ನಾನು ಕೊಂದ ಹುಡುಗಿ’ ಅಜ್ಜಂಪುರ ಸೀತಾರಾಮಯ್ಯನವರು ‘ಆನಂದ’ ಎನ್ನುವ ಕಾವ್ಯನಾಮದಲ್ಲಿ ಬರೆದ ಒಂದು ಸಣ್ಣ ಕತೆ. ನನ್ನನ್ನು ಬಹಳ ಗಾಢವಾಗಿ ಕಾಡಿದ ಕತೆ ಅದು.
ಪ್ರಾಚೀನ ದೇವಸ್ಥಾನದ ಶಿಲ್ಪಕಲೆಗಳನ್ನು ಅಧ್ಯಯನ ಮಾಡುವ ಒಬ್ಬ ಸಂಶೋಧಕ ಇರುತ್ತಾನೆ. ಊರಿಂದ ಊರಿಗೆ ಪ್ರಾಚೀನ ಚಿಲ್ಪ ಕಲೆಗಳ ಬಗೆ ಅಧ್ಯಯನ ಮಾಡುತ್ತಾ ಹೋಗ್ತಾ ಇದ್ದೋನು ಅವನು. ಒಂದು ಸಣ್ಣ,ಪುಟ್ಟ ಹಳ್ಳೀಲಿ ಒಂದೆರಡು ದಿನದ ಮಟ್ಟಿಗೆ ಉಳಿಯಬೇಕಾಗುತ್ತದೆ. ಆ ಹಳ್ಳಿಯ ದೊಡ್ಡ ಮನುಷ್ಯರೊಬ್ಬರು ತಮ್ಮ ಮನೆಯಲ್ಲಿ ಅವನಿಗೆ ಆತಿಥ್ಯ ನೀಡುತ್ತಾರೆ. ಅಂದು ಸಂಜೆ ಹಳಿಯ ಒಬ್ಬ ದೊಡ್ಡ ಮನುಷ್ಯರೊಬ್ಬರ ಮನೆಯಲ್ಲಿ ಊಟಕ್ಕೆ ಕೂತಾಗ, ಗೆಜ್ಜೆ ಸದ್ದಿನ ಹೆಜ್ಜೆಯನಿಡುತ್ತಾ…
ಸುಂದರ ಹೆಣ್ಣುಮಗಳೊಬ್ಬಳು ನಾಚುತ್ತಲೇ ಬಂದು ಊಟ ಬಡಿಸಿ ಹೋಗುತ್ತಾಳೆ. ಆನಂತರ ಮನೆಯ ಹಿಂದಿನ ತೋಟದಲ್ಲಿ ನಡೆಯುತ್ತ ಇರುವಾಗ, ಆ ಸುಂದರ ಹೆಣ್ಣುಮಗಳು ಯಾರೆಂದು ಆ ಮನೆಯ ಕೆಲಸಗಾರನನ್ನು ವಿಚಾರಿಸುತ್ತಾನೆ. ‘ಅವಳು ನಮ್ಮ ಯಜಮಾನ್ರ ಮಗಳು, ಯಾಕೆ ಸ್ವಾಮಿ’ ಎಂದು ಇವನನ್ನು ಅನುಮಾನಿಸುತ್ತಾ ಉತ್ತರಿಸುತ್ತಾನೆ ಮನೆಯ ಕೆಲಸಗಾರ.
ತಾನು ಮುಗ್ಧವಾಗಿ ಕೇಳಿದ್ದನ್ನು ಕೆಲಸಗಾರನು ತನ್ನನ್ನು ಅಪಾರ್ಥ ಮಾಡಿಕೊಂಡನಲ್ಲ ಎಂದು ಕಸಿವಿಸಿಗೊಳ್ಳುತ್ತಲೇ, ತನ್ನ ಕೋಣೆಯನ್ನು ಸೇರಿ ತನ್ನ ಹೆಂಡತಿಗೆ ಈ ಬಗ್ಗೆ ಕಾಗದ ಪತ್ರ ಬರೆಯುವಾಗ ಯಾರೋ ಒಬ್ಬರು ಬಾಗಿಲು ತಟ್ಟಿದಂತಾಗುತ್ತದೆ.
ಬಾಗಿಲು ತೆಗೆದರೆ ಆಶ್ಚರ್ಯ. ಮದುವಣಗಿತ್ತಿಯಂತೆ ಅಲಂಕಾರ ಮಾಡಿಕೊಂಡು ಕೈಯಲ್ಲಿ ಹಾಲಿನ ಲೋಟ, ತಾಂಬೂಲ ಹಿಡಿದು ಒಳಗೆ ಬಂದವಳು ಆ ಸುಂದರ ಹೆಣ್ಣುಮಗಳು..! ಕೋಣೆಯ ಒಳಗೆ ಬಂದು ಬಾಗಿಲ ಚಿಲಕ ಹಾಕುತ್ತಾಳೆ.
ಏನೂ ಅರ್ಥವಾಗದೆ ನೋಡುತ್ತಿದ್ದವನಿಗೆ- ‘ನೀವು, ನನ್ನ ಬಗ್ಗೆ ವಿಚಾರಿಸಿದರಂತೆ. ಹೌದಾ ಎಂದು ಕೇಳುತ್ತಾಳೆ! ನಿನ್ನ ಬಗೆ ಅವರು ವಿಚಾರಿಸಿದ್ದಾರೆ ಹೋಗಿ ಅವರನ್ನ ನೋಡ್ಕೋ ಅಂತ ನನ್ನ ಅಪ್ಪ ನಿಮ್ಮ ಬಳಿಗೆ ನನ್ನನ್ನು ಕಳುಹಿಸಿಕೊಟ್ಟರು ಎನ್ನುತ್ತಾ ಮಂಚದ ಮೇಲೆ ಹೋಗಿ ಕೂರುತ್ತಾಳೆ.
ಯಾರು ತಪ್ಪು ತಿಳಿಯಬೇಡಿ! ವಿಷಯ ಇಷ್ಟೇ, ಆ ಊರಿನ ದೊಡ್ಡ ಮನುಷ್ಯರ ಮೊದಲ ಮಗಳಿವಳು. ದೊಡ್ಡ ಮನುಷ್ಯರಿಗೆ ಬಹಳ ವರ್ಷಗಳವರೆಗೆ ಗಂಡು ಸಂತಾನದ ಭಾಗ್ಯವಿರಲಿಲ್ಲ. ತನಗೆ ವಂಶೋದ್ಧಾರಕ ಮಗ ಹುಟ್ಟುತ್ತಿಲ್ಲ ಎನ್ನುವ ಆತಂಕದಲ್ಲಿ, ‘ಮುಂದೆ ನನಗೆ ಒಂದು ಗಂಡು ಮಗುವಾದರೆ ಇವಳನ್ನು ನಿನ್ನ ಸೇವೆಗೆ(ದೇವರ ಸೇವೆಗೆ) ಮೀಸಲಿಡುತ್ತೇನೆ’ ಎಂದು ಹರಕೆ ಹೊತ್ತ ಆ ದೊಡ್ಡ ಮನುಷ್ಯನಿಗೆ ಮುಂದೆ ಒಂದು ಗಂಡು ಮಗುವಾಗುತ್ತದೆ.
ತಾನು ಹೊತ್ತ ದೇವರ ಹರಕೆಯಂತೆ ಇವಳು, ಬರುವ,ಹೋಗುವ ಅತಿಥಿಗಳನ್ನು ಸತ್ಕರಿಸುವ ದೇವರ ದಾಸಿಯಾಗಿದ್ದಾಳೆ.! ಹೀಗೆ ತನ್ನನ್ನು ಬಯಸುವ ಅತಿಥಿಗಳನ್ನು ಸತ್ಕರಿಸುವ ದೇವದಾಸಿಯಾಗುವುದೇ ತನ್ನ ಬದುಕಿನ ಪುಣ್ಯ, ಸಾರ್ಥಕ್ಯವೆಂದು ಗಾಢವಾಗಿ ನಂಬಿ ಅವಳು ಬದುಕುತ್ತಿದ್ದಾಳೆ,ಆ ಮುಗ್ಧ ಸುಂದರ ಹೆಣ್ಣುಮಗಳು.!
ಇಂಥ ಕ್ರೂರ ಮೂಢನಂಬಿಕೆಯನ್ನು ಕಂಡು ತತ್ತರಿಸಿ ನಡುಗಿ ಹೋದ ಅವನು, ಆಕೆಯನ್ನು ತನ್ನ ಪಕ್ಕ ಕೂರಿಸಿ, ‘ನೀನು ನಂಬಿರುವುದು ತಪ್ಪು.ಇದು ನಿನ್ನ, ನಿನ್ನ ತಂದೆಯ ಮೂಢನಂಬಿಕೆ,ನೀನು ಮಾಡುತ್ತಿರುವುದು ದೇವರ ಸೇವೆ,ಸತ್ಕಾರವಲ್ಲ. ಅದು ಪರೋಕ್ಷ ವ್ಯಭಿಚಾರ ಎಂದು ಆ ಸುಂದರ ಮನಸಿನ, ಸುಂದರ ಹೆಣ್ಣುಮಗಳಿಗೆ ತಿಳಿಸಿ ಹೇಳಿದನು. ಈ ಮೂಢನಂಬಿಕೆಯಿಂದ ನೀನು ಇಂದೇ ಹೊರಗೆ ಬಾ’ ಎಂದು ಬೈದು,ಅವಳಿಗೆ ತಿಳುವಳಿಕೆ,ಅರಿವು ನೀಡಿ ಕಳುಹಿಸುತ್ತಾನೆ. ತಾನು ನಂಬಿದ್ದ ಪ್ರಪಂಚವೇ ಕುಸಿದು ಬಿದ್ದಂತಾಗಿ ಅಳುತ್ತಲೇ ಅವಳು ಅಲ್ಲಿಂದ ತಲೆ ತಗ್ಗಿಸಿ ಓಡಿಹೋಗುತ್ತಾಳೆ.
ಮಾರನೆಯ ದಿನ ಬೆಳಿಗ್ಗೆ ತೋಟದ ಬಾವಿಯಲ್ಲಿ ಆ ಸುಂದರ ಹುಡುಗಿಯ ಹೆಣ ತೇಲುತ್ತಿರುತ್ತದೆ.! ಬದುಕಲು ಇದ್ದ ಕಾರಣವನ್ನು ಸಹ ಕಳೆದುಕೊಂಡ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.! ‘ಅವಳ ಸಾವಿಗೆ ಕಾರಣ ಯಾರು? ಅವಳು ನಂಬಿದ್ದ (ಮೂಢ)ನಂಬಿಕೆಯನ್ನು ಛಿದ್ರಗೊಳಿಸಿ, ಬೇರೊಂದು ನಂಬಿಕೆಯನ್ನು ಕೊಡಲಾಗದೆ, ನಾನೇ ಅವಳನ್ನು ಕೊಂದೆನೇ’ ಎನ್ನುವ ಪಾಪಪ್ರಜ್ಞೆ ,ಪ್ರಶ್ನೆ ಅವನನ್ನು ಕಾಡತೊಡಗುವಲ್ಲಿಗೆ ‘ನಾನು ಕೊಂದ ಹುಡುಗಿ’ ಕತೆ ಅಲ್ಲಿಗೆ ಮುಗಿಯುತ್ತದೆ.! ನಾನು ನನ್ನ ನಂಬಿಕೆಗಳನ್ನು ಇನ್ನೊಬ್ಬರ ಮೇಲೆ ಹೇರಬಾರದೆನ್ನುವುದಕ್ಕೆ ಈ ಕತೆಯೇ ಕಾರಣ. ಮತ್ತೊಂದು ಬಲವಾದ ನಂಬಿಕೆಯನ್ನು ಕೊಡಲು ಸಾಧ್ಯವಾದರೆ ಮಾತ್ರ ನಾವು ಇನ್ನೊಬ್ಬರ ನಂಬಿಕೆಯ ಮೇಲೆ ಕೈ ಇಡಬೇಕು. ಹಾಗೆ ಮಾಡಲು ಸಾಧ್ಯವಾಗದಿದ್ದರೆ ಅವರವರ ನಂಬಿಕೆಗಳೊಂದಿಗೆ ಜನ ಅವರಿಸ್ಟದಂತೆ ಬದುಕಲಿ. ಇದರಿಂದ ಲಾಭವಿಲ್ಲದಿದ್ದರೂ, ನಷ್ಟವಂತೂ ಖಂಡಿತವಾಗಿ ಇಲ್ಲ. (ಕೃಪೆ-ಪ್ರಜಾವಾಣಿ)