ಪ್ರೀತಿ, ಪ್ರೇಮ, ಕಾಮ, ಕಾಮನೆಗಳನ್ನು ಅವರು ಬರಿ ಪ್ರಸ್ತಾಪಿಸದೆ “ಪ್ರಸ್ತ”ಪಿಸುತ್ತಾರೆ…
ನಾವು ಪ್ರೀತಿಸುವ ವ್ಯಕ್ತಿಯಲ್ಲಿ
ತಪ್ಪು ಕಂಡು ಹಿಡಿವ ಕೆಲಸ
ಓಯಸಿಸ್’ನಲ್ಲಿ
ಹಸಿರು ಮತ್ತು ನೀರನ್ನು
ತಿರಸ್ಕರಿಸಿದಂತೆ
ಎಂದೋ ಕಂಡ ಮೋಹಕ ಹೆಣ್ಣನ್ನು
ನೆನೆದು ದುಗುಡಗೊಳ್ಳುವ
ಗಂಡಿನಲ್ಲಿ ಎಷ್ಟು
ಸ್ವಾರ್ಥ, ಎಷ್ಟು ಪ್ರೇಮ, ಎಷ್ಟು
ಕೇವಲ ಚಪಲ ?
ಎಂಥವನನ್ನೂ ವಾಕ್ಪಟುವನ್ನಾಗಿ
ಮಾಡುವ ಎರಡು ವಸ್ತುಗಳು
ವ್ಯಾಪಾರ ಮತ್ತು ಪ್ರೇಮ
ಎನ್ನುವುದು ಎಷ್ಟು ತಮಾಷೆ !
ವ್ಯವಹಾರ ಲೋಕದಲ್ಲಿ ಲೆಕ್ಕ
ನಿಷ್ಠೆ, ನಿಯತ್ತು ಇರುವಂತೆ
ಅನುರಾಗ ಲೋಕದಲ್ಲಿ
ಚಂಚಲತೆ, ಊಹೆ ಮತ್ತು ಕವನ
ಎಂದರೆ ನಗುವೆಯಾ ?
ಸುರಸುಂದರಿಯ ರೂಪ
ಅರಳಿದ್ದು
ನಶಿಸಿದ್ದು
ಇವೆರಡರ ನಡುವಿನ ಸೂಕ್ಷ್ಮ
ಕ್ಷಣಕ್ಕಾಗಿ ಅರಸಿ ನಿರಾಶನಾಗುವುದು
ಪ್ರೇಮಿಯ ಪರಂಪರಾಗತ ಗೋಳು
ನನ್ನ ಬದುಕಿನ ಮೂವತ್ತು ವಸಂತಗಳು
ಮೂವತ್ತು ಮುಂಗಾರು
ಬೇಸಿಗೆ
ಎಲ್ಲವನ್ನೂ ಮೀರಿ
ಚಳಿಗಾಲವೊಂದರ ನಡುರಾತ್ರಿಯ ಕನಸು
ನನಗೆ ಕಂಪನ ತರುವುದು
ಕಾಮ, ಪ್ರೇಮವ ಪ್ರತ್ಯೇಕಿಸಿ
ನೋಡಬೇಡ :
ಚುಂಬನದ ನಾಲ್ಕು ತುಟಿಗಳಿಗೆ
ಸಾಕ್ಷಿಯಾದ ಎರಡು ನಾಲಿಗೆಗಳೂ
ಸದಾ ಗೊಂದಲದ ಸ್ಥಿತಿಯಲ್ಲಿರುತ್ತವೆ
ಪರಿಚಯ ಮತ್ತು ಪ್ರತಿಭಟನೆಯ
ನಡುವೆ
ಹೇಗೋ ಗೂಡು ಕಟ್ಟುವ
ಹಕ್ಕಿ
ಪ್ರೇಮ
ನೀನು ಮೆಚ್ಚುವ ಪ್ರೇಮಿಯ
ಪುಟ್ಟ ಗುಡಿಸಲು ಅರಮನೆಯೆಂದು
ಭ್ರಮಿಸಬೇಡ :
ಎಲ್ಲ ಪ್ರೇಮದ ಹಿಂದೆಯೂ
ಒಂದು ಸೆರೆಮನೆ ಇದೆ
ಮೊನ್ನೆ ತುಂಬು ಸೀರೆ ಉಟ್ಟು
ಬಟ್ಟೆ ಗಿರಣಿಗಳಂತಿದ್ದ ಹುಡುಗಿಯರು
ಈಚೆಗೆ ಗಿರಣಿಗಳ ಮುಷ್ಕರದಲ್ಲಿ
ಭಾಗವಹಿಸಿದ್ದಕ್ಕೆ
ಬೇಸಿಗೆ ಕಾರಣವಿರಬಹುದೆ ?
No comments:
Post a Comment