ಸೃಜನಶೀಲ ಪ್ರಕ್ರಿಯೆ ಮತ್ತು ಪ್ರೇರಣೆ.
ಸಿಗ್ಮಂಡ್ ಫ್ರಾಯ್ಡ್ ಪ್ರಕಾರ ವ್ಯಕ್ತಿಯ ವ್ಯಕ್ತಿತ್ವದ ಮುಖ್ಯ ರೂಪ ರೇಖೆಗಳು ಬಾಲ್ಯದಲ್ಲಿ ಆಗುವ ಅನುಭವಗಳಿಂದಲೇ ರೂಪಿಸಲ್ಪಡುತ್ತದೆ.ತದನಂತರ ಬೆಳವಣಿಗೆಯು ಬಹುಮಟ್ಟಿಗೆ ಬಾಲ್ಯದಲ್ಲಿ ಗುರುತಿಸಲ್ಪಟ್ಟಿರುವ ವ್ಯಕ್ತಿತ್ವದ ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಬಾಲ್ಯಾವಸ್ಥೆಯಲ್ಲಿ ಮಗುವಿನ ಬೆಳವಣಿಗೆಯ ದೃಷ್ಟಿಯಿಂದ ತಂದೆ-ತಾಯಿ ಮುಖ್ಯ ಪಾತ್ರವಹಿಸುತ್ತಾರೆ. ಅಂದರೆ ಅದರ ವರ್ತನೆಯನ್ನು ನಿಯಂತ್ರಿಸುತ್ತಾರೆ.ಈ ಸನ್ನಿವೇಶದಲ್ಲಿ ಗಂಡು ಮಗು ತಾಯಿಯ ಬಗ್ಗೆ ಅಮಿತವಾದ ಪ್ರೇಮ ಹಾಗೂ ತಂದೆಯ ಬಗ್ಗೆ ದ್ವೇಷ ಬಳಸಿಕೊಳ್ಳುವ ಸಂದರ್ಭವಿದೆ. ಏಕೆಂದರೆ ತಾಯಿಯ ಅವನ್ನೆಲ್ಲ ಬಯಕೆಗಳನ್ನು ತಿರೀಸುವ ಒಂದು ನೆಲೆಯಾದರೆ ಆ ನೆಲೆಯನ್ನು ಮಗುವಿನಿಂದ ಕಸಿದುಕೊಳ್ಳುವ ಕೇಂದ್ರವಾಗಿ ತಂದೆ ಕಾಣುತ್ತಾನೆ.ಈ ಸಂದರ್ಭದ ಹಿನ್ನೆಲೆಯಲ್ಲಿ ಲೈಂಗಿಕತೆಯ ಸೋಂಕು ಇದೆ ಎನ್ನುವುದು ಸಿಗ್ಮಂಡ್ ಫ್ರಾಯ್ಡ್ ನ ವಾದ. ಹೀಗೆ ಮಗು ತಾಯಿಯನ್ನು ಪ್ರೇಮಿಸುತ್ತ, ತಂದೆಯನ್ನು ದ್ವೇಷಿಸುವ ಭಾವಗಳ ಸಮುಚ್ಛಯವೇ ಈಡಿಪಸ್ ಕಾಂಪ್ಲೆಕ್ಸ್. ಹಾಗೆಯೇ ಹೆಣ್ಣು ಮಗು ತಂದೆಯನ್ನು ಪ್ರೇಮಿಸುತ್ತಾ ತಾಯಿಯನ್ನು ದ್ವೇಷಿಸುವುದು ಎಲೆಕ್ಟ್ರಾ ಕಾಂಪ್ಲೆಕ್ಸ್.
ಈ ಎರಡು ಕಾಂಪ್ಲೆಕ್ಸ್ ಗಳು ಅನೈತಿಕ ಲೈಂಗಿಕ ಉದ್ದೇಶಗಳ ಹಿನ್ನೆಲೆಯಲ್ಲಿ ರೂಪಿಸಲ್ಪಡುತ್ತದೆ ಎನ್ನುವುದು ಫ್ರಾಯ್ಡ್ ನ ವಾದ.ಸಾಮಾನ್ಯವಾಗಿ ಮಗು ಬೆಳೆಯುತ್ತಾ ಈ ಕಾಂಪ್ಲೆಕ್ಸ್ ಗಳಿಂದುಂಟಾಗುವ ಕ್ಷೋಭೆಯಿಂದ ಪಾರಾಗುತ್ತಾರೆ.ಆದರೆ ಕೆಲವೊಮ್ಮೆ ಅದು ಸಾಧ್ಯವಾಗದೆ ಈಗ ಕಾಂಪ್ಲೆಕ್ಸ್ ಗಳು ಸುಪ್ತಾವಸ್ಥೆಯಲ್ಲಿ ಪ ನಿರ್ಬಂಧಿಸಲ್ಪಟ್ಟು ವ್ಯಕ್ತಿಯ ವರ್ತನೆಯನ್ನು ಬಹಳ ಗಂಭೀರವಾಗಿಯೇ ನಿಯಂತ್ರಿಸುತ್ತವೆ. ಹಲವಾರು ವಿಧಗಳಲ್ಲಿ ಕನಸಿನಲ್ಲಿ, ಹಗಲು ಕನಸಿನಲ್ಲಿ ಹಾಗೂ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಉದಾತ್ತೀಕರಣಗೊಂಡು ಸಾಹಿತ್ಯದ ರೂಪದಲ್ಲಿ ಅಭಿವ್ಯಕ್ತವಾಗುತ್ತವೆ. ಅಂದರೆ ಸೃಜನಾತ್ಮಕ ಕ್ರಿಯೆಗೆ ಪ್ರೇರಣೆಯಾಗುತ್ತದೆ ಆದುದರಿಂದ ಒಂದು ಅನೈತಿಕ ಲೈಂಗಿಕ ಕಂಪ್ಲೆಕ್ಸ್ ಸೃಷ್ಟಿಕ್ರಿಯೆಗೆ ಪ್ರೇರಣೆಯಾಗಿ ಪರಿಣಮಿಸುತ್ತದೆ.
ಈಡಿಪಸ್ ಕಾಂಪ್ಲೆಕ್ಸ್ ವಿಶ್ವ ಸಾಹಿತ್ಯದಲ್ಲಿರುವ ಕೆಲವು ಅತ್ಯುತ್ತಮ ಕೃತಿಗಳಿಗೆ ಹೇಗೆ ಪ್ರೇರಕವಾಗಿ ಇರಬಹುದೆಂದು ಫ್ರಾಯ್ಡ್ ವಿವರಿಸಿದ್ದಾನೆ.ಈಡಿಪಸ್ ಕಾಂಪ್ಲೆಕ್ಸ್ ನೇರವಾಗಿ ಪ್ರಕಟವಾಗಿರುವ ಗ್ರೀಕ್ ನಾಟಕಕಾರರ ಸೋಪೋಕ್ಲಿಸ್ ನ "ಈಡಿಪಸ್ ರೆಕ್ಸ್" ನಾಟಕವನ್ನು ವಿಶ್ಲೇಷಿಸಿದ್ದಾನೆ. ಈ ನಾಟಕದ ದುರಂತ ನಾಯಕ ಈಡಿಪಸ್ ಥೀಬ್ಸ್ ದೇಶದ ದೊರೆಯಾದ ಲೇಯಸ್ ಮತ್ತು ಅವನ ರಾಣಿ ಜೊಕಾಸ್ತರ ಮಗ. ಈಡಿಪಸ್ ಅವನ ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾಗುತ್ತಾನೆಂದು, ಅವನು ಹುಟ್ಟಿದಾಗ ಅರೇಕಲ್ ಭವಿಷ್ಯ ನುಡಿಯುತ್ತದೆ.ಕಥೆ ಬೆಳೆದ ಹಾಗೆ ಸಂದರ್ಭಗಳು ಬೆಳೆದು ಇಡಿಪಸ್ ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾಗಿ ಮಕ್ಕಳನ್ನು ಪಡೆಯುತ್ತಾನೆ. ನಿಜ ವಿಷಯ ತಿಳಿದಾಗ ತನ್ನ ಕಣ್ಣುಗಳನ್ನು ಕಿತ್ತು ಹಾಕಿಕೊಂಡು ದೇಶ ಬಿಟ್ಟು ತೊಲಗು ತಾನೆ.
ಹಾಗೆಯೇ "ದೋಸ್ತೋವಸ್ಕಿ"ಯ 'ಬ್ರದರ್ಸ್ ಕರಮಜಾವ್' ಕಾದಂಬರಿಯನ್ನು ವಿಶ್ಲೇಷಿಸಿ ದೋಸ್ತೋವಸ್ಕಿಗೆ ಪಿತೃಹತ್ಯೆ ಕಾಂಪ್ಲೆಕ್ಸ್ ಅವನ ವ್ಯಕ್ತಿತ್ವದಲ್ಲಿ ಬಹಳ ಬಲವಾಗಿತ್ತು ಎಂದು ಹೇಳುತ್ತಾನೆ. ಬ್ರದರ್ಸ್ ಕರಮಜಾವ್ ನಲ್ಲಿರುವ ದಿಮಿತ್ರಿ ಪಾತ್ರ ದೋಸ್ತೋವಸ್ಕಿಗೆ ಇದ್ದ ಮೂರ್ಛೆ ರೋಗವನ್ನು ಪಡೆದಿದ್ದು ತನ್ನ ತಂದೆಯನ್ನು ಕೊಲ್ಲುತ್ತಾನೆ.ಈ ಕೊಲೆಯ ರಚನೆಯಿಂದಾಗಿ ಮುಖ್ಯವಾಗಿ ದಿಮಿತ್ರಿ ಯ ಪಾತ್ರ ರಚನೆಯಿಂದಾಗಿ ದೋಸ್ತೋವಸ್ಕಿ ತನ್ನ ಮಾನಸಿಕ ದುಗುಡ ಕಡಿಮೆ ಮಾಡಿಕೊಂಡನೆಂದು ಹೇಳುತ್ತಾನೆ. ಹಾಗೆಯೇ ಅವನು ಬಹಳ ವರ್ಷಗಳಿಂದ ಈ ಕೃತಿ ರಚನೆಗಾಗಿ ಮಾನಸಿಕ ಸಿದ್ಧತೆ ನಡೆಸಿದ್ದನೆಂದು ಹೇಳುತ್ತಾನೆ.
"ಬ್ರದರ್ಸ್ ಕರಮಜಾವ್" ಬರೆಯುವುದು ದೋಸ್ತೋವಸ್ಕಿಗೆ ಉದ್ವೇಗ ನಿವಾರಣೆಯ ದೃಷ್ಟಿಯಿಂದ ಬಹಳ ಅವಶ್ಯವಾಗಿತ್ತು.ಏಕೆಂದರೆ ದೋಸ್ತೋವಸ್ಕಿಯ ತಂದೆಯ ಕೊಲೆ ಇವನ ಪಿತೃ ಹತ್ಯೆ ಪ್ರವೃತ್ತಿ ಬಹಳ ಪ್ರಬಲವಾಗಿದ್ದಾಗ ನಡೆದಿತ್ತು. ಬ್ರದರ್ಸ್ ಕರಮಜಾವ್ ದಲ್ಲಿ ದಿಮಿತ್ರಿಯನ್ನು ದೋಸ್ತೋವಸ್ಕಿ ಸೃಷ್ಟಿಸಿದ ಬಗ್ಗೆ ಕುರಿತು ಫ್ರಾಯ್ಡ್ ಹೇಳುತ್ತಾನೆ.
ಇದೇ ಪಿತೃ ಹತ್ಯೆ ಕಾಂಪ್ಲೆಕ್ಸ್ ಸೆಕ್ಸ್ಪಿಯರ್ ನ "ಹ್ಯಾಮ್ಲೆಟ್" ನಾಟಕದಲ್ಲಿ ಪರೋಕ್ಷವಾಗಿ ಮಾರ್ಮಿಕವಾಗಿ ಅಭಿವ್ಯಕ್ತವಾಗಿದೆ ಎನ್ನುವುದು ಫ್ರಾಯ್ಡ್ ನ ಅಭಿಪ್ರಾಯ.ಅವನ ವಿಶ್ಲೇಷಣೆಯ ಪ್ರಕಾರ ಹ್ಯಾಮ್ಲೆಟ್ ತನ್ನ ತಂದೆಯನ್ನು ಕೊಂದು ಕ್ಲಾಡಿಯಸ್ ನನ್ನು ಕೊಲ್ಲುವಲ್ಲಿ ಬಹಳ ವಿಳಂಬ ಮಾಡುತ್ತಾನೆ.ಈ ವಿಳಂಬವನ್ನು ವಿವರಿಸುವಲ್ಲಿ ಫ್ರಾಯ್ಡ್ ಹ್ಯಾಮ್ಲೆಟ್ ಗೆ ತನ್ನ ತಂದೆಯನ್ನು ಕೊಲ್ಲುವ ಇಚ್ಛೆ ಸುಪ್ತಾವಸ್ಥೆಯಲ್ಲಿ ಇತ್ತು ಮತ್ತು ತನ್ನ ಇಚ್ಛೆಯನ್ನು ನೆರವೇರಿಸಿದ ಕ್ಲಾಡಿಯಸ್ ನನ್ನು ಕೊಲ್ಲುವುದು ಹೇಗೆ ಎನ್ನುವ ಪೇಚಿನಲ್ಲಿ ಸಿಕ್ಕಿರುತ್ತಾನೆನ್ನುವ ನಿಲುವು ತಾಳುತ್ತಾನೆ. ಹಾಗೂ ಈ ವಿಶ್ಲೇಷಣೆಯನ್ನು ಮುಂದುವರಿಸಿ ಅರ್ನೆಸ್ಟ್ ಜೋನ್ಸ್ ತನ್ನ "ಹ್ಯಾಮ್ಲೆಟ್ ಮತ್ತು ಇಡಿಪಸ್" ಎನ್ನುವ ಲೇಖನದಲ್ಲಿ ಹ್ಯಾಮ್ಲೆಟ್ ಮತ್ತು ಆ ಪಾತ್ರವನ್ನು ಸೃಷ್ಟಿಸಿದ ಶೇಕ್ಸ್ಪಿಯರ್ ಇಬ್ಬರು ಈಡಿಪಸ್ ಕಾಂಪ್ಲೆಕ್ಸ್ ನಿಂದ ಪ್ರೇರಿತರಾಗಿದ್ದಾರೆನ್ನುವ ಫ್ರಾಯ್ಡ್ ನ ಥೀಸಿಸ್ ಅನ್ನು ಸಮರ್ಥಿಸುವ ಆಧಾರಗಳನ್ನು ಕೊಟ್ಟಿದ್ದಾನೆ.
ಲಿಯೋನಾರ್ಡ್ ಡಾ ವಿಂಚಿಯ ಕಲೆಯನ್ನು ವಿಶ್ಲೇಷಿಸುವಾಗ ಫ್ರಾಯ್ಡ್ ನ ನಿಲುವು ಹೀಗೆಯೇ ಇದೆ; ಅವನು ಮೊನಾಲಿಸಾಳ ಚಿತ್ರ ತೆಗೆಯಬೇಕಾದರೆ ಆ ಚಿತ್ರಕ್ಕೆ ತನ್ನ ಬಾಲ್ಯಾವಸ್ಥೆಯಲ್ಲಾದ ಕೆಲವು ಅನುಭವಗಳು (ಸುಪ್ತಾವಸ್ಥೆಯಲ್ಲಿ ಅದುಮಿಕ್ಕಲ್ಪಟ್ಟಿರುವಂತಹವು ಅವನಿಗೆ ತಾನು ಮಗುವಿದ್ದಾಗ ತನ್ನ ತಾಯಿಯ ಮೇಲೆ ಅಮಿತವಾದ ಪ್ರೇಮ ಹಾಗೂ ಅವಳ ಆಕರ್ಷಕವಾದ ನಗುವಿನಿಂದ ಅವನ ಶೈಶವಾವಸ್ಥೆಯ ಲೈಂಗಿಕ ಅಭಿಲಾಷೆಗಳು ಎಚ್ಚೆತ್ತುಕೊಳ್ಳುತ್ತಿದ್ದ ಸ್ಥಿತಿಗಳು) ತಮ್ಮ ಪ್ರಭಾವವನ್ನು ಬೀರಿ ಮೊನಾಲಿಸ ಅತ್ಯಂತ ಆಕರ್ಷಕ ನಗುವಿನೊಡನೆ ಚಿತ್ರಿಸಲ್ಪಟ್ಟಿದ್ದಾಳೆ.
ಒಟ್ಟಿನಲ್ಲಿ ಸಿಗ್ಮಂಡ್ ಫ್ರಾಯ್ಡ್ನ ವಿಶ್ಲೇಷಣೆಯಲ್ಲಿ ಸುಪ್ತಚೇತನದ ಅತೃಪ್ತ ಆಕಾಂಕ್ಷೆಗಳು ಅನೈತಿಕ ಲೈಂಗಿಕ ಬಯಕೆಗಳು ಸಾಹಿತ್ಯಕ್ಕೆ ಪ್ರೇರಣೆಯಾಗಿವೆ ಅವು ಕೆಲಸ ಮಾಡುವ ಬಗೆಯನ್ನೂ ಸಹ ವಿಶ್ಲೇಷಿಸಿದ್ದಾನೆ.ಕಲಾಕಾರ ತನ್ನ ದೈನಂದಿನ ಬದುಕಿನಲ್ಲಿ ಯಾವುದೇ ಒಂದು ತೀವ್ರವಾದ ಅನುಭವಕ್ಕೆ ಗುರಿಯಾಗುತ್ತಾನೆ. ಅನುಭವದ ತೀವ್ರತೆಯ ಅವನ ಸುಪ್ತಾವಸ್ಥೆಯಲ್ಲಿರುವ ವಿಷಯಗಳ ಮೇಲೆ ಆಧರಿಸಲ್ಪಟ್ಟಿದೆ. ಇಂತಹ ಅನುಭವ ಅವನ ಬಾಲ್ಯದಲ್ಲಿ ಅದುಮಿಕ್ಕಲ್ಪಟ್ಟು ಯಾವುದು ಲೈಂಗಿಕ ಆಸಕ್ತಿಯನ್ನು ಹೊಡೆದೆಬ್ಬಿಸುತ್ತದೆ. ಮಾನಸಿಕ ಕ್ಷೋಭೆ ಉಂಟಾಗುತ್ತದೆ. ಇದರಿಂದ ಉಂಟಾಗುವ ಉದ್ವೇಗದಿಂದ ಉಪಶಮನ ಹೊಂದಲು ಸುಪ್ತಾವಸ್ಥೆಯಲ್ಲಿ ಅದುಮಿಕ್ಕಲ್ಪಟ್ಟ ವಿಷಯಗಳನ್ನು ತನ್ನ ಕಲೆಯ ಮೂಲಕ ಹೊರಹಾಕುತ್ತಾನೆ. ರೂಪಾಂತರಗೊಂಡ ಬಯಕೆಗಳು ಓದುಗನಗೂ ಸ್ವೀಕಾರ ರ್ಹವಾಗಿ ಕಾಣುತ್ತದೆ. ಏಕೆಂದರೆ ಓದುಗನ ಸುಪ್ತಾವಸ್ಥೆಯೂ ಹೆಚ್ಚುಕಡಿಮೆ ಕಲಾಕಾರನ ಸುಪ್ತಾವಸ್ಥೆಯಂತೆಯೇ ಅತೃಪ್ತ ಬಯಕೆಗಳ ಆಗರ. ಆದುದರಿಂದ ಕಲೆಯ ರೂಪದಲ್ಲಿ ಹೊರಬಂದ ಈ ಅನೈತಿಕ ಲೈಂಗಿಕ ಬಯಕೆಗಳು ಓದುಗನಿಗೂ ಒಂದು ತರವಾದ ಆನಂದವನ್ನೀಯುತ್ತದೆ.ಮೇಲಾಗಿ ಓದುಗನ ದೃಷ್ಟಿಯಿಂದ ತನ್ನ ಸುಪ್ತಾವಸ್ಥೆಯನ್ನು ಬೇರೆಯವನು ಅಂದರೆ ಕಲಾಕಾರ ಹೊರುಗಿಡುತ್ತಿರುವುದರಿಂದ ಮಾನಸಿಕ ಕ್ಷೋಭೆ ಅಥವಾ ಭಯ ಇರುವುದಿಲ್ಲ. ಒಂದು ವಿಧವಾಗಿ ತನ್ನ ಸುತ್ತ ವಸ್ಥೆಯ ಬಯಕೆಗಳನ್ನು ಓದುಗ ತನ್ನದೆಂದು ಒಪ್ಪಿಕೊಳ್ಳಬೇಕು ಕಲೆಯನ್ನು ಆಸ್ವಾದಿಸುವುದರ ಮೂಲಕ ತೀರಿಸಿಕೊಳ್ಳುತ್ತಾನೆ. ಆದುದರಿಂದ ಸಾಹಿತ್ಯ ಅವನಿಗೆ ಬಹಳ ಇಷ್ಟವಾಗುತ್ತದೆ.
No comments:
Post a Comment