~ಸುಗತ ಸಂವಾದ~
ಲೇಖಕರು:ಡಾ ಮರಿಯಪ್ಪ ನಾಟೇಕಾರ್.
ಸಿಟ್ಟು, ಆಕ್ರೋಶ, ಬಂಡಾಯದ ಪದಗಳಿಲ್ಲ,ಸೇಡು ಸೆಡವುಗಳಿಲ್ಲ. ಇಲ್ಲಿ ಹಸಿವು, ಬಡತನ, ಅವಮಾನ, ಮಾತನಾಡುತ್ತವೆ,ರೋಧಿಸುತ್ತವೆ, ಛೇಡಿಸುತ್ತವೆ, ಕೆಣಕುತ್ತವೆ, ಕೊರಗುತ್ತವೆ ತಮಗೆ ತಾವೇ ಸಾಂತ್ವನ ಹೇಳಿಕೊಳ್ಳುತ್ತ ಸಮಾಧಾನಪಟ್ಟುಕೊಳ್ಳುತ್ತವೆ.
ಲೇಖಕರು ಸರಳ ಸಹೃದಯಿ. ತಮ್ಮ ಕವಿತೆಗಳಲ್ಲಿ ತಮ್ಮ ಊರಿನ, ಹೊಲ ಗಿಡಮರಬಳ್ಳಿ ಪರಿಸರದ ಬಗ್ಗೆ, ತಾಯಿಯ ಬಗ್ಗೆ ಬಾಲಕಾರ್ಮಿಕರ ,ಕೌಟುಂಬಿಕ , ಹಾಗೂ ವೈಯಕ್ತಿಕ ಜೀವನದ, ಪರಿಸರ ಮತ್ತು ನಿಸರ್ಗದೊಂದಿಗಿನ ಮಾನವ ಸಹಜ ಸಂಬಂಧಗಳನ್ನು ಕುರಿತ ಚಿತ್ರಣವನ್ನು ತಮ್ಮ ಕವಿತೆಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ .
ತಾವು ಅನುಭವಿಸಿದ ನೋವುಗಳನ್ನು, ಸಂಕಟಗಳನ್ನು , ಅವಮಾನಗಳಿಗೆ ಸಂವಾದದ ರೂಪದಲ್ಲಿ ತಮ್ಮ ದ್ವಿಪದಿಗಳ ಮೂಲಕ ಪ್ರಶ್ನೆ ಮಾಡುವ, ಜಿಜ್ಞಾಸೆಗೆ ಒಡ್ಡುವ, ತಾತ್ವಿಕತೆಯೊಂದಿಗೆ, ಸಹೃದಯರಿಗೆ ಚರ್ಚೆಗೆ, ಸಂವಾದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು ಲೇಖಕರ ಸೃಜನಾತ್ಮಕ, ವಿಶೇಷ, ವಿಭಿನ್ನ, ಶೈಲಿ.
ಲೇಖಕರ ಮಾತು
ಕಿತ್ತುತಿನ್ನುವ ಬಡತನದಲ್ಲೂ ನನ್ನನ್ನು ಓದಿಸಿದ್ದಾರೆ. ಹೂ ಅರಳುವುದಕ್ಕೆ ತಿಪ್ಪೆಯಾದರೇನು ಗಗನಚುಂಬಿ ಕಟ್ಟಡದ ಸಂಧಿ ಆದರೇನು. ಅದರ ಅರಳುವ ಮುಗ್ದ ಉತ್ಸಾಹ, ಸೂಸುವ ಪರಿಮಳ ಯಾರಿಂದ ತಾನೆ ನಿಲ್ಲಿಸಲಾದಿತ್ತು. ನಾನು ತಿಪ್ಪೆಯ ಹೂವಾದರೂ ನನಗೆ ಕೀಳಿರಿಮೆ ಇಲ್ಲ ನನ್ನಂತಹ ದಲಿತ ಯುವ ಬರಹಗಾರರಿಗೆ ಅದು ಇರಲೂಬಾರದು.
ನಾನು ದಲಿತನಾದರೂ ಸಹ ನನ್ನ ಮೇಲೆ ದಲಿತ, ಬಂಡಾಯ ಸಾಹಿತ್ಯದ ವಿಶೇಷ ಪರಿಣಾಮವೇನು ಆಗಿಲ್ಲ. ಕಾರಣ ನನ್ನ ನಿಜ ಅನುಭವಗಳೇ ನನ್ನ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿವೆ.ಬಡತನ, ಅನಕ್ಷರತೆ ,ಜಾತೀಯತೆ ,ಸಂಪ್ರದಾಯ, ಗುಲಾಮಗಿರಿ, ಧರ್ಮ ಮುಂತಾದವು ನನ್ನನ್ನು ಒಂದು ಕವಿತೆ ಬರೆಯುವಂತೆ ಪ್ರೇರೇಪಿಸುತ್ತಿವೆ.
ದಲಿತ ಬಂಡಾಯದ ಕಾವು ಇಂದು ಕಡಿಮೆಯಾಗಿದೆ. ದಲಿತರ ನೋವು, ನಲಿವು, ಸಂಸ್ಕೃತಿಗಳನ್ನು ಅಭಿವ್ಯಕ್ತಿಗೊಳಿಸುವ ರೀತಿ ಬೇರೆಯಾಗಬೇಕಾಗಿದೆ. ಹಾಗಾಗಿ ನಾನು ನನ್ನ ಕವಿತೆಗಳಲ್ಲಿ ಸಿಟ್ಟು, ಆಕ್ರೋಶ ,ಆರ್ಭಟ ,ಬೈಗುಳಗಳನ್ನು ಬದಿಗೊತ್ತಿ ಬರೆಯುತ್ತಾ ಬಂದಿದ್ದೇನೆ. ಬುದ್ಧ ನನ್ನನ್ನು ಬಹುವಾಗಿ ಕಾಡುವಂತೆ ಹದಗೊಂಡಿದ್ದೇನೆ. ಬೈಗುಳ, ಆರ್ಭಟ, ಆಕ್ರೋಶಗಳು ಇಲ್ಲದಿರುವುದಕ್ಕೆ ಇದು ಒಂದು ಕಾರಣವಿರಬಹುದು.
ಏನೇ ಇರಲಿ ನನ್ನ ಮತ್ತು ನನ್ನ ಸಮುದಾಯದ ಕಷ್ಟ-ಸುಖಗಳನ್ನು ಕವಿತೆಯಾಗಿ ಸುತ್ತ ಸಕಲ ಜೀವರಾಶಿಯನ್ನು ಒಳಗೊಂಡ ಪ್ರಕೃತಿಯನ್ನು ನಂಬುತ್ತ ಬಂದಿದ್ದೇನೆ.
ಮೊದಲನೆಯ ಭಾಗ 'ಸುಗತ' ದಲ್ಲಿ 50 ಕವಿತೆಗಳಿವೆ, ಎರಡನೆಯ ಭಾಗ 'ಸಂವಾದ' ದಲ್ಲಿ 50 ದ್ವಿಪದಿಗಳಿವೆ.
ಇವುಗಳು ಸಂವಾದ ರೂಪದಲ್ಲಿದ್ದು.ಇವುಗಳ ಅರ್ಥ ಮತ್ತು ಉತ್ತರ ಸಂಕೇತಗಳ ಮೂಲಕ ಮಾತ್ರ ಮಿಂಚಿ ಮರೆಯಾಗುತ್ತದೆ.ಆ ಒಂದು ಕ್ಷಣದ ಮಿಂಚು ನಮ್ಮಲ್ಲಿ ಆತ್ಮವಿಮರ್ಶೆಯ ವೇದಿಕೆಯಾಗಿ ರೂಪುಗೊಂಡು ಸಂವಾದಕ್ಕೆ ಎಡೆಮಾಡಿಕೊಡುತ್ತದೆ.
ಸೀಮೆ ಇಲ್ಲದ ಊರು ನಮ್ಮದು
ಬೆಳ್ಳಕ್ಕೆ ಸಾಲಲ್ಲಿ ಸೀತನಿ ಸವಿಯುತ್ತೇವ
ಹೊಲ ನಮ್ಮದಲ್ಲ ಬೆಳ್ಳಕ್ಕಿ ಸಾಕಿಲ್ಲ
ಸೂರ್ಯ ಮೂಡಿದಾಗ ಶಿವಶಿವಾ ಎನ್ನುತ್ತೇವೆ
ಚಂದಿರ ಬರುವಾಗ ಚಂದಾಗಿ ನಗುತ್ತೇವೆ
ಸೂರ್ಯಚಂದ್ರರ ಸಾಕಿಲ್ಲ ಸಲುಹಿಲ್ಲ
ಕಾಮ ಭೀಮಾ ಎತ್ತು ಕಟ್ಟಿ
ಬೆವರ ಸುರಿಸುತ್ತ ಮಣ್ಣ ಮುಟ್ಟಿ
ಬಂಗಾರ ಮಣಿಗಳ ರಾಶಿಯ ಹೊಟ್ಟಿ
ಬಸವನ ಬದುಕಿಗೆ ಶರಣೆನ್ನುತ್ತೇವ
ಮೊಳಕೆ ನಮ್ಮ ಕೈಯಲ್ಲಿಲ್ಲ ಗಳಿಕೆ ನಮ್ಮದಲ್ಲ
ನೀರಡಿಸಿ ಬಂದವರಿಗೆ ತಣ್ಣೀರ ತಂಬಿಗೆ
ಹಸಿದು ಬಂದವರಿಗೆ ಅಂಬಲಿ ಮಜ್ಜಿಗೆ
ಚಿಂತಿಸಿಲ್ಲ ಯಾರೆಂದು ಕೇಳುವ ಮಟ್ಟಿಗೆ
ಜಗಳಿಲ್ಲ ಜಂಬವಿಲ್ಲ ಕುಗ್ಗುವ ಕೊರಗಿಲ್ಲ
ಊರ ಜನಗಳ ಓಣಿ ಒಂದೇ ನಮಗೆಲ್ಲ
ಹೊರಗೊಂದು ಒಳಗೊಂದು ನಮ್ಮದಲ್ಲ ಬದುಕು
ಮಿಂಚು ಹುಳುವಾಗಿ ಇರುವುದೇ ಸಾಕು
ನಮ್ಮೂರ್ ಎಂದರೆ ನಿಮ್ಮೂರು ಅದು
ಸೀಮೆ ಇಲ್ಲದ ಊರು ನಮ್ಮದು
ಕವಿ :ನನ್ನ ಮುದ್ದಿನ ಜೋಳದ ಹಿಟ್ಟೆ
ಅರಿಶಿಣದ ತುಕುಡಿಯೇ
ರೊಟ್ಟಿ ಯಾಕೆ ಹಸಿ ಬಿಸಿ
ದಂಡಿಯಾಕೆ ಮಸಿ ಮಸಿ
ಕವಿಯ ಹೆಂಡತಿ: ಬಣ್ಣ ಬಣ್ಣದ ಸೀರೆ, ಕುಪ್ಪಸ
ಕಾಲುಂಗುರ ಚೈನ ಡಾಬ ಬೆಂಡೋಲೆ
ಬೋರಮಾಳ ಕಟ್ಟಾಣಿ ಸರ
ಪೆನ್ನಿಗೆ ತುಂಬಿಸಿ
ಖಾಲಿ ಹಾಳೆಯಲ್ಲಿ ಅಲಂಕಾರ ಮಾಡಿ
ಖುಷಿಪಡುವ ಕವಿಯೇ
ಥೇಟ್ ಬಂಗಾರದಂತೆ ಕಾಣುವ ರಾಯನೆ
ಅಕ್ಷರದ ಹುಲಿ ಎಂಬ ಗಂಡನೇ
ನಾ ಮಾಡಿದ ರೊಟ್ಟಿ
ನಿನ್ನ ಕವಿತೆಯಷ್ಟು ಹಸಿಬಿಸಿಯಲ್ಲಾ
ಹರಿದಾಕಿ ಕೊನೆಕೊನೆ ತಿನ್ನು ಸುಮ್ಮನೆ
ಎಚ್ಚರಿಕೆ
ಅತ್ತ ಪಾದ ಬೆಳೆಸದಿರು ಗೆಳತಿ
ನಂಬಿಕೆಯ ಹುತ್ತದೊಳಗಿರುವ
ದೇವರ ಹಾವು ಬದುಕಿಗೆ ಕಚ್ಚಿತು ಜೋಕೆ
ಹಿಂತಿರುಗಿ ನೋಡು ಅದರ ಹೆಜ್ಜೆಗಳಿವೆ
ಅತ್ತ ನೋಡದಿರು ಗೆಳೆಯ
ಖಡ್ಗವಿಡಿದ ದೇವತೆಗಳು
ತುಂಡರಿಸಿಯಾರು ನಿನ್ನನ್ನು
ನೆಲಕೆದರಿ ನೋಡು ಮನುಷ್ಯರ ನೆತ್ತರಿದೆ
ಮೌನಿ ಯಾಗದಿರುವ ಗೆಳತಿ
ಜೀವಂತ ಸುಟ್ಟಾರು ಚಿತೆಯ ಮೇಲಿಟ್ಟು
ಬೆನ್ನಿಂದೆ ನೋಡು ವೀರಮಹಿಳೆಯರೆಂಬ
ನಿರ್ಜೀವ ಕಲ್ಲುಗಳಲ್ಲಿ ಕಂಬನಿ ಹರಿಯುತ್ತಿದೆ
ನಮ್ಮ ಧಣಿಗಳು
ಧಣಿಗಳು ಜೊಲ್ಲು ಸುರಿಸಿದ್ದಾರೆ
ಹೆಂಡ ಕೊಟ್ಟು ಮತ್ತೇರಿ ಮಲಗಿದವನ
ಹೆಂಡತಿಯ ಸೆರಗಲ್ಲಿ ನಲಿದಿದ್ದಾರೆ
ಅವಳನ್ನು ನಲುಗಿಸಿದ್ದಾರೆ
ನಾಳಿನ ನೆನಪಿಗೆ ಕಾಣಿಕೆ ಬಿಟ್ಟು ಹೋಗಿದ್ದಾರೆ
ಉನ್ನತವಾದ ಶಿಕ್ಷಣದಿಂದ ಅಧಿಕಾರ,ಸೂಟು-ಬೂಟು-ಕೋಟು ಜೊತೆಗೆ ಸುಂದರವಾದ ವೈಫು ಹಾಗ ನೋಡಾ ಎಂಥಾ ಲೈಫ್ ಈಗೀನ ದಿನಮಾನದಲ್ಲಿ. ಆದರೆ ಶತಮಾನಗಳ ಕಾಲ ವರ್ಣ ಮತ್ತು ಜಾತಿಯ ಹೆಸರಿನಲ್ಲಿ ಭೂಮಿಯ ಒಡೆತನ, ಶಿಕ್ಷಣ, ಅಧಿಕಾರ, ಸಂಪತ್ತು ಪೂರ್ವಜರಿಂದ ವಂಶವಾಹಿ ಯಾಗಿ ದಕ್ಕಿಸಿಕೊಂಡು, ರೈತರ, ಕೂಲಿ ಕಾರ್ಮಿಕರ ಬೆವರನ್ನು ರಕ್ತದ ರೂಪದಲ್ಲಿ ಸುರಿಸಿ ಮೈಮುರಿದು ದುಡಿದರೂ ಕವಡೆ ಕಾಸಿನ ಕಿಮ್ಮತ್ತಿಲ್ಲ. ಹಸಿದ ಒಡಲನ್ನು ತೋರಿದರೆ, ಎದೆ ಬಗೆದು ತೋಳ ತೆಕ್ಕೆಯಲ್ಲಿ ನಲುಗಿಸಿ ರಕ್ಕಸರಂತೆ ವರ್ತಿಸಿ ನೋವಿನಲ್ಲಿ ಮತ್ತಷ್ಟು ನರಳುವಂತೆ ಮಾಡಿದವರಾರು.
ತುತ್ತು ಅನ್ನಕ್ಕಾಗಿ ಬಂದಳು ಮನೆ ಬಾಗಿಲಿನಲ್ಲಿ
ಅನ್ನವನಿಕ್ಕುವ ನೆಪದಲ್ಲಿ ಕಾಮವನ್ನಿಕ್ಕಿದರಲ್ಲಿ
ನಿಮ್ಮ ಹೊಲದಲ್ಲಿ ದುಡಿಯಲೆಂದು ಬಂದಳು
ಗುಡಿಸಲಿನಲಿ ದುಡಿಸಿಕೊಂಡವರು ನೀವೆ ಎನ್ನುವ ನೋವಿನ ಸಂಗತಿ.
ಯಾರು
ಮೈಯ ಚರ್ಮದ ಚಪ್ಪಲಿ ಮಾಡಿದ ಚತುರರು
ಸತ್ತವರಿಗೆ ಕುಣಿ ತೋಡಿ ದ ಕುಲಹೀನ ರು
ತಮಟೆ ಬಾರಿಸಿ ಸಿಟ್ಟು ನುಂಗಿದ ಚೋಮರು
ಗದ್ದಿಗೆಯಲ್ಲಿ ನಿಂತು ಗುದ್ದಿ ದವರು ಯಾರು
ತಮಟೆ
ಬೆಳದಿಂಗಳ ಹಡೆಯುವ ತಮಟೆಯಲಿ
ಬೆಂಕಿಯನ್ನು ಹುಟ್ಟಿಸಿದ ಅಪ್ಪ
ಮಾತನೇಕೆ ಕೈಬೆರಳಿಗೆ ಮಾಡಿಕೊಂಡಿದ್ದಾನೆ
ದಿಟ ಇತಿಹಾಸ ಅಪ್ಪನ
ಮೌನದೊಳಗೆ ಅಡಗಿ ಕುಳಿತಿದೆ
ದ್ವಿಪದಿ...
•ಪ್ರಜ್ಞೆ, ಶೀಲ, ಕರುಣೆ ಇಲ್ಲದ ಬದುಕು ಯಾತರದ್ದು ಕೇಳಿದೆ
ಸುಗತ ನ ಪಕ್ಕ ಕುಳಿತವನೊಬ್ಬ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆಯುತ್ತಿದ್ದ
ರೈತ ಹೊಲದ ಮಧ್ಯೆ ನಿಂತು ಬೋರಾಡಿ ಅತ್ತ
ಒಣಗಿದ ಬೆಳೆ ಗೊಣಗಿತು ಕಡಲೇಕೆ ಬಂತಿಲ್ಲಿಗೆ
ನವಿಲಿಗೆ, ಕೋಗಿಲೆಗೆ, ಹೂವಿಗೆ ಸಂಕಟಗಳು ಇಲ್ಲವೇ ಗುರುವಿಗೆ ಕೇಳಿದೆ
ಆ ಸುಂದರ ಬೆಟ್ಟದ ಹತ್ತಿರಕ್ಕೆ ಹೋಗಿ ಬಾ ಎಂದ
ಸ್ವಾಮೀಜಿಗಳು ಮದುವೆಯಾಗದಿದ್ದರೆ ಏನಾಗುತ್ತೆ ಅಜ್ಜನಿಗೆ ಕೇಳಿದೆ
ಒಲೆಯ ಮೇಲಿನ ಹಾಲು ಉಕ್ಕಿ ನೆಲಕ್ಕೆ ಸೋರುತ್ತಿತ್ತ
•ಈ ಜಗತ್ತು ಯಾವುದರ ಮೇಲೆ ನಿಂತಿದೆ ಕಟಕು ಕೇಳಿದ
ಬುದ್ಧ ಮುಖ ಅರಳಿಸಿ ನಕ್ಕು ಅಪ್ಪಿಕೊಂಡ
ನನ್ನ ಕಾವ್ಯ ಖಡ್ಗ ವಾಗಿ ಮಿಂಚುತ್ತಿರುವಂತೆ
ನನ್ನೊಳಗಿನ ಹಸಿವನ್ನು ನೀಗಿಸಿದ್ದರೆ ಎಷ್ಟೋ ಚೆನ್ನಾಗಿತ್ತು
ಜಗತ್ತನ್ನು ಗೆಲ್ಲಬಲ್ಲ ಸ್ವಾಮೀಜಿಗಳು ಕಾಮವನ್ನೇಕೆ ಗೆಲ್ಲುವುದಿಲ್ಲ ಋಷಿಗೆ ಕೇಳಿದೆ
ಮನಸ್ಸಿಗೆ ಅಧ್ಯಾತ್ಮ, ದೇಹಕ್ಕೆ ಸುಖ, ಮೋಡ-ಮಳೆ ಚಿಗುರು-ಬೆಳೆ ಎಂದ
ತಾಳಿಯನ್ನು ಹೀಗೆ ನೋಡಿ ಕಣ್ಣಿಗೊತ್ತಿಕೊಂಡಳು ಅವ್ವ
ಅಪ್ಪ ಸಾರಾಯಿ ಕುಡಿದು ತೂರಾಡುತ್ತ ಬೋಸಿಡಿ ಎಂದ
•ಅಂಗುಲಿಮಾಲ ಸಿಕ್ಕಿದ್ದ ಹೆಬ್ಬೆರಳು ಕತ್ತರಿಸುವ ಅವಿವೇಕಿ ಎಂದೆ
ಪಕ್ಕದಲ್ಲಿದ್ದ ದ್ರೋಣಾಚಾರ್ಯ ನಮ್ಮನ್ನು ನೋಡಿ ತಲೆತಗ್ಗಿಸಿದ
ರಕ್ಕಸರು ತಮ್ಮ ಹೆಂಡಂದಿರ ಮೇಲೆ ಅನುಮಾನ ಪಟ್ಟಿದ್ದಾರೆಯೇ ಕೇಳಬೇಕೆನ್ನುವಷ್ಟರಲ್ಲಿ
ಎದುರಿಗೆ ಶ್ರೀರಾಮಚಂದ್ರನ ಮೆರವಣಿಗೆ ಹೊರಟಿತ್ತು
ನಿನ್ನ ಜಾತಿ ತಿಳಿಯಲು ಕಾತರನಾಗಿದ್ದೇನೆ ನಾಚಿಕೆಗಟ್ಟು ಬಸವಣ್ಣನಿಗೆ ಕೇಳಿದೆ
ಹಾಲಿನ ಬಟ್ಟಲು ಕೈಯಲ್ಲಿಟ್ಟು ಇದರ ಉತ್ಪನ್ನದ ವಾಸನೆ ಎಂದ
ಖ್ಯಾತ ಜ್ಯೋತಿಷಿ ಹೊಗಳಿ ಹೊನ್ನ ಶೂಲಕ್ಕೇರಿಸಿ ಕೊನೆಗೆ ನನ್ನ ಹೆಸರು ಕೇಳಿದ
ಪಕ್ಕದಲ್ಲಿದ್ದ ಮಗು ವ್ಯಂಗ್ಯವಾಗಿ ಕೊಕಾಸಿ ನಕ್ಕಿತು
•ಬುದ್ಧ ಅಂದರೆ ಹೇಗಿದ್ದಾನೆ ಅಜ್ಜಿಗೆ ಕೇಳಿದೆ
ಅವಳು ತೋಟದೊಳಗಿನ ಮಗುವನ್ನೆತ್ತಿ ಕೈಗೆ ಕೊಟ್ಟಳು
•ದೇವರಿದ್ದಾನೆ ಎಂದು ಕೇಳಬೇಕೆನ್ನುವ ಅಷ್ಟರಲ್ಲಿ ಬುದ್ಧನೇ ನನಗೆ ಕೇಳಿದ
ನಿನ್ನ ಮುತ್ತಜ್ಜನ ಮತ್ತಜ್ಜನನ್ನು ನೋಡಿದ್ದೀಯಾ
ಕನಕದಾಸರು ಕುರಿಕಾಯುವ ಜಾತಿ ಅಲ್ಲವೇ ಮುದುಕನಿಗೆ ಕೇಳಿದೆ ಪಕ್ಕದಲ್ಲಿದ್ದವನೊಬ್ಬ ಇಂಪಾಗಿ ಹಾಡುತ್ತಿದ್ದ ಎಲ್ಲರೂ ಮನುಜರಲ್ಲ ಹಲವರು ಕುರಿಗಳು ಕೆಲವರು ಮರಿಗಳು
ನಿನ್ನನ್ನು ಪರಿಪೂರ್ಣ ಮನುಷ್ಯನೆನ್ನಲೇ ಅಲ್ಲಮನಿಗೆ ಕೇಳಿದೆ
ನನಗೆ ಚಂದ್ರಬಿಂಬ ತೋರಿಸಿ ಮುಸಿಮುಸಿ ನಕ್ಕುಬಿಟ್ಟ
~ ಬಸವರಾಜ ನಾಟೇಕಾರ್