ಪಾವಿತ್ರ್ಯ ನಾಶವೂ ಪ್ರತಿಸಂಸ್ಕೃತಿಯೂ
ಪಾವಿತ್ರ್ಯ ನಾಶವೆಂದರೆ, ಯಾವ ಯಜಮಾನ ಸಂಸ್ಕೃತಿಯು ದುಡಿಯುವ ಜನರ ಲೋಕಕ್ಕೆ ಸಂಬಂಧಿಸಿದ್ದನ್ನು ಹೀನವೆಂದೂ, ತನ್ನದನ್ನು ಶ್ರೇಷ್ಠ ಎಂದು ಮೂಡಿಸಿದ ನಂಬಿಕೆಗಳಿವೆಯೋ, ಅವನ್ನು ಅಪಮೌಲೀಕರಣಗೊಳಿಸುವುದು; ಅದು ಪವಿತ್ರೀಕರಿಸಿರುವ ಸಂಕೇತಗಳನ್ನು ನಿರಾಕರಿಸುವುದು. ಇದು ಎಲ್ಲಾ ಪ್ರತಿಭಟನಾ ಸಾಹಿತ್ಯಗಳ ಸಾಮಾನ್ಯ ಲಕ್ಷಣವೇ ಆಗಿದೆ. ಧಣಿಗಳ ಹಿತಕಾದ ಸಂಸ್ಕೃತಿಯನ್ನೇ ತಮ್ಮದೆಂದು ನಂಬಿದ್ದ ಜನ, ಇದು ಹೇಗೆ ನಮ್ಮದು ಎಂದು ಪ್ರಶ್ನೆ ಹಾಕಿಕೊಳ್ಳುತ್ತಿರುವ ಹಂತವಿದಾಗಿರುತ್ತದೆ; ಅವರ 'ವ್ಯವಸ್ಥೆ'ಯ ಮತ್ತು 'ಅವಸ್ಥೆ'ಯ ವ್ಯತ್ಯಾಸಗಳು ಗೊತ್ತಾದ ಮೇಲೆ, ಧಣಿ ಸಂಸ್ಕೃತಿ ಮಾಡಿದ ಅಪರಾಧಗಳನ್ನು ಅದರ ಮುಖದೆದುರೇ ಹಿಡಿಯುವ ಧೈರ್ಯದ ಅರಿವಿನ ಸ್ಥಿತಿಯಿದಾಗಿರುತ್ತದೆ. ಅಂದರೆ ಅನ್ಯಾಯವನ್ನೇ ನ್ಯಾಯವೆಂದು ಹೇಳುತ್ತಾ ತಮ್ಮ ಮೇಲೆ ಹೇರಿಕೊಂಡಿದ್ದ ಪುರಾಣಗಳನ್ನು ಕೆಳಗೆ ಎತ್ತಿಹಾಕಿ ಒಡೆದು, ಅವುಗಳ ಒಳಗಿನ ಸುಳ್ಳನ್ನು ಕಂಡುಕೊಳ್ಳುವುದು ( demytho logizing); ತಮಗೆ ಕೇಡು ಬಯಸುವ ಆಳುವ ಸಂಸ್ಕೃತಿಯನ್ನು ವೈಚಾರಿಕವಾಗಿ ವಿಶ್ಲೇಷಿಸುವುದು ಹಾಗೂ ಅದರ ನಾಶ ಸಾಧಿಸುವುದು. ನಾಶಕವೇಂದರೆ ಅದು ಅವೈಚಾರಿಕವಾಗಿದೆ ಹಾಗೂ ಅಮಾನವೀಯವಾಗಿದೆ. ಆದರೆ ಅರ್ಥಪೂರ್ಣ ಪ್ರತಿಭಟನೆಯಲ್ಲಿ ನಾಶವೊಂದೇ ಕೆಲಸವಲ್ಲ. ಕೆಟ್ಟದ್ದರ ನಾಶದ ನಂತರ ಒಳ್ಳೆಯದೊಂದನ್ನು ಬದಲಿಗೆ ಕಟ್ಟಿಕೊಳ್ಳುವ ಹೊಣೆ ಇರಲೇಬೇಕು. ಯಾಕೆಂದರೆ ಕೆಡಹುವ ಕ್ರಿಯೆಗೆ ಕಟ್ಟುವ ಕನಸಿಲ್ಲದಾಗ ಬೆಲೆಯಿರುವುದಿಲ್ಲ. ಹೀಗೆ ಕೆಡಹಿ ಮತ್ತೆ ಕಟ್ಟುವ ಕ್ರಿಯೆಯೇ ಪ್ರತಿಸಂಸ್ಕೃತಿ.
ನಾಶ ಮತ್ತು ಕಟ್ಟುವಿಕೆಯ ಈ ಜೊತೆಗೆಲಸಕ್ಕೆ, ಇಂದಿನ ಕ್ರಿಯೆ ಹಾಗೂ ಮುಂದಿನ ಕನಸಿಗೆ, ಹಿಂದಣ ಅರಿವು ದಿಸೆ ತೋರುವ ಶಕ್ತಿಯಾಗಿರುತ್ತದೆ. ಈ ಅರಿವಿಲ್ಲದಿದ್ದರೆ ಕ್ರಿಯೆ ಮುರುಕಾಗಿ, ಕನಸು ಅರೆಬರೆಯಾಗುತ್ತದೆ. ಈ ಅರಿವೇನೆಂದರೆ ಧಣಿಸಂಸ್ಕೃತಿಯು ಜಾಣತನದಿಂದ ಬಿತ್ತಿ ಬೆಳೆದಿರುವ ಸಮಾಚೋಧಾರ್ಮಿಕ ನಂಬಿಕೆಗಳನ್ನು ಸ್ಪಷ್ಟವಾಗಿ ತಿಳಿಯುವುದು; 'ಗೋಬೆಲ್ಸನ ಸತ್ಯ' ದಂತೆ ಮತ್ತೆ ಮತ್ತೆ ಹೇಳಲ್ಪಟ್ಟು ನೆಟ್ಟುಹೋಗಿರುವ ಮಿತ್ ಗಳನ್ನು ತಿಳಿಯುವುದು. ಹುಟ್ಟನ್ನು ನೆಚ್ಚಿರುವ ಇಂಡಿಯಾದ ಜಾತಿ ಸಂಸ್ಕೃತಿಯಲ್ಲೂ ಅಸ್ಪೃಶ್ಯರು, ದೈಹಿಕ ಶ್ರಮ, ದನದ ಮಾಂಸಾಹಾರ, ಕಪ್ಪು ಬಣ್ಣ, ದೇಶಿ ಭಾಷೆಗಳು, ಕತ್ತೆ ,ಹಂದಿ ,ನಾಯಿಯಂತ ಪ್ರಾಣಿಗಳು, ಮುತ್ತುಗ ಮೊದಲಾದ ಹೂಗಳು, ಈಚಲು - ಜಾಲಿ -ಬೂರುಗದಂಥ ಮರಗಳು, ಕಾಗೆ-ಗೂಬೆಯಂಥ ಹಕ್ಕಿಗಳು, ಲೋಹಗಳಲ್ಲಿ ಕಬ್ಬಿಣ, ಅಂಗಾಂಗಗಳಲ್ಲಿ ಕಾಲು, ಭಾಗಗಳಲ್ಲಿ ಎಡಭಾಗ, ಲಿಂಗಗಳಲ್ಲಿ ಸ್ತ್ರೀ- ಹೀಗೆ ಹುಟ್ಟಿನಿಂದ ಆವರಿಸಿಕೊಂಡು 'ಮಿತ್' ಗಳು ಸ್ಥಾಪಿತವಾಗಿವೆ.
ಯಜಮಾನ ಸಂಸ್ಕೃತಿ ತನ್ನನ್ನು ಪ್ರಶ್ನಿಸಿದ ಅಥವಾ ತನಗೆ ತೊಡಕೊಡ್ಡಿದ ಎಲ್ಲರನ್ನೂ ರಾಕ್ಷಸರಾಗಿ ದುಷ್ಟರಾಗಿ ಚಿತ್ರಿಸುತ್ತದೆ. ವಾಸ್ತವದಲ್ಲಿ ನಾಶ ಕೂಡ ಮಾಡುತ್ತದೆ. (ಯುದ್ಧ ಗೆದ್ದು ಬಂದ ಯುಧಿಷ್ಠಿರನನ್ನು ಆಶೀರ್ವದಿಸುವಾಗ , ಚಾರ್ವಾಕನ ನುಗ್ಗಿ ನಿನ್ನ ವಿಜಯ ಅಪವಿತ್ರವೆಂದು ಕೂಗಲು, ಪುರೋಹಿತರು ಅವನನ್ನು ಕೊಲ್ಲುತ್ತಾರೆ). ಹೀಗೆ ಪ್ರತಿಭಟಿಸಿದವರನ್ನು ಮತ್ತು ಪ್ರತಿಭಟಿಸಲಾಗದೆ ಬಲಿ-ಏಕಲವ್ಯ - ಶಂಬೂಕರಂತೆ ಬಲಿಯಾದವರನ್ನು, ಬಂಡಾಯಕಾವ್ಯವು 'ನಾಯಕ'ರಂತೆ ಚಿತ್ರಿಸುತ್ತದೆ. ಆರ್ಯ ವಿರೋಧಿ ಚಳುವಳಿಯ ಪಿರಿಯಾರ್ ಪರಂಪರೆಯ ತಮಿಳಿನಲ್ಲಿ ಇದು ಬಹಳ. ಆರ್ಯ ರಾಮನು ನಾಯಕನಲ್ಲವಾದ್ದರಿಂದ ಅಲ್ಲಿ 'ಇರಾವಣ ಕಾವ್ಯಂ' ಇದೆ. ಕನಕಪುರ ತಾಲೂಕಿನ ರಾವಣನ ಒಕ್ಕಲಿನವರು ಇದ್ದಾರೆ ಹಾಗೂ ಕೊಳ್ಳೆಗಾಲದ ಸುತ್ತಮುತ್ತ ರಾವಣನ ಗುಡಿಗಳಿವೆ. ಪೆರಿಯಾರ್ ಹಾಗೂ ಅಂಬೇಡ್ಕರರ ರಾಮಾಯಣ ಕುರಿತ ಚರ್ಚೆಯಲ್ಲಿನ 'ಪಾವಿತ್ರ್ಯ ಭಂಗ' ಕ್ಕೆ ಪ್ರತಿ ಸಂಸ್ಕೃತಿಯ ದಿಟ್ಟ ನೆಲೆಯಾಗಿ.
ಗ್ರಾಮ ದೇವತೆಗಳು: ಫ್ಯೂಡಲ್ ಸಂಸ್ಕೃತಿಯೊಳಗೆ
ಮಾರಿ ಹಬ್ಬಗಳ ಹಿಂದಿರುವ ಮಿತ್ ಗಳನ್ನು ವಿಶ್ಲೇಷಿಸಿದರೂ ಕೂಡ ಅವಗಳ ಒಳಗಿನ ಆಶಯಗಳು ಯಾವ ವರ್ಗದ ಪರವಾಗಿವೆ ಹಾಗೂ ಚರಿತ್ರೆಯು ಯಾರ ಪರವಾಗಿ ತಿದ್ದಲ್ಪಟ್ಟಿದೆ ಎಂಬುದರ ಎಲೆಗಳು ಕಾಣಿಸುತ್ತವೆ. ಕೆಲವು ಪ್ರಮುಖ ಮಿತ್ ಗಳು ಹೀಗಿವೆ:
೧.ತನ್ನ ಜಾತಿಯನ್ನು ಮರೆಮಾಚಿ ಮದುವೆಯಾದ ಕೆಳಜಾತಿಯ ಗಂಡನನ್ನು, ಮೇಲುಜಾತಿಯ ಹೆಣ್ಣು ಕೋಣನಾಗುವಂತೆ ಶಪಿಸುವುದು ಮತ್ತು ಕೋಣವನ್ನು ಕೊಂದು ರಚ್ಚನ್ನು ತೀರಿಸಿಕೊಳ್ಳುವುದು (ಮಾರವ್ವ-ದುರ್ಗವ್ವ).
೨. ಕುಲೀನ ವಂಶದ ಕನ್ಯೆಯು ಮೋಹದಲ್ಲಿ ತಾನೇ ಮೋಸ ಹೋಗಿ , ತನ್ನ ಲೈಂಗಿಕ ಪಾವಿತ್ರ್ಯವನ್ನು ಕಳೆದುಕೊಂಡು, ಭೂಮಿಯಲ್ಲಿ ನೆಲೆಸುವುದು (ಉಜ್ಜಿನಿ ಚೌಡಮ್ಮ).
೩.ಅಡಿಗೆಗಾಗಿ ದಲಿತರ ಮನೆಯಿಂದ ಬೆಂಕಿ ತಂದದ್ದಕ್ಕಾಗಿ ಸೂತಕಗೊಂಡ ಮೇಲು ಜಾತಿಯ ಹೆಣ್ಣೊಬ್ಬಳು,ಊರ ಹೊರಗೆ ಕೆರೆ ಏರಿಯ ಮೇಲೆ ನೆಲೆಸುವುದು (ಹಿರೇಗೌಜದ ಮಲಿಕವ್ವ)
೪.ಹೊಲೆಯನು ಸುಳ್ಳು ಜಾತಿ ಹೇಳಿ, ಬ್ರಾಹ್ಮಣನಲ್ಲಿ ವಿದ್ಯ ಕಲಿತು, ಗುರು ಪುತ್ರಿಯನ್ನು ಮದುವೆಯಾದಂಥ ಮಾತಂಗಿ ಚಪ್ಪರಕ್ಕೆ ಬೆಂಕಿ ಹಾಕುವುದು (ಶಿರಿಸಿ ಮಾರಿಕಾಂಬೆ)
೫. ಪರಪುರುಷನನ್ನು ಮೋಹದಿಂದ ನೋಡಿದ್ದಕ್ಕಾಗಿ ಅಪವಿತ್ರಳಾಗಿ ಬಹಿಷ್ಕೃತೆಯಾಗಿ ಕೊಲ್ಲಲ್ಪಟ್ಟ ಹೆಣ್ಣು (ಎಲ್ಲಮ್ಮ- ರೇಣುಕೆ)
೬. ತೊಟಗೆಲಸದ ಹುಡುಗಿಯೊಬ್ಬಳು ಕಾಯಿಪಲ್ಲೆ ಕದ್ದುದಕ್ಕಾಗಿ, ಗೌಡ-ಶ್ಯಾನ ಭೋಗರು ತನಿಖೆ ಮಾಡಿಸಿ ಮೂಗು ಕೊಯ್ಯುವುದು (ಹುಲಿಗೆಮ್ಮನ ಮಾತಂಗಿ).
೭. ಗಂಡನ ಸಾವಿನಲ್ಲಿ ತಾನೂ ಭಾಗಿಯಾಗಲು ಕೊಂಡಹಾರಿದ ಹೆಣ್ಣು (ಮಾಸ್ತಮ್ಮ).
೮. ಭಟ್ಟರ ಹುಡುಗನು ತನಗಾಗಿ ಹೂಕೀಳಲೆಂದು ಮರಹತ್ತಿ ಕೊಂಬೆಮುರಿದು ಬಿದ್ದು ಸತ್ತದ್ದಕ್ಕಾಗಿ ಸತಿಹೋದ ಕೆಳಜಾತಿಯ ಹೆಣ್ಣುಗಳು (ಭಾಗಮ್ಮ -ಹೊನ್ನಮ್ಮ).
೯. ತನ್ನ ಮಕ್ಕಳು ಪಕ್ಕದೂರಿನ ಕರಿಯನ್ನು ಹರಿದು ತರುವ ಸಾಹಸದಲ್ಲಿ ಪ್ರಾಣ ಕಳೆದುಕೊಂಡದ್ದಕ್ಕಾಗಿ , ದುಃಖ ತಾಳದೆ ಹೋದ ತಾಯಿ ಬಳಲಿಕವ್ವ.
೧೦. ತನ್ನ ಅನಾರ್ಯ ಗಂಡನಿಗಾದ ಅಪಮಾನ ಸಹಿಸದೆ ಬೆಂಕಿಗೆ ಹಾರಿದ ವೈದಿಕರ ಹೆಣ್ಣು (ಚಾಮುಂಡಿ)
ಬಹುತೇಕ ಮಿತ್ ಗಳು, ಜಾತಿ ಸಂಕರವಾಗದಂತೆ, ಹೆಂಡತಿಯರು ಪರರಿಗೆ ಒಲಿಯದಂತೆ, ತಮ್ಮ ಸ್ವತ್ತನ್ನು ಮತ್ತೊಬ್ಬರು ಮುಟ್ಟದಂತೆ ವಿಧಿಸಿದ ನಿಷೇಧಗಳಾಗಿವೆ. ಉಳಿದವು, ಹೆಣ್ಣುಗಳು ತಮ್ಮ ಗಂಡಂದಿರು, ಪ್ರಿಯಕರರ, ಮಕ್ಕಳ ಸಾವಿಗಾಗಿ ಪ್ರಾಣತ್ಯಾಗ ಮಾಡಿದವುಗಳಾಗಿದ್ದು, ಹೆಣ್ಣಿನ ಪ್ರಾಣ ತ್ಯಾಗವನ್ನು ವೈಭವಿಕರಿಸಿದೆ.
ಕೋಣ ಬಲಿ ಎನ್ನು ಉದಾರಣೆಯಾಗಿ ತೆಗೆದುಕೊಂಡರೆ, ಇದು ಮೂಲತಃ ಜಾತಿಯ ಪಾವಿತ್ರವನ್ನು ನಾಶ ಮಾಡಿದ ದಲಿತನ ಅಪರಾಧಕ್ಕಾಗಿ, ಪ್ರತಿ ವರ್ಷ ಅಭಿನಯ ಗೊಳ್ಳುತ್ತಿರುವ ಶಿಕ್ಷೆಯಾಗಿದೆ. ಮಾರಿಹಬ್ಬದಲ್ಲಿ ಸವರ್ಣಿಯರು ಕೊಡುಗೆಯಾಗಿ ಕೊಡುವ ಕೋಣನ ಮಾಂಸವು, ವಾಸ್ತವದಲ್ಲಿ ದಲಿತರ ವರ್ಷದ ಸಿಟ್ಟನ್ನು ಬಾಯಿಗೆ ಬರದಂತೆ ಗಂಟಲ ಕೆಳಗೆ ಅದುಮುತ್ತದೆ ಅಥವಾ ಧಣಿಗಳು ಮಾಡಿದ ವರ್ಷದ ಕ್ರೌರ್ಯವನ್ನು ಬಾಡಿನ ತುಂಡು ಮರೆಸುತ್ತದೆ.
ಗ್ರಾಮ ದೇವತೆಗಳ ಬಗ್ಗೆ ಅಧ್ಯಯನ ಮಾಡಿದ ಡಾ. ಸಿದ್ದಲಿಂಗಯ್ಯನವರು , "ಗ್ರಾಮ ದೇವತೆಗಳಿಗೇಕೆ ಗಂಡಂದಿರಿಲ್ಲ..?" ಎಂಬ ಪ್ರಶ್ನೆಯನ್ನೆತ್ತುತ್ತಾರೆ.