ನಾನೂ_ಸಿರಾಜ್
ನಿನ್ನ ದಾಖಲೆ ಯಾವಾಗ ನೀಡುತ್ತಿ?
ಆಧಾರು, ರೇಷನ್ ಕಾರ್ಡಗಳ ಕ್ಯೂನಲ್ಲಿ
ಥಂಬಿನ, ಸರ್ವರಿನ ಮಂಗನಾಟದಲ್ಲಿ
ಬದುಕ ಕಳೆದುಕೊಳ್ಳು ತ್ತಿರುವವರ ದಾಖಲೆ
ಕೇಳುವವನೇ ನಿನ್ನ ದಾಖಲೆ ಯಾವಾಗ ನೀಡುತ್ತಿ?
ನಾಡಿನ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಲೇ ನೇಣಿಗೇರಿದವರ ,
ಹೆಸರೂ ಬೇಡವೆಂದು ಹುತಾತ್ಮರಾದವರ
ಇತಿಹಾಸದ ಹಾಳೆಗಳ ಹರಿಯುತ್ತಿರುವವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ.?
ತಾಜ್ ಮಹಲ್, ಚಾರ್ ಮಿನಾರು ಗುಂಬಜಗಳಿಗೆ
ಕೆಂಪು ಕೋಟೆ ಕುತುಬ್ ಮಿನಾರುಗಳಿಗೆ ಸಾಕ್ಷಿ ಕೇಳುತ್ತಿರುವವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ?
ಬ್ರಿಟಿಷರ ಬೂಟು ನೆಕ್ಕಿದ ತಲೆಹಿಡುಕರ
ಧರ್ಮ ದ್ವೇಷದ ಅಮಲಿನಲ್ಲಿ ರಕ್ತ ಕುಡಿಯುತ್ತಿರುವ
ಗೊಬೆಲ್ ಸಂತತಿಯವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ?
ಪಕೋಡ ಮಾರಿ ಬದುಕಿದವನು
ಚಾ ಮಾರಿ ಬದುಕಿದವನು ನನ್ನೂರಿನಲ್ಲಿ
ಮನುಷ್ಯತ್ವ ಮಾರಿಕೊಂಡಿಲ್ಲ
ಸ್ವಾಭಿಮಾನ ಮಾರಿಕೊಂಡಿಲ್ಲ,
ಸುಳ್ಳಿನ ಕಂತೆಗಳ ಕತೆ ಕಟ್ಟಿಲ್ಲ
ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?
ಮುಳ್ಳು ಚುಚ್ಚಿ, ಹರಿದು, ಸಿಡಿದು ಹೋದ
ಟ್ಯೂಬುಗಳ, ಟೈಯರುಗಳ ತಿದ್ದಿ ತೀಡಿ ಗಾಳಿ ತುಂಬಿದ
ಪಂಚರ್ ನವನು ತನ್ನತನವನ್ನು ಮಾರಿಕೊಳ್ಳಲಿಲ್ಲ
ನೀನು ದೇಶವನ್ನೇ ಮಾರಿಬಿಟ್ಟೆಯಲ್ಲ
ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?
ದೇಶವನ್ನೇ ಯಾಮಾರಿಸಿದ ನಿನಗೆ
ನಕಲಿ ದಾಖಲೆಗಳು ದೊಡ್ಡದಲ್ಲ ಬಿಡು
ಕನಿಷ್ಟ ಮನುಷ್ಯತ್ವವೂ ನಿನಗಿದೆ
ಎನ್ನುವ ದಾಖಲೆ ಯಾವಾಗ ನೀಡುತ್ತಿ ?
ಸಿರಾಜ್ ಬಿಸ್ರಳ್ಳಿ
ಕವಿತೆ :
ಇಲ್ಲಿ ಕವಿತೆಗಳ
ವಿರುದ್ಧ ಕೇಸು
ಹಾಕಲಾಗುತ್ತೆ
ಎಚ್ಚರ
ಕವಿತೆಗಳು
ತಗ್ಗಿ ಬಗ್ಗಿ
ನಡೆಯುವುದನ್ನು
ಕಲಿಯಬೇಕು
ಕವಿತೆಗಳು
ಅಧಿಕಾರಸ್ಥರ
ವಿರುದ್ಧ ಎದೆ ಸೆಟೆದು
ಸೆಡ್ಡು ಹೊಡೆಯುವುದನ್ನು
ಬದಲಿಸಿಕೊಳ್ಳಬೇಕು
ಕವಿತೆಗಳು
ಪ್ರಭುಗಳ ನೀತಿ ನಿಯಮಗಳನ್ನು
ಅರ್ಥ ಮಾಡಿಕೊಂಡು
ಪ್ರಭುಗಳಿಗೆ ವಿಧೇಯತೆಯನ್ನು
ತೋರಿಸಬೇಕು
ಕವಿತೆಗಳು
ತಿಕ ತೀರಿಗಿಸಿದರೆ
ತಿಕ ಗಂಜಲಿ
ಮಾಡಿದರೆ ಗೊತ್ತಿದೆ
ತಿಕ ಹೊಡೆಯುವ
ಕಲೆ ಪ್ರಭುಗಳಿಗೆ
ಕವಿತೆಗಳ
ವಿರುದ್ಧ ಪ್ರಭುಗಳು
ತಮ್ಮ ಸಾಕು ನಾಯಿಗಳನ್ನು
ಚೂ ಬಿಡುತ್ತಾರೆ
ಕೇಸು ಹಾಕಿಸುತ್ತಾರೆ
ವಾರಂಟ್ ಕಳಿಸುತ್ತಾರೆ
ಕವಿತೆಗಳು
ಪೋಲಿಸ್ ಸೆಲ್ಲಿನಲ್ಲಿ
ಕೋರ್ಟಿನ ಕಟಕಟೆಯಲ್ಲಿ
ನಿಂತು ತನ್ನ ನಿರ್ದೋಷಿತನವನ್ನು
ತಾನು ಹೇಳುತ್ತಿರುವ
ಕವಿತ್ವದ ಸಾರವನ್ನು
ಕಾವ್ಯದ ಕಾರ್ಯಕಾರಣವನ್ನು
ಪ್ರಭುಗಳಿಗೆ ತಿಳಿಸಬೇಕು
ಕವಿತೆ ತನ್ನ ಕವಿತ್ವದಲ್ಲಿ
ಪ್ರಭುಗಳ ವಿರುದ್ದದ
ಕಾವ್ಯವಿಲ್ಲವೆಂದು
ಸಾಬೀತು ಮಾಡಲು
ಸೋತರೆ
ಕಾವ್ಯದಲ್ಲಿ ಪ್ರಭುಗಳ
ವಿರುದ್ಧದ ಪದಗಳಿವೆ
ಎಂಬುದು ಕಂಡುಬಂದರೆ
ಕವಿತೆಗಳ ವಿರುದ್ದ
ಕೇಸು ಬೀಳುತ್ತೆ
ಎಚ್ಚರ !
- ಆರ್.ಜೆ
ಪ್ರಜಾಪ್ರಭುತ್ವ
ಹಿಂದೆಲ್ಲಾ ರಾಜ
ಸಾಲು ಮರ ನೆಡಿಸಿ
ಕೆರೆಕಟ್ಟೆ ಕಟ್ಟಿಸಿ
ಮಾನ್ಯನಾಗುತ್ತಿದ್ದನು
ಈಗ ಮರ-ಗಿಡ ಕಡಿದು
ನದಿ ಬತ್ತಿಸಿ ನೆಲ ಬಗೆಯಲು
ಪರವಾನಗಿ ಕೊಟ್ಟು
ಧನ್ಯನಾಗುತ್ತಿರುವನು
ಎಲ್ಲಿ ನೋಡಿದರಲ್ಲಿ
ರಾಕ್ಷಸ ಯಂತ್ರಗಳು
ಎಲ್ಲಾ ಮಟ್ಟಸಗೊಳಿಸಿ
ಕೇಕೆ ಹಾಕುತಿವೆ
ತಂತ್ರ-ಕುತಂತ್ರಗಳು
ತೇರೆಳೆದಿಹರು...
ದೀನ ದರಿದ್ರ ದುರ್ಬಲ ಮಂದಿ
ಹೂವು-ದವನ ಎಸೆದು
ಕೈ ಮುಗಿದು ಹಿಡಿದಿಹರು ದೊಂದಿ
ಸಿಂಹಾಸನದ ಮೇಲೆ
ಕೂತವನೆ ವೇಷಧಾರಿ
ಅರಿಯದೆ ಉಘೆ ಎಂದು
ಕೂಗಿಹರು ಶಕ್ತಿ ಮೀರಿ !
#ಸವಿತಾ ನಾಗಭೂಷಣ
#ಮೌನ
#ವಿನಯ_ಒಕ್ಕುಂದ_ಅವರ_ಪದ್ಯ
ಮೌನ, ಸದ್ಯ ನನ್ನ ಕೊರಳನ್ನು
ಕುಣಿಕೆಯಿಂದ ಪಾರುಮಾಡಬಲ್ಲದು
ಆದರೆ, ಒಳಗೆ ಲಾಳಿಯಾಡುವ
ಲಾವರಸವನ್ನೆಂದಿಗೂ ತಣಿಸಲಾರದು
ಮೌನ, ನನ್ನ ಬಟ್ಟಲಿಗೆ
ಅನ್ನ ಕೊಡಬಹುದು ಮುಫತ್ತಾಗಿ
ಆದರೆ ನೆತ್ತರು ಕೀವುಗಟ್ಟುವ
ದ್ರೋಹದ ಯಾತನೆಯಿಂದ ಪಾರುಗಾಣಿಸದು
ಮೌನ, ಹೆಗಲಿಗೆ ಜರಿಶಾಲನ್ನು
ಕೈಗೆ ಸನ್ಮಾನ ಪತ್ರವನ್ನು ಕೊಡಬಹುದು
ಆದರೆ, ಲಜ್ಜೆಗೆಟ್ಟು ಕೇಡು ಸಂಧಾನಕ್ಕೆ
ಸಂದುಹೋದ ಆತ್ಮದ ಮರ್ಯಾದೆ ಕಾಯುವ
ಕಫನ್ನಿನ ಬಟ್ಟೆಯೂ ಆಗಲಾರದು
ಮೌನ, ನಮ್ಮಷ್ಟಕ್ಕೇ ನಾವಿರುವ
ಸಭ್ಯತೆಯ ಸೋಗು ಕೊಡಬಹುದು
ಆದರೆ ಒಳಗೊಳಗೇ ಅರೆಬೆಂದು
ಹಳಸಿದ, ಜೀವತ್ರಾಣವನೆಂದೂ ಮರಳಿಸದು
ಮೌನ ಹರಳುಗಟ್ಟಿದೆ
ಒಳಹೊಕ್ಕು ಪ್ರಾಣವ ಹೆನೆಗೆ ಮಾಡಿದೆ
ಉಪ್ಪುನೀರು ಕುದಿಯೊಡದರೂ ತಣ್ಣಗಿದೆ ಕಣ್ಣೀರು
ನನ್ನ ಮುದ್ದು ದೇಶವೇ
ನಿನ್ನ ಮೇಲಾಡುವ ಗಾಳಿಯಲೆಯಾಣೆ
ಎಲ್ಲರೆಲ್ಲರ ಉಸಿರು ತಾಕಿ ಜುಂಎನ್ನುವ ತ್ರಿವರ್ಣದಾಣೆ
ಮಕ್ಕಳ ನೆತ್ತರಂಟಿದ ಹಾದಿಯಾಣೆ
ಈ ಜವುಳು ಸವಳಿನ ದುರ್ಭರ ದಿನಗಳಲಿ
ಮೌನವೊಂದು ಮಹಾಪಾಪ
ಕಾನ್ಸಂಟ್ರೇಶನ್ ಕ್ಯಾಂಪಿನಿಂದ ಕವಿ ಹೇಳುತ್ತಿದ್ದಾನೆ
ನೊಂದವರ ದ್ವನಿಯಾಗದ ಮೌನ ಮಹಾಪಾಪ
#ವಿನಯಾ #ಒಕ್ಕುಂದ
#ಗುರುತು_ಬೇಕೇ_ಗುರುತು
ದಿನ ಬೆಳಗಾದರೆ ಎಳೆಬಿಸಿಲಿನಲಿ ಮುತ್ತಿಟ್ಟು
ಮದ್ಹಾಹ್ನ ಬಿರುಬಿಸಿಲಿನಲಿ ಚುರುಕು ಮುಟ್ಟಿಸುವ ಸೂರ್ಯನಿಗೆ
ಹಾಲುಬೆಳದಿಂಗಳಲಿ ಒಲವ ಹಂಚುವ ಚಂದ್ರನಿಗೆ ನನ್ನವರ ಪರಿಚಯವಿದೆ..
ಬೇಕಾದರೆ ಅವರಿಂದ ಗುರುತು ಪಡೆಯಿರಿ..
ಜಾತಿ ಧರ್ಮ ಲಿಂಗದೆಲ್ಲೆಯ ಮೀರಿ
ಎಲ್ಲರ ಉಸಿರು ಗಾಳಿಯಲ್ಲಿ ಬೆರೆತಿದೆ
ಗಾಳಿಯ ಕೊರಳಪಟ್ಟಿ ಹಿಡಿದು ನನ್ನವರ ಗುರುತುಗಳ ಪತ್ತೆಹಚ್ಚಿರಿ..
ನಿಮ್ಮದೇ ಸಿಮೆಂಟ್ ಕಾಂಕ್ರೇಟಿನ
ಹೈವೇ ಕೆಳಗೆ
ಅಜ್ಜಿ ಮುತ್ತಜ್ಜಿಯರು ನಡೆದಾಡಿದ ಹೆಜ್ಜೆಗಳು ಅಪ್ಪಚ್ಚಿಯಾಗಿವೆ..
ನಮ್ಮ ಗುರುತುಗಳಿಗಾಗಿ
ಹೈವೆಗಳನ್ನೆಲ್ಲ ಅಗೆಯುವ ಗುತ್ತಿಗೆ ಯಾರಿಗೆ ಕೊಡುತ್ತೀರಿ?
ಮನೆಯ ಗೋಡೆಗೆ
ಕಾಲಕಾಲಕ್ಕೆ ಬಳಿದ ಸುಣ್ಣದ ಪದರುಗಳಲ್ಲಿ ಅಚ್ಚಾದ ಚರಿತ್ರೆಯ ಪುಟಗಳ ನೀವು ಓದಬೇಕು..
ಮೊದಲು ಅವರದ್ದೇ ಭಾಷೆಯ
ಸಂಕೇತಗಳು ನಿಮಗೆ ತಿಳಿದಿರಬೇಕು.
ಭಾರತವೆಂಬ ಬ್ಲಡ್ ಬ್ಯಾಂಕಿನ
ರಕ್ತದ ಕಣಕಣಗಳಲಿ ಧರ್ಮದ ಗುರುತು ಪತ್ತೆಹಚ್ಚಲು ಸೋತ ನೀವು
ದೇಶದ ಗಡಿರೇಖೆಯಲ್ಲಿ
ಲೋಕದ ಜನರಿಗೆ ಪ್ರೀತಿ ಹಂಚುವ
ನಮ್ಮನ್ನು ದೇಶಬ್ರಷ್ಟರೆಂದಿರಿ..
ಕಡೆಯದಾಗಿ..
ನನ್ನವರ ಬೆವರಹನಿಗಳು ಆವಿಯಾಗಿ ಮೋಡಕಟ್ಟಿ ಮಳೆಯಾಗಿ ಸುರಿದಿವೆ...
ಬಿದ್ದ ಮಳೆ ನೀರಲ್ಲಿ ಕಲೆಸಿಹೋದ
ಗುರುತುಗಳ ಬೇಕಿದ್ದರೆ ಹುಡುಕಿಕೊಳ್ಳಿ...
#ಅಜೋ