*ಮಹಮದನ ಪ್ರೇಮ ಪತ್ರ*
ಹತ್ತೂ ಜನರು ಓದಿಯಾದ ಮೇಲೆ
ನನ್ನ ಕೈಸೇರಿತ್ತು ಮಹಮದನ ಪತ್ರ
ತನ್ನೂರಿನ ಬಗ್ಗೆ
ತನ್ನ ಅಕ್ಕ ತಂಗಿಯರ ಬಗ್ಗೆ
ಮಲ್ಪೆಯ ಮೀನು, ಸಮುದ್ರದ ಹಿನ್ನೀರು
ಗೇರು ಹಣ್ಣು, ಗುಳ್ಳದ ಬಗ್ಗೆ
ಏನೆಲ್ಲ ಅಚ್ಚ ಕನ್ನಡದಲ್ಲಿ
ಬರೆದಿದ್ದ ಪತ್ರ-
'ಈದ್' ಗೆ ಮನೆಗೆ ಬರಬೇಕೆಂದು
ಕೇಳಿಕೊಂಡಿದ್ದ ಪತ್ರ-
ಅದರಲ್ಲಿ ಪ್ರೇಮದ ವಿಷಯವೇನೂ
ಇರಲಿಲ್ಲವಾದರೂ
ಅದು ಪ್ರೇಮ ಪತ್ರವೆಂದು
ಮುದ್ರೆ ಒತ್ತಲ್ಪಟ್ಟಿತು
ಮಹಮದನಿಗೆ ಗುದ್ದು
ನನಗೆ ಎಚ್ಚರಿಕೆ
ಹತ್ತು ಹಲವು ಹದ್ದುಗಳು
ನನ್ನ-ಅವನ
ಚಲನವಲನದ ಬಗ್ಗೆ
ನಿಗಾ ಇಡುವಂತಾಯಿತು
ಒಮ್ಮೆ ಮಹಮದನನ್ನು
ಬೇಟಿಯಾಗಬೇಕು
'ಪ್ರೇಮ ಭಾವ'
ಅರಳಿಸಿದ್ದಕ್ಕೇ
ಕ್ಷಮೆ ಬೇಡಬೇಕು ಎಂದೆಲ್ಲಾ
ಅಂದುಕೊಂಡೆನಾದರೂ...
ಪ್ರತಿಬಾರಿ....
ನಮ್ಮಿಬ್ಬರ ನಡುವೆ
ಮಸೀದಿಯ ಗುಡ್ಡ
ಅಡ್ಡ ಬರುತ್ತಿತ್ತು
ಅದೊಂದು ದಿನ-
ದೊಡ್ಡ ದೇವರ ಪಲ್ಲಕ್ಕಿ ಉತ್ಸವ
ಇಬ್ಬರನೂ ಸೀಳಿಕೊಂಡು
ಹೊರಟು ಹೋಯಿತು!
ಹೂವಿನಷ್ಟೇ ತಾಜಾ -ಕೋಮಲ
ಮಹಮದನ ಪ್ರೇಮ
ವಜ್ರದಷ್ಟೇ ಕಠಿಣ-ಕಠೋರ
ಸುತ್ತಣ ಜನರ ಆತ್ಮ...
ಗಾಳಿ-ಬೆಂಕಿ ಸೇರಿಕೊಂಡು
ತನಗೆ ತಾನೇ ಕೂಡಿಕೊಂಡು
ಎಷ್ಟು ಸುತ್ತು ಉರಿದರೇನು
ಎಷ್ಟು ಹೊತ್ತು ಉರಿದರೇನು
ಉರಿಯೊಳಗೆ ಬಿರಿಯುತ್ತಿತ್ತು
ಬಿರಿದು ತಾನೇ ಬೆಳಗುತ್ತಿತ್ತು
ಪ್ರೇಮ ಪುಷ್ಪ ಅರಳುತ್ತಿತ್ತು.
No comments:
Post a Comment