Ranganatha Kantanakunte ಅವರ ಕವಿತೆ ನನಗೆ ತುಂಬಾ ಇಷ್ಟ
ಪ್ರೇಮಭಿಕ್ಕು ಪ್ರಧಾನಿಯಾಗಲಿ
ದೇಶದ ಪ್ರಧಾನಿ ದಿನವೊಂದಕ್ಕೆ ಹದಿನೆಂಟು ಗಂಟೆ
ದುಡಿವರಂತೆ ಯಂತ್ರದಂತೆ! ಅದರ ಅಗತ್ಯವಿಲ್ಲ
ದೇಶದ ಕಾರ್ಮಿಕರಂತೆ ಎಂಟೇ ತಾಸು ದುಡಿಯಲಿ
ಆಯಾಸವಾದಾಗ ವಿರಮಿಸಲಿ
ನಿದ್ದೆ ಬಂದಾಗ ಮಲಗಲಿ
ಕನಸಲಿ ನಗಲಿ ಪುಟ್ಟ ಮಕ್ಕಳಂತೆ
ತನ್ನವಳ ಅಪ್ಪುಗೆಯಲಿ ಆನಂದಿಸಲಿ
ಅನ್ಯರ ಆಲಿಂಗನದ ನಡುವೆ ಹಾಯಿಸದಿರಲಿ ಕಿಚ್ಚು;
ಯಂತ್ರದ ಬದಲು ಮನುಶ್ಯರೊಬ್ಬರು
ನಮ್ಮ ದೇಶ ಪ್ರಧಾನಿಯಾಗಲಿ;
ದೇಶದ ಪ್ರಧಾನಿಗೆ ಸಂಸಾರವಿಲ್ಲವಂತೆ!
ಹಣ ಆಸ್ತಿ ಮಾಡುವುದಿಲ್ಲವಂತೆ
ಇಲ್ಲ ನಮ್ಮ ದೇಶದ ಪ್ರಧಾನಿಗೆ ಸಂಸಾರವಿರಲಿ
ಸಂಸಾರ ಸಂಭಾಳಿಸಲು ಒಂದಿಶ್ಟು ಹಣ ಆಸ್ತಿ
ದುಡಿದು ಗಳಿಸಲಿ
ಜನರ ಹಣದಲಿ ಊರೂರು ತಿರುಗುವುದು ನಿಲ್ಲಿಸಲಿ
ಮಕ್ಕಳು ಮರಿಗಳು ಎಲ್ಲ ಇರಲಿ
ಕಳ್ಳುಬಳಿಯ ನಂಟು ತಿಳಿದಿರಲಿ
ಗಂಜಿ ಬೇಯಿಸುವ ಬೆಂಕಿಯ ಬೆಲೆ ಗಗನಕ್ಕೇರಿಸದಿರಲಿ
ಉಪ್ಪು ರಾಗಿ ಜೋಳ ಗೋಧಿಗಳ ತರಕಾರಿಗಳ ಬೆಲೆ
ಎಷ್ಟೆಂಬುದು ತಿಳಿದಿರಲಿ
ಪೈಸೆ ಪೈಸೆ ಕೂಡಿಸಲು ದೇಶದ ರೈತರು
ಎಷ್ಟೊಂದು ಬೆವರು ಹರಿಸುವರೆಂದು ತಿಳಿದಿರಲಿ
ಅದರ ಫಲ ಕದಿವವರ ಕೈಗೆ ಕೋಳ ತೊಡಿಸಲಿ
ಮತ್ತೆ ನಮ್ಮ ದೇಶದ ಸಂಸ್ಕøತಿಯಲಿ
ದನದ ಮಾಂಸಾಹಾರವೂ ಇದೆಯೆಂಬುದು ಮೊದಲು ತಿಳಿದಿರಲಿ
ತುಂಡು ಮಾಂಸಕ್ಕಿಂತ ಮನುಶ್ಯರ ಜೀವ ಪ್ರವಿತ್ರವೆಂಬುದು ಅರಿತಿರಲಿ;
ನಮ್ಮ ದೇಶದ ಪ್ರಧಾನಿಗೆ ಅದೆಶ್ಟೋ ಇಂಚುಗಳ ಎದೆಯಂತೆ!
ಇಲ್ಲ ಮನುಶ್ಯರಾಗಲು ನೂರಂಗುಲದ ಎದೆಯ ಅಗತ್ಯವಿಲ್ಲ
ಪುಟ್ಟ ಗಿಳಿ ಗುಬ್ಬಿ ಕಾಗೆಗಳಂತಹ ಹೃದಯವಿದ್ದರೂ ಪರವಾಗಿಲ್ಲ
ಎಲ್ಲ ಜನರನ್ನು ತನ್ನಂತೆ ಭಾವಿಸುವ ಮನವಿರಲಿ; ಜನಭಾವುಣಿಕೆಯಿರಲಿ
ಒಡೆದಾಳಿ ಕೊಂದು ಗದ್ದುಗೆಯೇರುವ ಹಿಂಸಕ ಪಶುವಾಗದಿರಲಿ;
ನಮ್ಮ ದೇಶದ ಪ್ರಧಾನಿಗಳು ಮಾತಿನ ಮಲ್ಲರಂತೆ!
ಗಂಟೆಗಟ್ಟಲೆ ನೀರು ಕುಡಿವಂತೆ ಮಾತನಾಡುವರಂತೆ;
ಇಲ್ಲ ನಮ್ಮ ದೇಶದ ಪ್ರಧಾನಿ ಮೌನಿಯಾದರೂ ಪರವಾಗಿಲ್ಲ
ಅಬ್ಬರದಲಿ ಎದುರಾಳಿಗಳ ಮೇಲೆ ಆಕ್ರಮಣ ಮಾಡದಿರಲಿ
ಅವರ ಮಾತು ಯಾರ ಎದೆಯಲ್ಲೂ ಭಯ ಭಿತ್ತದಿರಲಿ
ಪ್ರೇಮಿಗಳ ಪಿಸುಮಾತು ಹಕ್ಕಿಗಳ ಚಿಲಿಪಿಲಿ ಆಲಿಸುವ ಹೃದಯವಿರಲಿ
ಲೋಕದ ಯಾವ ಸಿಂಹಾಸನವೂ ಶಾಶ್ವತವಲ್ಲ ಎಂಬ ಅರಿವಿರಲಿ
ಜನರ ಪ್ರೀತಿ ಗಳಿಸಿದ ಜನನಾಯಕನಾಗಿರಲಿ;
ಅಣುಬಾಂಬು ದೀಪಾಳಿಯಲಿ
ಮಕ್ಕಳೊಡೆವ ಉರುಳಿ ಪಟಾಕಿಯಲ್ಲ ಎಂಬುದು ತಿಳಿದಿರಲಿ;
ಆತ್ಮರತಿಯ ಪೆಡಂಭೂತ ಬೇಡವೇ ಬೇಡ ದೇಶದ ಗದ್ದುಗೆಯಲಿ
ದೇಶದ ಪ್ರಧಾನಿ ಧರ್ಮ ಸ್ಥಾಪಕರಂತೆ!
ಇಲ್ಲ ಯಾವ ಧರ್ಮವು ಇದುವರೆಗೂ ಲೋಕದಲ್ಲಿ
'ಮನುಶ್ಯರನ್ನು ಉದ್ಧರಿಸಿಲ್ಲ';
ಜನೋದ್ಧಾರಕ್ಕೆ ಧರ್ಮ ಬೇಕೆಂದೇನಿಲ್ಲ; ಜನರಿಗೆ ಬೇಕಿರುವುದು
ದುಡಿಮೆಗೆ ಕೆಲಸ ದಣಿವು ನೀಗಲು ಶುದ್ಧನೀರು
ನೆಮ್ಮದಿಯ ಊರು
ಅನ್ನ ಬಟ್ಟೆ ಅರಿವು ಸೂರು
ದುಡಿವ ಜೀವಗಳಿಗೆ ದುಡಿಮೆಯೇ ಧಮ್ಮ;
ಜನರಿಗೆ ಬೇಕಿಲ್ಲ ಯಾವ ಒಣಧರ್ಮ!
ಒಲವೆಂಬ ಧಮ್ಮದ ಕಾಲುದಾರಿಯಲಿ ಬರಿಗಾಲಲಿ
ನಡೆದಾಡುವ ಪ್ರೇಮಭಿಕ್ಕು ನಮ್ಮ ಪ್ರಧಾನಿಯಾಗಲಿ
ಬುದ್ಧ ಪೂರ್ಣಿಮೆಯ ಬೆಳಕು ದೇಶದ ಜನರದಾಗಲಿ.
-ರಂಗನಾಥ ಕಂಟನಕುಂಟೆ
No comments:
Post a Comment