ಬಾಳ್ಕೆಯಲಿ ನೂರೆಂಟು ತೊಡಕು ತಿಣಕುಗಳುಂಟು |
ಕೇಳ್ಕೆಮಾಣ್ಕೆಗಳಿಗವು ಜಗ್ಗವೊಂದಿನಿಸುಂ ||
ಗೋಳ್ಕರೆದರೇನು ಫಲ ಗುದ್ದಾಡಲೇನು ಫಲ |
ಪಲ್ಕಿರಿದು ತಾಳಿಕೊಳೊ - ಮಂಕುತಿಮ್ಮ ||
ಬದುಕೊಂದು ಕದನವೆಂದಂಜಿ ಬಿಟ್ಟೋಡುವನು ।ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ।।
ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು ನೀ- ।
ನೆದುರು ನಿಲೆ ಬಿದಿಯೊಲಿವ – ಮಂಕುತಿಮ್ಮ ।।
ತನ್ನಬವಣೆಗಳ ತಾನೆನಿತೆನಿತು ಪಟ್ಟಿರೆಯು |
ಮಿನ್ನೊಮ್ಮೆ ಮತ್ತೊಮ್ಮೆ ಹೊಸ ಸಾಹಸಗಳಿಂ ||
ಸನ್ನಿಹಿಸುವಂ ಸುಮ್ಮನಿರಲೊಲದೆ ಮಾನವನು |
ಚಿನ್ಮಯತೆಯಾತ್ಮಗುಣ – ಮಂಕುತಿಮ್ಮ||
ಎಲ್ಲ ಬರಿ ಗೊಣಗಾಟ, ತಿಣಕಾಟ, ತಡಕಾಟ ।
ಇಲ್ಲ ನಮಗೂರೆಕೋಲ್, ತಿಳಿಬೆಳಕುಮಿಲ್ಲ ।।
ಬಲ್ಲತನ ಮಬ್ಬಿನಲಿ ನಿದ್ರಿಸದೆ ತೆವಳುವುದು ।
ಸಲ್ಲದುಬ್ಬಟೆ ನಮಗೆ – ಮಂಕುತಿಮ್ಮ ।।
ಮುಂದೇನೊ; ಮತ್ತೇನೊ; ಇಂದಿಗಾ ಮಾತೇಕೆ? |ಸಂದರ್ಭ ಬರಲಿ; ಬಂದಾಗಳಾ ಚಿಂತೆ ||ಹೊಂದಿಸುವನಾರೊ; ನಿನ್ನಾಳಲ್ಲ; ಬೇರಿಹನು |ಇಂದಿಗಿಂದಿನ ಬದುಕು - ಮಂಕುತಿಮ್ಮ ||
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ ।
ಫಲ ಮಾಗುವಂದು ತುತ್ತೂರಿ ದನಿಯಿಲ್ಲ ।।
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ ।
ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮ ।।
ಎಂದೊ ನಿನಗೊಂದುದಿನ ಮೂಗು ಮುರಿಯುವುದು ದಿಟ ।
ವೃಂದಾರಕರು ಮತ್ಸರಿಸರೆ ಗರ್ವಿತರ ? ।।
ಸಂದರ್ಭಗಳನದಕೆ ಜೋಡಿಪನು ವಿಧಿರಾಯ ।
ಅಂದಿಕೊಳ್ಳನೆ ನಿನ್ನ – ಮಂಕುತಿಮ್ಮ ।।
ದಿವಸದಿಂ ದಿವಸಕ್ಕೆ ನಿಮಿಷದಿಂ ನಿಮಿಷಕ್ಕೆ ।
ಭವಿಷಿಯವ ಚಿಂತಿಸದೆ ಬದುಕ ನೂಕುತಿರು ।।
ವಿವರಗಳ ಜೋಡಿಸುವ ಯಜಮಾನ ಬೇರಿಹನು ।
ಸವೆಸು ನೀಂ ಜನುಮವನು ಮಂಕುತಿಮ್ಮ ।।
ತನ್ನ ಶಿಲುಬೆಯ ತಾನೆ ಹೊತ್ತನಲ ಗುರು ಯೇಸು? |ನಿನ್ನ ಕರ್ಮದ ಹೊರೆಯ ಬಿಡದೆ ನೀನೆ ಹೊರು ||ಖಿನ್ನನಾಗದೆ ತುಟಿಯ ಬಿಗಿದು ಶವಭಾರವನು |ಬೆನ್ನಿನಲಿ ಹೊತ್ತು ನಡೆ - ಮಂಕುತಿಮ್ಮ ||
ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು |
ತೊಂದೆ ಧ್ಯಾನವನುಣ್ಣುತೊಂದೆ ನೀರ್ಗುರ್ಡಿದು ||
ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು |
ಬಂದುದೀ ವೈಷಮ್ಯ ? - ಮಂಕುತಿಮ್ಮ ||
ಬದುಕಿಗಾರ್ ನಾಯಕರು, ಏಕನೊ ಅನೇಕರೊ?|
ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ?||
ಕುದುರುವುದೆಂತು ಈಯವ್ಯವಸ್ಥೆಯ ಪಾಡು?|
ಅದಿಗುದಿಯೆ ಗತಿಯೇನು? - ಮಂಕುತಿಮ್ಮ||