ಪೆರಿಯಾರ್ ವಿಚಾರಗಳು:-
ಸಂಪಾದಕರು: ಡಿ.ಎಸ್. ಕಾರ್ಲೋಸ್
#ಬೌದ್ಧ_ಧರ್ಮ_ಮತ್ತು_ಸ್ವಾಭಿಮಾನ
ಅಧ್ಯಕ್ಷರೇ! ಸಹೋದರಿ-ಸಹೋದರರೇ!
'ಸ್ವಾಭಿಮಾನ ಮತ್ತು ಬೌದ್ಧ ಧರ್ಮ' ಎಂಬ ವಿಷಯದ ಕುರಿತು ಮಾತು ಕಥೆಗಳು ನಡೆಯಲಿರುವ ಈ ಸಭೆಯಲ್ಲಿ ನಾನು ಮಾತನಾಡಬೇಕಾಗಬಹುದು ಎಂದು ಈ ಮೊದಲು ಭಾವಿಸಿರಲಿಲ್ಲ. ನಾನಿಂದು ರೈಲಿನಲ್ಲಿ ಬೇರೆಡಿಗೆ ಹೊರಡಬೇಕಿದ್ದು, ಅದಕ್ಕೆ ಇನ್ನು ಸ್ವಲ್ಪ ಸಮಯವಿರುವುದರಿಂದ, ಸಂಘದ ಕಾರ್ಯದರ್ಶಿಯವರು ನನ್ನನ್ನು ಈ ಸಭೆಗೆ ಆಹ್ವಾನಿಸಿದರು . ಅದನ್ನು ಒಪ್ಪಿ ನಾನು ಉಪನ್ಯಾಸ ಕೇಳಿ ಹೋಗಲು ಬಂದೆ. ಆದರೆ, ಅವರು ದಿಢೀರನೆ ನಾನು ಸಭೆಯನ್ನು ಉದ್ದೇಶಿಸಿ ಮಾತನಾಡಬೇಕೆಂದು ಪ್ರೀತಿ ಪೂರ್ವಕ ಒತ್ತಾಯ ಹಾಕಿದರು. ಆದಕಾರಣ, ಸ್ವಲ್ಪ ಸಮಯ ಕೆಲವು ಮಾತುಗಳನ್ನಾಡುತ್ತೇನೆ. ನನ್ನ ಮಾತುಗಳಲ್ಲಿ ವ್ಯಕ್ತವಾಗುವ ವಿಚಾರಗಳು ನಿಮ್ಮ ಅಭಿಪ್ರಾಯಗಳಿಗೆ ಹೊಂದಿಕೊಳ್ಳದಿದ್ದರೆ ಯಾರು ಬೇಸರಿಸಬಾರದೆಂದು ತಮ್ಮೆಲ್ಲರನ್ನು ಕೇಳಿಕೊಳ್ಳುತ್ತೇನೆ.
ಕಾರಣವೆಂದರೆ, ಇಂದಿನ ವಿಷಯವಾದ 'ಸ್ವಾಭಿಮಾನ ಮತ್ತು ಬೌದ್ಧ ಧರ್ಮ' ಕುರಿತು ಮಾತನಾಡುವ ಸಂದರ್ಭದಲ್ಲಿ ನನ್ನ ಮನದಾಳದಲ್ಲಿರುವುದನ್ನು ನಾನು ವ್ಯಕ್ತಪಡಿಸಬೇಕಾಗುತ್ತದೆ. ಯಾವಾಗಲೂ ಕಟು ಸತ್ಯವೆಂಬುದು ಜನರಿಗೆ ಕಹಿಯಾದದು, ಅದು ಸತ್ಯಕ್ಕಿಂತಲೂ ಹೆಚ್ಚಿನ ಅತೃಪ್ತಿಯನ್ನು ತರುತ್ತದೆ. ಸತ್ಯವನ್ನು ಮರೆಮಾಚಿ ಮಾತನಾಡುವುದೆಂದರೆ, ಅದು ಯಾವಾಗಲೂ ಮಾತನಾಡುವವನಿಗೂ ಕೇಳುಗನಿಗೂ ಸಂತೃಪ್ತಿಯನ್ನೇ ನೀಡುವುದಾಗಿರುತ್ತದೆ. ಆದರೆ ಸತ್ಯವನ್ನು ಹೇಳುವಾಗ ಎಲ್ಲವನ್ನೂ ಸಂತೃಪ್ತಿಯ ಮೂಲಕ ನೋಡಲಾಗುವುದಿಲ್ಲವೆಂದು ನನಗೆ ಗೊತ್ತು. ಸಹೋದರರೇ! 'ಸ್ವಾಭಿಮಾನ ಮತ್ತು ಬೌದ್ಧ ಧರ್ಮ' ಕುರಿತು ಮಾತನಾಡುವಾಗ ನಾನು ಮುಖ್ಯವಾಗಿ ಹೇಳಬಯಸುವುದೇನೆಂದರೆ 'ಇಂತಹ ಧರ್ಮವೇ ಸ್ವಾಭಿಮಾನಿ ಧರ್ಮ' ಎಂಬುದನ್ನು ನಾನು ಯಾವ ಕಾಲಕ್ಕೂ ಹೇಳುವುದಿಲ್ಲ. ಹಾಗೆ ಒಪ್ಪಿಕೊಳ್ಳಲು ನನ್ನಿಂದ ಎಂದು ಸಾಧ್ಯವಿಲ್ಲ. 'ಇಂದು ಇರುವ ಯಾವ ಧರ್ಮವು ಬೇಕಿಲ್ಲ. ಅವು ಮನುಷ್ಯನಿಗೆ ಅಗತ್ಯವು ಅಲ್ಲ' ಎಂಬುದು ನಮ್ಮ ಸ್ವಾಭಿಮಾನಿ ಚಳುವಳಿಯ ಮುಖ್ಯ ಧ್ಯೇಯೋದ್ದೇಶ. ಆದುದರಿಂದ ಈ ಚಳುವಳಿ ಒಂದು ಧರ್ಮದೊಂದಿಗೆ ವಿಲೀನಗೊಳ್ಳುವುದು ಹೇಗೆ ಸಾಧ್ಯ ಎಂಬುದನ್ನು ನೀವೇ ಸ್ವಲ್ಪ ಯೋಚಿಸಿ ನೋಡಿ. ಯಾರೋ ಒಬ್ಬರು ಹೇಳಿದ್ದಾರೆ ಎಂಬುದಕ್ಕಾಗಿಯೇ ಯಾವುದನ್ನೂ ಯಾವ ಕಾಲದಲ್ಲೂ ಒಪ್ಪಿಕೊಳ್ಳಬಾರದು; ಅದು ಯಾರೇ ಹೇಳಿರುವ ವಿಚಾರವಾಗಿದ್ದರೂ ಅದನ್ನು ವಿಶ್ಲೇಷಿಸಿ ಹಾಗೂ ತಮ್ಮ ಅರಿವಿಗೆ ಒಪ್ಪಿತವಾದುದೆ ಎಂದು ಕಂಡುಕೊಂಡ ನಂತರವೇ ಒಪ್ಪಿಕೊಳ್ಳಬೇಕು ಎಂಬುದೇ ಸ್ವಾಭಿಮಾನಿ ಚಳುವಳಿಯ ಮುಖ್ಯ ಆಶಯ. ಇದು ಯಾವುದೇ ವ್ಯಕ್ತಿಯನ್ನು ಹೀಗೆ ಪರೀಕ್ಷಿಸಿದ ನಂತರವೇ ಒಪ್ಪಬೇಕೆಂದು ಸೂಚಿಸುತ್ತದೆ.
ಅಲ್ಲದೆ, ಅದು ತನ್ನ ಧ್ಯೇಯೋದ್ದೇಶದೊಂದಿಗೆ ಸಮೀಕರಿಸಿಕೊಂಡು ಹಾಗೂ ಅದರ ನಿಬಂಧನೆಗಳಿಗೆ ಒಳಪಟ್ಟು ಯಾರು ಏನನ್ನೇ ಹೇಳಿದರು ಅದರ ಬಗ್ಗೆ ಮುಕ್ತ ಚಿಂತನೆ ಮಾಡುತ್ತದೆ. ಹೀಗಿಲ್ಲದೆ, ಯಾವ ಧರ್ಮವೇ ಆಗಲಿ ಇಲ್ಲವೇ ಯಾವ ವ್ಯಕ್ತಿಯೇ ಆಗಲಿ, ತನ್ನ ಧ್ಯೇಯೋದ್ದೇಶವನ್ನು ಹಾಗೂ ತಾನು ಹೇಳುತ್ತಿರುವ ದೊಡ್ಡವರಿಂದ ಬಂದಂಥ ವಿಚಾರವನ್ನು ಯಾರು ಪರೀಕ್ಷಿಸದೆ, ಸಂಶಯಿಸದೆ ಒಪ್ಪಬೇಕು ಎಂದರೆ ಅದೆಂತಹ ಮುಖ್ಯವಾದ ವಿಚಾರವಾಗಿದ್ದರೂ ಸ್ವಾಭಿಮಾನಿ ಚಳುವಳಿ ಅದನ್ನೇಂದೂ ಒಪ್ಪುವುದಿಲ್ಲ.
ಅಲ್ಲದೆ, ಭಗವಂತನು ಹೇಳಿದನು, ಅವತಾರ ಪುರುಷರು ಹೇಳಿದರು, ಧರ್ಮದೂತರು ಹೇಳಿದರು ಎಂದೆನ್ನುತ್ತ ಅವರು ಹೇಳಿರುವ ವಿಚಾರಗಳನ್ನು ತನ್ನ ಅರಿವಿಗೆ ತಾಳೆ ಮಾಡಿ ನೋಡದೆ ಕಣ್ಮುಚ್ಚಿ ಒಪ್ಪಿಕೊಂಡಿರುವವರು ಯಾರೇ ಆಗಿದ್ದರೂ ಅವರು ತಾವು ಸಹ ಸ್ವಾಭಿಮಾನಿ ಚಳುವಳಿಯಲ್ಲಿ ಭಾಗಿಯಾಗಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಪ್ರಾಚೀನ ಅಭಿಪ್ರಾಯಗಳೆಂದು ಇವೆಯೋ ಅವನ್ನು ಆದ್ಯಂತವಾಗಿ ಒರೆಗೆ ಹಚ್ಚಿ ನೋಡಬೇಕು. ಹೀಗೆ ವರೆಗೆ ಹಚ್ಚುವ ಅಥವಾ ಸಂಶೋಧನೆಯ ಪ್ರಕ್ರಿಯೆಯನ್ನು ಕಿಂಚಿತ್ತು ಹೆದರದೆ, ಪಕ್ಷಪಾತತನ ತೋರದೆ ಮಾಡಬೇಕು. ಈ ಬಗೆಯಲ್ಲಿ ಸಂಶೋಧನೆ ಮಾಡಲು ಹಿಂಜರಿಯುವವರು ಯಾರೇ ಆಗಿದ್ದರೂ ಅವರು ಹೇಡಿಗಳೇ ಸರಿ.
ನಾವು ನಮ್ಮ ಪೂರ್ವಕರಿಗಿಂತ ಹೆಚ್ಚಿನ ತಿಳುವಳಿಕೆಯನ್ನು ಹೊಂದಿದ್ದೇನೆ ಎನ್ನುವುದು ಸಂಶಯಕ್ಕೆ ಎಡೆ ಇಲ್ಲದ ವಿಚಾರವಾಗಿದೆ. ಈಗಿನ ಪೀಳಿಗೆಗೆ ಹೊಸ ಅರಿವನ್ನು ಪಡೆದುಕೊಳ್ಳಲು ಹಾಗೂ ವಿಚಾರಗಳ ಮಂಥನ ನಡೆಸಲು ಹಿಂದಿನವರಿಗಿಂತ ಹೆಚ್ಚಿನ ಸ್ವಾತಂತ್ರ್ಯ ಹಾಗೂ ಸೌಕರ್ಯವನ್ನು ಹೊಂದಿದೆ ಎನ್ನುವುದು ಒಂದು ಚಿಕ್ಕ ಮಗುವಿಗೂ ಗೊತ್ತಿರುವ ವಿಚಾರವೇ. ಇಷ್ಟಲ್ಲದೇ, ಇವತ್ತಿನ ಕಾಲವು ವಿವಿಧ ಅನುಭವಗಳ ಕ್ರೂಢೀಕರಣದಿಂದಾಗಿ ಹೊಸ ಹೊಸ ತತ್ವ ಸಿದ್ಧಾಂತಗಳು ರೂಪುಗೊಳ್ಳುತ್ತಿರುವ ಕಾಲವಾಗಿದೆ. ಇಂದಿನ ಪೀಳಿಗೆಯ ಮಕ್ಕಳು ಪ್ರಗತಿಪರ, ವಿಶಾಲ ಅರಿವು ಹೊಂದಿರುವ ಸಂತತಿಯಲ್ಲಿ ಹುಟ್ಟುತ್ತಿರುವವರಾಗಿದ್ದು ಅವರಲ್ಲಿ ಸ್ವಾಭಾವಿಕವಾಗಿಯೇ ಈ ಸಕರಾತ್ಮಕ ನಿಲುವುಗಳು ಮೂಡುತ್ತಿವೆ.
ಹೀಗಾಗಿ, ನಾವು ನಮ್ಮ ಪೂರ್ವಕರಿಗಿಂತಲೂ ಯಾವ ಬಗೆಯಲ್ಲೂ ಅರಿವನ್ನು ಪಡೆಯುವದರಲ್ಲಾಗಲಿ , ಅಥವಾ ವಿಸ್ಲೇಷಣೆ ಮಾಡುವುದರಲ್ಲಾಗಲಿ ಕಡಿಮೆಯಾದವರಲ್ಲ ಎಂಬ ಆತ್ಮವಿಶ್ವಾಸವನ್ನು ಹೊಂದಿರಬೇಕು. ಕಾಲ ತರುವ ಮಾರ್ಪಾಡುಗಳಿಗೆ ತಕ್ಕಂತೆ ದೃಷ್ಟಿಕೋನಗಳಿಗೆ ತಕ್ಕಂತೆ, ನಮ್ಮ ಚಿಂತನೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಹಕ್ಕು ಇರುವವರು ಹಾಗೂ ಅದು ಅಗತ್ಯವೂ ಕೂಡ ಎಂಬುದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು.
ಈ ಹಿನ್ನಲೆಯಿಂದ ನೋಡುವುದಾದರೆ, ನಮ್ಮ ಪೂರ್ವಿಕರು ಹೇಳಿರುವ ವಿಚಾರಗಳಿಗೆ ಎಷ್ಟು ಮಾನ್ಯತೆ ಕೊಡಬಹುದು ಎಂಬುದು ಸ್ಪಷ್ಟವಾಗಿ ಗೊತ್ತಾಗಿ ಬಿಡುತ್ತದೆ, ಇರಲಿ.
ಮತ್ತೊಂದು ಮಾತಂದರೆ, ಪೂರ್ವಿಕರು ವ್ಯಕ್ತ ಮಾಡಿರುವ ವಿಚಾರಗಳಿಗೆ ನಮ್ಮ ಅಭಿಪ್ರಾಯಗಳು ಹೊಂದಿಕೆಯಾಗುತ್ತವೆಯೇ ಎಂಬುದನ್ನು ತುಲನೆ ಮಾಡಿದ ನಂತರವೇ ನಮ್ಮ ಅಭಿಪ್ರಾಯಗಳನ್ನು ದೃಢಪಡಿಸಿಕೊಳ್ಳಬೇಕು ಎಂಬ ಮನೋಭಾವನೆಯನ್ನು ಬೇರು ಸಹಿತ ಕಿತ್ತೊಗೆಯಬೇಕು.
ಏಕೆಂದರೆ, ಪೂರ್ವಿಕರ ಅಭಿಪ್ರಾಯ ಎಂಬ ಕಾರಣಕ್ಕಾಗಿ ನಾವು ಯಾವುದಕ್ಕೂ ಗುಲಾಮರಾಗಬಾರದು. ನಾವು ಪೂರ್ವಿಕರ ಚಿಂತನೆಗಳಿಗೆ ಗುಲಾಮರಂತೆ ತಲೆಬಾಗಿದರೆ ಸತ್ಯ ಮತ್ತು ಅರಿವಿನ ಬೆಳವಣಿಗೆಯನ್ನು ನಾವು ಸಂಪೂರ್ಣವಾಗಿ ಕೊಂದವರಾಗುತ್ತೇವೆ. ಆದಕಾರಣ 'ಬೌದ್ಧ ಧರ್ಮವೇ ಸ್ವಾಭಿಮಾನ ಚಳುವಳಿ' ಎಂದು ಯಾರೂ ಹೇಳಬಾರದೆಂದು ತಿಳಿಸಲು ಬಯಸುತ್ತೇನೆ. ಉದಾಹರಣೆಯಾಗಿ, ಬೌದ್ಧ ಧರ್ಮದಲ್ಲಿ ದೇವರಿಲ್ಲ, ಆತ್ಮವಿಲ್ಲ, ಶಾಶ್ವತತೆ ಇಲ್ಲ ಎಂಬ ಬೋಧನೆ ಉಂಟೇಂದು ಹೇಳುತ್ತಿದ್ದಾರೆ. ಇದನ್ನು ಬುದ್ಧ ಹೇಳಿದ್ದಾನೆ ಎಂದು ಹೇಳುತ್ತಾರೆ. ಇವುಗಳನ್ನು ಸತ್ಯವೆಂದೇ ಪರಿಗಣಿಸೋಣ. ಇಂತಹ ಬೋಧನೆಗಳನ್ನು ಬುದ್ಧ ಹೇಳಿದರು ಎಂಬ ಕಾರಣಕ್ಕಾಗಿ ಅರಿವನ್ನು ಹೊಂದಿದ್ದರೂ, ಬಂದಿಲ್ಲದಿದ್ದರೂ ಬೌದ್ಧರು ಒಪ್ಪಿಕೊಳ್ಳಬೇಕಾದವರಾಗಿರುತ್ತಾರೆ. ಇದೇ ರೀತಿ ಇತರೆ ಮತದವರು ದೇವರುಂಟು, ಆತ್ಮ ಶಾಶ್ವತ, ಮಾನವನನ್ನು ತನ್ನ ಮರಣದ ನಂತರ ದೇವರಿಂದ ವಿಚಾರಣೆಗೆ ಒಳಪಟ್ಟು ಅವನು ಮಾಡಿರುವ ಪಾಪ ಅಥವಾ ಪುಣ್ಯದ ಕಾರ್ಯಗಳಿಗೆ ತಕ್ಕಂತೆ ನರಕ ಅಥವಾ ಮೋಕ್ಷ (ಸನ್ಮಾನ ,ಧಂಡನೆ) ವನ್ನು ಪಡೆಯುತ್ತಾನೆ ಎಂಬ ವಿಚಾರಗಳನ್ನು ನಂಬಿಕೊಂಡಿರುತ್ತಾರೆ. ಈ ಎರಡೂ ವಿಭಿನ್ನ ನಿಲುವಿನವರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಮ್ಮ ತಮ್ಮ ತಿಳುವಳಿಕೆ, ವಿಶ್ಲೇಷಣೆ, ಮೊದಲಾದವುಗಳ ಆಧಾರದಲ್ಲಿ ಹೊಂದಿದ್ದಾರೆ ಎನ್ನುವುದಾದರೆ ಈ ಇಬ್ಬರೂ ಸ್ವಾಭಿಮಾನಿ ಚಳುವಳಿಗಾರರೇ ಆಗಿರುತ್ತಾರೆ.
ಏಕೆಂದರೆ, ಪೂರ್ವಿಕರ ಮಾತು ಎಂಬ ಕಾರಣಕ್ಕಾಗಿ ಪ್ರಶ್ನೆ ಮಾಡದೆ ಒಪ್ಪಿಕೊಂಡಿಲ್ಲದ ಅವರು ತಾವು ಗಳಿಸಿರುವ ಅರಿವು ತಮ್ಮ ವಿಶ್ಲೇಷಣೆಯ ಫಲದಿಂದ ಎಂದು ಹೇಳಬಲ್ಲವರಾಗಿರುತ್ತಾರೆ. ಆದ ಕಾರಣ ಅವರು ಸ್ವಾಭಿಮಾನಿಗಳಾಗಿರುತ್ತಾರೆ.
ಉದಾಹರಣೆಯಾಗಿ, ಬೌದ್ಧ ಧರ್ಮೀಯನೊಬ್ಬನು ಬಹಿರಂಗವಾಗಿ ದೇವರಿಲ್ಲ ಎಂದು ಹೇಳುತ್ತಾ ಅಂತರಂಗದಲ್ಲಿ ತನ್ನ ಹೇಳಿಕೆಯ ಬಗ್ಗೆ ಸಂದೇಹ ಉಳ್ಳವನಾಗಿದ್ದರೆ ಅವನು ತನ್ನನ್ನು ತಾನು ಬೌದ್ಧ ಧರ್ಮೀಯನೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ ಒಬ್ಬ ಹಿಂದೂ, ಒಬ್ಬ ಮುಸ್ಲಿಂ ಅಥವಾ ಒಬ್ಬ ಕ್ರಿಶ್ಚಿಯನ್ ದೇವರಿದ್ದಾನೆ ಎಂದೆನ್ನುವ ಧಾರ್ಮಿಕ ವ್ಯಕ್ತಿಯಾಗಿದ್ದುಕೊಂಡು ಆ ನಿಟ್ಟಿನ ಕಟ್ಟುಪಾಡುಗಳಿಗೆ ಒಳಪಡದೆ ಇದ್ದರೆ ಅವನು ತಾನು ಒಪ್ಪಿಕೊಂಡ ತತ್ವಗಳಲ್ಲಿ ನಂಬಿಕೆ ಇಲ್ಲದವನಾಗಿರುತ್ತಾನೆ. ಈ ದೃಷ್ಟಿಯಿಂದ ಈ ಇಬ್ಬರು ಸ್ವಾಭಿಮಾನಿಗಳಲ್ಲ.
ಏಕೆಂದರೆ, ಅವರು ತಮ್ಮ ಅರಿವು ಹಾಗೂ ಅನುಭವಗಳಿಗೆ ವಿರುದ್ಧವಾದ ನಂಬಿಕೆಯನ್ನು ಹೊಂದಿದವರಾಗಿರುತ್ತಾರೆ. ಹೀಗಾಗಿ, ಈ ಎರಡು ಗುಂಪುಗಳಲ್ಲಿನ ಸ್ವಾಭಿಮಾನಿಗಳು ಯಾರೆಂದರೆ ತಮ್ಮ ಚಿಂತನೆಗಳು, ತಾವು ಕಂಡುಕೊಂಡ ಸತ್ಯಗಳು ಪೂರ್ವಿಕರ ಹೇಳಿಕೆಗಳೊಂದಿಗೆ ಹೊಂದಿಕೊಂಡರೆ ಮಾತ್ರ ಪೂರಕವಾದ ಮಾತುಗಳನ್ನು ಬೆಂಬಲಿಸುತ್ತಾರೆ. ಹೀಗಲ್ಲದೆ, ಪೂರ್ವಿಕರ ಹೇಳಿಕೆಗೆ ತಾವೇ ಸತ್ಯಗಳನ್ನು ಜೋಡಿಸಿ, ಅದಕ್ಕೆ ಬೆಂಬಲವಾಗಿ ತಮ್ಮ ಸತ್ಯವಿರುತ್ತದೆ ಎಂದು ಭಾವಿಸುವವರು ಸ್ವಾಭಿಮಾನಿಗಳಾಗಿರುವುದಿಲ್ಲ.
ಹೀಗಾಗಿ, ನೀವು ಎಂತಹ ಸಿದ್ಧಾಂತಗಳನ್ನು ಸ್ವೀಕರಿಸಿದವರಾಗಿದ್ದರೂ, ಅದರಲ್ಲಿ ಎಷ್ಟೇ ಸತ್ಯ ಇರುವುದಾಗಿದ್ದರೂ ಅದರ ಕುರಿತು ನಿಮಗೆ ಸ್ಪಷ್ಟ ಚಿಂತನೆ ಇದೆಯೇ? ನಿಮ್ಮ ಅನುಭವಕ್ಕೆ ಅದು ಸರಿ ಕಂಡಿದೆಯೇ? ಅಥವಾ ಆ ತತ್ವಗಳನ್ನು ಧಾರ್ಮಿಕ ನಾಯಕರು ಹೇಳಿದ್ದಾರೆ ಎಂಬ ಕಾರಣಕ್ಕಾಗಿ ನಂಬಿದ್ದೀರಾ? ಇವುಗಳ ಆದರದ ಮೇಲೆ ನಿಮ್ಮ ಧರ್ಮಕ್ಕೂ ತತ್ವಕ್ಕೂ ಗೌರವ ಸಿಗುತ್ತದೆ.
*****************************************
(ಚೆನ್ನೈನ ಮೌಂಟ್ ರೋಡ್ ನಲ್ಲಿರುವ ಬೌದ್ಧ ಧರ್ಮ ಸಂಘದಲ್ಲಿ ೨೨.೦೩.೧೯೩೧ ರಲ್ಲಿ ಮಾತನಾಡಿದ್ದು)
(ಕುಡಿಯರಸು' ಪತ್ರಿಕೆಯಲ್ಲಿ ಪ್ರಕಟವಾದ ದಿನ ೨೯.೦೩.೧೯೩೧)
ಅನು: ಎಸ್.ಶಿವಲಿಂಗಂ.
No comments:
Post a Comment