಂಧ.
ನಿಮ್ಮ ಸಂಬಂಧವ ನೀವು ಬಲ್ಲಿರೆ ಹೇಳಿರೊ !/344


ಆರುಸ್ಥಲದಲ್ಲಿ ಅರಿತಿಹೆನೆಂದು
ಸಹಭೋಜನದಲ್ಲಿ ಉಂಬ ಅಣ್ಣಗಳು ನೀವು ಕೇಳಿರೊ !
ಅಂಗದ ಮೇಲೆ ಲಿಂಗಸಂಬಂದಿಯಾದಡೇನಯ್ಯ,
ಆ ಲಿಂಗವ ತನ್ನ ಪ್ರಾಣಕ್ಕೆ ಅವಧರಿಸದನ್ನಕ್ಕ !
ಆ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರ
ಬಾಹ್ಯಕ್ರೀಯ ಮಾಡಿದಡೇನಯ್ಯ ನೈಷ್ಠೆಇಲ್ಲದನ್ನಕ್ಕ
ಅಷ್ಟಮದಂಗಳ ನಷ್ಟವಮಾಡಿ ಪಂಚೇಂದ್ರಿಯಂಗಳ ಲಿಂಗಮುಖವ ಮಾಡಿ
ದೇಹೇಂದ್ರಿಯ ಮನ ಪ್ರಾಣಾದಿಗಳ ಪ್ರಕೃತಿಯನಳಿದು !
ಇಷ್ಟ ಪ್ರಾಣ ಭಾವವೆಂಬ ತ್ರಿವಿಧ ಲಿಂಗಕ್ಕೆ
ರೂಪು ರುಚಿ ತೃಪ್ತಿಯನೀವ ವರ್ಮಾದಿವರ್ಮಂಗಳ ಭೇದವನರಿಯದೆ !
ಕರಸ್ಥಲದಲ್ಲಿ ಲಿಂಗವಿಡಿದು ಸಹಭೋಜನವೆಂದು ಒಂದಾಗಿ ಉಂಡು
ತಮ್ಮ ಒಡಲ ಹೊರೆವ ಲಿಂಗದ್ರೋಹಿಗಳ ನೋಡಿ ನಗುತ್ತಿರ್ದೆನಯ್ಯಾ
ಗುಹೇಶ್ವರಾ./345



ಇಂದು ನಾಳೆ ಮುಕ್ತಿಯ ಪಡೆವೆನೆಂಬ ಶಿಷ್ಯಂಗೆ
ಮುಂದಳ ಮುಕ್ತಿಯ ತೋರಿಹೆನೆಂಬ ಗುರುಗಳ ನೋಡಿರೆ !
ಹೋಮ, ನೇಮ, ಜಪ, ತಪಗಳ ಮಾಡಿ ತಾನುಂಡು
ಫಲವುಂಟೆಂದ ಗುರು ಹುಸಿದು ಸತ್ತ, ಶಿಷ್ಯ ಹಸಿದು ಸತ್ತ.
ಹಿಂದಣ ಕಥೆಯ ಹೇಳುವಾತ ಹೆಡ್ಡ, ಮುಂದಣ ಕಥೆಯ ಹೇಳುವಾತ ಮೂಢ,
ಇಂದಿನ ಘನವ ಹೇಳುವಾತನೆ ಹಿರಿಯನಯ್ಯಾ.
ತಾ ಹುಟ್ಟಿದಂದೆ ಯುಗಜುಗಂಗಳು ಹುಟ್ಟಿದವು, ತಾನಳಿದಲ್ಲೆ ಯುಗಜುಗಂಗಳಳಿದವು.


ಮಣ್ಣಿನ ಸಾರಾಯದಿಂದ ಮರನುತ್ಪತ್ಯ.
ಮರದ ಸಾರಾಯದಿಂದ ಎಲೆಯುತ್ಪತ್ಯ
ಎಲೆಯ ಸಾರಾಯದಿಂದ ಹೂವ ಉತ್ಪತ್ಯ
ಹೂವ ಸಾರಾಯದಿಂದ ಕಾಯಿ ಉತ್ಪತ್ಯ
ಕಾಯ ಸಾರಾಯದಿಂದ ಹಣ್ಣು ಉತ್ಪತ್ಯ
ಹಣ್ಣಿನ ಸಾರಾಯದಿಂದ ರುಚಿ ಉತ್ಪತ್ಯ
ರುಚಿಯಿಂದತ್ತ ಇಲ್ಲವೆಂಬ ತತ್ವ.
ಮಣ್ಣು ಮರನು ಅಳಿದ ಬಳಿಕ ಬೇರೆ ರುಚಿಯಿಪ್ಪಠಾವುಂಟೆ ?
ದೇಹವಳಿದ ಬಳಿಕ ಪ್ರಾಣವಿಪ್ಪುದಕ್ಕೆ ಠಾವುಂಟೆ ? ಇಲ್ಲವಾಗಿ;
ಇದು ಕಾರಣ, ಗುಹೇಶ್ವರನೆಂಬ ಲಿಂಗವ ಒಡಲು ವಿಡಿದು ಕಂಡೆ ಕಾಣಾ.
ಸಿದ್ಧರಾಮಯ್ಯ./361
ಇಷ್ಟಲಿಂಗವ ಪೂಜಿಸಿದರಾಗಿ ನಿಷ್ಠೆ ನೆಲೆಗೊಳ್ಳದು.
ಬಹುಲಿಂಗವ ಪೂಜಿಸಿ ಭ್ರಮಿತರಾದರು.
ಅನ್ಯಲಿಂಗವ ಪೂಜಿಸಿ ಬಿನ್ನರಾದರು.
ಸ್ಥಾವರ ಲಿಂಗವ ಪೂಜಿಸಿ ಸಾವಿಗೊಳಗಾದರು
ಬಳ್ಳ ಲಿಂಗವೆಂದು ಪೂಜಿಸಿ ಏನುವನರಿಯದೆ ಹೋದರು.
ಗುಹೇಶ್ವರನೆಂಬ ಲಿಂಗವ ಪೂಜಿಸಿ
ನಿಮ್ಮ ಶರಣರು ಅಲ್ಲಿಗಲ್ಲದೆ ಇಲ್ಲಿಗಲ್ಲದೆ ಹೋದರು ನೋಡಾ./394

ಊರದ ಚೇಳಿನ ಏರದ ಬೇನೆಯಲ್ಲಿ, ಮೂರುಲೋಕವೆಲ್ಲಾ ನರಳಿತ್ತು !
ಹುಟ್ಟದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟದೆ ಹೂಸಲು;
ಮಾಬುದು-ಗುಹೇಶ್ವರಾ/443


ಎಸೆಯದಿರು ಎಸೆಯದಿರು ಕಾಮಾ,
ನಿನ್ನ ಬಾಣ ಹುಸಿಯಲೇಕೊ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ-ಇವು ಸಾಲದೆ ನಿನಗೆ ?
ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ,
ಮರಳಿ ಸುಡಲುಂಟೆ ಮರುಳು ಕಾಮಾ ?/488

ಏನ ಕಂಡಡೇನಯ್ಯಾ, ತನ್ನ ಕಾಣದಾತ ಕುರುಡ.
ಏನ ಕೇಳಿದಡೇನಯ್ಯಾ ತನ್ನ ಕೇಳದಾತ ಕಿವುಡ.
ಏನ ಮಾತಾಡಿದಡೇನಯ್ಯಾ ತನ್ನ ಮಾತಾಡದಾತ ಮೂಕ.
ದಿಟದಿಂತ ತನ್ನ ತಾ ಕಾಣಬೇಕು, ದಿಟದಿಂದ ತನ್ನ ತಾ ಕೇಳಬೇಕು,
ದಿಟದಿಂದ ತನ್ನ ತಾ ಮಾತಾಡಬೇಕು.
ಇದೆ ತನ್ನ ನೆಲೆ, ಸ್ವಭೂಮಿ, ಸ್ವಸ್ವರೂಪು ಕಾಣಾ-ಗುಹೇಶ್ವರಾ/490

ಕಂಗಳ ಕರುಳ ಕೊಯ್ದವರ, ಮನದ ತಿರುಳ ಹುರಿದವರ,
ಮಾತಿನ ಮೊದಲ ಬಲ್ಲವರ; ಎನಗೊಮ್ಮೆ ತೋರಾ ಗುಹೇಶ್ವರಾ/548

ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ,
ನೇತ್ರವೆ ಸೂತ್ರ, ಸೂತ್ರವೆ ಲಿಂಗ, ಲಿಂಗವೆ ಗುಹ್ಯ.
ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ.
ಈ ನೇತ್ರಮಹಿಮೆಯ ಗುಹೇಶ್ವರ ಬಲ್ಲನಲ್ಲದೆ
ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ./574


ಕಣ್ಣಿನೊಳಗಣ ಕಸ, ಕಾಲೊಳಗಣ ಮುಳ್ಳು,
ಮನದೊಳಗಣ ಶಂಕೆ ಹರಿಯಿತ್ತು,
ಗುಹೇಶ್ವರನೆಂಬ ಭಾವ ನಿರಾಳವಾದಲ್ಲಿ !/575


ಕಬ್ಬಿನ ರಸದೊಳಗಣ ಮುತ್ತನೊಡೆದು ನೋಡಲು
ಹುಬ್ಬಿನ ಮೇಲಣ ನೀಲದ ಪ್ರಭೆಯ ನೋಡಾ !
ವಜ್ರದ ಚಂಡಿಕೆ (ಚಂದ್ರಿಕೆ?)ಯಲ್ಲಿ ಕಟ್ಟಿ ಆಳುವರು !
ಉಭಯ ಕವಿಗಳಿಗೆ ಅರಿಯಬಾರದು.
ಗುಹೇಶ್ವರನ ಸ್ವಾನುಭಾವಿಗಳಿಗಲ್ಲದೆ ತಿಳಿಯಬಾರದು. /583

ಕಾಯದಲ್ಲಿ ಕಾಯ ಸವೆದು,
ಪ್ರಾಣದಲ್ಲಿ ಪ್ರಾಣ ಸವೆದು-ನಿಶ್ಚಿಂತವಾದ ಬಳಿಕ
ಹಸಿವು-ತೃಷೆಗಳೆಂಬವು ಅಳಿದು ಹೋದವು ನೋಡಾ.
ಉಂಡಿಹೆನೆಂಬ ಬಯಕೆಯಿಲ್ಲ ಒಲ್ಲೆನೆಂಬ ವೈರಾಗ್ಯವಿಲ್ಲ.
ಇದು ಸ್ವಾನುಭಾವತೃಪ್ತಿಯೊಳಡಗಿತ್ತು.
ಇದು ಕಾರಣ-ನಮ್ಮ ಗುಹೇಶ್ವರಲಿಂಗಕ್ಕೆ
ಆರೋಗಣೆ ಇಲ್ಲ ಕಾಣಾ ಸಂಗನಬಸವಣ್ಣಾ./659




Sunday, 19 February 2023

ತ್ರಿಮೂರ್ತಿಗಳು


ತ್ರಿಮೂರ್ತಿಗಳು


ಈ ದೇವರುಗಳು ಪರಸ್ಪರ ಸ್ನೇಹಿತರಾಗಿರುವುದರ ಬದಲು, ಪರಸ್ಪ ಶತ್ರುಗಳಾಗಿದ್ದು, ಸರ್ವೋತ್ಕೃಷ್ಟತೆಗೂ, ಪರಮಾಧಿಕಾರಕ್ಕೂ ಕಚ್ಚಾಟ ನಡೆಸುವವರಂತೆ ಕಾಣುತ್ತದೆ.. ಪುರಾಣಗಳಿಂದ ಆಯ್ದ ಕೆಲವು ಉದಾಹರಣೆಗಳು ಈ ವಿಷಯವನ್ನು ದೃಢಪಡಿಸುತ್ತವೆ.  

ತ್ರಿಮೂರ್ತಿಗಳಲ್ಲಿ ಮೊದಲಿಗೆ ಹುಟ್ಟಿದವರು ಯಾರು ಎಂಬ ಪ್ರಶ್ನೆಗೆ ಶಿವನ ಪರೀಕ್ಷೆಯಲ್ಲಿ ಬ್ರಹ್ಮನು ಸುಳ್ಳಿನಿಂದ ಶಿವನಿಂದ ಶಿಕ್ಷೆಗೆ ಗುರಿಯಾಗಿ ನಂತರದಲ್ಲಿ ಮಗಳನ್ನುಮೋಹಿಸಿದ್ದರಿಂದ ಲೋಕಾಪಾದನೆಗೆ ಗುರಿಯಾಗಿ ತನ್ನ ಸ್ಥಾನಮಾನ ಗೌರವದಿಂದ ಶಾಶ್ವತವಾಗಿ ವಂಚಿತನಾದಾಗ ಮುಂದೆ ಕಣದಲ್ಲಿ / ಕಲಹದಲ್ಲಿ ಉಳಿದದ್ದು ಶಿವ ಮತ್ತು ವಿಷ್ಣು. ಶಿವನಿಗೆ ಸಹಸ್ರನಾಮ ಹಾಗೂ ನಾಲ್ಕು ಗುರುತುಗಳು 1) ಗಂಗೆ  2)ಅರ್ಧಚಂದ್ರ 3.) ಹಾವು (ಶೇಷ). 4) ಜಡೆ. ಇದರಂತೆ ವಿಷ್ಣುವಿಗೂ ಸಹ...


ಶಿವನ ಪರವಾಗಿ ಮಾಡಿರುವ ಮಹಾ ಕಾರ್ಯಗಳ ಪ್ರಚಾರಪಟ್ಟಿ ವಿಷ್ಣುವಿನ ಪರವಾಗಿ ಮಾಡಲಾಗಿರುವ ಪ್ರತಿ ಪ್ರಚಾರಕ್ಕೆ ಸರಿಸಾಟಿಯಾಗಿವೆ...

1. ಗಂಗೆಯ ಮೂಲ...
ಪವಿತ್ರ ಗಂಗೆಯು ಶಿವನ ಜಡೆಯಿಂದ ಹುಟ್ಟಿದ್ದು ಎಂಬುದು ಶೈವರ ವಾದವಾದರೆ...
ಗಂಗೆಯು ಶಿವನ ಮೂಲವಲ್ಲ; ಶಿವನು ವಿಷ್ಣುವಿಗಿಂತ ಕೀಳದುದರಿಂದ ವಿಷ್ಣುವಿನ ಪಾದದಿಂದ ಹರಿದ ನೀರನ್ನು ಅವನು ತನ್ನ ತಲೆಯ ಮೇಲೆ ಧರಿಸಿದ್ದಾನೆ ಎಂಬುದು ವೈಷ್ಣವರ ವಾದ.


2.  ಸಮುದ್ರ ಮಂಥನ...
ವಿಷ್ಣು ಮಂದರ ಪರ್ವತವನ್ನು ಕಡಗೋಲನ್ನಾಗಿ; ಆದಿಶೇಷ ಮಹಾ ಸರ್ಪವನ್ನು ಹಗ್ಗವನ್ನಾಗಿ ಬಳಸಿ ಭೂಮಂಡಲ ನಡುಗಿ ಮುಳುಗುತ್ತಿರುವಾಗ ಕೂರ್ಮಾವತಾರ  ತಾಳಿ ಅದನ್ನು ತನ್ನ ಬೆನ್ನೆ ಮೇಲೆ ಹೊತ್ತು ಕಾಪಾಡಿದ... ಎಂದು ವೈಷ್ಣವರು ವೈಭವಿಕರಿಸಲು...

ಸಮುದ್ರಮಂತನದಿಂದ ಉಂಟಾದ ಹಾಲಹಲವೆಂಬ ವಿಷ ಸೇವಿಸಿ ಹಾನಿಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗದಿದ್ದಾಗ ಶಿವನ ಅದನ್ನು ಸೇವಿಸಿ ತನ್ನ  ಕಂಠದಲ್ಲಿರಿಸಿ... ನೀಲಕಂಠನಾದ.  ವಿಷ್ಣುವಿನ ಮೂರ್ಖತನದಿಂದ ಉಂಟಾದ ದುರಂತವನ್ನು ಶಿವ         
 ತಡೆದನು ಎಂಬುದು ಶೈವರ ವಾದ...

3. ಅಕ್ರೂರಾಸೂರ
ಆಕ್ರೂರಾಸೂರ ವೇದ ಅಧ್ಯಯನ ಮತ್ತು ಭಕ್ತಿ ಕ್ರಿಯೆಗಳ ಮೂಲಕ ವಿಷ್ಣುವನ್ನು ಸಂತೃಪ್ತಿಪಡಿಸಿ ಅವನಿಂದ "ಮೂರು ಲೋಕಗಳಲ್ಲಿ ಈಗಿರುವ ಯಾವ ಜೀವಿಯು ತನ್ನ ಜೀವ ತೆಗೆಯುವಷ್ಟು ಶಕ್ತನಾಗಿರೋಕೂಡದು" ಎಂಬ ವರವನ್ನು ಪಡೆದನು.
ವಿಷ್ಣು ವಾದಿಯಾಗಿ ಯಾವ ದೇವ ದಾನವರಿಗೂ ಇವನ ಉಪಟಳದಿಂದ ಪಾರಾಗಲು ಸಾಧ್ಯವಾಗದಿದ್ದಾಗ ಸಕಲ ಸಂಹಾರಿಯಾದ ಮಹಾದೇವನು ಕ್ಷಣಮಾತ್ರದಲ್ಲಿ ವಿಷ್ಣುವಿನ ವ್ಯಾಕುಲವನ್ನು ಹೋಗಲಾಡಿಸಿದ.

 ಭಸ್ಮಾಸುರನ ಕಥೆ.
"ಯಾರ ತಲೆಯ ಮೇಲೆ ಕೈ ಇಡುತ್ತೇನೆ ಅವನು ಸುಟ್ಟು ಬಸ್ಮವಾಗಲಿ" ಎಂಬ ವರವನ್ನು ಪಡೆದು ಅದನ್ನು ಶಿವನ ಮೇಲೆ ಪ್ರಯೋಗಿಸಲು ಪ್ರಯತ್ನಿಸಿದ..
ವಿಷ್ಣು ಒಬ್ಬ ಸುಂದರ ಸ್ತ್ರೀಯ ರೂಪ ತಾಳಿ ಭಸ್ಮಾಸುರನ ಬಳಿ ಹೋಗಿ ಮೋಹಿಸಿ ತನ್ನ ತಲೆಯ ಮೇಲೆ ತಾನೆ ಕೈ ಇಟ್ಟುಕೊಳ್ಳುವಂತೆ ಮಾಡಿ ಶಿವನ ತಪ್ಪಿನಿಂದಾದ ದುಷ್ಪರಿಣಾಮಗಳಿಂದ ಕಾಪಾಡಿದ ಎಂಬ ಕೀರ್ತಿ ವಿಷ್ಣುವಿಗೆ ಸಂದಿತು ಎಂಬುದು ವೈಷ್ಣವರ ವಾದ...

ತ್ರಿಮೂರ್ತಿಗಳ ಅನುಯಾಯಿಗಳಾಗಿದ್ದವರು ಒಬ್ಬೊಬ್ಬ ದೇವರನ್ನು ಆರಿಸಿಕೊಂಡು ಪ್ರತಿಪಕ್ಷದ ದೇವರ ಮೇಲೆ ದಾಳಿಯನ್ನು ಏಕೆ ಆರಂಭಿಸಿದರು..?



(ಅಂಬೇಡ್ಕರ್ ಅವರ ಬರೆಹ ಮತ್ತು ಭಾಷಣಗಳು - ಸಂಪುಟ ಮೂರು)

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...