Tuesday, 23 January 2024

"ಕ್ರಾಂತಿ ಮತ್ತು ಪ್ರತಿಕ್ರಾಂತಿ"

ಡಾ. ಬಿ. ಆರ್. ಅಂಬೇಡ್ಕರ್ ಅವರು "ಕ್ರಾಂತಿ ಮತ್ತು ಪ್ರತಿಕ್ರಾಂತಿ" ಎಂಬ ಪುಸ್ತಕದ ಅಂಗವಾಗಿ "ಬೌದ್ಧ ಧರ್ಮದ ಅವಸಾನ ಮತ್ತು ಪತನ" ಎಂಬ ಲೇಖನವನ್ನು ಬರೆದಿದ್ದರು. ನಮಗೆ ಕೇವಲ ಐದು ಪುಟಗಳು ಮಾತ್ರ ದೊರೆತಿವೆ. ಅವುಗಳನ್ನು ಕೂಡಾ ತಿದ್ದಿಲ್ಲ. ಈ ಪ್ರಬಂಧದ ಒಂದು ಪ್ರತಿಯು ಶ್ರೀ ಎಸ್ ಎಸ್ ರೇಗೆ ಅವರಿಂದ ದೊರೆತಿದೆ. ಅದರಲ್ಲಿ ಡಾ. ಅಂಬೇಡ್ಕರ್ ಅವರ ಕೈಬರಹದ ಕೆಲವು ತಿದ್ದುಪಡಿಗಳಿವೆ. ಈ ಪ್ರಬಂಧದಲ್ಲಿ ಬೆರಳಚ್ಚು ಮಾಡಿದ 17 ಪುಟಗಳಿವೆ. ಅದನ್ನು ಇಲ್ಲಿ ಸೇರಿಸಲಾಗಿದೆ‌.

             ~ ಸಂಪಾದಕರು


ಭಾರತದಿಂದ ಬೌದ್ಧ ಧರ್ಮವು ಅದೃಶ್ಯವಾಗಿ ಹೋದದ್ದು ಆ ವಿಷಯದ ಬಗ್ಗೆ ಕಾಳಜಿಯುಳ್ಳ ಪ್ರತಿಯೊಬ್ಬನಿಗೂ ಅತ್ಯಂತ ವಿಸ್ಮಯದ ವಿಷಯವಾಗಿದೆ ಮತ್ತು ವಿಷಾಧಕರವಾಗಿದೆ. ಆದರೆ ಅದು ಚೀನಾ, ಜಪಾನ್, ಬರ್ಮಾ, ಸಯಾಮ್, ಅನ್ನಮ್, ಇಂಡೋಚೈನಾ, ಸಿಂಹಳ ಮತ್ತು ಮಲಯ ದ್ವಿಪಕಲ್ಪದ ಕೆಲಭಾಗಗಳಲ್ಲಿ ಇಂದಿಗೂ ಜೀವಂತವಿದೆ. ಭಾರತದಲ್ಲಿ ಅದು ಅಸ್ತಿತ್ವದಲ್ಲಿ ಇಲ್ಲವಷ್ಟೇ ಅಲ್ಲ, ಬುದ್ಧನ ಹೆಸರೂ ಬಹು ಸಂಖ್ಯಾತ ಹಿಂದುಗಳ ಸ್ಮರಣೆಯಲ್ಲಿ ಉಳಿದಿಲ್ಲ. ಇಂತಹ ಸಂಗತಿ ಹೇಗೆ ಸಂಭವಿಸಿರಬಹುದು.? ಇದೊಂದು ಮಹತ್ವದ ಪ್ರಶ್ನೆ. ಇದಕ್ಕೆ ಸಮಾಧಾನಕರ ಉತ್ತರ ಇನ್ನೂ ದೊರೆತಿಲ್ಲ; ಸಮಾಧಾನಕರ ಉತ್ತರ ದೊರೆತಿಲ್ಲವಷ್ಟೇ ಅಲ್ಲ, ಸಮಾಧಾನಕರ ಉತ್ತರ ಪಡೆಯಲು ಯಾರು ಪ್ರಯತ್ನವನ್ನು ಮಾಡಿಲ್ಲ. ಈ ವಿಷಯದ ಬಗ್ಗೆ ವಿಚಾರ ಮಾಡುವಾಗ, ಒಂದು ಮಹತ್ವದ ಅಂತರವನ್ನು ಮರೆಯುತ್ತಾರೆ. ಬೌದ್ಧ ಧರ್ಮದ ಪತನ ಮತ್ತು ಬೌದ್ಧ ಧರ್ಮದ ಅವಸಾನ ಇವೆರಡರ ನಡುವಿನ ಅಂತರವೇ ಅದು. ಈ ಅಂತರವನ್ನು ಮಾಡುವುದು ಅತ್ಯವಶ್ಯವಾಗಿದೆ, ಏಕೆಂದರೆ ಬೌದ್ಧ ಧರ್ಮದ ಪತನದ ಕಾರಣಗಳು ಅತ್ಯಂತ ಸ್ಪಷ್ಟವಾಗಿದೆ. ಆದರೆ ಅದರ ಅವಸಾನದ ಕಾರಣಗಳು ಅಷ್ಟು ಸ್ಪಷ್ಟವಾಗಿಲ್ಲ.

ಭಾರತದಲ್ಲಿ ಬುದ್ಧ ಧರ್ಮದ ಪತನಕ್ಕೆ ಮುಸಲ್ಮಾನರ ದಾಳಿಗಳು ಕಾರಣವಾಗಿವೆ ಎಂಬುದರಲ್ಲಿ ಏನು ಸಂಶಯವಿಲ್ಲ. 'ಬುತ್ ' ದ ( but) ಶತ್ರುವಾಗಿ ಇಸ್ಲಾಂ ಬಂದಿತು. ಎಲ್ಲರಿಗೂ ಗೊತ್ತಿರುವಂತೆ 'ಬುತ್' ಎಂಬುದು ಅರೇಬಿಕ್ ಶಬ್ದ ಮತ್ತು ಇದರರ್ಥ "ಮೂರ್ತಿ" (ಗೊಂಬೆ ಪ್ರತಿಮೆ) ಅನೇಕರಿಗೆ 'ಬುತ್ ' ಶಬ್ದದ ವ್ಯತ್ಪತ್ತಿ ಏನೆಂಬುದು ತಿಳಿದಿಲ್ಲ. 'ಬುತ್ ' ಈ ಶಬ್ದದ ಅರೇಬಿಕ್ ಅಪಭ್ರಂಶ. ಹೀಗೆ ಮುಸಲ್ಮಾನರ ಮನಸ್ಸಿನಲ್ಲಿ ಮೂರ್ತಿ ಪೂಜೆ ಮತ್ತು ಬೌದ್ಧ ಧರ್ಮಗಳು ಅಭಿನ್ನವೆಂಬ ಕಲ್ಪನೆಯಿದೆಯೆಂದು ಶಬ್ದದ ವ್ಯತ್ಪತ್ತಿಯಿಂದ ತಿಳಿದು ಬರುತ್ತದೆ. ಮುಸಲ್ಮಾನರಿಗೆ ಅವೆರಡೂ ಒಂದೇ ಆಗಿದ್ದವು. ಹೀಗೆ ಮೂರ್ತಿ ಭಂಜನೆಯ ಕಾರ್ಯವು ಬೌದ್ಧ ಧರ್ಮವನ್ನು ನಾಶಪಡಿಸುವ ಕಾರ್ಯವಾಗಿತ್ತು. ಇಸ್ಲಾಂ ಭಾರತದಲ್ಲಿ ಮಾತ್ರವೇ ಬೌದ್ಧ ಧರ್ಮವನ್ನು ನಾಶಪಡಿಸಲಿಲ್ಲ, ಅದು ಹೋದಲ್ಲೆಲ್ಲ (ಅದನ್ನು) ನಾಶಪಡಿಸಿತು. ಇಸ್ಲಾಂ ಪ್ರಚಾರದಲ್ಲಿ ಬರುವುದಕ್ಕಿಂತ ಮೊದಲು, ಬ್ಯಾಕ್ಟ್ರಿಯಾ, ಪಾರ್ಥಿಯಾ, ಅಫ್ಘಾನಿಸ್ತಾನ್ , ಗಂಧಾರ ಮತ್ತು ಚೀಣೀ ತುರ್ಕಿಸ್ತಾನ್ ಹಾಗೂ ಸಂಪೂರ್ಣ ಏಷ್ಯಾದ ಧರ್ಮವು ಬೌದ್ಧ ಧರ್ಮವಾಗಿತ್ತು. ಈ ಎಲ್ಲ ದೇಶಗಳಲ್ಲಿ ಇಸ್ಲಾಂ ಬೌದ್ಧ ಧರ್ಮವನ್ನು ನಾಶಪಡಿಸಿತು. ವಿನ್ಸೆಂಟ್ ಸ್ಮಿತ್ ಹೀಗೆ ಹೇಳುತ್ತಾರೆ:  
  
 "ಸಾಂಪ್ರದಾಯಿಕ ಹಿಂದುಗಳು ಮಾಡಿದ ಕಿರುಕುಳದ ಹಿಂಸೆಗಿಂತಲೂ ಮುಸಲ್ಮಾನ್ ದಾಳಿ ಕೊರರು ಅನೇಕ ಸ್ಥಳಗಳಲ್ಲಿ ನಡೆಸಿದ ಭೀಕರ ಅತ್ಯಾಕಾಂಡಗಳು ಹೆಚ್ಚು ಪರಿಣಾಮಕಾರಿಯಾಗಿದ್ದವು ಮತ್ತು ಭಾರತದ ಅನೇಕ ಪ್ರಾಂತ್ಯಗಳಿಂದ ಬೌದ್ಧ ಧರ್ಮವು ಅದೃಶ್ಯವಾಗಲು ಬಹುಮಟ್ಟಿಗೆ ಕಾರಣವಾಗಿದ್ದವು."

ಈ ಸೃಷ್ಟಿಕರ್ಣದಿಂದ ಎಲ್ಲರಿಗೂ ಸಮಾಧಾನವಾಗುವುದಿಲ್ಲ. ಅದು ಅಸಮರ್ಪಕವಾಗಿರುವದು ಸ್ಪಷ್ಟವಾಗಿದೆ. ಬ್ರಾಹ್ಮಣ ಮತ್ತು ಬೌದ್ಧ - ಎರಡು ಧರ್ಮಗಳ ಮೇಲೆ ಇಸ್ಲಾಂ ದಾಳಿ ಮಾಡಿತು. ಒಂದು ಉಳಿಯಿತು ಮತ್ತು ಇನ್ನೊಂದು ನಾಶವಾಯಿತು - ಹೀಗೇಕೆ ಎಂದು ಕೇಳಬಹುದು. ಈ ವಾದವು ಸರಿಯಾಗಿದೆಯಾದರೂ, ವಿಷಯದ ಸಮಂಜಸತೆಯನ್ನು ನಾಶಪಡಿಸಲಾರದು. ಬ್ರಾಹ್ಮಣ ಧರ್ಮ ಉಳಿತು ಎಂದು ಒಪ್ಪಿಕೊಂಡರೆ, ಬೌದ್ಧ ಧರ್ಮದ ಪತನಕ್ಕೆ ಇಸ್ಲಾಂ ಖಡ್ಗವು ಕಾರಣವಲ್ಲವೆಂದು ಅರ್ಥವಾಗುವುದಿಲ್ಲ. ಇದರ ಒಟ್ಟು ಅರ್ಥ ಇಷ್ಟು: ಆಗಿನ ಪರಿಸ್ಥಿತಿಯು ಇಸ್ಲಾಂ ದಾಳಿಯನ್ನು ಎದುರಿಸಲು ಬ್ರಾಹ್ಮಣ ಧರ್ಮಕ್ಕೆ ಅನುಕೂಲವಾಗಿತ್ತು ಮತ್ತು ಬೌದ್ಧ ಧರ್ಮಕ್ಕೆ ಅನುಕೂಲವಾಗಿರಲಿಲ್ಲ. ಬ್ರಾಹ್ಮಣ, ಧರ್ಮದ ಸುದೈವದಿಂದ ಮತ್ತು ಬೌದ್ಧ ಧರ್ಮದ ದುರ್ದೈವದಿಂದ ಎಂದು ಹೇಳಬಹುದೇನೋ ..! ಅದು ವಸ್ತುಸ್ಥಿತಿಯಾಗಿತ್ತು. 

ಮುಸ್ಲಿಂ ದಾಳಿಯ ಆಪತ್ತನ್ನು ಎದುರಿಸಲು ಬ್ರಾಹ್ಮಣ ಧರ್ಮಕ್ಕೆ ಸಾಧ್ಯವಾಗುವಂತೆ ಮಾಡಿದ ಮತ್ತು ಬೌದ್ಧ ಧರ್ಮಕ್ಕೆ ಅಸಾಧ್ಯವಾಗುವಂತೆ ಮಾಡಿದ ಮೂರು ವಿಶೇಷ ಪರಿಸ್ಥಿತಿಗಳು ಆಗ ಇದ್ದವು ಎಂದು ಈ ವಿಷಯದ ಅಧ್ಯಯನವನ್ನು ಮುಂದುವರಿಸುವವರಿಗೆ ತಿಳಿದು ಬರುತ್ತದೆ.

ಮೊದಲನೆಯದಾಗಿ, ಮುಸ್ಲಿಂ ದಾಳಿಯ ಸಮಯದಲ್ಲಿ ಬ್ರಾಹ್ಮಣ ಧರ್ಮಕ್ಕೆ ರಾಜಶ್ರಯವಿತ್ತು. ಬೌದ್ಧ ಧರ್ಮಕ್ಕೆ ಇಂತಹ ರಾಜಶ್ರಯವಿರಲಿಲ್ಲ, ಇದಕ್ಕಿಂತ ಹೆಚ್ಚು ಮಹತ್ವದ ಸಂಗತಿ ಎಂದರೆ, ಮೂರ್ತಿ ಪೂಜೆಯ ವಿರುದ್ಧವಾದ ಅದರ ಪ್ರಾರಂಭದ ರೋಷದ ಜ್ವಾಲೆಗಳು ಆರಿ, ಇಸ್ಲಾಂ ಒಂದು ಶಾಂತ ಧರ್ಮವಾಗುವವರೆಗೆ ಬ್ರಾಹ್ಮಣ ಧರ್ಮಕ್ಕೆ ಈ ರಾಜಾಶ್ರಯವಿತ್ತು. 

ಎರಡನೆಯದಾಗಿ, ಇಸ್ಲಾಂ ಖಡ್ಗದಿಂದ ಬೌದ್ಧ ಪೌರೋಹಿತ್ಯವು ನಾಶ ಹೊಂದಿತು. ಮತ್ತು ಪುನರ್ಜೀವನ ಹೊಂದಲು ಸಮರ್ಥವಾಗಲಿಲ್ಲ. ಆದರೆ ಇದಕ್ಕೆ ಪ್ರತಿಯಾಗಿ ಬ್ರಾಹ್ಮಣ ಪೌರೋಹಿತ್ಯವನ್ನು ನಾಶಪಡಿಸಲು ಇಸ್ಲಾಮಿಗೆ ಸಾಧ್ಯವಾಗಲಿಲ್ಲ.

ಮೂರನೇಯದಾಗಿ, ಬೌದ್ಧ ಜನಸಾಮಾನ್ಯರು ಭಾರತದ ಬ್ರಾಹ್ಮಣ ಧರ್ಮಾನುಯಾಯಿ ರಾಜರಿಂದ ಕಿರುಕುಳಕ್ಕೊಳಗಾದರು ಮತ್ತು ಈ ಹಿಂಸೆಯನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಭಾರತದ ಅಧಿಕಾಂಶ ಬೌದ್ಧ ಜನತೆಯು ಇಸ್ಲಾಂ ಧರ್ಮವನ್ನು ಸ್ವೀಕರಿಸಿತು ಮತ್ತು ಬೌದ್ಧ ಧರ್ಮವನ್ನು ತ್ಯಜಿಸಿತು.

No comments:

Post a Comment

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...