Thursday, 1 June 2023

ಪ್ರಾಚೀನ ರಾಜ್ಯ ವ್ಯವಸ್ಥೆ:ಆರ್ಯ ಸಮಾಜದ ಸ್ಥಿತಿ

ಪ್ರಾಚೀನ ರಾಜ್ಯ ವ್ಯವಸ್ಥೆ:ಆರ್ಯ ಸಮಾಜದ ಸ್ಥಿತಿ

ಬೌದ್ಧ ಧರ್ಮವು ಒಂದು ಕ್ರಾಂತಿಯಾಗಿತ್ತು. ಅದು ಫ್ರೆಂಚ್ ಮಹಾಕ್ರಾಂತಿಯಂತೆಯೇ ಇರುವ ಒಂದು ಮಹಾಕ್ರಾಂತಿ. ಮೊದಲಿಗೆ ಒಂದು ಧಾರ್ಮಿಕ ಕ್ರಾಂತಿಯ ರೀತಿಯಲ್ಲಿ ಪ್ರಾರಂಭವಾದರೂ, ಅದು ಧಾರ್ಮಿಕ ಕ್ರಾಂತಿಯನ್ನು ಮೀರಿ ಬೆಳೆಯಿತು. ಸಾಮಾಜಿಕ ಹಾಗೂ ರಾಜಕೀಯ ಕ್ರಾಂತಿಯಾಗಿ ಮಾರ್ಪಟ್ಟಿತು. ಇಂಥ ಕ್ರಾಂತಿಯ ಸ್ವರೂಪದ ಮಹತ್ವವನ್ನು ತಿಳಿಯಬೇಕಾದರೆ, ಕ್ರಾಂತಿ ಪ್ರಾರಂಭವಾಗುವ ಮೊದಲಿಗೆ ಇದ್ದ ಸಮಾಜದ ಸ್ಥಿತಿಯನ್ನು ತಿಳಿಯುವುದು ಅವಶ್ಯಕ. ಫ್ರೆಂಚ್ ಕ್ರಾಂತಿಯ ಭಾಷೆಯನ್ನೇ ಬಳಸುವುದಾದರೆ, ಭಾರತದ ಪ್ರಾಚೀನ ವ್ಯವಸ್ಥೆಯ ಒಂದು ಚಿತ್ರವನ್ನು ಮೊದಲು ಕಲ್ಪಿಸಿಕೊಳ್ಳುವುದು ಅವಶ್ಯಕ.

ತನ್ನ ಉಪದೇಶಗಳಿಂದ ಬುದ್ಧನು ತಂದ ಮಹಾ ಸುಧಾರಣೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಅವನು ತನ್ನ ಉಧಿಷ್ಟ ಕಾರ್ಯವನ್ನು ಪ್ರಾರಂಭ ಮಾಡುವ ಹೊತ್ತಿಗೆ ಆರ್ಯ ನಾಗರಿಕತೆಯು ಎಂತ ಅವನತಿ ಸ್ಥಿತಿಯನ್ನು ತಲುಪಿತು ಎಂಬುದರ ಕಲ್ಪನೆ ಒಂದಿಷ್ಟಾದರೂ ನಮಗೆ ಇರಬೇಕು.

ಅವನ ಕಾಲದ ಆರ್ಯ ಸಮುದಾಯವು ಸಾಮಾಜಿಕವಾಗಿ ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಅತ್ಯಧಮ ರೀತಿಯ ವಿಷಯಲಂಪಟತೆಯಲ್ಲಿ ಮುಳುಗಿಹೋಗಿತ್ತು.

ಸಾಮಾಜಿಕ ಅನಿಷ್ಟಗಳಲ್ಲಿ ಕೆಲವೇ ಕೆಲವು ಮಾತ್ರ ಹೆಸರಿಸುವುದಾದರೆ, ದ್ಯೂತವನ್ನು ಗಮನಿಸಬಹುದು. ಮದ್ಯಪಾನದಂತೆಯೇ ದ್ಯೂತವು ಆರ್ಯರಲ್ಲಿ ಬಹಳ ಪ್ರಚಲಿತವಾಗಿತ್ತು.

ಪ್ರತಿಯೊಬ್ಬ ರಾಜನ ಅರಮನೆಗೆ ಹೊಂದಿಕೊಂಡಂತೆ ಒಂದು ದ್ಯುತ ಗೃಹವಿರುದಿತ್ತು. ಪ್ರತಿಯೊಬ್ಬ ರಾಜನು ತನ್ನ ಜೊತೆ ಆಡಲು ಒಬ್ಬ ನಿಷ್ಣಾತ ಜುಗಾರನನ್ನು ನಿಯಮಿಸಿಕೊಂಡಿರುತ್ತಿದ್ದನು. ರಾಜನಾದ ವಿರಾಟನು ತನ್ನ ಉಳಿಗದಲ್ಲಿ ಕಂಕ ಎಂಬ ನಿಷ್ಣಾತ  ಜೂಜುಗಾರರನ್ನು ಇಟ್ಟುಕೊಂಡಿದ್ದನು. ರಾಜರುಗಳಿಗೆ ದ್ಯೂತವು ಕೇವಲ ವಿನೋದ ವಿಷಯವಾಗಿರಲಿಲ್ಲ. ಅವರು ದೊಡ್ಡ ದೊಡ್ಡ ಪಣಗಳನ್ನು ಹಚ್ಚಿ ಆಡುತ್ತಿದ್ದರು. ತಮ್ಮ ರಾಜ್ಯಗಳನ್ನು, ಆಶ್ರಿತರನ್ನು, ಬಂಧುಗಳನ್ನು, ಗುಲಾಮರನ್ನು ಹಾಗೂ ಸೇವಕರನ್ನು ಪಣಕ್ಕೆ ಒಡ್ಡುತ್ತಿದ್ದರು. ನಳ ಮಹಾರಾಜನು ಪುಷ್ಕರನೋಡನೆ ದ್ಯುತವಾಡುವಾಗ ಎಲ್ಲವನ್ನು ಪಣಕಿಟ್ಟು ಸೋತನು. ಅವನು ತನ್ನನ್ನು ಮತ್ತು ತನ್ನ ಹೆಂಡತಿ ದಮಯಂತಿಯನ್ನು ಮಾತ್ರ ಪಣಕ್ಕಿಡಲಿಲ್ಲ. ನಳನು ಅಡವಿಗೆ ಹೋಗಿ ಭಿಕ್ಷುಕನಂತೆ ಜೀವಿಸಬೇಕಾಯಿತು. ನಳನನ್ನು ಮೀರಿಸಿದ ರಾಜರು ಇದ್ದರು. ಪಾಂಡವರಲ್ಲಿ ಹಿರಿಯನಾದ ಧರ್ಮರಾಯನು ದ್ಯೂತದಲ್ಲಿ ಸರ್ವಸ್ವವನ್ನು, ತನ್ನ ಸಹೋದರರನ್ನೂ ತನ್ನ ಮತ್ತು ಸಹೋದರರೆಲ್ಲರ  ಪತ್ನಿಯಾದ ದ್ರೌಪದಿಯನ್ನೂ, ಹೇಗೆ ಜೂಜಿಗೊಡ್ಡಿದನೆಂಬುದನ್ನು ಮಹಾಭಾರತವು ತಿಳಿಸುತ್ತದೆ. ಆರ್ಯರಿಗೆ ದ್ಯುತವು ಒಂದು ಗೌರವದ ಪ್ರಶ್ನೆಯಾಗಿತ್ತು. ದ್ಯೂತಕ್ಕೆ ಆಮಂತ್ರಿಸುವುದು ಒಬ್ಬನ ಗೌರವ ಹಾಗೂ ಪ್ರತಿಷ್ಠೆಗೆ ಒಡ್ಡಿದ ಸವಾಲ್ ಎಂದು ತಿಳಿಯಲಾಗಿತ್ತು. ಜೂಜಿನ ಅನರ್ಥಕಾರಿ ಪರಿಣಾಮಗಳ ಬಗೆಗೆ ಮೊದಲೇ ಎಚ್ಚರಿಕೆ ಕೊಟ್ಟಿದ್ದರೂ ಧರ್ಮರಾಯನು ದ್ಯೂತವಾಡಿದನು. ಅವನು ಹೇಳಿದ ಸಮಾಧಾನವೆಂದರೆ ಅವನನ್ನು ದ್ಯೂತಕ್ಕೆ ಆಮಂತ್ರಿಸಲಾಗಿತ್ತು ಮತ್ತು ಹಾಗೆ ಆಮಂತ್ರಿಸಿದ ಮೇಲೆ ಗೌರವಸ್ಥನಾದ ತಾನು ಅಂಥ ಆಮಂತ್ರಣವನ್ನು ನಿರಾಕರಿಸುವುದು ಸಾಧ್ಯವಿರಲಿಲ್ಲ.

ದ್ಯೂತದ ಈ ದುಷ್ಟ ಚಟವು ರಾಜರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಶ್ರೀಸಾಮಾನ್ಯರಿಗೂ ಈ ಸೋಂಕು ಬಡಿದಿತ್ತು. ದ್ಯೂತದಿಂದ ಹಾಳಾದ ಬಡ ಆರ್ಯನೊಬ್ಬನ ಪ್ರಲಾಪ 'ಋಗ್ವೇದ'ದಲ್ಲಿದೆ. ಕೌಟಿಲ್ಯನ ಕಾಲದಲ್ಲಿ ಜೂಜು ಎಷ್ಟೊಂದು ಸಾಮಾನ್ಯವಾಗಿತ್ತೆಂದರೆ ರಾಜನ ಪರವಾನಗಿ ಪಡೆದ ದ್ಯುತಗೃಹಗಳು ಇರುತ್ತಿದ್ದವು ಮತ್ತು ಅವುಗಳಿಂದ ರಾಜನಿಗೆ ಸಾಕಷ್ಟು ಆದಾಯ ಬರುತ್ತಿತ್ತು.

ಆರ್ಯರಲ್ಲಿ ಬಹಳವಾಗಿ ಪ್ರಚಲಿತವಾಗಿದ್ದ ಇನ್ನೊಂದು ದೃಷ್ಟ ಚಟವೆಂದರೆ ಮದ್ಯಪಾನ. ಮದ್ಯಪಾನಗಳಲ್ಲಿ ಸೋಮ ಮತ್ತು ಸುರ ಎಂಬ ಎರಡು ಪ್ರಕಾರಗಳು. ಸೋಮವು ಯಜ್ಞಗಳಲ್ಲಿ ಬಳಸುವ ಮದ್ಯವಾಗಿತ್ತು. ಮೊದಲು ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರಿಗೆ ಮಾತ್ರ ಸೋಮಪಾನ ಮಾಡಲು ಅನುಮತಿ ನೀಡಲಾಗಿತ್ತು. ಅನಂತರ ಬ್ರಾಹ್ಮಣರು ಮತ್ತು ಕ್ಷತ್ರಿಯರಿಗೆ ಮಾತ್ರ ಒಪ್ಪಿಗೆ ನೀಡಲಾಯಿತು. ವೈಶ್ಯ ರನ್ನು ಸೋಮಪಾನದಿಂದ ಹೊರಗಿಡಲಾಯಿತು. ಶೂದ್ರರು ಎಂದು ಅದರ ರುಚಿ ನೋಡುವಂತಿರಲಿಲ್ಲ. ಸೋಮರಸವನ್ನು ತಯಾರಿಸುವ ರಹಸ್ಯ ಬ್ರಾಹ್ಮಣರಿಗೆ ಮಾತ್ರ ತಿಳಿದಿತ್ತು. ಆದರೆ ಸುರಪನ ಎಲ್ಲರಿಗೂ ಮುಕ್ತವಾಗಿತ್ತು, ಅಲ್ಲದೆ ಎಲ್ಲರೂ ಅದನ್ನು ಕುಡಿಯುತ್ತಿದ್ದರು. ಬ್ರಾಹ್ಮಣರೂ ಸುರಪಾನ ಮಾಡುತ್ತಿದ್ದರು. ಅಸುರರ ಗುರುವಾದ ಶುಕ್ರಾಚಾರ್ಯನು ಎಷ್ಟು ಅತಿಶಯವಾಗಿ ಕುಡಿದಿದ್ದನೆಂದರೆ ಅವನು ತನಗೊಬ್ಬನಿಗೆ ಮಾತ್ರ ತಿಳಿದಿದ್ದ ಹಾಗೂ ದೇವರಿಂದ ಹತರಾದ ಅಸುರರನ್ನು ಪುನಃ ಬದುಕಿಸುವ ಜೀವದಾನ ಶಕ್ತಿಯನ್ನು ಹೊಂದಿದ್ದ - ಮಂತ್ರವನ್ನು ದೇವರುಗಳ ಗುರುವಾರ ಬ್ರಹಸ್ಪತಿಯ ಮಗ ಕಚನಿಗೆ ಸುರೆಯ ಅಮಲಿನಲ್ಲಿ ಕೊಟ್ಟುಬಿಟ್ಟನು. ಕೃಷ್ಣ ಮತ್ತು ಅರ್ಜುನರು ಒಂದು ಪ್ರಸಂಗದಲ್ಲಿ ಬಹಳಷ್ಟು ಮದ್ಯಪಾನ ಮಾಡಿ ಎಚ್ಚರ ತಪ್ಪಿದ್ದರೆಂದು 'ಮಹಾಭಾರತ'ದಲ್ಲಿ ಹೇಳಿದೆ. ಆರ್ಯರ ಸಮಾಜದಲ್ಲಿ ಉತ್ತಮರಲ್ಲಿ ಉತ್ತಮರೂ ಕೂಡ ಮದ್ಯಪಾನದಿಂದ ಮುಕ್ತರಾಗಿರಲಿಲ್ಲ ಎಂಬುದೂ, ಅವರ ವಿಪರೀತವಾಗಿ ಕುಡಿಯುತ್ತಿದ್ದರೆಂಬುದೂ ಇದರಿಂದ ತಿಳಿಯುತ್ತದೆ. ಆದರೆ ಇವೆಲ್ಲಕ್ಕಿಂತ ಲಜ್ಜಾಸ್ಪದವಾದ ವಿಷಯವೇನೆಂದರೆ ಆರ್ಯ ಸ್ತ್ರೀಯರೂ ಕೂಡ ಮದ್ಯಪಾನ ವ್ಯಸನಿಗಳಾಗಿದ್ದರು, ಉದಾಹರಣೆಗೆ, ವಿರಟರಾಜನ ಹೆಂಡತಿ ಸುದೇಷ್ಣೆಯು ತಾನು ಸೆರೆಕುಡಿಯದೆ ಹತಾಶಳಾಗಿರುವುದರಿಂದ ಕೀಚಕನ ಅರಮನೆಗೆ ಹೋಗಿ ಮದ್ಯವನ್ನು ತರಲು ತನ್ನ ಸೇವೆಕಿಯಾದ ಸೈರಂಧ್ರಿಗೆ ಹೇಳುತ್ತಾಳೆ. ಮದ್ಯಪಾನದ ಗೀಳು ಎಲ್ಲ ವರ್ಗದ ಸ್ತ್ರೀಯರಲ್ಲಿಯೂ ಪ್ರಚಲಿತವಾಗಿತ್ತು. ಬ್ರಾಹ್ಮಣ ಸ್ತ್ರೀಯರೂ ಇದರಿಂದ ಮುಕ್ತರಾಗಿರಲಿಲ್ಲ. ಆರ್ಯಸ್ತ್ರಿಯರು ಮದ್ಯಪಾನ ಮತ್ತು ನೃತ್ಯಗಳಲ್ಲಿ ಆಸಕ್ತರಾಗಿದ್ದರೆಂಬುದನ್ನು 'ಕೌಷೀತಕೀ ಗೃಹ್ಯಸೂತ್ರ ' ೧೧-೧೨ ರಲ್ಲಿ ಹೇಳಿದ ಮಾತಿನಿಂದ ಸ್ಪಷ್ಟವಾಗುತ್ತದೆ; "ವಿವಾಹ ಸಮಾರಂಭದ ಮುನ್ನ ರಾತ್ರಿ ವಿಧವೆಯರಲ್ಲದ ನಾಲ್ಕು ಅಥವಾ ಎಂಟು ಜನ ಸ್ತ್ರೀಯರು ಮದ್ಯಪಾನ ಮತ್ತು ಸಮೀಚೀನಾ ಭೋಜನದ ಅನಂತರ , ನಾಲ್ಕು ಸಲ ನೃತ್ಯ ಮಾಡುವರು."

ಆರ್ಯ ಸಮಾಜದ ಲೈಂಗಿಕ ಅನೈತಿಕತೆಯು ಈಗಿರುವ ಅವನ ವಂಶಜರಿಗೆ ಆಘಾತವನ್ನು ಉಂಟುಮಾಡುವಂತಿದೆ. ಬುದ್ಧ ಪೂರ್ವಕಾಲದ ಆರ್ಯರಿಗೆ ಈಗಿನವರಿಗೆ ಇರುವಂತೆ ಲೈಂಗಿಕ ಮತ್ತು ವೈವಾಹಿಕ ಸಂಬಂಧಗಳ ವಿಷಯದಲ್ಲಿ ನಿಷಿದ್ಧ ಬಾಂಧವ್ಯದ ತಲೆಮೊರೆಗಳ ನಿಯಮಗಳು ಇರಲಿಲ್ಲ.

ಆರ್ಯ ಪುರಾಣ ಸಾಹಿತ್ಯದ ಪ್ರಕಾರ , ಬ್ರಹ್ಮನು ಸೃಷ್ಟಿಕರ್ತ ; ಬ್ರಹ್ಮನಿಗೆ ಮೂವರು ಗಂಡು ಮಕ್ಕಳು ಒಬ್ಬ ಮಗಳು ಇದ್ದರು. ಗಂಡು ಮಕ್ಕಳಲ್ಲಿ ಒಬ್ಬನಾದ ದಕ್ಷನು ತನ್ನ ಸಹೋದರಿಯನ್ನು ಮದುವೆಯಾಗಿದ್ದನು. ಈ ಸಹೋದರ - ಸಹೋದರಿಯರ ವಿವಾಹದಿಂದ ಹುಟ್ಟಿದ ಪುತ್ರಿಯರಲ್ಲಿ ಕೆಲವರು ಬ್ರಹ್ಮನ ಮಗನಾದ ಮರೀಚಿಯ ಮಗ ಕಾಶ್ಯಪನನ್ನು ಮದುವೆಯಾದರೆ, ಕೆಲವರು ಬ್ರಹ್ಮನ ಮೂರನೇ ಮಗನಾದ ಧರ್ಮನನ್ನು ಮದುವೆಯಾದರು.

'ಋಗ್ವೇದ'ದಲ್ಲಿ ಯಮ ಮತ್ತು ಯಮಿ ಎಂಬ ಸಹೋದರ ಸಹೋದರಿಯರಿಗೆ ಸಂಬಂಧಿಸಿದ ಒಂದು ಪ್ರಸಂಗವನ್ನು ಹೇಳಲಾಗಿದೆ. ಈ ಉಪಾಖ್ಯಾನದಂತೆ ಯಮಿಯು ತನ್ನ ಸಹೋದರ ಯಮನನ್ನು ತನ್ನೊಡನೆ ಸಮಾಗಮಿಸುವಂತೆ ಕೇಳಿಕೊಳ್ಳುತ್ತಾಳೆ. ಮತ್ತು ಅವನು ಹಾಗೆ ಮಾಡಲು ನಿರಾಕರಿಸಿದಾಗ ಕೋಪೋದ್ರಿಕ್ತಳಾಗುತ್ತಾಳೆ.

ತಂದೆಯು ತನ್ನ ಮಗಳನ್ನು ವಿವಾಹವಾಗಬಹುದಿತ್ತು. ವಸಿಷ್ಠನು ತನ್ನ ಮಗಳಾದ ಶತ್ರುಪಳು ಪ್ರಾಯಬದ್ದಳಾದೊಡನೆ ಅವಳನ್ನು ಮದುವೆಯಾದನು. ಮನುವು ತನ್ನ ಮಗಳಾದ ಇಳಾಳನ್ನು ಮದುವೆಯಾದನು. ಜಹ್ನುವು ತನ್ನ ಮಗಳಾದ ಜಾಹ್ನವಿಯನ್ನು ಮದುವೆಯಾದನು. ಸೂರ್ಯನ ತನ್ನ ಮಗಳಾದ ಉಷಾಳನ್ನು ವಿವಾಹವಾದನು.

ಅಸಾಮಾನ್ಯ ರೀತಿಯ ಬಹು ಪತಿತ್ವವೂ ಆಚರಣೆಯಲ್ಲಿತ್ತು. ಆರ್ಯರಲ್ಲಿ ಪ್ರಚಲಿತವಿದ್ದ ಬಹುಪತಿತ್ವ ಪದ್ಧತಿಯಂತೆ ರಕ್ತ ಸಂಬಂಧಿಗಳು ಒಂದೇ ಹೆಣ್ಣಿನೊಡನೆ ಸಹವಾಸ ಮಾಡಬಹುದಿತ್ತು. ದಾಹಪ್ರಚೇತನಿ ಮತ್ತು ಅವನ ಮಗ ಸೋಮ -ಇವರಿಬ್ಬರೂ ಸೋಮನ ಮಗಳಾದ ಮರಿಷಾಳನ್ನು ಮದುವೆಯಾಗಿದ್ದರು.
ಅಜ್ಜನ ತನ್ನ ಮೊಮ್ಮಗಳನ್ನು ಮದುವೆಯಾಗುವ ಉದಾರಣೆಗಳು ಇದ್ದವು. ದಕ್ಷನು ತನ್ನ ಮಗಳನ್ನು ತನ್ನ ತಂದೆಯಾದ ಬ್ರಹ್ಮನಿಗೆ ಮದುವೆ ಮಾಡಿಕೊಟ್ಟನು. ಮತ್ತು ಆ ಮದುವೆಯಿಂದ ಪ್ರಸಿದ್ಧನಾದ ನಾರದನು ಹುಟ್ಟಿದನು. ದೌಹಿತ್ರನು ತನ್ನ 27 ಜನ ಪತ್ರಿಯರನ್ನು ತನ್ನ ತಂದೆಯಾದ ಸೋಮನಿಗೆ ಸಮಾಗಮ ಮತ್ತು ಸಂತಾನ ಪ್ರಾಪ್ತಿಗಾಗಿ ಕೊಟ್ಟನು.

ಆರ್ಯರಿಗೆ ಬಯಲಲ್ಲಿ ಎಲ್ಲರೆದುರು ಸಮಗಮಿಸುವುದರಲ್ಲಿ ಸಂಕೋಚವಿರಲಿಲ್ಲ. ಋಷಿಗಳು ವಾಮದೇವ್ಯ ವ್ರತಗಳೆಂಬ ಕೆಲವು ಧಾರ್ಮಿಕ ಕ್ರಿಯಾ ವಿಧಿಗಳನ್ನು ನಡೆಸುತ್ತಿದ್ದರು. ಇವು ಯಜ್ಞಭೂಮಿಯಲ್ಲಿ ನಡೆಯುತ್ತಿದ್ದವು. ಅಲ್ಲಿಗೆ ಯಾವಳೇ ಸ್ತ್ರೀಯು ಬಂದು ಲೈಂಗಿಕ ಸಂಭೋಗವನ್ನು ಬಯಸಿದರೆ, ಮತ್ತು ತನ್ನನ್ನು ತೃಪ್ತಿಗೊಳಿಸಲು ಋಷಿಯನ್ನು ಕರೆದರೆ, ಆಗ ಋಷಿಯು ಯಜ್ಞ ಭೂಮಿಯಲ್ಲಿ ಎಲ್ಲರದುರಿಗೆ ಅವಳ ಸಮಾಗಮ ಮಾಡುತ್ತಿದ್ದನು. ಇಂಥ ಅನೇಕ ಪ್ರಸಂಗಗಳನ್ನು ಹೇಳಬಹುದು. ಸತ್ಯವತಿಯೊಡನೆ ಹೀಗೆ ಸಂಭೋಗ ಮಾಡಿದ ಪರಶರ ಋಷಿಯ ಪ್ರಸಂಗವಿದೆ. ಹಾಗೆಯೇ ದೀರ್ಘತಪ ಪ್ರಸಂಗವೂ ಕೂಡ. ಅಂತ ಪದ್ಧತಿಯು ಸರ್ವೇಸಾಧಾರಣವಾಗಿತ್ತೆಂಬುದನ್ನು ಅಯೋನಿಜ ಎಂಬ ಪದವು ಸೂಚಿಸುತ್ತದೆ. ಅಯೋನಿ ಎಂಬ ಪದಕ್ಕೆ ನಿಷ್ಕಳಂಕ (ಅಕ್ಷತಯೋನಿ) ಗರ್ಭಧಾರಣೆ ಎಂದು ಅರ್ಥ ಹಚ್ಚಲಾಗುತ್ತದೆ. ಆದರೆ ಆ ಪದದ ಮೂಲ ಅರ್ಥ ಹಾಗೆ ಇಲ್ಲ.ಯೋನಿ ಪದದ ಮೂಲಾರ್ಥ ಮನೆ ಎಂದಿದೆ. ಅಯೋನಿಯೆಂದರೆ ಮನೆಯಿಂದ ಹೊರಗೆ, ಅರ್ಥಾತ್ ಬಯಲಿನಲ್ಲಿ ಹುಟ್ಟಿದವರು ಎಂದಾಗುತ್ತದೆ. ಸೀತೆ ಮತ್ತು ದ್ರೌಪದಿ ಇವರಿಬ್ಬರೂ ಅಯೋನಿಜೆಯರು ಎಂದ ಮೇಲೆ ಹೀಗೆ ಹುಟ್ಟುವುದರಲ್ಲಿ ತಪ್ಪಿಲ್ಲ ಎಂದು ಭಾವಿಸುತ್ತಿದ್ದರು ಎಂದಾಯಿತು. ಈ ಪದ್ಧತಿ ಎಷ್ಟು ಸಾಮಾನ್ಯವಾದ ಸಂಗತಿಯಾಗಿತ್ತು ಎಂದರೆ ಅಂಥ ಆಚರಣೆಯ ವಿರುದ್ಧ ಧಾರ್ಮಿಕ ನಿಷೇಧಾಜ್ಞೆಗಳನ್ನು ಹೊರಡಿಸಬೇಕಾಯಿತು.

ಆರ್ಯದಲ್ಲಿ ತಮ್ಮ ಸ್ತ್ರೀಯರನ್ನು ಕೆಲ ಕಾಲದ ಮಟ್ಟಿಗೆ ಇತರರಿಗೆ ಅವರ ಉಪಯೋಗಕ್ಕಾಗಿ ಕೊಡುವ ಪದ್ಧತಿಯೂ ಪ್ರಚಾರದಲ್ಲಿತ್ತು. ಇದಕ್ಕೆ ಉದಾಹರಣೆಯೆಂದು ಮಾಧವಿಯ ಕಥೆಯನ್ನು ಹೇಳಬಹುದು. ಯಯಾತಿ ರಾಜನು ತನ್ನ ಮಗಳು ಮಾಧವಿಯನ್ನು ತನ್ನ ಗುರು ಗಾಲವನಿಗೆ ಕಾಣಿಕೆಯಾಗಿ ಕೊಟ್ಟನು. ಗಾಲವನು ಈ ಕನ್ಯೆ ಮಾಧವಿಯನ್ನು ಒಂದೊಂದು ಅವಧಿಗಾಗಿ ಮೂವರು ರಾಜರಿಗೆ ಎರವಲು ಕೊಟ್ಟನು. ಅನಂತರ ಅವನು ಅವಳನ್ನು ವಿಶ್ವಾಮಿತ್ರನಿಗೆ ಮದುವೆ ಮಾಡಿಕೊಟ್ಟನು. ಅವಳು ತನಗೆ ಒಂದು ಗಂಡು ಮಗು ಹುಟ್ಟುವ ತನಕ ಅವನೊಡನೆ ಇದ್ದಳು. ತದನಂತರ ಗಾಲವನು ಆ ಹೆಣ್ಣನ್ನು ಮತ್ತೆ ಅವಳ ತಂದೆ ಯಯಾತಿಗೆ ಮರಳಿಸಿದನು.

ಹೀಗೆ ತಾತ್ಕಾಲಿಕವಾಗಿ ತಮ್ಮ ಸ್ತ್ರೀಯರನ್ನು ಇತರಿಗೆ ಬಾಡಿಗೆ ಕೊಡುವ ಪದ್ಧತಿಯಲ್ಲದೆ ಆರ್ಯರಲ್ಲಿ ಇನ್ನೊಂದು ಪದ್ದತಿಯು ಪ್ರಚಲಿತವಾಗಿತ್ತು. ಅದೇನೆಂದರೆ ಆರ್ಯರಲ್ಲಿ ಶ್ರೇಷ್ಠರನಿಸಿಕೊಳ್ಳುವ ಗಂಡಸರಿಂದ ಹೆಂಗಸು ಸಂತಾನಪಡೆಯಲು ಅನುಮತಿ ಕೊಡುವುದು. 

ಆರ್ಯರಲ್ಲಿ ದೇವ ಎಂಬ ಜನರ ವರ್ಗವಿತ್ತು. ಆರ್ಯ ಸ್ತ್ರೀಯರ ಕನ್ಯತ್ವ ಹರಣವು ತಮಗಾಗಿಯೇ ಕಾಯ್ದಿರಿಸಿದ ಹಕ್ಕೆಂದು ದೇವ ವರ್ಗದವರು ತಿಳಿಯುತ್ತಿದ್ದರು.
ಎಲ್ಲಾ ಹಿಂದೂ ವಿವಾಹಗಳಲ್ಲಿ ತಪ್ಪದೇ ಆಚರಿಸಲಾಗುವ ಹಾಗೂ ವಿವಾಹದ ಅತಿ ಅವಶ್ಯಕವಾದ ಆಚರಣೆ ಎಂದು ತಿಳಿಯಲಾಗುವ ಸಪ್ತಪದಿ ಆಚರಣೆಗೆ ದೇವಜನರ ಕನ್ಯಾತ್ವ ಹರಣದ ಹಕ್ಕಿನೋಡನೆ ಅವಿಭಾಜ್ಯ ಸಂಬಂಧ ಉಂಟು. ಸಪ್ತಪದಿ ಎಂದರೆ ವಧುವಿನೊಡನೆ ವರನು ಹೇಳು ಹೆಜ್ಜೆಗಳನ್ನು ಹಾಕುವುದು. ಇದು ಅವಶ್ಯ ಎನ್ನುವುದು ಏಕೆ.? ಇದಕ್ಕೆ ಉತ್ತರವೆಂದರೆ, ತಮಗೆ ಕೊಡುವ ಪರಿಹಾರದ ಬಗೆಗೆ ದೇವರಿಗೆ ತೃಪ್ತಿ ಇಲ್ಲದಿದ್ದರೆ ವಧುವು ಏಳನೇ ಹೆಜ್ಜೆ ಇಡುವ ಮೊದಲು ಅವರು ತಮ್ಮವಳನ್ನಾಗಿ ಇಟ್ಟುಕೊಳ್ಳಬಹುದಾಗಿತ್ತು. ಆದರೆ ಏಳನೇ ಹೆಜ್ಜೆಯಿಟ್ಟ ಅನಂತರ ದೇವರ ಹಕ್ಕು ಸಮಾಪ್ತಿಯಾಗುತ್ತಿತ್ತು.ವರನು ಇನ್ನು ಮುಂದೆ ವಧುವನ್ನು   ಕೊಂಡಯ್ಯಬಹುದಾಗಿತ್ತು ಹಾಗೂ ದೇವರ ಅಡ್ಡಿ,ಆತಂಕ ಮತ್ತು ಪೀಡನೆಯ ಭಯವಿಲ್ಲದೆ ಅವರಿಬ್ಬರೂ ಸತಿಪತಿಗಳಾಗಿ ಬಾಳಬಹುದಾಗಿತ್ತು.

ಕನ್ಯೆಯರು ಕನ್ಯತ್ವವನ್ನು ಪಾಲಿಸಬೇಕೆಂಬ ನಿಯಮವಿರಲಿಲ್ಲ. ಅವಿವಾಹಿತಳಾಗಿರುವಾಗಲೇ ಹುಡುಗಿಯು ತನ್ನಿಷ್ಟಬಂದವರೊಡನೆ ಲೈಂಗಿಕ ಸಂಬಂಧ ಹೊಂದಬಹುದಾಗಿತ್ತು.
ಕುಂತಿ ಮತ್ತು ಮತ್ಸ್ಯಗಂಧಾ ಇವರ ಪ್ರಸಂಗಗಳಿಂದ ಕನ್ಯಯರು ವಿಧಿಬದ್ಧವಾಗಿ ವಿವಾಹವಾಗದೇ ತಮಗೆ ಬೇಕಾದವರಿಗೆ ಅರ್ಪಿಸಿಕೊಳ್ಳಬಹುದಿತ್ತು ಮತ್ತು ಮಕ್ಕಳನ್ನು ಪಡೆಯಬಹುದಿತ್ತು ಎಂಬುದು ವಿಶದವಾಗುತ್ತದೆ. ಪಾಂಡುವನ್ನು ವಿವಾಹವಾಗುವ ಮೊದಲೇ ಕುಂತಿಯು ಬೇರೆ ಪುರುಷರಿಂದ ಮಕ್ಕಳನ್ನು ಪಡೆದಿದ್ದಳು. ಭೀಷ್ಮನ ತಂದೆಯಾದ ಶಂತನುವನ್ನು ವಿವಾಹವಾಗುವ ಮೊದಲೇ ಮತ್ಸ್ಯಗಂಧಿಯು ಋಷಿ ಪರಾಶರನೊಡನೇ ಲೈಂಗಿಕ ಸಂಬಂಧ ‌ ಹೊಂದಿದ್ದಳು.
ಆರ್ಯರಲ್ಲಿ ಪಶುಗಮನವೂ ಕೂಡ ಪ್ರಚಲಿತವಾಗಿತ್ತು. ದಮ ಎಂಬ ಋಷಿಯು ಹೆಣ್ಣು ಜಿಂಕೆಯೊಡನೆ ಲೈಂಗಿಕ ಸಂಪರ್ಕ ಹೊಂದಿದ ಕಥೆ ಸೂಪರಿಚಿತವಾಗಿದೆ. ಸೂರ್ಯನು ಹೆಣ್ಣು ಕುದುರೆಯೊಡನೆ ಸಂಪರ್ಕ ಹೊಂದಿದ ಇನ್ನೊಂದು ಉದಾಹರಣೆ ಉಂಟು.
ಆದರೆ
ಅಶ್ವಮೇಧ ಯಜ್ಞದಲ್ಲಿ ಕುದುರೆಯೋಡನೆ  ಸಂಭೋಗಿಸಿದ ಹೆಂಗಸಿನ ಉದಾರಣೆ ಇವೆಲ್ಲಕ್ಕಿಂತ ಅಸಹ್ಯಕರವಾದದ್ದು.
 
                     ( ಅಪೂರ್ಣ)
                       *  *  *  *

~ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಸಂಪುಟ - ೩
                 (ಪು.ಸಂ:- ೧೬೭-೧೭೨)


No comments:

Post a Comment

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...